ಮಂಗಳವಾರ, ಅಕ್ಟೋಬರ್ 19, 2021
24 °C

ಕಥೆ: ವಾರ್ ರೂಂ

ಡಾ.ಲಕ್ಷ್ಮಣ ವಿ ಎ Updated:

ಅಕ್ಷರ ಗಾತ್ರ : | |

Prajavani

ಆ ದಿನ ರಾತ್ರಿ ಹತ್ತೂವರೆಗೆ ಊಟ ಮಾಡಿ ಇನ್ನೇನು ಮಲಗಲು ಸಿದ್ಧನಾಗುತ್ತಿದ್ದೆ. ಬೇಸಿಗೆಯ ಬಿರುಬಿಸಿಲಿನಿಂದ ಕಾದ ಕಾವಲಿಯಂತಾದ ಗೋಡೆಗಳಿಗೆ ತಣ್ಣನೆಯ ಗಾಳಿ ತಟ್ಟಿ ಬಾಲ್ಕನಿಯಿಂದ ಮನೆಯೊಳಗೆ ಹಿತವಾದ ತಂಗಾಳಿ ತೀಡಿ ಬೆವತ ಮೈ ಆರುವುದು ಮತ್ತೆ ಬೆವರುವುದು ನಡೆದಿತ್ತು. ಹತ್ತು ಗಂಟೆಗೆ ಹೊರಗೆ ಅಂಗಡಿ ಮುಂಗಟ್ಟುಗಳೆಲ್ಲಾ ಮುಚ್ಚಿ ಇಡಿಯ ಬೆಂಗಳೂರು ಪ್ರವಾಹ ಇಳಿದ ಹಾಳೂರಿನಂತೆ ಬರಿ ಕತ್ತಲೆಯೇ ಕಾಣುತ್ತಿತ್ತು.

ಆ ಕಡೆಯಿಂದ ಒಂದು ಕರೆಯ ಸದ್ದು. ‘ಸರ್ ನಾನು ವಡ್ಡರಪಾಳ್ಯದ ಕಿಷ್ಣಪ್ಪ, ಶಿವೂಗೆ ಉಸಿರಾಟದ ತೊಂದರೆಯಾಗಿದೆ ಅವನಿಗೊಂದು ಬೆಡ್ ಮಾಡಿಕೊಡಿ ಸರ್’ ಎಂದು ಅಂಗಲಾಚಿದಾಗ ನನಗೆ ಮೈಯೆಲ್ಲಾ ಉರಿದು ಹೋಯ್ತು.

ಈ ಶಿವೂ ಎಂಬ ಇಪ್ಪತ್ತ್ ನಾಲ್ಕು ವರ್ಷದ ಹರೆಯದವನಿಗೆ ನಾನೇ ಆ್ಯಂಟಿಜನ್ ಟೆಸ್ಟ್‌ ಮಾಡಿದಾಗ ಕೊರೊನ ಪಾಸಿಟಿವ್ ಇತ್ತು. ಆಗಲೇ ಏದುಸಿರು ಬಿಡುತ್ತಿದ್ದ ತಕ್ಷಣವೇ ಅವನ ಫಲಿತಾಂಶ ಅಪ್‌ಲೋಡ್ ಮಾಡಿ ಅವನ ರಕ್ತದಲ್ಲಿಯ ಆಮ್ಲಜನಕದ ಮಟ್ಟ( spo2) ಮತ್ತು ಬಿಪಿ, ಪಲ್ಸು ನೋಡಿ ಬೆಡ್ ಬುಕ್ಕಿಂಗ್ ಗುಂಪಿನಲ್ಲಿ ಹಾಕಿ ಬೆಡ್ ಅಲಾಟ್ ಆಗುವುದನ್ನೇ ಕಾಯುತ್ತ ತುಂಬ ಕಷ್ಟ ಪಟ್ಟು ಜನರಲ್ ಬೆಡ್ ಬುಕ್ಕಿಂಗ್ ಮಾಡಿ ಕೊಟ್ಟಿದ್ದೆ. ಆಕ್ಸಿಜನ್ ಬೆಡ್ ಬುಕ್ಕಿಂಗ್‌ಗೆ ದಿಢೀರ್‌ ಬೇಡಿಕೆ ಉಂಟಾದ್ದರಿಂದ ಬುಕ್ಕಿಂಗ್ ಆಗುವುದು ಕಷ್ಟ ಅಂತ ಗೊತ್ತಿದ್ದರೂ ನಾವು ಏನಾದರೂ ಮಾಡಲೇಬೇಕಿತ್ತು. ಇದ್ದಕ್ಕಿದ್ದಂತೆ ಚಂಡಮಾರುತದಂತೆ ಅಪ್ಪಳಿಸಿದ ಕೊರೊನಾಗೆ ಜನ ತತ್ತರಿಸಿ ಹೋಗಿದ್ದರು. ಮುದುಕರು, ಯುವಕರೆನ್ನದೇ ಜನ ಆಕ್ಸಿಜನ್ ಸಿಗದೆ ಇತ್ತ ಮನೆಯಲ್ಲಿಯೂ ಇಟ್ಟುಕೊಳ್ಳಲಾಗದೇ ಅತ್ತ ಆಸ್ಪತ್ರೆಯ ಬೆಡ್ಡೂ ಸಿಗಲಾರದೆ ರೋಗಿಗಳು ಅಕ್ಷರಶಃ ಬೀದಿ ಬದಿಯಲ್ಲಿ, ಆಸ್ಪತ್ರೆಯ ಕಾರಿಡಾರುಗಳಲ್ಲಿ ಆಂಬುಲೆನ್ಸ್‌ನಲ್ಲಿ, ಕಾರುಗಳಲ್ಲಿ ಸಾಯುತ್ತಿದ್ದರು.

ಆದರೆ ವಡ್ಡರಪಾಳ್ಯದ ಶಿವಕುಮಾರನೆಂಬ ತರುಣ ಗಟ್ಟಿಮುಟ್ಟಗಿದ್ದ. ಅವನ ಆರೋಗ್ಯ ಅಷ್ಟೇನೂ ತೀರ ಹದಗೆಟ್ಟಿರಲಿಲ್ಲ. ಆದರೆ ಹದೆಗೆಡುವ ಮುನ್ನ ಅವನಿಗೊಂದು ಆಸ್ಪತ್ರೆಗೆ ಸೇರಿಸಬೇಕು, ಅವನಿಗೊಂದು ಬೆಡ್ ವ್ಯವಸ್ಥೆ ಮಾಡಿಸಬೇಕು. ಖಾಸಗಿ ಆಸ್ಪತ್ರೆಯ ಬೆಡ್ಡುಗಳು ಸ್ಥಳೀಯ ಧಣಿಗಳ ಪುಢಾರಿಗಳ, ಅವರ ಮರಿ ಪುಢಾರಿಗಳ ಮನೆಯವರಿಂದ ತುಂಬಿ ತುಳುಕುತ್ತಿದ್ದವು. ‘ಆಕ್ಸೀ’ ಅಂತ ಸೀನಿದವರಿಗೊಂದು ಬೆಡ್ಡು ಸಿಕ್ಕುವುದು ಅಂತಹವರಿಗೆ ಕಷ್ಟದ ಮಾತಿರಲಿಲ್ಲ. ಆದರೆ ಕೇವಲ ಕೂಲಿ ಮಾಡಿ ಜೀವನ ಸಾಗಿಸಲು ಕಡೂರಿನ ಯಾವುದೋ ಹಳ್ಳಿಯಿಂದ ಬೆಂಗಳೂರಿಗೆ ಬಂದ ಶಿವಕುಮಾರನಿಗೆ ಅಷ್ಟು ಸುಲಭವಾಗಿ ಅಂದು ಹಾಸಿಗೆ ಸಿಗುವುದು ಸಾಧ್ಯವಿರಲಿಲ್ಲ. ಬೆಡ್ ಬುಕ್ಕಿಂಗ್ ಮಾಫಿಯಾದಿಂದಾಗಿ ಖಾಸಗಿ ಆಸ್ಪತ್ರೆಗಳು ಸುಲಿಗೆಯಲ್ಲಿ ನಿರತರಾಗಿದ್ದರೆ, ಸರ್ಕಾರಿ ಆಸ್ಪತ್ರೆಗಳು ಕಾಣದ ಕೈಗಳ ಕೈವಾಡದಿಂದ ಒಳಗೊಳಗೇ ವ್ಯವಹಾರ ಕುದುರಿಸಿಕೊಂಡಿದ್ದವು. ಇದರ ಯಾವುದರ ಪರಿವೆಯಿರದ ಜನಸಾಮಾನ್ಯರು ಗತಿಯಿಲ್ಲದೆ ಬೀದಿ ಶವಗಳಾಗುತ್ತಿದ್ದರು.

ಅಸಲು ಶಿವೂಗೆ ಜನರಲ್ ಬೆಡ್ಡಿನ ಕೋಟಾದಲ್ಲಿ ಸೇಂಟ್ ಜಾನ್ಸ್‌ ಆಸ್ಪತ್ರೆಗೆ ಬೆಡ್ ಬುಕ್ ಮಾಡಿಸಿ ಕೊಟ್ಟಿದ್ದೆ. ಒಮ್ಮೆ ಒಳಗೆ ಪ್ರವೇಶ ಸಿಕ್ಕರೆ ಸಾಕು ಅಲ್ಲಿಂದ ತನ್ನಿಂದ ತಾನೇ ಬೆಡ್ಡುಗಳು ಅಪ್ ಗ್ರೇಡ್ ಆಗಬಹುದೆಂಬ ಭರವಸೆಯಿಂದ. ಏಪ್ರಿಲ್‌ ತಿಂಗಳಿನ ಮಧ್ಯಭಾಗದಲ್ಲಿ ಜನರಲ್ ಬೆಡ್ಡುಗಳು ಸುಲಭವಾಗಿ ಕೈಗೆಟುಕುತ್ತಿದ್ದರೂ ಆಮ್ಲಜನಕದ ಸರಬರಾಜು ಇಲ್ಲದ ಆ ಬೆಡ್ಡುಗಳು ರೋಗಿಗಳಿಗೆ ಅಪ್ರಯೋಜಕವಾಗಿದ್ದವು.

ಸೇಂಟ್ ಜಾನ್ಸ್ ಆಸ್ಪತ್ರೆಗೆ ಬೆಡ್ಡು ಬುಕ್ ಮಾಡಿಕೊಟ್ಟಿದ್ದರೂ ಶಿವಕುಮಾರ ಅದ್ಯಾರದೋ ಮಾತು ಕೇಳಿ ಅಲ್ಲಿ ದಾಖಲಾಗಿರಲಿಲ್ಲ. ಬುಕ್ ಮಾಡಿದ ಸಮಯ ಮಧ್ಯಾನ್ನ ಎರಡೂವರೆಯ ಆಸುಪಾಸು. ಅದಾದ ಮೇಲೆ ಶಿವೂ ಅವರ ಕಡೆಯಿಂದ ಯಾವುದೇ ಕರೆಗಳು ಬರಲಿಲ್ಲವಾದುದರಿಂದ ಬಹುತೇಕ ಅವನು ದಾಖಲಾಗಿರಬೇಕೆಂದುಕೊಂಡಿದ್ದೆ. ಅಥವಾ ಆರೋಗ್ಯ ಕೇಂದ್ರದ ಈ ರೋಗಿಗಳ ಆಕ್ರಂದನ ಹಾಹಾಕಾರದ ಗಲಾಟೆಯಲ್ಲಿ ಈ ಶಿವೂನ ಮರತೇಬಿಟ್ಟಿದ್ದೆ. ಆ ಕ್ಷಣಕ್ಕೆ ಪ್ರತಿಕ್ಷಣಕ್ಕೆ ಶಿವೂನಿಗಿಂತ ದೊಡ್ಡ ಸಂಕಟಗಳು ಎದುರಾಗುತ್ತಿದ್ದ ಕಾರಣದಿಂದ ತಲೆಯಲ್ಲಿ ಒಂದೇ ಸಮಯಕ್ಕೆ ನಾಲ್ಕಾರು ಸೀಡಿಗಳು ಓಡುತ್ತಿದ್ದರಿಂದ ಮರೆವು ಸಹಜವೇ!

ಟೆಸ್ಟಿಂಗ್, ಟ್ರೇಸಿಂಗು, ಬೆಡ್ ಬುಕ್ಕಿಂಗ್ ಮತ್ತು ಪಾಸಿಟಿವ್–ನೆಗೆಟಿವ್ ಫಲಿತಾಂಶ ಕ್ರೂಡೀಕರಿಸಿ ಅಂದಂದಿನ ಕೆಲಸ ಆ ಕ್ಷಣದಲ್ಲೇ ಮಾಡುವ ಸಮರೋಪಾದಿಯ ಕೆಲಸ ಅದು. ಐವತ್ತು ಸಾವಿರಕ್ಕಿಂತಲೂ ಹೆಚ್ಚಿನ ಜನಸಂಖ್ಯೆಯ ಈ ಆರೋಗ್ಯ ಕೇಂದ್ರಕ್ಕೆ ನಾನೊಬ್ಬನೇ ಡಾಕ್ಟರು. ಒಬ್ಬರು ಸ್ಟಾಫ್ ನರ್ಸು, ಒಬ್ಬರು ಪ್ರಯೋಗಾಲಯದ ಸಿಬ್ಬಂದಿ. ಆಶಾ ಕಾರ್ಯಕರ್ತೆಯರಿದ್ದರೂ ಅವರ ಕೆಲಸ ಆಯಾ ಊರಿನಲ್ಲಿ. ಬೇರೆ ದಿನಗಳಲ್ಲಾದರೆ ಈ ಜನಸಂಖ್ಯೆ ಸಾಂದ್ರತೆಗೆ ಇಷ್ಟು ಸಿಬ್ಬಂದಿ ಸಾಕಾಗಿತ್ತು. ಆದರೆ ಇದು ಪ್ರಾಣಘಾತುಕ ಸಾಂಕ್ರಾಮಿಕತೆಯ ಹೊತ್ತು. ಸರ್ಕಾರಕ್ಕೆ ಕೂಡ ತಕ್ಷಣಕ್ಕೆ ಏನು ಮಾಡಬೇಕೆಂಬುದೇ ತೋಚುತ್ತಿರಲಿಲ್ಲ. ಹೊಸ ಸಿಬ್ಬಂದಿಯನ್ನು ಆಯ್ಕೆ ಮಾಡುವ ಅಧಿಕಾರ ಇದ್ದರೂ ಕೋವಿಡ್ ಭಯದಿಂದ ಹೊಸ ನೇಮಕಾತಿಗೆ ಹಾಜರಾಗಲು ಜನ ಹೆದರುತ್ತಿದ್ದರು. ಇರುವ ಸಿಬ್ಬಂದಿ ಕೂಡ ಕೋವಿಡ್ ಪೀಡಿತರಾಗಿ ದೀರ್ಘರಜೆಯ ಮೇಲೆ ಮನೆಯಲ್ಲಿದ್ದರು. ಒಟ್ಟಾರೆ ಆರೋಗ್ಯ ವ್ಯವಸ್ಥೆಗೆ ಪಾರ್ಶ್ವವಾಯು ಬಡಿದಿತ್ತು. ಇನ್ನು ಇಲ್ಲಿ ಕೆಲಸ ಮಾಡುವ ಸಿಬ್ಬಂದಿ, ರೋಗಿಗಳ ಕಿರುಕುಳ, ಸ್ಥಳೀಯ ಪುಢಾರಿಗಳ ಒತ್ತಡ, ಮೇಲಾಗಿ ಅಧಿಕಾರಿಗಳ ನಿರ್ದಯತನಕ್ಕೆ ಅಕ್ಷರಶಃ ನಲುಗಿ ಹೋಗಿದ್ದರು. ಅರ್ಧ ದಿನ ರಜೆ ಪಡೆಯಲೂ ಸಾಧ್ಯವಿರಲಿಲ್ಲ. ಅನಧಿಕೃತ ರಜೆಯಾದರೆ ತಕ್ಷಣ ನೋಟಿಸು ಕಳುಹಿಸಿ ಪ್ರಕೃತಿ ವಿಕೋಪ ಕಾಯಿದೆಯಡಿ ದಂಡ ಪ್ರಯೋಗಿಸುತ್ತಿದ್ದರು. ಒಟ್ಟಿನಲ್ಲಿ ಕೋವಿಡ್ ಎಂಬುದು ಎರಡನೇಯ ಅಲೆಯಲ್ಲಿ ಸರ್ಕಾರಕ್ಕೂ, ಸಿಬ್ಬಂದಿಗೂ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿ ಇಡೀ ವ್ಯವಸ್ಥೆಯನ್ನೇ ಹಣ್ಣುಗಾಯಿ ನೀರುಗಾಯಿ ಮಾಡಿತ್ತು.

ರಾತ್ರಿ ಹತ್ತು ಗಂಟೆಗೆ ಶಿವೂನನ್ನು ನಮ್ಮದೇ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಬೇಕೆನ್ನುವಷ್ಟರಲ್ಲಿ ಕಿಷ್ಣಪ್ಪನೇ ದುಬಾರಿ ದುಡ್ಡು ತೆತ್ತು ಆಮ್ಲಜನಕದ ಆಂಬುಲೆನ್ಸ್‌ನಲ್ಲಿ ಸೇಂಟ್ ಜಾನ್ಸಗೆ ಕರೆದೊಯ್ದು ನನಗೆ ಕರೆ ಮಾಡಿ ‘ಸರ್ ಇಲ್ಲಿ ನೀವು ಬುಕ್ ಮಾಡಿದ ಬೆಡ್ಡು ಬೇರೆಯವರ ಪಾಲಾಗಿದೆ’ ಎಂದ.

ಅದು ಆಗಬೇಕಾದದ್ದೇ.

ಒಂದು ಬೆಡ್ ಬುಕ್ ಮಾಡಿ ಕನಿಷ್ಠ ನಾಲ್ಕು ಗಂಟೆಯೊಳಗೆ ಅಲ್ಲಿ ದಾಖಲಾಗಲಿಲ್ಲವೆಂದರೆ ಆ ಮುಂಗಡ ಕಾಯ್ದಿರಿಸಿದ ಹಾಸಿಗೆ ರದ್ದಾಗಿ ಬೇರೆ ರೋಗಿಗಳ ಪಾಲಾಗಿರುತ್ತದೆ. ಇಲ್ಲಿ ಇವರು ತಡ ಮಾಡಿ ಇರುವ ಪಾಲಿಗೆ ಬಂದ ಜನರಲ್ ಬೆಡ್ಡನ್ನೂ ಕಳೆದುಕೊಂಡಿದ್ದರು. ಅನಿವಾರ್ಯವಾಗಿ ನಾನು ಶಿವಕುಮಾರನಿಗೆ ಬೇರೆ ಆಸ್ಪತ್ರೆಯಲ್ಲಿ ದಾಖಲು ಮಾಡಲೇಬೇಕಿತ್ತು. ಏಕೆಂದರೆ ಅದಾಗಲೇ ಅವನ ಆಮ್ಲಜನಕದ ಸ್ಯಾಚುರೇಷನ್ ಪ್ರಮಾಣ ತೊಂಬತ್ತರ ಗಡಿಯಲ್ಲಿ ಹೊಯ್ದಾಡುತ್ತಿತ್ತು. ಆಗ ರಾತ್ರಿ ಹನ್ನೊಂದು ಗಂಟೆ. ವಾರ್ ರೂಮಿನವರ ಜೊತೆ ಮಾತನಾಡಿ ಕನಿಷ್ಠ ಆಮ್ಲಜನಕದ ಬೆಡ್‌ ಬುಕ್ ಮಾಡಲು ವಿನಂತಿಸಿದೆ. ಒಂದು ಗಂಟೆಗಳ ಕಾಲ ನಿರಂತರ ಪ್ರಯತ್ನದಿಂದಾಗಿ ಕೊನೆಗೂ ಕೆಂಪೇಗೌಡ ಆಸ್ಪತ್ರೆಯಲ್ಲಿ ಹಾಸಿಗೆ ಬುಕ್ ಆಯಿತು. ಆಸ್ಪತ್ರೆಯ ಹೊರಗೆ ಆಂಬುಲೆನ್ಸ್‌ನಲ್ಲಿ ಶಿವೂನ ಆರೋಗ್ಯ ತಪಾಸಣೆ ಮಾಡಿದ ವೈದ್ಯರು, ಪರಿಸ್ಥಿತಿ ಬಿಗಡಾಯಿಸಿದೆ ರೋಗಿಗೆ ಕನಿಷ್ಠ ಐಸಿಯು ಬೆಡ್ಡು ಬೇಕು. ಕೆಂಪೇಗೌಡ ಆಸ್ಪತ್ರೆಯಲ್ಲಿ ಈಗ ಯಾವ ಐಸಿಯು ಬೆಡ್ಡುಗಳು ಖಾಲಿ ಇಲ್ಲವೆಂದು ಅವರೂ ಸಹ ಅಸಹಾಯಕರಾಗಿ ಕೈ ಚೆಲ್ಲಿದರು. ಇದೆಲ್ಲ ಆಗುವಷ್ಟರಲ್ಲಿ ಮಧ್ಯರಾತ್ರಿ ಎರಡು ಗಂಟೆ. ಶಿವು ಖಾಸಗಿ ಆಂಬುಲೆನ್ಸ್‌ನಲ್ಲಿ ಬಾಯಿಗೆ ಮಾಸ್ಕು ಹಾಕಿಕೊಂಡೇ ಫೋನಿನಲ್ಲಿ ನನಗೆ ಏನೆನೋ ಹೇಳಲು ಪ್ರಯತ್ನಿಸುತ್ತಿದ್ದ. ಅವ ಹೇಳುತ್ತಿದ್ದುದ್ದು ಇಷ್ಟೆ ‘ನನಗೆ ಯಾವ ಆಸ್ಪತ್ರೆಯೂ ಬೇಡ ಮನೆಗೆ ಹೋದರೆ ಸಾಕು’ ಎಂದು ಬೇಡುತ್ತಿದ್ದ.

ಒಂದು ರೋಗಿಗೆ ಒಮ್ಮೆ ಬೆಡ್ ಬುಕ್ ಮಾಡಿ ಆ ರೋಗಿ ಅಲ್ಲಿ ದಾಖಲಾಗಲಿಲ್ಲವೆಂದರೆ ಆ ರೋಗಿಗೆ ಅಡ್ಮಿಷನ್ ಮಾಡುವುದು ಕಷ್ಟವಿತ್ತು. ಖಾಸಗಿ ಆಂಬುಲೆನ್ಸ್‌ನಲ್ಲಿಯ ಆಮ್ಲಜನಕದ ಸಿಲಿಂಡರ್ ಕೂಡ ತಳ ತಲುಪಿ ಇನ್ನೇನು ಮುಗಿಯುವ ಹಂತದಲ್ಲಿತ್ತು. ಕ್ಷಣ ಕ್ಷಣಕ್ಕೂ ಶಿವೂನ ಆರೋಗ್ಯ ಬಿಗಡಾಯಿಸುತ್ತಲೇ ಇತ್ತು. ಇತ್ತ ಕಿಷ್ಣನ ಕಿಸೆಯಲ್ಲಿಯ ದುಡ್ಡೂ ಕರಗುತ್ತ ಬಂದಿತ್ತು. ಐಟಿ-ಸಿಟಿಯೆಂಬ ಬೆಂಗಳೂರಿನ ಈ ಸರಿ ರಾತ್ರಿಯಲಿ ಶಿವು ತನ್ನ ಉಸಿರು ಲೆಕ್ಕ ಹಾಕಿಕೊಂಡು ದೊಡ್ಡ ಕಣ್ಣು ಬಿಟ್ಟುಕೊಂಡ ಕಣ್ಣು ಒಂದೆವೆ ಕೂಡ ಮುಚ್ಚದೇ ಮುಚ್ಚಿದ ಆಂಬುಲೆನ್ಸ್‌ನ ಬಾಗಿಲು ಈಗ ತೆರೆಯಬಹುದು ಆಗ ತೆರಯಬಹುದೆಂದು ಕಾಯುತ್ತಲೇ ಇದ್ದ. ಬಾಗಿಲು ತೆರೆದಿದ್ದರೆ ಬಾಯಿಗೆ ಹಾಕಿದ ಮಾಸ್ಕು ಕಿತ್ತೆಸೆದು ಮೆಜೆಸ್ಟಿಕ್ ರೈಲು ನಿಲ್ದಾಣಕ್ಕೆ ಹೋಗಿ ಅರಸಿಕೆರೆ–ಕಡೂರು–ಶಿವಮೊಗ್ಗ ರೈಲು ಹತ್ತಿಬಿಡುತ್ತಿದ್ದನೋ ಏನೋ.? ಕಾಯಿಲೆಯ ಮಾಹಿತಿ ಬಹುಶಃ ಮನೆಯವರಿಗೆ ಗೊತ್ತಿರಲಿಲ್ಲ. ಬ್ಯಾಚುಲರ್ ರೂಮಿನಲ್ಲುಳಿದಿದ್ದ ಶಿವು ಕಿಷ್ಣನಿಗೆ ದೂರದ ನೆಂಟ. ಈ ಸರಿ ರಾತ್ರಿಯಲಿ ಮನೆಯವರಿಗೆ ಹೇಳಿ ಪ್ರಯೋಜನವಾದರೂ ಏನು? ಬೆಂಗಳೂರು ಅವರಿಗೇನು ಗೊತ್ತು? ಈ ಸರಿ ರಾತ್ರಿಯಲ್ಲಿ ಅವರಿಗೇಕೆ ತೊಂದರೆ ಕೊಡಬೇಕೆನ್ನುವುದು ಅಥವಾ ಈ ಪ್ರಕ್ಷುಬ್ಧತೆಯಲ್ಲಿ ಇದನ್ನೆಲ್ಲಾ ಹೇಳುವ ತಾಳ್ಮೆಯೂ ಅವನಿಗೆ ಇರಲಿಲ್ಲವೇನೊ ?

ನಾನಿಲ್ಲಿ ವಾರ್ ರೂಮಿನವರ ಜೊತೆ ಇನ್ನೊಂದು ಸುತ್ತಿನ ಮಾತುಕತೆಯಾಡಿ ಪರಿ ಪರಿಯಾಗಿ ವಿನಂತಿಸಿಕೊಂಡು ಶೇಷಾದ್ರಿಪುರಮ್‌ನ ಅಪೋಲೋ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಬುಕ್ ಮಾಡಿ ಕೊಡಬೇಕಾದರೆ ಸಮಯ ಬೆಳಗಿನ ಜಾವ ನಾಲ್ಕು ಗಂಟೆ.

ವಾರ್ ರೂಮಿನ ಹುಡುಗರು ಒಳ್ಳೆಯವರು. ಇಡೀ ರಾತ್ರಿ ಕೆಲಸ ಮಾಡುತ್ತಾರೆ. ಆದರೆ ಇದೇ ವಾರ್ ರೂಮಿನಲ್ಲಿ ಹಗಲು ಹೊತ್ತು ನಡೆಯುವ ದಂಧೆಯೇ ಬೇರೆ. ಅಷ್ಟೇನೂ ಗಂಭೀರವಲ್ಲದ ಹೋಮ್ ಐಸೋಲೇಷನ್‌ನಲ್ಲಿರುವ ರೋಗಿಗಳ ಮಾಹಿತಿ ಪಡೆದು ಅವರಿಗೆ ಗೊತ್ತಾಗದ ಹಾಗೆ ಅವರ ಹೆಸರಿನಲ್ಲಿ ಬೆಡ್ ಬುಕ್ ಮಾಡಿ ತೀರ ಬೇಡಿಕೆ ಇರುವ ಅಥವಾ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ದುಡ್ಡು ನೀಡಿದ ಬ್ರೋಕರುಗಳಿಗೆ ಬೆಡ್ಡುಗಳನ್ನು ಮಾರಾಟ ಮಾಡಿ ದುಡ್ಡು ಹಂಚಿಕೊಳ್ಳುತ್ತಿದ್ದರು. ಈ ಮೋಸದಾಟ ಆಸ್ಪತ್ರೆಯವರಿಗೂ ಗೊತ್ತಾಗುತ್ತಿರಲಿಲ್ಲ. ಇದೆಲ್ಲ ಹಾಡು ಹಗಲೇ ನಡೆಯುವ ದಂಧೆ. ಹಗಲು ದರೋಡೆಯಾದದ್ದು, ಪಾಪದ ಹುಡುಗರಿಗೆ ರಾತ್ರಿ ಗೊತ್ತಾಗುವುದಿಲ್ಲ. ಆಸ್ಪತ್ರೆಯ ಹೊರಗೆ ಶಿವು ಜೀವ ಬಿಡುತ್ತಿದ್ದಾನೆ..ಏನಾದರೂ ಮಾಡಬೇಕು.

ಶೇಶಾದ್ರಿಪುರಮ್ ಆಸ್ಪತ್ರೆಯ ಎಮರ್ಜೆನ್ಸಿ ಹಾಸಿಗೆಗೆ ದಾಖಲು ಮಾಡಬೇಕೆಂದರೆ ನುರಿತ ವೈದ್ಯರು ಪರೀಕ್ಷಿಸಿ ದಾಖಲಿಸಬೇಕು. ಆದರೆ ಬೆಳಗಿನ ನಾಲ್ಕು ಗಂಟೆಗೆ ಆಗಷ್ಟೇ ಡ್ಯೂಟಿ ಮುಗಿಸಿ ಮನೆಗೆ ತೆರಳಿ ಫೋನು ಸ್ವಿಚ್ ಆಫ್‌ ಮಾಡಿ ಮಲಗಿದ್ದರು. ತೂಕಡಿಸುತ್ತ ಬಂದ ನರ್ಸೊಬ್ಬಳು pulse oximeterನಲ್ಲಿ ರಕ್ತದಲ್ಲಿರುವ ಆಮ್ಲಜನಕದ ಮಟ್ಟ ಎಂಬತ್ತಕ್ಕಿಂತ ಕಡಿಮೆ ಇದೆಯೆಂದೂ ಇಂತಹ ರೋಗಿಗಳನ್ನು ಐಸಿಯುಗೆ ದಾಖಲಿಸಬೇಕಾದರೆ ಖುದ್ದು ವೈದ್ಯರೇ ಬಂದು Intubation ಮಾಡಿ ಕೃತಕ ಉಸಿರಾಟದ (ವೆಂಟಿಲೇಟರ್) ಮೇಲೆ ಇಡಬೇಕಾಗುತ್ತದೆಯೆಂದೂ ಇದಕ್ಕೆ ಒಬ್ಬ ಅರವಳಿಕೆ ತಜ್ಞರು ಬರಬೇಕೆಂದೂ ಹೇಳಿ ಹೋದಳು.

ಕಿಷ್ಣ ನನಗೆ ಫೋನಿನಲ್ಲಿ ಎಲ್ಲ ವಿವರಗಳನ್ನೂ ಹೇಳುತ್ತಿದ್ದ.

ರಾತ್ರಿಯಿಡೀ ನಿದ್ದೆಗೆಟ್ಟಿದ್ದಕ್ಕೊ ಏನೋ ಒಳಗಿನ ಧಗೆಗೆ ನಿದ್ದೆ ಬರದೆ ಒದ್ದಾಡುತ್ತಿದ್ದೆ. ಲೈಟು ಹಾಕಿದೊಡನೆ ಎಡಗಡೆ ಮಗ ಓದುತ್ತ ಓದುತ್ತ ಪುಸ್ತಕ ಕೈಲಿ ಹಿಡಿದುಕೊಂಡೇ ಮಲಗಿದ್ದು ಕಾಣಿಸಿತು. ಬಾಲ್ಕನಿಯ ಬಾಗಿಲು ತೆಗೆದೆ. ಒಳಗೆ ಬೇಸಿಗೆಯ ಬೆಳಗಿನ ತಣ್ಣನೆಯ ಗಾಳಿ ಹರಿದು ಹಾಯೆನಿಸಿತು. ಇನ್ನು ನಿದ್ದೆ ಬರಲಾರದು, ಮತ್ತೆ ಎದ್ದು ಉರಿವ ಹಗಲಿನ ಕೆಂಡ ಹಾಯುವ ಕೆಲಸಕೆ ಅಣಿಯಾಗಬೇಕು. ಹಿತವಾದ ಗಾಳಿಯ ಬೆಳಗು ಹಾಯಾಗಿತ್ತು. ಅಲ್ಲೆಲ್ಲೋ ಶಿವು ಶುದ್ಧ ಗಾಳಿಗೆ, ಸಾವು ಬದುಕಿನ ಮಧ್ಯೆ, ಬಾಗಿಲು ಮುಚ್ಚಿದ ಆಂಬುಲೆನ್ಸ್‌ನಲ್ಲಿ ಅರೆತೆರೆದ ಕಣ್ಣಿನಲ್ಲಿ ಊರಿಗೆ ಹೋಗುವ ಕನಸು ಕಾಣುತಿದ್ದ. ನಿಚ್ಚಳ ಬೆಳಕಾಗಲು ಇನ್ನೂ ಒಂದು ಗಂಟೆಯಾದರೂ ಬೇಕು. ಮನೆಗೆ ಹೋದ ವೈದ್ಯರು ಯಾವಾಗ ಬರುವರೋ ಗೊತ್ತಿಲ್ಲ, ಆಮ್ಲಜನಕದ ಸಿಲಿಂಡರು ಯಾವುದೇ ಕ್ಷಣದಲ್ಲಿ ಖಾಲಿಯಾಗಬಹುದು.

ಸೂರ್ಯ ಈಗ ಪೂರ್ವದ ದೇಶಗಳಲ್ಲಿ ಬೆಳಗುತ್ತಿರಬಹುದು. ಆದರೆ ನಮಗಿಲ್ಲಿನ್ನೂ ಕತ್ತಲೆ. ನಿಂತಂತೆ ಕಾಣುವ ಭೂಮಿಯ ಒಳಗೂ ಹೊರಗೂ ಸದಾ ಸಂಚಲನ ಇದ್ದೇ ಇರುತ್ತದೆ. ಕೆಲವೆಡೆ ಭೂಕಂಪ ಇನ್ನು ಹಲವೆಡೆ ವಿಪರೀತ ಮಳೆ, ಇನ್ನೆಲ್ಲೋ ಜ್ವಾಲಾಮುಖಿ ಸ್ಫೋಟ, ಮತ್ತೆಲ್ಲೋ ಕೆಂಡದಂತಹ ಬಿಸಿಲು ....

ಮತ್ತೆ ಈಗ ಇಲ್ಲಿ ಕೊರೊನಾ

ಎರಡನೇಯ ಅಲೆ ಹೀಗೆ ಅಪ್ಪಳಿಸಬಹುದೆಂದು ಯಾರೂ ಊಹಿಸಿರಲಿಲ್ಲ. ವಿಜ್ಞಾನಿಗಳು, ಭವಿಷ್ಯ ನುಡಿವವರು, ಶಕುನ ಹೇಳುವವರು, ಉಹುಂ ಯಾರೆಂದರೆ ಯಾರೂ...

ಬಾಲ್ಕನಿಯ ಬಾಗಿಲು ತೆರೆದೇ ದಿಂಬಿಗೆ ಒರಗಿ ಕಣ್ಣು ಮುಚ್ಚಿದೆ ಯಾವಾಗ ನಿದ್ದೆ ಬಂದಿತೊ ಏನೋ?

***

ಸರಿಯಾಗಿ ಹತ್ತು ಗಂಟೆಗೆ ಮತ್ತೆ ಆರೋಗ್ಯ ಕೇಂದ್ರದಲ್ಲಿದ್ದೆ. ಮನದ ಯಾವುದೋ ಮೂಲೆಯಲ್ಲಿ ಶಿವು ತಲೆಯಲ್ಲಿ ಗಿರಗಿಟ್ಟಲೇ ಹಾಕುತ್ತಿದ್ದ. ಮತ್ತೆ ಟೆಸ್ಟಿಂಗು, ಟ್ರೀಟ್‌ಮೆಂಟು, ಅಡ್ಮಿಷನು, ಬೆಡ್ ಬುಕ್ಕಿಂಗ್, ಸೈರನ್ ಸದ್ದು, ಆಂಬುಲೆನ್ಸ್‌ ಮತ್ತು ನಾನು....ಅದೇ ಸರಪಳಿ...ಕೈಗೆ ಕಾಲಿಗೆ ಇಡೀ ಕತ್ತಿಗೆ ಸುತ್ತುವ ದೈನಿಕದ ಸರಪಳಿ.

ನಾನು ಆ್ಯಂಟಿಜನ್ ಟೆಸ್ಟ ಮಾಡಿದ ಆ ದಿನವೇ ಶಿವಕುಮಾರ ವಡ್ಡರಪಾಳ್ಯದ ಮೌಲಾನಾ ಕ್ಲಿನಿಕಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಉತ್ತರ ಭಾರತದ ಮೌಲಾನಾ ಅದು ಯಾವುದೋ ಖೊಟ್ಟಿ ಡಿಗ್ರಿ ಸರ್ಟಿಫಿಕೇಟ್ ಇಟ್ಟುಕೊಂಡು ಪೈಲ್ಸ್, ಏಡ್ಸ್, ಕ್ಯಾನ್ಸರ್ ಚಿಕಿತ್ಸೆ ಕೊಟ್ಟು ವಾಸಿ ಮಾಡುತ್ತೇನೆಂದು ಬೋರ್ಡು ಬರೆಸಿಕೊಂಡಿದ್ದ. ಈಗ ಕೊರೊನಾ ಸೀಜನ್ನು. ಬಂದ ರೋಗಿಗಳಿಗೆಲ್ಲ ಗ್ಲುಕೋಸ್ ಹಾಕಿ, ಮಕ್ಕಳಿಗೆ ಶೀತವಾದಾಗ ಕೊಡುವ ನ್ಯುಬಲೈಜರ್ ಮಷೀನನ್ನೇ ಶಿವೂನಂತಹ ಕೊರೊನಾ ರೋಗಿಗೆ ‘ಆಕ್ಸಿಜನ್’ ಕೊಡ್ತಿದ್ದೀನಿ ಅಂತ ನಂಬಿಸಿ ಲಕ್ಷಾಂತರ ರೂಪಾಯಿ ಸಂಪಾದಿಸಿ ಮನೆ ಆಸ್ತಿ ಮಾಡಿದ್ದ. ಜನ ಕೂಡ ಅಷ್ಟೇ ನಂಬಿಕೆಯಿಟ್ಟು ಇಲ್ಲಿ ಬಂದು ಹೋಗುತ್ತಿದ್ದರು. ಶಿವೂ ಕೂಡ ಅದೇ ನಂಬಿಕೆಯಿಂದ ಇಲ್ಲಿ ಎರಡು ದಿನ ನ್ಯೂಬಲೈಜರ್ ಹಾಕಿಸಿಕೊಂಡು ತೀವ್ರ ಉಸಿರಾಟದ ಸಮಸ್ಯೆಯಾದಾಗ ಸರ್ಕಾರಿ ಆಸ್ಪತ್ರೆಯ ಬಾಗಿಲು ಬಡಿದಿದ್ದ.

ಹಾಗಂತ ವಡ್ಡರಪಾಳ್ಯದ ಆಶಾ ಸುಮಿತ್ರಮ್ಮ ಕಣ್ಣೀರು ಹಾಕುತ್ತ ಹೇಳುತ್ತಿದ್ದಳು. ಸಮಯ ಎರಡು ಗಂಟೆಯಾಗಿತ್ತು ಇನ್ನೇನು ಊಟ ಮಾಡಲು ಕೈತೊಳೆಯಲು ಹೊರಟಾಗ ಮತ್ತದೇ ರಿಂಗ್ ಟೋನು ವಡ್ಡರಪಾಳ್ಯ ಪೇಷಂಟ್ ಕಿಷ್ಣ ಇಜ್ ಕಾಲಿಂಗ್ ....ತೇವದ ಕೈಯಿಂದ ಫೋನ್ ಮುಟ್ಟಬಾರದೆಂದು ಅಂಗೈ ಆರುವ ತನಕ ಕಾಯುತ್ತಲೇ ಇದ್ದೆ ....ಫೋನು ರಿಂಗಾಗುತ್ತಲೇ ಇತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.