ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಚಿತ್ತಕೆ ಬಂದದ್ದು...

Last Updated 15 ಜುಲೈ 2020, 19:30 IST
ಅಕ್ಷರ ಗಾತ್ರ

ದೊರೆ ಈಡಿಪಸನ ಭವಿಷ್ಯದ ಬಗ್ಗೆ ಕಣಿ ನುಡಿಯದಿದ್ದರೆ ಆತನ ಬದುಕಿನಲ್ಲಿ ಆ ದುರಂತ ಸಂಭವಿಸುತ್ತಿತ್ತೇ? ಈ ಮಗು ಮುಂದೆ ತಂದೆಯನ್ನೇ ಕೊಂದು ತಾಯಿಯೊಡನೆ ನೆರೆಯುತ್ತಾನೆಂಬ ವಿಷಯ ತಿಳಿದಿದ್ದರಿಂದ ತಾನೆ, ತಂದೆ ಅದನ್ನು ಸುಳ್ಳು ಮಾಡಲು ಮಗುವನ್ನು ಪರಿತ್ಯಜಿಸಬೇಕಾಯಿತು, ಆ ಮಗು ಬೇರೆಲ್ಲೋ ಬೆಳೆದು ಆತನಿಗೂ ಈ ವಿಷಯ ತಿಳಿದುದರಿಂದ ತಾನೆ, ಅದನ್ನು ಸುಳ್ಳು ಮಾಡಲೆಂದು, ತಾನು ತಂದೆಯೆಂದು ತಿಳಿದಾತನನ್ನು ತೊರೆದು ಥೀಬ್ಸ್ ನಗರದೆಡೆ ನಡೆದದ್ದು; ಆಕಸ್ಮಿಕವಾಗಿ ಬೀದಿ ಜಗಳವೊಂದರಲ್ಲಿ ತನ್ನ ನಿಜವಾದ ತಂದೆಯನ್ನು ತಿಳಿಯದೇ ಕೊಂದದ್ದು, ಆತನ ಸಿಂಹಾಸನವನ್ನಾಕ್ರಮಿಸಿ, ಆತನ ರಾಣಿಯನ್ನು (ತನ್ನ ನಿಜವಾದ ತಾಯಿಯೆಂದು ತಿಳಿಯದೇ) ಮದುವೆಯಾದದ್ದು. ಕಣಿ ನುಡಿಯದೆಯೇ ಇದ್ದಿದ್ದರೆ? ಕಣಿ ನುಡಿದದ್ದರ ಉದ್ದೇಶವೇ ಅದು ಹೀಗೇ ನಡೆಯಬೇಕೆಂದಿತ್ತೆಂಬುದು ತಾನೆ?

ಮನುಷ್ಯಸ್ವಭಾವವೇ ಇದು. ಭವಿಷ್ಯ ತಿಳಿಯುವವರೆಗೂ ಕಳಮಳ. ತಿಳಿದಮೇಲೆ ತಳಮಳ. ಆಗುವುದನ್ನು ಹೇಗಾದರೂ ತಪ್ಪಿಸುವ ಹಪಹಪಿ. ಆದರೆ ಆ ಅದೇ ಪ್ರಯತ್ನದಿಂದಲೇ ವಿಧಿ ತನ್ನ ಗುರಿ ಸಾಧಿಸಿಕೊಳ್ಳುವುದು ಮಾನವಪ್ರಯತ್ನದ ಮಿತಿ.

ನಮ್ಮ ಚಂದ್ರಹಾಸನ ವಿಷಯದಲ್ಲಿ ಆದದ್ದಾದರೂ ಏನು? ಬೀದಿಯ ಬಾಲಕ ಕುಂತಳದ ದೊರೆಯಾಗಿಬಿಡುತ್ತಾನೆಂಬ ಭವಿಷ್ಯವನ್ನು ಸುಳ್ಳಾಗಿಸಲು ಮಂತ್ರಿ ದುಷ್ಟಬುದ್ಧಿ ಆತನನ್ನು ಮುಗಿಸಿಯೇ ಬಿಡಲು ಏನೇನು ಮಾಡುತ್ತಾನೆ. ವಿಧಿ ಆ ಪ್ರಯತ್ನಗಳನ್ನೇ ಉಪಯೋಗಿಸಿಕೊಂಡು ತನ್ನ ಗುರಿ ಸಾಧಿಸಿಬಿಡುತ್ತದಲ್ಲ. ಕೊನೆಗೂ ಭವಿಷ್ಯವಾಣಿಯಂತೆ ದೊರೆಯಾದ ಚಂದ್ರಹಾಸ - ಆತನಿಗೇನೋ ಸುಖಾಂತವೇ ಆದರೂ, ಭವಿಷ್ಯವನ್ನು ಸುಳ್ಳುಮಾಡಲೆತ್ನಿಸಿದ ಮಂತ್ರಿಗೆ ಅದು ದುಃಖಾಂತವೇ ಆಯಿತಲ್ಲ.

ವಿಧಿ, ಯಾವಾಗಲೂ ಮನುಷ್ಯನ ಮೇಲೆ ತನ್ನ ಕೋರೆದಾಡೆಗಳನ್ನು ಮಸೆಯುತ್ತಾ, ನಂದಿನಿ ಗೋವನ್ನು ರಕ್ಷಿಸಲೆಳಸುವ ದಿಲೀಪನಿಗೆ ಸಿಂಹ ಹೇಳುವಂತೆ ‘ಅಲಂ ಮಹೀಪಾಲ ತವಶ್ರಮೇಣ‘ ಎನ್ನುತ್ತಿರುತ್ತದೇನೋ. ವಿಧಿ ಬಲವತ್ತರವಾಗಿರುವಾಗ ಮನುಷ್ಯನ ಕೈ ನಡೆಯದೆಂಬುದೇ ಸಂದೇಶವಲ್ಲವೇ? ಅಷ್ಟಲ್ಲದೇ ದಾಸರು ಹಾಡಿದರೇ? ‘ಹರಿಚಿತ್ತ ಸತ್ಯ, ನರಚಿತ್ತಕೆ ಬಂದದ್ದು ಲವಲೇಶ ನಡೆಯದು‘ ನರಚಿತ್ತವೇನೋ ‘ಕುದುರೆ ಅಂದಣ ಆನೆ‘ಗಳನ್ನೇ ಬಯಸುತ್ತದೆ. ಆದರೆ ಪದಚಾರಿಯಾಗಬೇಕೆಂಬುದೇ ಹರಿಚಿತ್ತವಿದ್ದರೆ?

ಹಾಗಿದ್ದರೆ ನಿಯತಿಯಲ್ಲಿ ಮನುಷ್ಯಪ್ರಯತ್ನಕ್ಕೇನೂ ಬೆಲೆಯೇ ಇಲ್ಲವೇ? ಕೊರೋನಾ ಮಾರಿ ಊರನ್ನೆಲ್ಲಾ ನೆಕ್ಕುತ್ತಿದ್ದರೂ ಕೈ ಚೆಲ್ಲಿ ಕುಳಿತುಬಿಡಬೇಕೇ? ಶತ್ರು ಮುಂದೊತ್ತಿ ಬರುತ್ತಿದ್ದರೂ ದೈವೇಚ್ಛೆಯೆಂದು ಕುಳಿತುಬಿಡಬೇಕೆ? ‘ವ್ಯರ್ಥಶ್ರಮ ಪಡಬೇಡ‘ ಎಂಬ ಸಿಂಹದ ಮಾತಿಗೆ ಒಪ್ಪಿ ದಿಲೀಪ ನಂದಿನಿಯನ್ನು ಸಿಂಹದ ಬಾಯಿಗೆ ಕೊಟ್ಟು ಬಂದುಬಿಡಬೇಕಿತ್ತೇ?

ಹುಲಿ ಜಿಂಕೆಯನ್ನು ತಿನ್ನುವುದು ಎಷ್ಟುಮಟ್ಟಿಗೆ ನಿಯತಿಯೋ, ಜಿಂಕೆ ಹುಲಿಯಿಂದ ತಪ್ಪಿಸಿಕೊಳ್ಳುವ ಸರ್ವಪ್ರಯತ್ನವನ್ನೂ ಮಾಡುವುದೂ ಅಷ್ಟೇಮಟ್ಟಿನ ನಿಯತಿಯಷ್ಟೇ? ಅಲ್ಲದಿದ್ದರೆ ಕಣ್ಣು ಕೈಕಾಲು ಬುದ್ಧಿ-ವಿವೇಕಗಳ ನೆಲೆಯಾದರೂ ಏನು? ಪ್ರಕೃತಿಯಲ್ಲಿ ಪ್ರತಿಯೊಂದು ಜೀವಿಗೂ ಅದರದೇ ಭಯಗಳೂ ಸವಾಲುಗಳೂ, ಮತ್ತು ಅದನ್ನು ಸಮರ್ಥವಾಗಿ ಎದುರಿಸಿ ಬದುಕಲು ಅತ್ಯಗತ್ಯವಾದ ಸಾಮರ್ಥ್ಯವೂ ತಾನೇ ತಾನಾಗಿ ಬಂದಿರುತ್ತವೆ, ಮತ್ತು ಅದನ್ನು ಪ್ರತಿಯೊಂದು ಜೀವವೂ ನಿಯತವಾಗಿ ಉಪಯೋಗಿಸುತ್ತವೆ ಕೂಡ. ಮನುಷ್ಯನಿಗಿರುವ ಹೆಚ್ಚುವರಿ ಸಾಧನವೆಂದರೆ ವಿವೇಕ - ಯುಕ್ತಾಯುಕ್ತವಿವೇಕ - ತನ್ನ ಸ್ವಾತಂತ್ರ್ಯದ ಪರಿಧಿಯನ್ನು ಕಂಡು ಗುರುತಿಸಿಕೊಳ್ಳುವ ವಿವೇಕ. ಎಲ್ಲಿಯವರೆಗೆ ಬದುಕು ಆ ಪರಿಧಿಯೊಳಗಿರುತ್ತದೆಯೋ ಅದುವರೆಗೆ ಎಲ್ಲವೂ ಸಮ. ಪರಿಧಿಯನ್ನು ಮೀರಿದರೆ ಆಗುವುದು, ಮನುಷ್ಯಪ್ರಯತ್ನವನ್ನು ಮೀರಿದ್ದು.

‘ಅವನ ನಿಯಮ ಮೀರಿ ಇಲ್ಲಿ ಏನೂ ಸಾಗದು‘ ಎಂಬುದೇನೋ ಸರಿ, ಆದರೆ ‘ನಾವು ನೆನೆಸಿದಂತೆ ಬಾಳಲೇನೂ ನಡೆಯದು‘ ಎನ್ನುವ ನಿರಾಶಾವಾದ ಅನಗತ್ಯ. ಆ ನಿಯಮದ ಪರಿಧಿಯಲ್ಲಿ ನಾವು ನೆನೆಸಿದ್ದನ್ನು ನಡೆಸಲು ಸಾಧ್ಯ ಮತ್ತು ಅತ್ಯವಶ್ಯ ಎಂಬ ಅರಿವು ಮೂಡಿದರೆ ಕಾಣ್ಕೆ ಪರಿಪೂರ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT