ಗುರುವಾರ , ಜುಲೈ 7, 2022
23 °C

ತಿರುವಳ್ಳುವರ್ ಪ್ರತಿಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಮಿಳು ಕವಿ ಮತ್ತು ತತ್ವಶಾಸ್ತ್ರಜ್ಞ ತಿರುವಳ್ಳುವರ್ ಅವರ ಕಲ್ಲಿನ ಮೂರ್ತಿ ತಮಿಳುನಾಡಿನ ಕನ್ಯಾಕುಮಾರಿ ಸಮೀಪದ ಚಿಕ್ಕ ದ್ವೀಪವೊಂದರಲ್ಲಿ ಇದೆ. ಇದು ವಿವೇಕಾನಂದ ಸ್ಮಾರಕದ ಪಕ್ಕದಲ್ಲೇ ಇದೆ.

ಕನ್ಯಾಕುಮಾರಿಯು ಅರಬ್ಬೀ ಸಮುದ್ರ, ಹಿಂದೂ ಮಹಾಸಾಗರ ಮತ್ತು ಬಂಗಾಳ ಕೊಲ್ಲಿ ಸಂಗಮವಾಗುವ ಸ್ಥಳದಲ್ಲಿದೆ. ತಿರುವಳ್ಳುವರ್ ಅವರು ತಿರುಕ್ಕುರಳ್‌ನ ಕರ್ತೃ. ಇದನ್ನು ಕುರಳ್ ಎಂದೂ ಕರೆಯುತ್ತಾರೆ. ಇದು 1,330 ತತ್ವೋಕ್ತಿಗಳ ಸಂಗ್ರಹ. ತಮಿಳು ಸಾಹಿತ್ಯದ ಅತ್ಯಂತ ಮುಖ್ಯ ಕೃತಿಯನ್ನಾಗಿ ಇದನ್ನು ಪರಿಗಣಿಸಲಾಗಿದೆ. ಇದರ ಕಾಲ ಕ್ರಿ.ಪೂ. 300ನೆಯ ಶತಮಾನ. ಇದನ್ನು ಸಂಗಮ್ ಕಾಲ ಎಂದೂ ಹೇಳಲಾಗುತ್ತದೆ. ತಮಿಳು ಸಾಹಿತ್ಯದ ಪಾಲಿಗೆ ಇದೊಂದು ಸುವರ್ಣ ಯುಗವಾಗಿತ್ತು.

ಕವಿಯ ಪ್ರತಿಮೆಯನ್ನು 2000ನೇ ಇಸವಿಯ ಜನವರಿ 1ರಂದು ಪ್ರತಿಷ್ಠಾಪಿಸಲಾಯಿತು. ಪ್ರತಿಮೆಯ ಆಧಾರ ಪೀಠ ಹಾಗೂ ಪ್ರತಿಮೆ ಎರಡನ್ನೂ ಸೇರಿಸಿದರೆ ಒಟ್ಟು ಎತ್ತರ 40.5 ಮೀಟರ್‌ (133 ಅಡಿ) ಆಗುತ್ತದೆ. 133 ಅಡಿಗಳು ಕುರಳ್‌ನ 133 ಅಧ್ಯಾಯಗಳನ್ನು ಸಂಕೇತಿಸುತ್ತವೆ. ಪ್ರತಿಮೆಯ ಒಟ್ಟು ತೂಕ ಏಳು ಸಾವಿರ ಟನ್‌ಗಳು.

ಕುತೂಹಲದ ವಿಷಯವೆಂದರೆ, ಪ್ರತಿಮೆಯ ಮುಖದ ಪ್ರತಿ ಭಾಗವನ್ನೂ – ಅಂದರೆ, ಮೂಗು, ಕಿವಿಗಳು, ಕಣ್ಣುಗಳು ಇತ್ಯಾದಿ – ಪ್ರತ್ಯೇಕ ಕಲ್ಲುಗಳನ್ನು ಬಳಸಿ ಕೈಯಿಂದ ಕೆತ್ತಲಾಗಿದೆ. ಪ್ರತಿಮೆಯು ಸೊಂಟದ ಭಾಗದಲ್ಲಿ ತುಸು ವಾಲಿಕೊಂಡಿದ್ದು, ನೃತ್ಯದ ಭಂಗಿಯನ್ನು ನೆನಪಿಸುತ್ತದೆ. ಇದರ ಶಿಲ್ಪಿ ವಿ. ಗಣಪತಿ ಸ್ಥಪತಿ. ಇದು ಭಾರಿ ಪ್ರಮಾಣದ ಭೂಕಂಪನಗಳನ್ನೂ ತಾಳಿಕೊಳ್ಳುವಂತೆ ನಿರ್ಮಿಸಲಾಗಿದೆ.

ಆದರೆ, 2004ರ ಡಿಸೆಂಬರ್‌ನಲ್ಲಿ ಅಪ್ಪಳಿಸಿದ ಸುನಾಮಿಯು ಸ್ಮಾರಕಕ್ಕೆ ತುಸು ಹಾನಿ ಉಂಟುಮಾಡಿದೆ.

***

ರಾಮ ಸೇತು

ಇದು ಕಲ್ಲುಗಳಿಂದ ನಿರ್ಮಿಸಿದ ಸೇತುವೆ. ಶ್ರೀರಾಮ ತನ್ನ ಸೇನೆಯ ಜೊತೆ ಸಮುದ್ರ ದಾಟಿ ಲಂಕೆ ತಲುಪಲು ಇದನ್ನು ನಿರ್ಮಿಸಲಾಯಿತು. ಇದರ ನಿರ್ಮಾಣ ಮಾಡಿದ್ದು ವಿಶ್ವಕರ್ಮನ ಮಗ ನಳ. ಈ ಪುರಾತನ ಸೇತುವೆಯನ್ನು ಈಗಿನ ನಕ್ಷೆಗಳಲ್ಲಿ ‘ಆಡಮ್ಸ್‌ ಸೇತುವೆ’ ಎಂದು ತೋರಿಸಲಾಗುತ್ತದೆ.

***

ರಾವಣ

ರಾವಣ ಹತ್ತು ತಲೆಗಳನ್ನು ಹೊಂದಿದ್ದ ರಾಕ್ಷಸ ರಾಜ. ಲಂಕೆಯನ್ನು ಆಳುತ್ತಿದ್ದವ. ಈತನಿಗೆ ಬ್ರಹ್ಮನಿಂದ ಒಂದು ವರ ಸಿಕ್ಕಿತ್ತು. ಅದರ ಪ್ರಕಾರ ರಾವಣನಿಗೆ ಮನುಷ್ಯನನ್ನು ಹೊರತುಪಡಿಸಿ ಬೇರೆ ಯಾರಿಂದಲೂ ಸಾವಿರಲಿಲ್ಲ. ಅಧಿಕಾರದ ಮದ ಏರಿಸಿಕೊಂಡ ರಾವಣ, ಬಹಳ ದೌರ್ಜನ್ಯ ನಡೆಸಿದ. ರಾವಣನ ಸಂಹಾರಕ್ಕಾಗಿ ಮಹಾವಿಷ್ಣು ರಾಮನ ಅವತಾರ ಎತ್ತಿ ಬರಬೇಕಾಯಿತು.

***

ಟೆಲಿಫೋನ್‌ ಡೈರೆಕ್ಟರಿ

ಟೆಲಿಫೋನ್‌ಗಳನ್ನು ‘ಲ್ಯಾಂಡ್‌ಲೈನ್‌’ ಎಂದು ಇನ್ನೂ ಕರೆಯದಿದ್ದ ಕಾಲದಲ್ಲಿ, ಟೆಲಿಫೋನ್‌ ಡೈರೆಕ್ಟರಿ ಎನ್ನುವ ಪುಸ್ತಕಗಳು ಬೇರೆಯವರ ದೂರವಾಣಿ ಸಂಖ್ಯೆ ಹುಡುಕಲು ಉಪಯುಕ್ತ ಕೈಪಿಡಿಗಳಾಗಿದ್ದವು. ಇಂಟರ್ನೆಟ್‌ ಹಾಗೂ ಮೊಬೈಲ್‌ ಫೋನುಗಳ ಬಳಕೆ ಹೆಚ್ಚಾದ ನಂತರ, ದಪ್ಪನೆಯ ಈ ಡೈರೆಕ್ಟರಿಗಳು ನಿರುಪಯುಕ್ತವಾದವು. ಅವು ನಿಧಾನವಾಗಿ ಮರೆಗೆ ಸರಿದವು. ದೆಹಲಿಯ ಎಂಟಿಎನ್‌ಎಲ್‌ ಸಂಸ್ಥೆ ಕಡೆಯ ಬಾರಿ ಡೈರೆಕ್ಟರಿ ಮುದ್ರಿಸಿದ್ದು 2000ನೆಯ ಇಸವಿಯಲ್ಲಿ.

***

ಬ್ರಿಟನ್ನಿನ ಪೇಂಟನ್ ಝೂ ಎನ್ವಿರಾನ್‌ಮೆಂಟಲ್‌ ಪಾರ್ಕ್‌ನಲ್ಲಿ ಇರುವ ಬಬೂನ್‌ಗಳು (ಒಂದು ಜಾತಿಯ ಮಂಗಗಳು) ತಮ್ಮ ಹಲ್ಲುಗಳನ್ನು ಕಸಪೊರಕೆಯ ಕಡ್ಡಿಗಳಿಂದ ಶುಚಿಗೊಳಿಸಿಕೊಳ್ಳುವ ದೃಶ್ಯ ಚಿತ್ರೀಕರಿಸಲಾಗಿದೆ. ಹಲ್ಲು ಶುಚಿಗೊಳಿಸಲು ಅವು ಕೆಲವು ಬಾರಿ ತಮ್ಮದೇ ಕೂದಲನ್ನೂ ಬಳಸುತ್ತವೆ. ಅವು ತಮ್ಮ ಹಲ್ಲು ಶುಚಿಗೊಳಿಸಿಕೊಳ್ಳುವುದನ್ನು ಪ್ರಾಣಿಗಳ ವರ್ತನೆಯ ಬಗ್ಗೆ ಸಂಶೋಧನೆ ನಡೆಸುವ ಚಾರ್ಲಟ್ ಮಾರ್ಗನ್ ಎನ್ನುವವರು ಪತ್ತೆ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.