ಭಾನುವಾರ, ಮಾರ್ಚ್ 7, 2021
29 °C

ಕೆರೆಯ ನೀರನು ಕೆರೆಗೆ ಚೆಲ್ಲಿ

ಅಬ್ಬಾಸ್ ಮೇಲಿನಮನಿ Updated:

ಅಕ್ಷರ ಗಾತ್ರ : | |

Prajavani

ಜಯವಂತ ಪಟೇಲ್ ನಿವೃತ್ತಿಗೆ ಒಂದು ತಿಂಗಳು ಮಾತ್ರ ಬಾಕಿ ಇದೆ. ಬರೊಬ್ಬರಿ ಮೂವತ್ತೈದು ವರ್ಷಗಳ ಸೇವೆ ಅವನದು. ನೌಕರಿ ಮಾಡುವವರಿಗೆ ನಿವೃತ್ತಿ ಅನಿವಾರ್ಯ. ಈ ವಿಷಯದಲ್ಲಿ ಜಯವಂತ ನಿರಾಳ. ಆದರೆ, ಗಂಡನ ನಿವೃತ್ತಿಯು ಭಾಗ್ಯಲಕ್ಷ್ಮಿಯನ್ನು ಕಂಗೆಡಿಸಿದೆ. ಇನ್ನುಮುಂದೆ ಸಂಬಳ ಸಿಗುವುದು ಈಗಿನ ಅರ್ಧದಷ್ಟು ಮಾತ್ರ. ಇದಕ್ಕೂ ದೊಡ್ಡ ಚಿಂತೆ ಇನ್ನು ‘ಮಾಮೂಲು’ ತನಗೆ ಸಿಗುವುದಿಲ್ಲ ಎನ್ನುವುದು. ‘ರಿಟೈರ್ಡ್ ಆದಮ್ಯಾಲೆ ಮನ್ಯಾಗ ಖಾಲಿ ಕುಂತು ಏನ್ ಮಾಡ್ತೀರಿ? ಆಫೀಸಿನ್ಯಾಗ ಕೆಲಸ ಇದ್ರ ಕೇಳ್ರಿ. ಹತ್ತು ಸಾವಿರ ಕೊಟ್ರೂ ಅಡ್ಡಿಯಿಲ್ಲ’ ಅಂತ ಆಕೆ ಈಗಾಗಲೇ ಹೇಳಿದ್ದಿದೆ. ‘ಇವತ್ತಿನ ನೌಕರಿ ಅಂದ್ರ ಬಹಳ ನಾಜೂಕು. ಒತ್ತಡದಾಗ ಕೆಲಸ ಮಾಡಬೇಕು. ನನಗ ಆಗುದಿಲ್ಲ’ ಅಂದಿದ್ದ ಜಯವಂತ.

ಜಯವಂತನದು ಪಟೇಲ್ ಮನೆತನ. ಒಂದು ಕಾಲದ ಗತ್ತು, ದೌಲತ್ತು ಅಜ್ಜನ ಜತೆ ಕಳೆದುಹೋಗಿತ್ತು. ಮಾದೇವಪ್ಪ ಪಟೇಲ್ ಪಾಲಿಗೆ ನಾಲ್ಕು ಅಂಕಣದ ಮನೆ, ನಾಲ್ಕು ಎಕರೆ ಒಣ ಬೇಸಾಯದ ಭೂಮಿ ಮಾತ್ರ ಉಳಿದಿತ್ತು. ಎರಡೆಕರೆ ಭೂಮಿಯನ್ನು ಇಬ್ಬರು ಹೆಣ್ಣುಮಕ್ಕಳ ಮದುವೆಗೆ ಮಾರಿದ್ದ ಮಾದೇವಪ್ಪ, ಮಗನ ಅಕ್ಷರ ಪ್ರೀತಿಗೆ ಬೆರಗಾಗಿ, ಅದೇ ಅವನ ಭವಿಷ್ಯಕ್ಕೆ ಆಧಾರವಾಗುವುದೆಂದು ನಂಬಿಕೊಂಡಿದ್ದ. ಜಯವಂತನ ಪಿಯುಸಿ ರಿಜಲ್ಟ್ ಬರುವ ಮೊದಲೇ ಹೃದಯಾಘಾತಕ್ಕೆ ಅವನು ಬಲಿಯಾಗಿದ್ದ. ಮಲ್ಲಮ್ಮ ಮನೆತನದ ವರ್ಚಸ್ಸು ಬದಿಗಿಟ್ಟು, ಬೇರೆಯವರ ಹೊಲಗಳಲ್ಲಿ ಕೆಲಸ ಮಾಡಿ, ಮಗನನ್ನು ಡಿಗ್ರಿವರೆಗೆ ಓದಿಸಿ, ಗಂಡನ ಅಭಿಲಾಷೆ ಈಡೇರಿಸಿದ್ದಳು.

ಅದೃಷ್ಟ ಎನ್ನುವಂತೆ ಕಾಲೇಜಿಗೆ ಫಸ್ಟ್‌ ಬಂದಿದ್ದ ಜಯವಂತ, ಕ್ಲರ್ಕ್ ಹುದ್ದೆಗೆ ಪರೀಕ್ಷೆ ಬರೆದು, ಕಂದಾಯ ಇಲಾಖೆಗೆ ಹಾಜರಾಗಿದ್ದ. ‘ಮಗನ, ಕಲಿತ ಅಕ್ಷರಕ್ಕ ದ್ರೋಹ ಬಗಿಬ್ಯಾಡ. ಮಂದಿ ಮರಗಾ ಕಟ್ಗೊ ಬ್ಯಾಡ. ನಾಕು ಜನಕ್ಕ ಒಳ್ಳೇದು ಮಾಡು. ದೇವರು ಮೆಚ್ಚತಾನ’ ಅಂತ ಮಲ್ಲಮ್ಮ, ಮಗನನ್ನು ಹರಿಸಿ ಕಳಿಸಿದ್ದಳು. ಜಯವಂತ ಮೊದಲ ತಿಂಗಳ ಪಗಾರ ತಂದು ಕೊಟ್ಟಾಗ, ಅದನ್ನು ಗಂಡನ ಹೆಸರಲ್ಲಿ ಸ್ಕೂಲಿನ ಬಡಮಕ್ಕಳಿಗೆ ಹಂಚಿದ್ದಳು. ಹೊಸ ಸೀರೆ ತಂದಾಗಲೂ ಅಷ್ಟೆ, ‘ಮಗಾ, ಈ ಜೀವಕ್ಕ ಯಾವ ಆಸೇನೂ ಇಲ್ಲ. ನಿನ್ನ ಬದುಕು ಚಂದ ಇರುದನ್ನ ನಾನು ನೋಡಬೇಕು’ ಎಂದಿದ್ದಳು. ಎರಡು ವರ್ಷದ ನಂತರ ಮಗನ ಮದುವೆಯನ್ನು ಭಾಗ್ಯಲಕ್ಷ್ಮಿಯೊಂದಿಗೆ ನೆರವೇರಿಸಿದ್ದಳು. ಬಡವರ ಮನೆಯ ಹುಡುಗಿ, ಮನಸ್ಸಿಗೆ ಹಚ್ಚಿಕೊಂಡು ಸಂಸಾರ ಮಾಡುವಳೆಂದು, ವರದಕ್ಷಿಣೆ ಅದು-ಇದು ಎನ್ನದೆ ಸೊಸೆಯನ್ನು ಮನೆ ತುಂಬಿಸಿಕೊಂಡಿದ್ದಳು.

ವರ್ಗಾವಣೆ ಕಾರಣದಿಂದ ಜಯವಂತ ಊರೂರು ತಿರುಗಿಕೊಂಡಿದ್ದ. ಇಲಾಖೆಯ ಕ್ವಾರ್ಟ‌ರ್ಸ್‌ನಲ್ಲಿ ಅವನ ವಾಸ. ಅವ್ವ ತನ್ನ ಜೊತೆಯಲ್ಲಿ ಇರಬೇಕೆಂದು ಅವನ ಹಂಬಲವಾಗಿತ್ತು. ‘ಶಿವನ ಪೂಜೆದಾಗ ಕರಡಿ ಬಿಟ್ಟಂಗ ನಂದೇನಪ ಅಲ್ಲಿ ಕೆಲಸ’ ಅಂತ ನಯವಾಗಿ ನಿರಾಕರಿಸಿದ್ದಳು ಮಲ್ಲಮ್ಮ. ಹೀಗೊಮ್ಮೆ ಬಂದರೂ, ಒಂದು ರಾತ್ರಿ ಕಳೆಯುವುದರೊಳಗೆ ನೂರು ಸಲ ತನ್ನ ಊರು, ಹೊಲ, ಕೆಲಸ ಧ್ಯಾನಿಸಿ ಹೊರಟೇ ಬಿಡುವಳು. ಆದರೆ ಮೊಮ್ಮಕ್ಕಳ ಹೆರಿಗೆ ಸಮಯದಲ್ಲಿ ಬಂದು, ಬಾಣಂತನ, ತೊಟ್ಟಿಲು ಕಾರ್ಯ ಮುಗಿಸಿ ಹೋಗಿದ್ದು ಅವಳ ಕರುಳ ಸಂಬಂಧಕ್ಕೆ ಸಾಕ್ಷಿಯಾಗಿತ್ತು.

ಜಯವಂತ ಪ್ರಾಮಾಣಿಕ ಕೆಲಸಗಾರನೆಂದು ಅಧಿಕಾರಿಗಳಿಗೆ ತಿಳಿದಿತ್ತು. ಯಾವುದೇ ವಿಭಾಗದಲ್ಲಿ ಕೆಲಸ ಮಾಡಲಿ ಅಲ್ಲಿ ಅವನ ಛಾಪು ಇರುತ್ತಿತ್ತು. ಭಾಗ್ಯಲಕ್ಷ್ಮಿಯ ಹಸನ್ಮುಖ ನಡವಳಿಕೆ ಜಯವಂತನಿಗೆ ತುಂಬ ಪ್ರಿಯವೆನಿಸಿತ್ತು. ಮಕ್ಕಳು ಹೈಸ್ಕೂಲ್ ಹಂತದಲ್ಲಿ ಓದುತ್ತಿದ್ದರು.

ಆ ದಿನ ರಾತ್ರಿ ಭಾಗ್ಯಲಕ್ಷ್ಮಿ ‘ಇಷ್ಟು ದಿವಸ ನಮ್ಮ ಸಂಸಾರ ಒಂದು ಹಾಸು ಒಂದು ಹೊಚ್ಚು ಅಂತ ಇತ್ತು. ಇನ್ಮುಂದ ಮಕ್ಕಳ ಶಿಕ್ಷಣ, ನೌಕರಿ, ಮದುವಿ ಅಂತ ಸಾಲು ಸಾಲು ಸಮಸ್ಯೆ ಎದುರಾಗ್ತಾವ. ಇನ್ನೂತನಕ ಸ್ವಂತ ಮನಿ ಇಲ್ಲ. ಪ್ರಾಮಾಣಿಕತೆ ಪುರಾಣ ಹೇಳುತ್ತ ಇಷ್ಟು ವರ್ಷ ದುಡಿದ್ರಿ. ತಿಂಗಳ ಕೊನೆ ಬಂತು ಅಂದ್ರ ಕೈಯ್ಯಾಗ ಹತ್ತು ರೂಪಾಯಿ ಇರುದಿಲ್ಲ. ನಿಮ್ಮ ಸರಿಜೋಡಿಯವರು ಎಂಥ ಆರ್ಭಟ ಅದಾರ. ಅವರು ನಮ್ಮ ಬಾಳ್ವೆ ನೋಡಿ ನಗತಾರ’ ಎಂದು ನಾಜೂಕಾಗಿ ಗಂಡನನ್ನು ಕೆಣಕಿದ್ದಳು. ಈ ಮಾತುಗಳು ಅವಳ ಅರ್ಥದಲ್ಲಿ ಬದುಕಿನ ವಾಸ್ತವವೆನಿಸಿದ್ದವು. ಆಕೆ ಅಕ್ಕಪಕ್ಕದವರನ್ನು ಗಮನಿಸುತ್ತಲೇ ಇದ್ದಳು. ಗಂಡಂದಿರ ಸಣ್ಣ ಪಗಾರದಲ್ಲೂ ಹೆಂಗಸರು ನಗ-ನಾಣ್ಯ, ಬಟ್ಟೆ-ಬರೆ, ಆಸ್ತಿ-ಅಂತಸ್ತು ಅಂತ ಪೊಗದಸ್ತಾಗಿದ್ದು ಅವಳನ್ನು ಅಚ್ಚರಿಗೊಳಿಸಿತ್ತು. ‘ಇದೆಲ್ಲಾ ಅವರಿಗೆ ಹ್ಯಾಂಗ ಸಾಧ್ಯ ಆಯ್ತು’ ಅಂತ ಆಕೆ ಗಂಡನನ್ನು ಕೇಳಿದ್ದಳು. ‘ಅವರ ಗಂಡಂದಿರು ನಿರ್ಲಜ್ಜರಾಗಿ ಲಂಚ ತಿಂತಾರ. ತಿಂಗಳ ಪಗಾರ ಬ್ಯಾಂಕಿನ್ಯಾಗಿಟ್ಟು ಲಂಚದ ರೊಕ್ಕದಾಗ ಬಾಳುವೆ ಮಾಡ್ತಾರ’ ಜಯವಂತ ಅಸಹನೆ ವ್ಯಕ್ತಪಡಿಸಿದ್ದ. ‘ನೀವೊಬ್ಬರು ಲಂಚ ಮುಟ್ಟುದಿಲ್ಲ ಅಂದ್ರ ಜಗತ್ತು ಭಾರಿ ಸುಧಾರಿಸಿ ಬಿಡತ್ತೇನು? ಗಾಳಿ ಬಂದಾಗ ತೂರಿಕೊಳ್ಳುದು ಶ್ಯಾಣ್ಯಾರ ಲಕ್ಷಣ’ ಭಾಗ್ಯಲಕ್ಷ್ಮಿಯ ಮಾತು ಗಂಡನಿಗೆ ಪ್ರಪಂಚದ ಇರುವಿಕೆಯನ್ನು ಅರ್ಥ ಮಾಡಿಸುವಂತೆ ಇತ್ತು.

‘ಒಮ್ಮೊಮ್ಮೆ ತಾಯಿ ಎದಿ ಹಾಲss ಮಕ್ಕಳಿಗೆ ದಕ್ಕುದಿಲ್ಲ; ಇನ್ನು ಹರಾಮದ್ದು ಜೀವಕ್ಕ ಸುಖ ಕೊಡತೈತೇನು? ದೇವರು ಕೊಟ್ಟಷ್ಟರಾಗ ತೃಪ್ತಿ ಇರಬೇಕು. ಹಾಸಿಗಿ ಇದ್ದಷ್ಟರಾಗ ಕಾಲು ಚಾಚಬೇಕು. ಲೋಕದಾಗ ನಮಗಿಂತ ಕನಿಷ್ಠ ಮಂದಿ ಎಷ್ಟಿಲ್ಲ.’ ಜಯವಂತ ಇದೂವರೆಗೂ ಹೇಳುತ್ತಲೇ ಬಂದಿದ್ದನ್ನು ಭಾಗ್ಯಲಕ್ಷ್ಮಿ ಕೇಳಲು ತಯಾರಿಲ್ಲದವಳಾಗಿ ‘ನೀವೇನೂ ಹಾಲು ಕುಡಯುವ ಮಗು ಅಲ್ಲ. ಲೋಕಾ ಕಟ್ಗೊಂಡು, ಆದರ್ಶ ಹೇಳ್ಕೊಂಡು ಇರುದು ಸಾಕು. ಇನ್ನಾರ ಮನುಷ್ಯಾ ಆಗಲಿಕ್ಕೆ ಕಲೀರಿ’ ಎಂದು ಮುಸುಕು ಹೊದ್ದು ಮಲಗಿದ್ದಳು.

ಮನುಷ್ಯ ಆಗುವುದೆಂದರೆ ಅವಳ ದೃಷ್ಟಿಯಲ್ಲಿ ತಾನು ಲಂಚ ತಿನ್ನಬೇಕು ಎಂಬುದು ಜಯವಂತನಿಗೆ ಮನದಟ್ಟಾಗಿ ಅವ್ವನನ್ನು ಜ್ಞಾಪಿಸಿಕೊಂಡಿದ್ದ. ಬದುಕಿನ ದಾರಿ ಮತ್ತು ಮೌಲ್ಯದ ವಿಚಾರದಲ್ಲಿ ಅವ್ವನಿಗೂ, ಭಾಗ್ಯಲಕ್ಷ್ಮಿಗೂ ಇರುವ ಅಂತರ ಅವನನ್ನು ಚಿಂತಿಸುವಂತೆ ಮಾಡಿತ್ತು. ಹಗಲು- ಇರುಳು ಅವನ ಪಾಲಿಗೆ ಗಂಭೀರವೆನಿಸಿದ್ದವು. ಒಳಗೆ ತೀವ್ರವಾದ ಹೊಯ್ದಾಟ. ಒಂದು ಕಡೆಗೆ ಮಲ್ಲಮ್ಮ, ಮತ್ತೊಂದು ಕಡೆಗೆ ಭಾಗ್ಯಲಕ್ಷ್ಮಿ, ಮಕ್ಕಳು, ಸೊಸೆಯಂದಿರು, ಇಲಾಖೆಯ ಅಧಿಕಾರಿಗಳು, ಸಹೋದ್ಯೋಗಿಗಳು. ‘ಇರುವ ಭಾಗ್ಯವ ನೆನೆದು ಬಾರೆನೆಂಬುದ ಬಿಡು, ಹರುಷಕ್ಕಿದೆ ದಾರಿ’ ಎಂಬ ಡಿವಿಜಿ ಮಾತಿನ ಮಿಡಿತ ಹೃದಯದಲ್ಲಿ, ‘ಕಾಲಕ್ಕ ತಕ್ಕಂಗ ಬದುಕಲಿಕ್ಕೆ ಕಲಿದಿದ್ರ ನಾವು ಮೂರ್ಖರ ಖರೆ’ ಭಾಗ್ಯಲಕ್ಷ್ಮಿಯ ಮೊರೆತ ಕಿವಿಯಲ್ಲಿ. ಅಲ್ಲೋಲ ಕಲ್ಲೋಲಕ್ಕೊಳಗಾಗಿತ್ತು ಜಯವಂತನ ಮನಸ್ಸು.

ಕೊನೆಗೂ ಮಲ್ಲಮ್ಮ ಸೋತಳು; ಭಾಗ್ಯಲಕ್ಷ್ಮಿ ಗೆದ್ದಳು. ಜಯವಂತ ಬದಲಾದ. ಹೆಂಡತಿಯ ಅರ್ಥದಲ್ಲಿ ಅವನು ಮನುಷ್ಯನಾದ. ತಮ್ಮಂತೆ ಆದ ಅವನನ್ನು ಕಂಡು ಸಹೋದ್ಯೋಗಿಗಳು ಸಂಭ್ರಮಿಸಿದರು. ಟೇಬಲ್ ಕೆಳಗೆ ಕೈ ಬೆಚ್ಚಗೆ ಮಾಡಿಕೊಳ್ಳುವ ಹಿತಾನುಭವ ಜಯವಂತನ ಬಾಳಿಗೆ ಬೆಳ್ಳಿಗೆರೆ ಮೂಡಿಸಿತು. ಭಾಗ್ಯಲಕ್ಷ್ಮಿ ಮೈತುಂಬ ಚಿನ್ನಾಲಂಕಾರ. ಮಕ್ಕಳ ಓದು, ನೌಕರಿ, ಮದುವೆ. ಮೊಮ್ಮಕ್ಕಳ ಆಟ, ವಿನೋದ. ಮನೆಯಲ್ಲಿ ಐಶ್ವರ್ಯ ಲಕ್ಷ್ಮಿಯ ಹೆಜ್ಜೆಗಳ ಗಲ್ ಗಲ್ ನಾದ. ‘ಇಷ್ಟೆಲ್ಲಾ ನನ್ನಿಂದಲೆ ಆಯ್ತು’ ಭಾಗ್ಯಲಕ್ಷ್ಮಿಯ ಅಹಮ್ಮಿನ ಧ್ವನಿ ಕೇಳುತ್ತಲೆ ಇತ್ತು. ‘ಬಡವರಿಗೆ ಆಸೆಗಳು ಕಮ್ಮಿ ಇರತಾವ ಮಗಾ’ ಎಂದ ಅವ್ವನ ಮಾತನ್ನು ಸುಳ್ಳು ಮಾಡಿದ ಭಾಗ್ಯಲಕ್ಷ್ಮಿಯನ್ನು ಕಂಡು ಜಯವಂತ ಶುಷ್ಕವಾಗಿ ನಗುತ್ತಿದ್ದ.

ಪಟೇಲನ ಮಡದಿಯಾದ ಮಲ್ಲಮ್ಮ ಈಗಲೂ ಚಾರುಚೂರು ಕೆಲಸ ಮಾಡುತ್ತ, ಭೂಮಿಯ ದವಸ-ಧಾನ್ಯ ನೆಚ್ಚಿ, ರೊಟ್ಟಿ ಬೇಯಿಸಿಕೊಂಡು ಕುಶಾಲಿಯಾಗಿದ್ದಳು. ಮಗನ ಸಂಸಾರ ಸಿರಿವಂತಿಕೆಯಲ್ಲಿ ತುಯ್ಯುತ್ತಿದ್ದರೂ ಅದರತ್ತ ಅವಳ ಗಮನವಿಲ್ಲ. ಅವ್ವನನ್ನು ತೂಗುಮಂಚದಲ್ಲಿ ಕುಳ್ಳಿರಿಸಬೇಕೆಂಬ ಜಯವಂತನ ಕನಸನ್ನು ಮಲ್ಲಮ್ಮನ ಘನ ಮನಸು ಅರಳಿಸಿಕೊಟ್ಟಿಲ್ಲ. ಈಗವನು ತಾಲ್ಲೂಕಿನ ಅಧಿಕಾರಿ. ಅದನ್ನು ಕೇಳಿ ಮಲ್ಲಮ್ಮನಿಗೆ ಸಂತೋಷವಾಗಿದೆ.

ಭಾಗ್ಯಲಕ್ಷ್ಮಿ ಗಂಡನ ಬಗೆಗೆ ಮೊದಲು ಆದಷ್ಟು ಕಾಳಜಿ ವಹಿಸುತ್ತಿದ್ದಳು. ಊಟ, ಉಡುಗೆ, ಆರೋಗ್ಯ ಎಲ್ಲದರ ಕಡೆಗೂ, ಸದಾಶಿವನಿಗೆ ಅದೆ ಧ್ಯಾನ ಎನ್ನುವಂತಹ ಗಮನ. ತುಸು ನರಳಿದರೆ, ಕೆಮ್ಮಿದರೆ ಡಾಕ್ಟರ್ ಕಡೆಗೆ ಕರೆದೊಯ್ಯುವಳು. ಈಗವಳಿಗೆ ಸಿರಿಗರ ಬಡಿದಿದೆ. ಆಕೆ ಸಾಹೇಬರ ಹೆಂಡತಿಯೆನಿಸಿದ್ದಾಳೆ. ಸೊಸೆಯಂದಿರೆ ಮಾವನನ್ನು ನೋಡಿಕೊಳ್ಳುತ್ತಾರೆ.

ಮೇ 31, ಜಯವಂತ ಸೇವೆಯಿಂದ ನಿವೃತ್ತನಾದ.ಆಫೀಸಿನಲ್ಲಿ ಅವನಿಗೆ ಬೀಳ್ಕೊಡುವ ಸಮಾರಂಭ ಏರ್ಪಡಿಸಿದರು. ಅಧಿಕಾರಿಗಳು, ಸಹೋದ್ಯೋಗಿಗಳು ಅವನ ಕಾರ್ಯ ನಿರ್ವಹಣೆಯನ್ನು ಕೊಂಡಾಡಿದರು. ಅವರ ಹೃದಯಸ್ಪರ್ಶಿ ವಿದಾಯಕ್ಕೆ ಕೃತಜ್ಞತೆ ಹೇಳುವಾಗ ಕಣ್ಣಲ್ಲಿ ನೀರಾಡಿತ್ತು. ಸರಕಾರಿ ಕೆಲಸ ದೇವರ ಕೆಲಸ ಎಂದು ಮನಸಾಕ್ಷಿಯಾಗಿ ಸೇವೆ ಮಾಡುವಲ್ಲಿ ತಾನು ಸೋತಿದ್ದೇನೆ ಎನ್ನುವ ಪಾಪಪ್ರಜ್ಞೆ ಆತ್ಮವನ್ನು ಕಾಡಿದಂತಾಗಿ ಮುಂದೆ ಮಾತಾಡದೆ ಕುಳಿತಿದ್ದ.

ಮನೆಗೆ ಬಂದಾಗ ಏನೋ ಕಳೆದುಕೊಂಡ ಅನುಭವ. ನಾಳೆ ತಾನು ಆಫೀಸಿಗೆ ಹೋಗಬೇಕಾಗಿಲ್ಲ ಎಂಬುದು ನೆನಪಾಗಿ ಮನ ಕಳವಳಿಸಿತು. ಭಾಗ್ಯಲಕ್ಷ್ಮಿ, ಸೊಸೆಯಂದಿರು, ಮೊಮ್ಮಕ್ಕಳೊಂದಿಗೆ ಧಾರಾವಾಹಿ ನೋಡುವಲ್ಲಿ ಮಗ್ನಳಾಗಿದ್ದಳು. ನಿವೃತ್ತರಾಗದವರ ಜೀವನ ಅದೆಷ್ಟು ಆನಂದಮಯ ಅಂತ ಜಯವಂತನಿಗೆ ಅನಿಸದೆ ಇರಲಿಲ್ಲ. ಟಿ.ವಿಯಲ್ಲಿ ಕಣ್ಣು ನೆಟ್ಟು ‘ಆಫೀಸಿನವರು ಏನು ಕಾಣಿಕೆ ಕೊಟ್ರು’ ಎಂದು ಕೇಳಿದ ಭಾಗ್ಯಲಕ್ಷ್ಮಿ ವಸ್ತುಗಳನ್ನು ನೋಡುವ ಕುತೂಹಲ ತೋರಲಿಲ್ಲ. ರೂಮು ಸೇರಿಕೊಂಡ ಜಯವಂತ ಹಾಸಿಗೆಯಲ್ಲಿ ಮೈಚೆಲ್ಲಿದ.. ಊಟಕ್ಕೆ ಕರೆಯಲು ಬಂದ ಮೊಮ್ಮಗಳಿಗೆ ‘ನಾನೊಲ್ಲೆ’ ಎಂದು ಹೇಳಿ ಕಳಿಸಿದ ಅವನಿಗೆ ಯಾವಾಗಲೊ ಜೊಂಪು ಹತ್ತಿತ್ತು.

ಎಚ್ಚರವಾದಾಗ ನಸುಕಿನ ನಾಲ್ಕು ಗಂಟೆ. ಗಂಡ ಎದ್ದಿರುವುದನ್ನು ನೋಡಿ ‘ಇನ್ನೂ ಕತ್ಲ ಬಹಳೈತಿ, ಆರಾಮ ಮಲ್ಕೋರಿ. ಈಗೇನ ಆಫೀಸಿಲ್ಲ-ಗೀಫೀಸಿಲ್ಲ’ ಎಂದು ಮಲಗಿದಲ್ಲೇ ಗೊಣಗಿದ್ದಳು ಭಾಗ್ಯಲಕ್ಷ್ಮಿ. ರಿಟೈರ್ಡ್ ಅಂದರೆ ಆರಾಮ ಇರುವದು. ನಿದ್ದಿ, ಟಿಫಿನ್, ಊಟ ಯಾವುದಕ್ಕೂ ಗಡಿಬಿಡಿ ಮಾಡುವ ಹಾಗಿಲ್ಲ. ಇನ್ನು ತಾನು ನಿರುದ್ಯೋಗಿ. ಎಲ್ಲರ ದೃಷ್ಟಿಯಲ್ಲಿ ತಾನು ಕಟ್ಟಕಡೆಯವನು. ಹೀಗೆ ಅಲಕ್ಷಿತನಾಗಿ ಬದುಕುವುದರಲ್ಲಿ ಅರ್ಥವಿದೆಯೇ? ಇಷ್ಟು ದಿವಸ ಮಾಡಿದ್ದು ಸ್ವಾರ್ಥಕ್ಕೆ ಆಯ್ತು. ಸಮಾಜಕ್ಕೆ ಮಾಡಿದ್ದೇನು? ಜಯವಂತ ಚಿಂತಿಸಿದ್ದ.

ಅವತ್ತು ಮಧ್ಯಾಹ್ನದ ಇಳಿ ಹೊತ್ತಿಗೆ ಐದಾರು ಜನ ನಿವೃತ್ತರ ತಂಡವೇ ಮನೆಗೆ ಬಂದಿತ್ತು. ಜಯವಂತನ ಜತೆ ಕೆಲಸ ಮಾಡಿದವರು, ಬೇರೆ ಇಲಾಖೆಯವರು ಅವರಲ್ಲಿದ್ದರು. ಪ್ರೀತಿಯಿಂದ ಕೈಕುಲುಕಿ ‘ನೀವೂ ನಮ್ಮ ಬಳಗಕ್ಕ ಬಂದಿರಿ. ಮೋಸ್ಟ್ ವೆಲ್‍ಕಮ್’ ಎಂದು ಬಾಯಿತುಂಬ ನಕ್ಕರು. ಚಹ ಕುಡಿದು ಜಯವಂತನನ್ನು ಒತ್ತಾಯದಿಂದ ಕರೆದುಕೊಂಡು ಹೋದರು. ರೈಲು ನಿಲ್ದಾಣದ ಒಂದು ಕಟ್ಟೆ ಹಿಡಿದು ಕುಳಿತು ತಮ್ಮ ನಿವೃತ್ತಿಯ ಅನುಭವಗಳನ್ನು ಹಂಚಿಕೊಂಡರು. ಬದುಕಿನ ಗತವೈಭವ, ಆಸ್ತಿ-ಪಾಸ್ತಿ ಗಳಿಕೆ, ಪೆನ್ಶನ್‌, ಬೇಸಿಕ್, ಡಿ.ಎ ಲೆಕ್ಕಾಚಾರ, ದೇಹದ ಬಿಪಿ, ಶುಗರ್, ಮಂಡಿನೋವು, ಮನೆಯವರ ಕಿರಿಕ್ಕು, ಮಕ್ಕಳ-ಸೊಸೆಯಂದಿರ ಅಸಡ್ಡೆ ಎಷ್ಟು ಹೇಳಿಕೊಂಡರೂ ಸಾಲದು. ಇದು ನಿವೃತ್ತರ ನಿತ್ಯದ ಹರಿಕಥೆ ಎಂದುಕೊಳ್ಳುತ್ತ ಮನೆಗೆ ಬಂದ ಜಯವಂತ ಮತ್ತೆ ನಿವೃತ್ತರ ಗುಂಪು ಸೇರಿಕೊಳ್ಳಲಿಲ್ಲ.

ಮನುಷ್ಯನ ಅಪೇಕ್ಷೆಗಳು ಒಂದು ಜನ್ಮಕ್ಕೆ ತೀರುವುದಿಲ್ಲ. ಇದರ ವಿಸ್ಮೃತಿಗೆ ಒಳಗಾದ ಮನುಷ್ಯ ಪರಿಪೂರ್ಣತೆ ಸಾಧಿಸಲು ಒದ್ದಾಡುತ್ತಲೇ ಇರುತ್ತಾನೆ; ಚಡಪಡಿಸುತ್ತಾನೆ. ಒಳಗನ್ನು ಶೋಧಿಸದೆ ಹೊರಗೆ ಹುಡುಕಾಡುವ ಪ್ರಯತ್ನ. ಪರಾಜಯ. ಆತ್ಮವನ್ನು ನಿರ್ಲಕ್ಷಿಸಿ ಜೀವಿಸುವುದರ ಪರಿಣಾಮವಿದು. ಸಂಪತ್ತು, ಅಂತಸ್ತು, ಅಧಿಕಾರ, ಪ್ರತಿಷ್ಠೆ ಎಲ್ಲವೂ ಬೇಕು. ಇದನ್ನು ಪಡೆಯಲು ಸಂಘರ್ಷ, ಹೋರಾಟ. ಮನಸಿಗೆ ನೆಮ್ಮದಿಯಿಲ್ಲ. ಈ ನೆಮ್ಮದಿ ಸಂತೆಯ ಸರಕಲ್ಲ, ಕಿರಾಣಿ ಅಂಗಡಿ ದಿನಿಸೂ ಅಲ್ಲ. ಅದನ್ನ ಸ್ವತಃ ಹುಡುಕಿಕೊಳ್ಳಬೇಕು. ಇದಕ್ಕೆ ವಿವೇಕ, ಸಾವಧಾನ ಅಗತ್ಯ. ಸಿದ್ಧಾರ್ಥ ಇದನ್ನು ಬೇಗನೆ ಹುಡುಕಿಕೊಂಡು ಬುದ್ಧನಾದ. ಲೋಕಕ್ಕೆ ಬೆಳಕಾದ. ಭಾಗ್ಯಲಕ್ಷ್ಮಿ, ಮಕ್ಕಳು, ಸೊಸೆಯಂದಿರು ತನಗೆ ನೆಮ್ಮದಿಯ ಸೊಗವನ್ನು ಕೊಡಲು ಸಾಧ್ಯವೇ? ಅವರನ್ನು ಅವರ ಪಾಡಿಗೆ ಬಿಡುವುದೇ ವಿಹಿತ ಎಂದುಕೊಂಡ ಜಯವಂತ.

ಭಾಗ್ಯಲಕ್ಷ್ಮಿಯ ಹೆಸರಲ್ಲಿ ದೊಡ್ಡ ಮನೆಯಿದೆ. ಇದರ ಮೇಲಿರುವ ಎರಡು ಮನೆಗಳ ಬಾಡಿಗೆ ಹಣ, ತನ್ನ ನಿವೃತ್ತಿಯ ಐದು ಲಕ್ಷ ಹಣದ ಬಡ್ಡಿ ಅವಳ ಕೈ ಸೇರುವುದು. ಶ್ರೀಕಾಂತ ಮತ್ತು ಪ್ರಕಾಶರ ಸಂಬಳ ಬರುವುದು. ಅವರಿಗೂ ಪ್ರತ್ಯೇಕ ಮನೆಗಳಿವೆ. ಓಡಾಡಲು ಕಾರುಗಳಿವೆ. ಸೊಸೆಯಂದಿರಿಗೆ ಉಣ್ಣಲು-ಉಡಲು-ತೊಡಲು ಕೊರತೆಯಿಲ್ಲ. ಮಗಳು ಶೋಭಾಳಿಗೆ ಮನೆ ಕಟ್ಟಿಸಿ ಕೊಟ್ಟಾಗಿದೆ. ಅಳಿಯನಿಗೆ ಕಾರು ಕೊಡಲಾಗಿದೆ. ಎಲ್ಲ ಮೊಮ್ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗುವಷ್ಟು ಹಣವನ್ನು ಬ್ಯಾಂಕಿನಲ್ಲಿ ಇರಿಸಿದೆ. ಇನ್ನು ತಾನು ನಿಶ್ಚಿಂತ ಎಂದುಕೊಂಡ ಜಯವಂತ.

ಅವತ್ತು ಎಲ್ಲರೂ ಲಹರಿಯಲ್ಲಿದ್ದರು. ‘ನನ್ನ ಕೂಡ ಹಳ್ಳಿಯಲ್ಲಿ ಇರಲಿಕ್ಕೆ ಯಾರು ಬರ್ತೀರಿ?’ ಸುಮ್ಮನೆ ಕೇಳಿದ್ದ ಜಯವಂತ. ‘ಅಲ್ಲೇನದರಿ ಹಾಳು ಸುಡುಗಾಡು!’ ಭಾಗ್ಯಲಕ್ಷ್ಮಿ ತಟ್ಟನೆ ಮೂಗು ಮುರಿದಿದ್ದಳು. ಊರಲ್ಲಿರುವ ಅವ್ವ, ಹೊಲ, ಮನೆ ಅವಳ ಸ್ಮೃತಿಗೆ ಬರಲಿಲ್ಲವೆ? ಅವನಿಗೆ ಬೇಸರವೆನಿಸಿತು.

ಅದೇ ಬೇಸರದಲ್ಲಿ ಜಯವಂತ ತನ್ನೂರಿಗೆ ಹೊರಟು ಬಂದಿದ್ದ. ಮಲ್ಲಮ್ಮ ಮಗನನ್ನು ಮಡಿಲಲ್ಲಿ ಇರಿಸಿ ‘ಇಷ್ಟು ದಿವಸ ಬಹಳ ದಣಿದಿರುವಿ ಮಗಾ. ಆರಾಮಾಗಿ ನಾಕ ದಿನಾ ಇದ್ದು ಹೋಗು’ ಅಂದಿದ್ದಳು. ಅವಳ ಕೈತುತ್ತು ಅಮೃತವೆನಿಸಿತ್ತು. ಮಲ್ಲಮ್ಮ ಮಗನನ್ನು ಕರೆದುಕೊಂಡು ಊರು ತುಂಬ ತಿರುಗಾಡಿದ್ದಳು. ಎಲ್ಲ ಕಡೆಗೂ ಜೀವನ ಸೌಂದರ್ಯದ ಬೆಳಕು, ಪ್ರೀತಿ ತೋರುವ ಜನ. ಜಯವಂತನ ಮನಸು ಅರಳಿತ್ತು.

ಮರುದಿನ ಸ್ಕೂಲಿನಲ್ಲಿ ವನಮಹೋತ್ಸವ ಕಾರ್ಯಕ್ರಮಕ್ಕೆ ಅವನೇ ಅತಿಥಿ. ಮಣ್ಣಿನಲ್ಲಿ ಮಾವಿನ ಸಸಿ ನೆಟ್ಟು ‘ಈ ಸಸಿಗಳನ್ನು ನಾನು ದತ್ತಕ ತಗೊಂತೀನಿ. ಸ್ಕೂಲ್ ಬಯಲು, ಕೆರೆಯ ದಿಬ್ಬ, ಊರ ತುಂಬ ನಾವು ದಟ್ಟವಾದ ಮರಗಳನ್ನು ಬೆಳೆಸೋಣ. ಹಸಿರು ನಮ್ಮ ಉಸಿರಾಗಬೇಕು’ ಎಂದ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.