ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪಗೆ ಮಹಿಳಾ ಅಧ್ಯಕ್ಷರು ಬರಲಿ: ಲೇಖಕ ಜಿ.ಎನ್‌.ಮೋಹನ್‌ ಹೇಳಿಕೆ

ಲೇಖಕ ಜಿ.ಎನ್‌.ಮೋಹನ್‌ ಹೇಳಿಕೆ
Last Updated 20 ಡಿಸೆಂಬರ್ 2020, 12:38 IST
ಅಕ್ಷರ ಗಾತ್ರ

ಹಾವೇರಿ: ‘ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆ ಹತ್ತಿರದಲ್ಲಿದ್ದು, ಈ ಬಾರಿಯಾದರೂ ಮಹಿಳಾ ಅಧ್ಯಕ್ಷರು ಆಯ್ಕೆಯಾಗಿ ಬರುವ ತುರ್ತು ಇದೆ. ಒಂದು ಬಾರಿಯೂ ಮಹಿಳೆಯರು ಅಧ್ಯಕ್ಷರಾಗಿಲ್ಲ ಎಂದರೆ ಲಿಂಗ ಸಮಾನತೆಯ ಬಗ್ಗೆ ನಾವು ಮಾತನಾಡುವುದಕ್ಕೆ ಅರ್ಥವೇ ಇರುವುದಿಲ್ಲ’ ಎಂದು ಲೇಖಕ ಜಿ.ಎನ್‌.ಮೋಹನ್‌ ಅಭಿಪ್ರಾಯಪಟ್ಟರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಾಹಿತ್ಯವನ್ನು ಸರ್ಕಾರೀಕರಣಗೊಳಿಸುವ ಮತ್ತು ಕಾರ್ಪೊರೇಟರೀಕರಣಗೊಳಿಸುವ ಒಂದು ಕೆಟ್ಟ ಪದ್ಧತಿಯನ್ನು ಜಾರಿ ಮಾಡುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್‌ ಕಾರಣವಾಗಿದೆ. ಇದರ ಬಗ್ಗೆ ನಾವು ಎಚ್ಚರಿಕೆ ಇಟ್ಟುಕೊಳ್ಳದೇ ಹೋದರೆ, ಮತ್ತೆ ನಾವು ತಪ್ಪು ಅಧ್ಯಕ್ಷರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ. ಕನ್ನಡ ಸಾಹಿತ್ಯ ಪರಿಷತ್‌ ವಿವೇಕವನ್ನು ಪ್ರತಿನಿಧಿಸುವ ಸಂಸ್ಥೆಯಾಗಬೇಕು. ಇಲ್ಲದಿದ್ದರೆ ಸಾಹಿತ್ಯ ಸಂವೇದನೆಯನ್ನು ಕಳೆದುಕೊಳ್ಳುತ್ತದೆ’ ಎಂದು ಅಸಮಾಧಾನ ಹೊರಹಾಕಿದರು.

ಈಗ ಸಮ್ಮೇಳನ ಅವಶ್ಯವಿದೆಯೇ?

‘ಕೋವಿಡ್‌ ತಲ್ಲಣ ಸೃಷ್ಟಿಸುತ್ತಿರುವ ಹೊತ್ತಿನಲ್ಲಿ ಹಾಗೂ ಹಕ್ಕುಗಳು ಧಮನವಾಗುತ್ತಿರುವ ಸಂದರ್ಭದಲ್ಲಿ ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದು ನಮಗೆ ನಾವೇ ಮಾಡಿಕೊಳ್ಳುತ್ತಿರುವ ಮೋಸ ಎನಿಸುತ್ತಿದೆ. ಸರ್ಕಾರ ಯಾವುದಕ್ಕೂ ಹಣವಿಲ್ಲ ಎನ್ನುತ್ತದೆ. ಕಾರ್ಮಿಕರು ಬದುಕು ಕಟ್ಟಿಕೊಳ್ಳಲು ವಲಸೆ ಹೋಗುತ್ತಿದ್ದಾರೆ. ಇಂಥ ತಲ್ಲಣದ ಸಂದರ್ಭದಲ್ಲಿ ಸಮ್ಮೇಳನ ನಡೆಸಿ ಸಂಭ್ರಮಿಸುವುದು ಸರಿಯೇ? ಎಂದರು.

ರಾಜ್ಯ ಸರ್ಕಾರ ಸಾಹಿತ್ಯ ಸಮ್ಮೇಳನದಿಂದ ದೂರ ಸರಿಯಬೇಕು. ಕನ್ನಡ ಸಾಹಿತ್ಯ ಪರಿಷತ್‌ ಸಮ್ಮೇಳನಕ್ಕೂ ‘ಶೂನ್ಯ ವರ್ಷ’ ಎಂದು ಘೋಷಿಸಬೇಕು. ಅದೇ ರೀತಿಶಾಲಾ–ಕಾಲೇಜುಗಳಿಗೂ ‘ಶೂನ್ಯ ವರ್ಷ’ ಎಂಬುದನ್ನು ಪರಿಗಣಿಸಬೇಕು. ಈ ಮೂಲಕ ಕೋವಿಡ್‌ನಿಂದ ನೊಂದ ಮನಸ್ಸುಗಳಿಗೆ ಗೌರವ ಸಲ್ಲಿಸಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT