ಸೋಮವಾರ, ಆಗಸ್ಟ್ 10, 2020
25 °C
ಪಂಚರಂಗಿ

ಅದೋ... `ಬೇಬೊ' ಡೆನಿಮ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅದೋ... `ಬೇಬೊ' ಡೆನಿಮ್

ವಿಲಾಸಿ ಹಾಗೂ ದುಬಾರಿ ಬೆಲೆಯ ವಿನ್ಯಾಸದ ವಸ್ತ್ರಗಳಿಂದ ಪಕ್ಕದ ಮನೆ ಹುಡುಗಿಯಂತೆ ದಿರಿಸು ತೊಡುವ ಕರೀನಾ ಫ್ಯಾಷನ್ ಮಂತ್ರ ಕುರಿತು ಫ್ಯಾಷನ್ ಪಂಡಿತರು ಸದಾ ಮೆಚ್ಚುಗೆಯ ಮಾತುಗಳನ್ನೇ ಆಡುತ್ತಿದ್ದಾರೆ. ಈ ಮೆಚ್ಚುಗೆಯಿಂದಲೇ ಅವರೀಗ ಡೆನಿಮ್ ವಿನ್ಯಾಸಕ್ಕೆ ಕೈಹಾಕಿದ್ದಾರೆ. ಈ ಕುರಿತು ಅಂತರರಾಷ್ಟ್ರೀಯ ಮಾನ್ಯತೆಯ ಉತ್ಪನ್ನವೊಂದು ಕರೀನಾ ಅವರನ್ನು ಸಂಪರ್ಕಿಸಿ ಒಪ್ಪಂದಕ್ಕೆ ಮುಂದಾಗಿರುವ ಸುದ್ದಿ ವರದಿಯಾಗಿದೆ.ಈ ಸುದ್ದಿ ಒಂದೊಮ್ಮೆ ನಿಜವೇ ಆಗಿದ್ದಲ್ಲಿ ಕೆಲವೇ ದಿನಗಳಲ್ಲಿ `ಬೇಬೊ' ಎಂಬ ಉತ್ಪನ್ನದ ಹೆಸರಿನ ಡೆನಿಮ್ ವಸ್ತ್ರಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ.ಇತ್ತೀಚೆಗಷ್ಟೇ ಕರೀನಾ ತಮ್ಮ ಆರೋಗ್ಯ ಹಾಗೂ ಸೌಂದರ್ಯದ ಗುಟ್ಟನ್ನು ರಟ್ಟಾಗಿಸಿ ಅದನ್ನು ಪ್ರಸಿದ್ಧ ಪ್ರಕಾಶನ ಸಂಸ್ಥೆಯೊಂದಕ್ಕೆ ನೀಡಿ ಸುದ್ದಿಯಾಗಿದ್ದರು. ಈ ಮೂಲಕ ಅವರು ತಮ್ಮದೇ ಆದ ಬ್ರಾಂಡ್ ಸೃಷ್ಟಿಗೆ ಮುನ್ನುಡಿ ಬರೆದಿದ್ದರು ಎಂದು ಹೇಳಲಾಗಿತ್ತು.ಇಷ್ಟು ಮಾತ್ರವಲ್ಲದೆ ಜಾಹೀರಾತು ಕ್ಷೇತ್ರದಲ್ಲೂ ಅವರು ತಮ್ಮದೇ ಆದ ಬೆಲೆಯನ್ನು ಹೊಂದಿದ್ದಾರೆ. ಅವರ ಓರಗೆಯವರಿಗೆ ಹೋಲಿಸಿದರೆ ಕರೀನಾ ತೆಕ್ಕೆಯಲ್ಲಿ ಸಾಕಷ್ಟು ಜಾಹೀರಾತುಗಳಿವೆ. ಅತಿ ಹೆಚ್ಚು ಸಂಭಾವನೆ ನೀಡುವ ಸುಮಾರು 22 ಉತ್ಪನ್ನಗಳ ಪ್ರಚಾರಕ್ಕೆ ಅವರು ರೂಪದರ್ಶಿ. ಇಷ್ಟೊಂದು ಜಾಹೀರಾತುಗಳನ್ನು ಯಾವುದೇ ನಟ-ನಟಿ ಅಥವಾ ಕ್ರಿಡಾಪಟು ಹೊಂದಿಲ್ಲ ಎನ್ನುವುದು ಗಮನಾರ್ಹ. ಈ ನಿಟ್ಟಿನಲ್ಲಿ ಕರೀನಾ ವಿನ್ಯಾಸ ಮಾಡಲಿರುವ `ಬೆಬೊ' ಡೆನಿಮ್ ಫ್ಯಾಷನ್ ಲೋಕದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಲಿದೆ ಎಂದು ಅಂದಾಜಿಸಲಾಗಿದೆ.ಮೂಲಗಳ ಪ್ರಕಾರ ಆರೋಗ್ಯ ಹಾಗೂ ಫ್ಯಾಷನ್‌ಗೆ ಸಂಬಂಧಿಸಿದಂತೆ ಕರೀನಾ ತೆಗೆದುಕೊಂಡ ಯಾವುದೇ ನಿರ್ಧಾರ ಈವರೆಗೂ ವಿಫಲವಾಗಿಲ್ಲವಂತೆ. ಜತೆಗೆ ವೈಯಕ್ತಿಕ ಫ್ಯಾಷನ್ ಭಾಷೆಯೂ ಉತ್ತಮವಾಗಿರುವುದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರು ಗಮನಸೆಳೆದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.