ಸೋಮವಾರ, ಜನವರಿ 27, 2020
26 °C

ಅಮೆರಿಕದ ಪಿತೂರಿಗೆ ದೇವಯಾನಿ ಬಲಿಪಶು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರನ್ನು ಬಲಿಪಶು ಮಾಡಲು ಅಮೆರಿಕ ಸಂಚು ನಡೆಸಿತ್ತು ಎಂದು ಭಾರತ ಆರೋಪಿಸಿದೆ. ಹೀಗಾಗಿ ಈ ಪ್ರಕರಣ ಹೊಸ ತಿರುವು ಪಡೆದಿದೆ.ದೇವಯಾನಿ ವಿರುದ್ಧ ದೂರು ಸಲ್ಲಿಸಿದ್ದ ಮನೆಗೆಲಸದ ಸಹಾಯಕಿ ಸಂಗೀತಾ ರಿಚರ್ಡ್ಸ್ ಅವಳ ಪತಿ ಮತ್ತು ಮಕ್ಕಳಿಗೆ ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ಏಕಾಏಕಿ ವೀಸಾ ನೀಡಿತ್ತು. ಅದರ ಸಹಾಯದಿಂದ ಡಿಸೆಂಬರ್ 10ರಂದು ಅವರೆಲ್ಲ ಅಮೆರಿಕಕ್ಕೆ  ಪರಾರಿಯಾಗಿದ್ದರು. ಡಿ.12ರಂದು ದೇವಯಾನಿ ಅವರನ್ನು ಬಂಧಿಸಲಾಗಿತ್ತು.ವಿಶ್ವಸಂಸ್ಥೆಗೆ ವರ್ಗಾವಣೆ: ಈ ನಡುವೆ ದೇವಯಾನಿ ಅವರನ್ನು ವಿಶ್ವಸಂಸ್ಥೆಯ ಕಚೇರಿಗೆ ವರ್ಗಾವಣೆ ಮಾಡಿ ಭಾರತ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.ಕಾನ್ಸುಲ್‌ ಕಚೇರಿಯಿಂದ ನ್ಯೂಯಾರ್ಕ್‌ನಲ್ಲಿಯೇ ಇರುವ ವಿಶ್ವಸಂಸ್ಥೆಯ ಶಾಶ್ವತ ಯೋಜನಾ ಕಚೇರಿಗೆ ಅವರನ್ನು ವರ್ಗಾಯಿಸ­ಲಾಗಿದೆ. ಸಂಪೂರ್ಣ ರಾಜತಾಂತ್ರಿಕ ರಕ್ಷಣೆ ಕಲ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.ದೇವಯಾನಿ ಅವರನ್ನು  ದೇಶಕ್ಕೆ ಕರೆ ತರಲು ಮತ್ತು ಅವರ ಘನತೆಯನ್ನು ಪುನಃಸ್ಥಾಪಿಸಲು ಭಾರತ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಿದೆ  ಎಂಬ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ   ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.ಖುರ್ಷಿದ್‌ ಶಪಥ: ದೇವಯಾನಿ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರದ ಹೊರತು ಈ ಸದನಕ್ಕೆ ಕಾಲಿಡಲಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್‌ ಸಂಸತ್ತಿನಲ್ಲಿ ಶಪಥ ಮಾಡಿದರು.ದೇವಯಾನಿ ಬಂಧನ  ಅಮೆರಿಕ ಆತುರದ ತೀರ್ಮಾನವಲ್ಲ. ಇದರ ಹಿಂದೆ  ದೀರ್ಘ ಇತಿಹಾಸವಿದೆ. ಅವರ ವಿರುದ್ಧ ವ್ಯವಸ್ಥಿತವಾಗಿ ಸಂಚು ರೂಪಿಸಲಾಗಿದೆ ಎಂದು  ಸಲ್ಮಾನ್‌ ಹೇಳಿದರು.ಅಮೆರಿಕದ ಸಂಚು: ನಾಪತ್ತೆಯಾಗಿರುವ ದೇವಯಾನಿ ಮನೆಗೆಲಸದ ಸಹಾಯಕಿ ಸಂಗೀತಾ ರಿಚರ್ಡ್ಸ್ ಅವರ ಕುಟುಂಬ ಅಮೆರಿಕಕ್ಕೆ ತೆರಳಲು ಅಮೆರಿಕ  ‘ಟಿ’ ವರ್ಗದ ವಿಶೇಷ ವೀಸಾ  ನೀಡಿತ್ತು ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ.ಮಾನವ ಕಳ್ಳಸಾಗಾಣಿಕೆ ಸಂತ್ರಸ್ತರು ಮತ್ತು ಅವರ ಕುಟುಂಬದ ಸದಸ್ಯರಿಗೆ ಮಾತ್ರ ‘ಟಿ‘ ವರ್ಗದ ವಿಶೇಷ ವೀಸಾ ವನ್ನು ಅಮೆರಿಕ ನೀಡುತ್ತದೆ. ಆದರೆ, ಅದೇ ಸವಲತ್ತನ್ನು ಸಂಗೀತಾ ಕುಟುಂಬಕ್ಕೆ ನೀಡಿರುವುದು ಅಚ್ಚರಿ ಮೂಡಿಸಿದೆ.ವಲಸೆ ವಿಭಾಗದ ವಕೀಲರು ಮತ್ತು ಸ್ವಯಂಸೇವಾ ಸಂಸ್ಥೆಗಳ ನೆರವಿನಿಂದ ಸಂಗೀತಾ ರಿಚರ್ಡ್ಸ್‌ ಈಗಾಗಲೇ ಈ  ವೀಸಾ ಪಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.ಇದೇ ಜೂನ್‌ ತಿಂಗಳಲ್ಲಿ ಸಂಗೀತಾ, ದೇವಯಾನಿ ಮನೆಯಿಂದ ಕಾಣೆಯಾದ ತಕ್ಷಣ ಭಾರತ ಅವಳಿಗೆ ನೀಡಿದ್ದ ಪಾಸ್‌ಪೋರ್ಟ್‌ ರದ್ದುಗೊಳಿಸಿದೆ. ಹೀಗಾಗಿ ಅಮೆರಿಕ , ಸಂಗೀತಾ ಮತ್ತು ಅವಳ ಕುಟುಂಬಕ್ಕೆ ‘ಟಿ’ ವೀಸಾ ನೀಡಿರುವ ಸಾಧ್ಯತೆ ಇದೆ.ಈ ವೀಸಾ ನೆರವಿನಿಂದ ಆಕೆ ತನ್ನ ಕುಟುಂಬದೊಂದಿಗೆ ಅಮೆರಿಕಲ್ಲಿಯೇ ಉಳಿದಕೊಳ್ಳಬಹುದಾಗಿದೆ. ಮೂರು ವರ್ಷಗಳ ನಂತರ ಅಮೆರಿಕದಲ್ಲಿ ಶಾಶ್ವತ ನಿವಾಸವನ್ನೂ ಹೊಂದುವ ಹಕ್ಕು ಅವರಿಗೆ ತನ್ನಿಂದ ತಾನಾಗಿಯೇ ದೊರೆಯಲಿದೆ. ದೇವಯಾನಿ ಬಂಧನಕ್ಕೂ ಎರಡು ದಿನ ಮೊದಲು ಅಂದರೆ ಡಿ. 10ರಂದು ಸಂಗೀತಾ ಪತಿ ಫಿಲಿಪ್‌ ರಿಚರ್ಡ್ಸ್‌ ಮತ್ತು ಇಬ್ಬರು ಮಕ್ಕಳು ನ್ಯೂಯಾರ್ಕ್ ಗೆ ತೆರಳಿರುವ ವಿಷಯ ಗೊತ್ತಾದ ನಂತರ ಭಾರತ ಕೆಂಡಾಮಂಡಲವಾಗಿದೆ.ಸಂಗೀತಾ ಕುಟುಂಬ ಅಮೆರಿಕಕ್ಕೆ ಅಕ್ರಮವಾಗಿ ವಲಸೆ ಬರಬಹುದು ಎಂಬ ಬಗ್ಗೆ ಭಾರತ ಮುಂಚಿತವಾಗಿಯೇ  ನವದೆಹಲಿಯಲ್ಲಿರುವ ಅಮೆರಿಕದ ರಾಯಭಾರ  ಕಚೇರಿಗೆ  ಎಚ್ಚರಿಕೆ ನಿಡಿತ್ತು. ಅದರ ಹೊರತಾಗಿಯೂ ಅಮೆರಿಕ ರಾಯಭಾರ ಕಚೇರಿ ಸಂಗೀತಾ ಕುಟುಂಬಕ್ಕೆ ವೀಸಾ ನೀಡಿರುವುದು ಭಾರತದ ಆಕ್ರೋಶಕ್ಕೆ ಕಾರಣವಾಗಿದೆ.ಘಟನೆ ವಿವರ: 2012 ನವೆಂಬರ್‌ನಲ್ಲಿ   ಅಧಿಕೃತ ವೀಸಾ­­­ದಲ್ಲಿ ನ್ಯೂಯಾರ್ಕ್‌ಗೆ ಪ್ರಯಾ­ಣಿ­­ಸಿ­ದ ಸಂಗೀತಾ ರಿಚರ್ಡ್‌, ದೇವ­ಯಾನಿ ಮನೆಯಲ್ಲಿ ಕೆಲಸ ಆರಂಭಿಸಿದ್ದರು. 2013ರ ಮಾರ್ಚ್‌ನಲ್ಲಿ ರಜಾ ದಿನ­ಗಳಲ್ಲಿ ಬೇರೆ ಕಡೆಗಳಲ್ಲಿ ಕೆಲಸ ಮಾಡಲು ಅವಕಾಶ ನೀಡುವಂತೆ  ದೇವಯಾನಿ ಅವರಲ್ಲಿ ಸಂಗೀತಾ ಮನವಿ ಮಾಡಿದ್ದರು. ಆದರೆ ಅಮೆರಿಕದಲ್ಲಿ ಇದು ಕಾನೂನು ಉಲ್ಲಂಘನೆ (ದೇವಯಾನಿ ಅವರು ದೆಹಲಿ ಹೈಕೋರ್ಟ್‌ಗೆ ನೀಡಿದ ಹೇಳಿಕೆ )

2013ರ ಜೂನ್‌ನಲ್ಲಿ  ದಿನಸಿ ಖರೀದಿ­ಸಲು ದೇವಯಾನಿ ಮನೆಯಿಂದ ತೆರಳಿದ್ದ ಸಂಗೀತಾ ಮತ್ತೆ ಹಿಂದಿ­ರು­­­­ಗುವುದಿಲ್ಲ. ಈ ಬಗ್ಗೆ ಅಮೆರಿಕ ಅಧಿಕಾರಿ­ಗಳಿಗೆ  ಮಾಹಿತಿ ನೀಡಲಾಯಿತು.ದೇವಯಾನಿ ಅವರ ನ್ಯೂಯಾರ್ಕ್‌ ಮನೆಯಿಂದ ಸಂಗೀತಾ ಕಾಣೆಯಾದ ದಿನ ಭಾರತಲ್ಲಿಯ ಅವರ ಪತಿ ಫಿಲಿಪ್‌ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ, ಅವರು ದೂರು ದಾಖಲಿಸಲು ಆಸಕ್ತಿ ತೋರಿರಲಿಲ್ಲ. ಈ ವಿಷಯವನ್ನು  ಭಾರತ ಸರ್ಕಾರ ಅಮೆರಿಕದ ಗಮನಕ್ಕೂ ತಂದಿತ್ತು. ನಾಪತ್ತೆಯಾದ ಸಂಗೀತಾಳನ್ನು ಹುಡುಕಿಕೊಡುವಂತೆ ಕೋರಿತ್ತು. ಆದರೆ, ಅಮೆರಿಕ ಈ ಬಗ್ಗೆ ಅಷ್ಟೊಂದು ಆಸಕ್ತಿ ತೋರಿಸಿರಲಿಲ್ಲ.ಜುಲೈನಲ್ಲಿ ನ್ಯೂಯಾರ್ಕ್‌­ನಲ್ಲಿ ಕಾನೂನಿನ ಪರಿಹಾರಕ್ಕಾಗಿ  ಮನವಿ ಮಾಡಿದ ಸಂಗೀತಾ, ದೇವ­ಯಾನಿ ಮನೆಗೆ ಹಿಂದಿರುಗಲು ನಿರಾ­ಕ­ರಿ­ಸುತ್ತಾರೆ. ಈ ಹಿನ್ನೆಲೆಯಲ್ಲಿ ಭಾರ­ತ­­­ವು ಆಕೆಯ ಅಧಿಕೃತ ಪಾಸ್‌­ಪೋರ್ಟ್‌ನ್ನು ರದ್ದು­ಗೊಳಿಸುತ್ತದೆ. (ಹಾಗಾಗಿ ಸಂಗೀತಾ ಅವರ ಅಮೆರಿಕ ವಾಸ ಕಾನೂನು ಉಲ್ಲಂಘನೆ­ಯಾಗುತ್ತದೆ) ದೇವಯಾನಿ  ಪರವಾಗಿ ದೆಹಲಿಯಲ್ಲಿ ಸಂಗೀತಾ ಮತ್ತು ಅವಳ ಪತಿಯ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು.ಸೆಪ್ಟೆಂಬರ್‌ನಲ್ಲಿ ದೇವಯಾನಿ ಸಲ್ಲಿಸಿದ ಅರ್ಜಿ ಅನ್ವಯ ಸಂಗೀತಾ ಅವರು ಅಮೆರಿಕ ಕೋರ್ಟ್‌ ಮೊರೆ ಹೋಗು­-ವುದಕ್ಕೆ ದೆಹಲಿ ಹೈಕೋರ್ಟ್‌ ತಡೆ ಒಡ್ಡುತ್ತದೆ. ಜತೆಗೆ ಸುಲಿಗೆ, ವಂಚನೆ ಸೇರಿ­ದಂತೆ ಹಲವು ಆರೋ­ಪಗಳಲ್ಲಿ ಸಂಗೀತಾ ವಿರುದ್ಧ ಬಂಧನ ವಾರೆಂಟ್‌ ಹೊರ­ಡಿಸುತ್ತದೆ.ಭಾರತದ ಹೊರಗಿನ ದೇಶದಲ್ಲಿ ದೇವಯಾನಿ ವಿರುದ್ಧ ಸಂಗೀತಾ ಯಾವುದೇ ಕಾನೂನು ಕ್ರಮ ಜರುಗಿಸಂತೆ ಸೆಪ್ಟೆಂಬರ್‌ನಲ್ಲಿ ದೆಹಲಿ ಹೈಕೋರ್ಟ್ ಮಧ್ಯಂತರ ತಡೆ ನೀಡಿತು. ಈ ಕುರಿತು ಸಂಗೀತಾ ಮತ್ತು ಅವಳ ಪತಿಗೂ ನೋಟಿಸ್‌ ನೀಡಲಾಗಿತ್ತು.ನವದೆಹಲಿಯ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಭಾರತೀಯ ದಂಡಸಂಹಿತೆ ಸೆಕ್ಷನ್‌ 387, 420, 120ಬಿ ಅಡಿ ಸಂಗೀತಾ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್‌ ಹೊರಡಿಸಿತ್ತು.ಸಂಗೀತಾ ಕುಟುಂಬ ವಿದೇಶಕ್ಕೆ ಪರಾರಿ­ಯಾಗಬಹುದು ಎಂಬ ಶಂಕೆ ಇದ್ದರೂ  ಫಿಲಿಪ್‌ ಮತ್ತು ಅವರ ಇಬ್ಬರು ಪುತ್ರರಿಗೆ ಸೆಪ್ಟೆಂಬರ್  17ರಂದು ಹೇಗೆ ಪಾಸ್‌ಪೋರ್ಟ್‌ ನೀಡಲಾಯಿತು ಎಂಬ ಬಗ್ಗೆ ಈಗ ತನಿಖೆ ಆದೇಶಿಸಲಾಗಿದೆ.ಸಂಸತ್ತಿನಲ್ಲಿ ಪ್ರತಿಧ್ವನಿ

ಪಿಟಿಐ ವರದಿ:
ಅಮೆರಿಕದಲ್ಲಿಯ ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಬಂಧನ ಪ್ರಕರಣ ಬುಧವಾರ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿತು.ಉಭಯ ಸದನಗಳಲ್ಲಿ ಪಕ್ಷಭೇದ  ಮರೆತು ದೇವಯಾನಿ ಬಂಧನವನ್ನು  ಖಂಡಿಸಿದ ಸದಸ್ಯರು  ಅಮೆರಿಕ ವರ್ತನೆ ಬಗ್ಗೆ  ಆಕ್ರೋಶ ವ್ಯಕ್ತಪಡಿಸಿದರು.

ದಲಿತ ಮಹಿಳೆಯ ಅವಮಾನಗೊಳಿಸಿದ ಈ ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸ­ಬೇಕು ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ರಾಜ್ಯಸಭೆಯಲ್ಲಿ ಒತ್ತಾಯಿಸಿದರು.ರಾಜತಾಂತ್ರಿಕ ಅಧಿಕಾರಿ ದಲಿತ ಮಹಿಳೆ ಎಂಬ ಕಾರಣಕ್ಕೆ ಸರ್ಕಾರ ಈ ವಿಷಯದಲ್ಲಿ ತಡವಾಗಿ ಎಚ್ಚೆತ್ತುಕೊಂಡಿದೆ. ಇದು ಕೇಂದ್ರದ ದಲಿತ ವಿರೋಧಿ ನೀತಿಯ ಮುಖವಾಡವನ್ನು ಕಳಚಿ ಹಾಕಿದೆ  ಎಂದು ಆರೋಪಿಸಿದರು.ಸಿಪಿಎಂ ನಾಯಕ ಸೀತಾರಾಂ ಯೆಚೂರಿ, ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಓ’ಬ್ರಯಾನ್, ಡಿಎಂಕೆಯ ಕನಿಮೋಳಿ ಸೇರಿದಂತೆ ಅನೇಕ ಸದಸ್ಯರು ಅಮೆರಿಕದ ವರ್ತನೆಯ ವಿರುದ್ಧ ಹರಿಹಾಯ್ದರು.ಗಡುವು: ಡಿ. 23ರ ಒಳಗಾಗಿ ಗುರುತಿನ ಪತ್ರ ಹಿಂತಿರುಗಿಸುವಂತೆ ಮತ್ತು ಡಿ.19ರ ಒಳಗಾಗಿ ವಿಮಾನ ನಿಲ್ದಾನ ಪಾಸ್‌ ಹಿಂದಿ­ರುಗಿಸುವಂತೆ ಅಮೆರಿಕದ ರಾಜ­ತಾಂತ್ರಿಕ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಖುರ್ಷಿದ್‌ ಲೋಕಸಭೆಗೆ ತಿಳಿಸಿದರು.ಇನ್ನಷ್ಟು ಸುದ್ದಿಗಳು...

*ದೇವಯಾನಿ ಪ್ರಕರಣ: ಪರಿಶೀಲನೆ ಭರವಸೆ

*ದೇವಯಾನಿ ಪ್ರಕರಣ: ಅಮೆರಿಕ ವಿಷಾದ


 

ಪ್ರತಿಕ್ರಿಯಿಸಿ (+)