ಭಾನುವಾರ, ಮೇ 22, 2022
27 °C

ಅಸಮರ್ಪಕ ವಿದ್ಯುತ್ ಖಂಡಿಸಿ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೀನಗಡ (ಗುಳೇದಗುಡ್ಡ): ಗ್ರಾಮೀಣ ಭಾಗದಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆ ಸಮಸ್ಯೆ ಬಗೆಹರಿಸುವಂತೆ ಮನವಿ ಅರ್ಪಿಸಲು ಬಂದವರು ಕೆಪಿಟಿಸಿಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರತಿಭಟನೆಗಿಳಿಯಬೇಕಾದ ಘಟನೆ ಸೋಮವಾರ ಅಮೀನಗಡದಲ್ಲಿ ನಡೆದಿದೆ.  ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ಬೇಸತ್ತ ಅಮೀನಗಡದ ಕೆಪಿಟಿಸಿಎಲ್ ಶಾಖಾ ಕಚೇರಿಗೆ ಮನವಿ ಕೊಡಲು ಬಂದರೆ ಶಾಖಾಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಯಿಂದ ಜನರು ಧರಣಿ ಕುಳಿತು ಪ್ರತಿಭಟಿಸಿದ ಘಟನೆ ನಡೆಯಿತು.‘ಸರ್ಕಾರದ ಜಾಹೀರಾತು ತಿಳಿದ ರೈತರು, ಸಣ್ಣ ಉದ್ದಿಮೆದಾರರು ನಿರಂತರ 6 ಗಂಟೆ ತ್ರಿಪೇಸ್ ವಿದ್ಯುತ್ ಸಿಗುತ್ತದೆ ಎಂದು ಹೆಚ್ಚಿನ ಬಂಡವಾಳ ಹಾಕಿ ಉದ್ದಿಮೆ ಪ್ರಾರಂಭಿಸಿದ್ದು, ರೈತರು ಬೀಜವನ್ನು ಬಿತ್ತಿ ಬೆಳೆಗಳಿಗೆ ನೀರು ಬೀಡಲು ಕಾಯ್ದು ನಿಂತರೂ ಸರಿಯಾದ ವಿದ್ಯುತ್ ನೀಡುತ್ತಿಲ್ಲ. ಇದರಿಂದ ಭೂಮಿಯಲ್ಲಿ ಹಾಕಿರುವ ಬೀಜವೂ ಹಾಳಾಗುವ ಸ್ಥಿತಿಯಲ್ಲಿವೆ, ಬಿತ್ತಿದ ಬೆಳೆಯೂ ಹಾಳಾಗುತ್ತಿವೆ.

 

ಇದರಿಂದ   ರೈತರು ಹಾಗೂ ಸಣ್ಣ ಉದ್ದಿಮೆದಾರರು ಕಂಗಾಲಾಗಿದ್ದಾರೆ, ಈ ಮೊದಲೇ 21 ರಂದು ನಾವು ಮನವಿ ಅರ್ಪಿಸಲು ಬರುತ್ತೇವೆ ಅದಕ್ಕೆ ಸ್ಪಂದಿಸದಿದ್ದರೆ ಒಂದು ವಾರದ ನಂತರ ಹೋರಾಟದ ಹಾದಿ ಹಿಡಿಯುತ್ತೇವೆಂದು ಅಧಿಕಾರಿಗೆ ಎಚ್ಚರಿಸಿದ್ದರು. ಆದರೂ  ಅಧಿಕಾರಿಗಳು ನಿರ್ಲಕ್ಷ್ಯತನದಿಂದ ವರ್ತಿಸಿದ ಪರಿಣಾಮ ಧರಣಿ ಕುಳಿತುಕೊಳ್ಳಬೇಕಾಯಿತು ಎಂದು ಮಾಜಿ ಶಾಸಕ ಹಾಗೂ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.ಧರಣಿ ಕುಳಿತು ಒಂದು ಗಂಟೆಯ ನಂತರ ಬಂದ ಅಮೀನಗಡ ಕೆಪಿಟಿಸಿಎಲ್ ಪ್ರಭಾರಿ ಶಾಖಾಧಿಕಾರಿ ಎನ್.ಎಸ್.ಬಂಡಿವಡ್ಡರ ಪ್ರತಿಭಟನೆಕಾರರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸದೇ ಮನವಿ ಅರ್ಪಿಸಿದ ವಿಷಯವೇ ನನಗೆ ತಿಳಿದಿಲ್ಲ ಎಂದು ಬೇಜವಾಬ್ದಾರಿ ಉತ್ತರ ನೀಡಿದರು.  ಅಲ್ಲಿದ್ದ ಕೆಪಿಟಿಸಿಎಲ್ ಉಪ ಮುಖ್ಯ ಎಂಜಿನಿಯರ್ ಸಿ.ಬಿ. ಯಂಕಂಚಿ, ‘ ಬೆಂಗಳೂರಿನಿಂದ ವಿದ್ಯುತ್ ಸರಬರಾಜಿನ ಬಗ್ಗೆ ಗಂಟೆಗೊಂದು ಸಲ  ಬರುವ ಸಂದೇಶಗಳಂತೆ ನಾವು ನಡೆಯುತ್ತಿದ್ದೇವೆ’ ಎಂದರು.‘ಕೈಗಾರಿಕಾ  ವಲಯದಲ್ಲಿ 24 ಗಂಟೆಗಳು ವಿದ್ಯುತ್ ಸರಬರಾಜು ನೀಡಬೇಕೆಂದಿದ್ದರೂ ಅಮೀನಗಡ ಸುತ್ತಮುತ್ತಲಿನ ಗ್ರಾಮ ಕೈಗಾರಿಕಾ  ವಲಯವಾಗಿದ್ದರೂ ವಿದ್ಯುತ್ ಸರಿಯಾಗಿ ಸರಬರಾಜಾಗುತ್ತಿಲ್ಲ. ಇಲ್ಲಿನ ಕೆಪಿಟಿಸಿಎಲ್ ಶಾಖಾ ಕಚೇರಿಗೆ ಬಂದರೆ ಗ್ರಾಹಕರಾಗಲಿ ಅಥವಾ ರೈತರಾಗಲಿ ಸಮರ್ಪಕವಾದ ಉತ್ತರವನ್ನು ನೀಡಲು ಒಬ್ಬ ಅಧಿಕಾರಿಗಳು ಇರುವದಿಲ್ಲ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಮನವಿ ಅರ್ಪಿಸಿದ ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಅವರು ಮಾತನಾಡಿ ವಿದ್ಯುತ್ ಸರಬರಾಜಿನ ಬಗ್ಗೆ ಆಯಾ ಗ್ರಾಮಗಳ ರೈತರಿಗೆ ನಿಗದಿತ ಸಮಯವನ್ನು ಡಂಗುರದ ಮೂಲಕ ತಿಳಿಸಬೇಕು, ಒಂದು ವಾರದೊಳಗೆ ವಿದ್ಯುತ್ ಸಮಸ್ಯೆಯನ್ನು ಬಗೆಹರಿಯದಿದ್ದರೆ ಉಗ್ರ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆಂದು ಎಚ್ಚರಿಸಿದರು.ಧರಣಿಯಲ್ಲಿ ನೇಕಾರ ಧುರೀಣ ರವೀಂದ್ರ ಕಲಬುರ್ಗಿ, ಸೂಳೇಭಾವಿ ಗ್ರಾಪಂ ಅಧ್ಯಕ್ಷ ಪಿ. ಎಸ್ ಕುರಿ, ಮಾಜಿ ಅಧ್ಯಕ್ಷ ಮಹಾಂತಪ್ಪ ಬದ್ರಣ್ಣವರ, ರಾಜು ಕಿಟಕಿಮನಿ, ನಿಂಗನಗೌಡ ಪಾಟೀಲ, ನಾಗೇಶ ಗಂಜಿಹಾಳ, ಅಮೀನಗಡ ಗ್ರಾಪಂ ಅಧ್ಯಕ್ಷ ವೈ.ಎಸ್.ಬಂಡಿವಡ್ಡರ, ಐಹೊಳ್ಳಿ ಸಿದ್ದು ಹೂಗಾರ, ಸಿದ್ದು ನಿಂಬಲಗುಂದಿ ಹಾಗೂ ಅಮೀನಗಡ, ಸೂಳೇಭಾವಿ, ಐಹೊಳೆ ಮುಂತಾದ ಗ್ರಾಮಗಳ ಜನರು ಪಾಲ್ಗೊಂಡಿದ್ದರು.                                                                      

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.