ಸೋಮವಾರ, ಮೇ 10, 2021
21 °C

ಆಧಾರ ಸಮೇತ ಆರೋಪ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಸದ್ಯದ ರಾಜಕೀಯದಲ್ಲಿ ಪರಸ್ಪರ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವುದರಿಂದ ಜನರು ರಾಜಕಾರಣಿಗಳನ್ನು ಸಂದೇಹದ ದೃಷ್ಟಿಯಿಂದ ನೋಡುವಂತಾಗಿದೆ. ಯಾವುದೇ ಆರೋಪ ಮಾಡುವಾಗ ಜವಾಬ್ದಾರಿಯುತವಾಗಿ ಹಾಗೂ ಆಧಾರ ಇಟ್ಟುಕೊಂಡು ಮಾಡಬೇಕು ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದರು.ಭಾನುವಾರ ನಗರಕ್ಕೆ ಆಗಮಿಸಿ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮೇಲೆ ಮಾಡಿರುವ ಆರೋಪಗಳ ಕುರಿತು ಈ ರೀತಿ ಪ್ರತಿಕ್ರಿಯಿಸಿದರು.ಕೇವಲ ರಾಜಕೀಯಕ್ಕಾಗಿ ಆರೋಪ-ಪ್ರತ್ಯಾರೋಪ ಮಾಡುವುದರಿಂದ ಜನರ ದಿಕ್ಕು ತಪ್ಪಿಸಿದಂತಾಗುತ್ತದೆ. ಆರೋಪ ಮಾಡುವ ಮೊದಲ ತಾವು ಜವಾಬ್ದಾರಿಯುತ ಸ್ಥಾನದಲ್ಲಿ ಇರುವುದನ್ನು ಗಮನಿಸಬೇಕು. ಅಲ್ಲದೇ ಮಾಡಿರುವ ಆರೋಪಕ್ಕೆ ದಾಖಲೆ, ಆಧಾರಗಳನ್ನು ಇಟ್ಟುಕೊಳ್ಳಬೇಕು ಎಂದ ಅವರು, ಇಂತಹ ವಾತಾವರಣದಿಂದಾಗಿ ಜನರು ರಾಜಕೀಯ ವ್ಯಕ್ತಿಗಳ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗುತ್ತದೆ.ಇಂತಹ ಬೆಳವಣಿಗೆಗಳು ಯುವ ಪೀಳಿಗೆಗೆ ಎಂತಹ ಸಂದೇಶ ನೀಡಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಹಣ ಖರ್ಚು ಮಾಡಿ: ರಾಜ್ಯದಲ್ಲಿ ಬರಗಾಲ ಉದ್ಭವಿಸಿದರಿಂದ ಗ್ರಾಮೀಣ ಜನತೆ ಸಮಸ್ಯೆ ಎದುರಿಸುತ್ತಿದ್ದಾರೆ ಇಂತಹ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಸರ್ಕಾರ ಹಾಗೂ ವಿರೋಧ ಪಕ್ಷಗಳು ಕೂಡಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.ಕೇಂದ್ರ ಸರ್ಕಾರ ನೀಡಿರುವ ಸಾಕಷ್ಟು ಹಣ ರಾಜ್ಯ ಸರ್ಕಾರದಲ್ಲಿದೆ. ಆದರೆ ವಿರೋಧ ಪಕ್ಷಗಳಿಂದ ಹೇಳಿಸಿಕೊಂಡ ನಂತರ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ. ಆಯಾ ಜಿಲ್ಲಾ ಉಸ್ತುವಾರಿ ಸಚಿವರು  ಹಾಗೂ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಅಂದಾಗ ಮಾತ್ರ ಸಮಸ್ಯೆ ನಿವಾರಣೆ ಆಗಲು ಸಾಧ್ಯ ಎಂದರು.ಕೇಂದ್ರ ಸರ್ಕಾರ ನೀಡಿರುವ ಹಣ ಮೊದಲು ಖರ್ಚು ಮಾಡಲಿ. ನಂತರ ಹೆಚ್ಚಿನ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಅಗತ್ಯಕ್ಕೆ ಅನುಗುಣವಾಗಿ ಸರ್ಕಾರ ಯೋಜನೆ ರೂಪಿಸಿ, ಅನುಷ್ಠಾನಗೊಳಿಸಬೇಕು ಎಂದು ಸಲಹೆ ಮಾಡಿದರು.ಬರಗಾಲ ಇರುವುದರಿಂದ ಬಜೆಟ್‌ನಲ್ಲಿ ಘೊಷಣೆ ಮಾಡಿರುವ ಯೋಜನೆಗಳ ಹಣವನ್ನು ಬರ ನಿರ್ವಹಣೆಗೆ ಬಳಕೆ ಮಾಡಿಕೊಳ್ಳಬೇಕು. ಸದ್ಯಕ್ಕೆ ರಾಜ್ಯದ ಜನರಿಗೆ ಅಗತ್ಯವಿರುವ ನೀರು, ಮೇವು, ಆಹಾರ, ಉದ್ಯೋಗ ನೀಡುವಂತಹ ಯೋಜನೆಗಳಿಗೆ ಆದ್ಯತೆ ನೀಡುವ ಮೂಲಕ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಕೇಂದ್ರ ಸರ್ಕಾರ ನೆರೆಗಾ ಯೋಜನೆಯಲ್ಲಿ ಗುಲ್ಬರ್ಗಕ್ಕೆ ಕಳೆದ ವರ್ಷ ನೀಡಿರುವ ರೂ. 90 ಕೋಟಿಯಲ್ಲಿ, ರಾಜ್ಯ ಸರ್ಕಾರ ರೂ. 40 ಕೋಟಿ ಖರ್ಚು ಮಾಡಿದೆ ಎಂದರು.8 ಟಿಎಂಸಿ ನೀರು ಸಂಗ್ರಹಣೆ: ಜಿಲ್ಲೆಯ ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆ ಕುರಿತಂತೆ ಈಗಾಗಲೇ ಕೇಂದ್ರ ಜಲ ಸಂಪನ್ಮೂಲ ಸಚಿವರ ಜೊತೆ ಚರ್ಚಿಸಿದ್ದು, ಸನ್ನತಿ ಏತ ನೀರಾವರಿ ಎಐಬಿಪಿ ಯೋಜನೆಯ ಅಡಿಯಲ್ಲಿ ನದಿ ನೀರನ್ನು ಸಂಗ್ರಹಿಸಿ ಕಾಲುವೆಗಳ ಮುಖಾಂತರ ಈ ಭಾಗದ ಕೆರೆಗಳಿಗೆ ನೀರು ತುಂಬಿಸಬಹುದು. ಆದರೆ ರಾಜ್ಯ ಸರ್ಕಾರ ಸನ್ನತಿಯಲ್ಲಿ ಈ ಮೊದಲು 8 ಟಿಎಂಸಿ ನೀರು ಸಂಗ್ರಹ ಮಾಡುವ ಯೋಜನೆ ಹಾಕಿಕೊಂಡಿತ್ತು. ಇದೀಗ ನಾನಾ ಕಾರಣ ನೀಡಿ 4 ಟಿಎಂಸಿ ನೀರು ಸಂಗ್ರಹಕ್ಕೆ ನಿರ್ಧರಿಸಿದೆ ಎಂದು ಹೇಳಿದರು.ಇದರಿಂದ ರೈತರಿಗೆ ತೊಂದರೆಯಾಗುತ್ತಿದ್ದು, ಈ ಕುರಿತು ನೀರಾವರಿ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಸನ್ನತ್ತಿ ಬ್ಯಾರೇಜ್‌ನಲ್ಲಿ 8 ಟಿಎಂಸಿ ನೀರು ಸಂಗ್ರಹಕ್ಕೆ ಕ್ರಮ ಕೈಗೊಳ್ಳಲಾಗುವುದು. ಕೆರೆಗೆ ನೀರು ತುಂಬಿಸುವ ಯೋಜನೆಗೆ ಅಗತ್ಯವಿರುವ ಹಣ ಬಿಡುಗಡೆಗೆ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.ಮೃತರ ಕುಟುಂಬಕ್ಕೆ ಸಾಂತ್ವನಇತ್ತೀಚಿಗೆ ಸಿಂಧನೂರಿನ ಧಡೇಸೂಗುರ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹತ್ತಿಕುಣಿ ಗ್ರಾಮದ ಕುಟುಂಬದ ಸದಸ್ಯರಿಗೆ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಭಾನುವಾರ ಸಾಂತ್ವನ ಹೇಳಿದರು.ಮೃತರ ಕುಟುಂಬದ ಸದಸ್ಯರಲ್ಲಿ ಆತ್ಮವಿಶ್ವಾಸ ತುಂಬಿದ ಖರ್ಗೆ, ಕೇಂದ್ರ ಸರ್ಕಾರದಿಂದ ಪರಿಹಾರ ದೊರಕಿಸಿ ಕೊಡಲು ಈಗಾಗಲೇ ಪ್ರಧಾನ ಮಂತ್ರಿಗಳಿಗೆ  ಪತ್ರ ಬರೆಯಲಾಗಿದೆ. ಮೃತರ ಕುಟುಂಬಗಳಿಗೆ ಜಿಲ್ಲಾಡಳಿತ, ನಗರಸಭೆ ವತಿಯಿಂದ ಸಿಗುವ ಸೌಲಭ್ಯಗಳನ್ನು ದೊರಕಿಸಿ ಕೊಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.ಈ ಪ್ರಕರಣದಲ್ಲಿ ಸೂಕ್ತ ತನಿಖೆ ನಡೆಸಿ, ಮೃತರ ಕುಟುಂಬಗಳಿಗೆ ಜೀವ ವಿಮೆ ಹಣ ದೊರೆಯುವಂತೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದರು.ನಂತರ ನಗರದ ಮೈಲಾಪೂರ ಬೇಸ್‌ನಲ್ಲಿ ಇನ್ನೊಂದು ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ಖಗೆ. ಸಾಂತ್ವನ ಹೇಳಿದರು. ಈ ಕುಟುಂಬದ ಸದಸ್ಯರಿಗೆ ಕೂಡಲೇ ಮನೆ ನೀಡುವಂತೆ ಸ್ಥಳದಲ್ಲಿ ಹಾಜರಿದ್ದ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ ಅವರಿಗೆ ಸೂಚಿಸಿದರು.ಶಾಸಕ ಡಾ. ಎ.ಬಿ. ಮಾಲಕರಡ್ಡಿ, ಅಲ್ಲಮಪ್ರಭು ಪಾಟೀಲ, ಬಾಬುರಾವ ಚಿಂಚನಸೂರ, ಜಿಲ್ಲಾಧಿಕಾರಿ ಗುರುನೀತ ತೇಜ್ ಮೇನನ್, ಎಸ್ಪಿ ಡಿ. ರೂಪಾ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಹುಲಕಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಯಿಬಣ್ಣ ಬೋರಬಂಡ್, ಕೆಪಿಸಿಸಿ ಸದಸ್ಯ ಮೌಲಾಲಿ ಅನಪುರ, ಜಿಲ್ಲಾ ಪಂಚಾಯಿತಿ ಸದಸ್ಯ ಶರಣೀಕ್‌ಕುಮಾರ ದೋಖಾ, ಹತ್ತಿಕುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಂಜೀವಕುಮಾರ ಪುಟಗಿ, ಚಿದಾನಂದಪ್ಪ ಕಾಳೆಬೆಳಗುಂದಿ, ಶರಣಗೌಡ ಅರಕೇರಿ, ಸಿದ್ಲಿಂಗರಡ್ಡಿ ಉಳ್ಳೆಸೂಗುರ, ಶರಣಪ್ಪಗೌಡ ಕೌಳೂರ, ಮಹಿಪಾಲರಡ್ಡಿ ಹತ್ತಿಕುಣಿ, ಮರೆಪ್ಪ ಬಿಳ್ಹಾರ, ಶರಣಪ್ಪ ಸೋಮಣ್ಣನೋರ, ಬಸವರಾಜ ಬಾಚವಾರ, ಭೀಮರಡ್ಡಿ ರಾಂಪೂರಹಳ್ಳಿ, ಮಲ್ಲಣ್ಣ ದಾಸನಕೇರಿ, ಹಣಮಂತಪ್ಪ ದಾಸನಕೇರಿ ಮುಂತಾದವರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.