ಭಾನುವಾರ, ಜನವರಿ 26, 2020
21 °C

ಆಧುನಿಕ ವೈದ್ಯಕೀಯ ಪರಿಕರ ಲೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮರುಬಳಕೆ ತಡೆಯಲು ಸೂಜಿ­ಯನ್ನು ತುಂಡರಿಸುವ ಯಂತ್ರ, ವೈದ್ಯಕೀಯ ತ್ಯಾಜ್ಯಗಳ ಪರಿಸರ ಸ್ನೇಹಿ ವಿಲೇವಾರಿಗೆ ನೆರವಾಗುವ ಜೈವಿಕ ಕೈಚೀಲ, ರೋಗಿಯ ಅನುಕೂಲಕ್ಕೆ ತಕ್ಕಂತೆ ಹೊಂದಿಕೊಳ್ಳುವ ವಿದ್ಯುಚ್ಚಾಲಿತ ಹಾಸಿಗೆ, ಸೂಕ್ಷ್ಮಾಣುಗಳನ್ನು ಕಂಪ್ಯೂಟರ್‌ ಪರದೆಮೇಲೆ ತಂತ್ರಜ್ಞರ ಅನೂ­ಕೂಲಕ್ಕೆ ಬೇಕಾದಷ್ಟು ಹಿರಿದಾಗಿ ತೋರಿಸಬಲ್ಲ ಅತ್ಯಾಧುನಿಕ ಸೂಕ್ಷ್ಮ ದರ್ಶಕ....

ತಂತ್ರಜ್ಞಾನದ ನೆರವಿನಿಂದ ಅಭಿವೃದ್ಧಿಪಡಿಸಿದ ವೈದ್ಯಲೋಕದ ಅತ್ಯಾಧುನಿಕ ಪರಿಕರಗಳೆಲ್ಲವೂ ಸೋಮವಾರ ಇಲ್ಲಿನ ಟಿ.ಎಂ.ಎ ಪೈ ಅಂತರ­ರಾಷ್ಟ್ರೀಯ ಸಮಾವೇಶ ಸಭಾಂಗಣದಲ್ಲಿ ಮೇಳೈಸಿ­ದ್ದವು.ಎಸ್‌ಆರ್‌ಎಸ್‌ ಇಂಡಸ್ಟ್ರೀ ಗ್ಲೋಬಲ್‌ ಸೊಲ್ಯೂಷನ್ಸ್‌ ಆಶ್ರಯದಲ್ಲಿ  ಹಮ್ಮಿಕೊಂಡಿರುವ ವೈವಿಧ್ಯಮಯ ವೈದ್ಯಕೀಯ ಪರಿಕರಗಳ ಪ್ರದರ್ಶನ (ಹೆಲ್ತ್‌ಕೇರ್‌ ಎಕ್ವಿಪ್‌ಮೆಂಟ್‌ ಎಕ್ಸ್‌ಪೊ) ‘ಆರೋಗ್ಯ 2013’, ವೈದ್ಯಲೋಕದ ಇತ್ತೀಚಿನ ಬೆಳವಣಿಗೆಗಳನ್ನು ಮಂಗಳೂರಿನ ವೈದ್ಯರಿಗೆ, ಆಸ್ಪತ್ರೆಗಳಿಗೆ  ಪರಿಚಯಿಸಿದೆ. ಈ ವಸ್ತು ಪ್ರದರ್ಶನ­ದಲ್ಲಿ ಒಟ್ಟು 58 ಮಳಿಗೆಗಳಿದ್ದು, ಸ್ಟೆಥೋಸ್ಕೋಪ್‌­ಗಳಿಂದ ಹಿಡಿದು ಥರ್ಮೋಮೀಟರ್‌ಗಳು, ಆಫ್ತ­ಲ್ಮೋಸ್ಕೋಪ್‌... ಮೊದಲಾದ ವೈದ್ಯಕೀಯ ಪರಿಕರಗಳ ಆಧುನಿಕ ರೂಪಾಂತರಗಳೆಲ್ಲವೂ ಇಲ್ಲಿ ಲಭ್ಯ. ಈ ವಸ್ತು ಪ್ರದರ್ಶನಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್‌ ಸೋಮವಾರ ಚಾಲನೆ ನೀಡಿದರು.

 

ನವದೆಹಲಿಯ ಎಆರ್‌ವಿಎಸ್‌ ಎಕ್ವಿಪ್‌ಮೆಂಟ್ಸ್‌ ಕಂಪೆನಿ ಇಂಜಕ್ಷನ್‌ ನೀಡಲು ಬಳಸುವ ಸೂಜಿ­ಯ­ನ್ನು ತುಂಡರಿಸುವ ಯಂತ್ರವನ್ನು ಪ್ರದರ್ಶನ­ಕ್ಕಿ­ಟ್ಟಿ­ದೆ.‘ವಿಲೇವಾರಿ ಮಾಡಿದ ಸೂಜಿಯನ್ನು ಕದ್ದು­ಮುಚ್ಚಿ ಬಳಸುವುದನ್ನು ತಡೆಯುವ ಸಲುವಾಗಿ ಅದನ್ನು ತುಂಡರಿಸುವುದಕ್ಕೆ ಈ ಯಂತ್ರ ಸಹಕಾರಿ. ಇದರ ಬೆಲೆ 2,200ರಿಂದ ಆರಂಭವಾಗುತ್ತದೆ. ಬಯೋಮೆಡಿಕಲ್‌ ತ್ಯಾಜ್ಯ ವಿಲೇವಾರಿ ಮಾನ­ದಂಡಕ್ಕೆ ಅನುಗುಣವಾಗಿ ಈ ಯಂತ್ರವನ್ನು ನಿರ್ಮಿಸ­ಲಾಗಿದೆ’ ಎನ್ನುತ್ತಾರೆ ಈ ಕಂಪೆನಿಯ ನಿರ್ದೇಶಕ ವಿಶ್ವೇಶ್‌ ಅಹ್ಲುವಾಲಿಯ. ಶಸ್ತ್ರಚಿಕಿತ್ಸಾ ಕೊಠಡಿಗಳಲ್ಲಿ ಹ್ಯಾಲೋಜನ್‌ ವಿದ್ಯುದ್ದೀಪಗಳನ್ನು ಎಲ್‌ಇಡಿ ಬಲ್ಬ್‌ಗಳು ಆಕ್ರಮಿ­ಸುತ್ತಿವೆ. ಹುಬ್ಬಳ್ಳಿಯ ಆಕ್ಸಿ ಮೆಡಿ ಸಿಸ್ಟಮ್ಸ್‌ ಕಂಪೆನಿಯು ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಿದ ಶಸ್ತ್ರಚಿಕಿತ್ಸಾ ಪರಿಕರವನ್ನು ಪ್ರದರ್ಶನಕ್ಕಿಟ್ಟಿತ್ತು.ಬೆಂಗಳೂರಿನ ಆರ್‌ವಿ ಸರ್ಜಿಕಲ್ಸ್‌ ಕಂಪೆನಿಯು ಸೊಳ್ಳೆಗಳನ್ನು ಆಕರ್ಷಿಸಿ ಕೊಲ್ಲುವ ಪುಟ್ಟ ಪರಿಕರ­ವನ್ನು ಪ್ರದರ್ಶನದಲ್ಲಿಟ್ಟಿತ್ತು.

‘ಮಂಗಳೂರಿನಲ್ಲಿ ಮಲೇರಿಯ, ಡೆಂಗೆ ಹಾವಳಿ ಹೆಚ್ಚು ಇರುವ ಕಾರಣ ಇಲ್ಲೇ ಈ ಪರಿಕರವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆ. ಈ ಯಂತ್ರವು ಬೆವರಿನ ವಾಸನೆಯನ್ನು ಹೊರಸೂಸುವ ಮೂಲಕ ಸೊಳ್ಳೆಗಳನ್ನು ಆಕರ್ಷಿಸುತ್ತದೆ. 1600 ಚ.ಮೀ ಪ್ರದೇಶದಿಂದ ಸೊಳ್ಳೆಗಳನ್ನು ಆಕರ್ಷಿಸುವ ಸಾಮರ್ಥ್ಯ ಈ ಪರಿಕರಕ್ಕಿದೆ. ಇದಕ್ಕಿಂತ ಸಣ್ಣಗಾತ್ರದ ಪರಿಕರವೂ ಲಭ್ಯ. ಸತ್ತ ಸೊಳ್ಳೆಗಳು ಯಂತ್ರದ ತಳಭಾಗದಲ್ಲಿ ಸಂಗ್ರಹವಾಗುತ್ತದೆ. ಅವುಗಳನ್ನು ವಿಲೇವಾರಿ ಮಾಡಬಹುದು. ಈ ಪರಿಕರದ ಬೆಲೆ  ₨ 1700 ರೂಪಾಯಿಯಿಂದ ಆರಂಭವಾಗುತ್ತದೆ’ ಎನ್ನುತ್ತಾರೆ ಮೂಲತಃ ಬದಿಯಡ್ಕದವರಾದ ಕಂಪೆನಿ­ಯ ಮಾಲೀಕ ಬಿ.ಚಂದ್ರಶೇಖರ್‌.  ಬೆಂಗಳೂರಿನ ಬಾಪೂಜಿ ಸರ್ಜಿಕಲ್ಸ್‌ ಮತ್ತು ಅಮರಿಲಿಸ್‌ ಹೆಲ್ತ್‌ಕೇರ್‌ ಕಂಪೆನಿಯು ಶಸ್ತ್ರಚಿಕಿತ್ಸೆ ವೇಳೆ ರೋಗಿಗೆ ತೊಡಿಸುವ ವಸ್ತ್ರಗಳನ್ನು ಪ್ರದರ್ಶನಕ್ಕಿಟ್ಟಿತ್ತು. ಈ ವಸ್ತ್ರಗಳನ್ನು ಶಸ್ತ್ರಚಿಕಿತ್ಸೆ ಬಳಿಕ ವಿಲೇವಾರಿ ಮಾಡಬಹುದು.‘ಜೈವಿಕವಾಗಿ ವಿಘಟನೆ ಹೊಂದುವ ಪದಾರ್ಥ­ದಿಂದ ಸಿದ್ಧಪಡಿಸಿರುವ ಈ ವಸ್ತ್ರಗಳು ಪರಿಸರ ಸ್ನೇಹಿಯಾಗಿವೆ.  ಬೆಲೆ ₨ 200ರಿಂದ ಆರಂಭ­ವಾಗುತ್ತದೆ. ಶಸ್ತ್ರಚಿಕಿತ್ಸೆಯ ಮಾದರಿಗೆ ಅನುಗುಣ­ವಾಗಿ ನಾವು ಈ ವಸ್ತ್ರಗಳನ್ನು ತಯಾರಿಸಿ­ಕೊಡುತ್ತೇವೆ’ ಎನ್ನುತ್ತಾರೆ ಕಂಪೆನಿಯ ಮಾರುಕಟ್ಟೆ ವ್ಯವಸ್ಥಾಪಕ ಪ್ರವೀಣ್‌. ಉಡುಪಿ ಮೂಲದ ರೋಬೋಸಾಫ್ಟ್‌ ಕಂಪೆನಿ­ಯು ವೈದ್ಯರು ರೋಗಿಗಳ ವೈದ್ಯಕೀಯ ದಾಖಲೆ­ಗಳನ್ನು ಸುಲಭವಾಗಿ ನಿರ್ವಹಿಸುವುದಕ್ಕೆ ಅನು­ಕೂಲವಾದ ತಂತ್ರಾಂಶವನ್ನು ಪ್ರದರ್ಶನಕ್ಕಿಟ್ಟಿತ್ತು.‘ರೋಗಿಗೆ ನೀಡುವ ಔಷಧಿಯ ಹೆಸರು ಬರೆದು­ಕೊಡುವುದರಿಂದ ಹಿಡಿದು, ಅವರ ವೈದ್ಯಕೀಯ ತಪಾಸಣೆಯ ಅಂಶಗಳನ್ನು ರಕ್ಷಿಸಿಡುವವರೆಗೆ ಎಲ್ಲ ರೀತಿಯಲ್ಲೂ ಈ ತಂತ್ರಾಂಶ ಪ್ರಯೋಜನಕಾರಿ’ ಎನ್ನುತ್ತಾರೆ ಕಂಪೆನಿಯ ಸೇಲ್ಸ್‌ ಆಂಡ್‌ ಸಪೋರ್ಟ್‌ ಎಂಜಿನಿಯರ್‌ ಶ್ರೀರಂಗ ಕಾಮತ್‌.

ಪ್ರತಿಕ್ರಿಯಿಸಿ (+)