ಭಾನುವಾರ, ಮಾರ್ಚ್ 26, 2023
31 °C

ಆಧುನಿಕ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಧುನಿಕ ಶಿಕ್ಷಣದಿಂದ ಮಾತ್ರ ಅಭಿವೃದ್ಧಿ

ಬೆಂಗಳೂರು: ‘ಶಿಕ್ಷಣವೇ ಸಮುದಾಯದ ಅಭಿವೃದ್ಧಿಯ ಕೀಲಿಕೈ. ಶಿಕ್ಷಣವು ಧಾರ್ಮಿಕತೆಗೆ ಮಾತ್ರ ಸೀಮಿತ ಆಗಬಾರದು, ಅದು ಆಧುನಿಕ ವಿಚಾರಗಳನ್ನೂ ಒಳಗೊಳ್ಳಬೇಕು’ ಎಂದು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ಹೇಳಿದರು.



ಇಲ್ಲಿನ ದಾರುಲ್ ಉಲೂಮ್ ಸಬೀಲುರ್ ರಷದ್ ಮಹಾವಿದ್ಯಾಲಯದಲ್ಲಿ ಭಾನುವಾರ ನಡೆದ ಪದವಿ ಪ್ರದಾನ ಸಮಾರಂಭ ಮತ್ತು ಸ್ವರ್ಣ ಮಹೋತ್ಸವ ಆಚರಣೆಯಲ್ಲಿ ಮಾತನಾಡಿದ ಅವರು, ‘ಜಗತ್ತು ವೇಗವಾಗಿ ಬದಲಾಗುತ್ತಿದೆ, ಅದಕ್ಕೆ ತಕ್ಕಂತೆ ನಾವೂ ಬದಲಾಗಬೇಕು. ಆಧುನಿಕ ಶಿಕ್ಷಣಕ್ಕೆ ಒತ್ತು ನೀಡಬೇಕು’ ಎಂದು ಕರೆ ನೀಡಿದರು.



ಭಾರತೀಯ ಸಮಾಜ ಎಲ್ಲ ಜಾತಿ-ಧರ್ಮಗಳ ಜನರನ್ನು ಒಳಗೊಳ್ಳುವ ಸ್ವರೂಪ ಹೊಂದಿದೆ. ಆದರೆ ಜರ್ಮನಿ ಸೇರಿದಂತೆ ಅನೇಕ ಪಾಶ್ಚಾತ್ಯ ದೇಶಗಳ ಸಾಮಾಜಿಕ ಸ್ವರೂಪ ನಮ್ಮ ದೇಶದಂತೆ ಇಲ್ಲ ಎಂದು ಹೇಳಿದರು.



‘ಸರ್ಕಾರ ನೀಡುವ ಸೌಲಭ್ಯಗಳಿಗಾಗಿ ಕಾಯುತ್ತ ಕುಳಿತಿರುವುದು ತರವಲ್ಲ’ ಎಂದ ಅವರು, ‘ಸಂವಿಧಾನ ನಮಗೆ ನೀಡುವ ಹಕ್ಕುಗಳನ್ನು ಕೈಚಾಚಿ ಪಡೆದುಕೊಳ್ಳಲು ಹಿಂಜರಿಯಬಾರದು’ ಎಂದು ಕಿವಿಮಾತು ಹೇಳಿದರು.



ನಾಲ್ಕೂ ಚಕ್ರಗಳು ಸರಿಯಾಗಿ ಉರುಳಿದಾಗ ಮಾತ್ರ ವಾಹನ ಸರಿಯಾಗಿ ಸಾಗುತ್ತದೆ. ಅದೇ ರೀತಿ ಸಮಾಜದ ಎಲ್ಲ ವರ್ಗಗಳೂ ಸಹಬಾಳ್ವೆಯಿಂದ ಬದುಕಬೇಕು. ಆಗಲೇ ಸಾಮಾಜಿಕ ಸಾಮರಸ್ಯ ಸಾಧ್ಯ ಎಂದರು.



‘ಸಮಾನತೆಗೆ ಇಸ್ಲಾಂ ಪ್ರೇರಣೆ’: ದೇಶದ ಎಲ್ಲ ಪ್ರಜೆಗಳಿಗೂ ಸಮಾನ ಅವಕಾಶ ನೀಡುವ ಸಂವಿಧಾನದ 14ನೇ ಪರಿಚ್ಛೇದಕ್ಕೆ ಇಸ್ಲಾಂ ಧರ್ಮದ ತತ್ವ ಗಳೇ ಪ್ರೇರಣೆ ಎಂದು ರಾಜ್ಯಪಾಲ    ಎಚ್.ಆರ್. ಭಾರದ್ವಾಜ್ ಹೇಳಿದರು.



‘ವಿವಾಹ ವಿಚ್ಛೇದನ ವಿಚಾರದಲ್ಲಿ ಪ್ರತಿಯೊಂದು ಧರ್ಮದಲ್ಲಿಯೂ ಪ್ರತ್ಯೇಕ ನಿಯಮಗಳಿವೆ. ಆದರೆ ಈ ವಿಚಾರದಲ್ಲಿ ಅಖಿಲ ಭಾರತ ಮುಸ್ಲಿಂ ವೈಯುಕ್ತಿಕ ಕಾನೂನು ಮಂಡಳಿಯನ್ನು ಮಾತ್ರ ಪ್ರಶ್ನೆ ಮಾಡಲಾಗುತ್ತಿದೆ. ಇದು ಸರಿಯಲ್ಲ’ ಎಂದು ಹೇಳಿದರು. ತಾವು, ತಮ್ಮ ಕುಟುಂಬದ ಹಿರಿಯರೂ ಮದ್ರಸಾದಲ್ಲಿ ಶಿಕ್ಷಣ ಪಡೆದಿದ್ದಾಗಿ ಹೇಳಿದ ಭಾರ ದ್ವಾಜ್ ಅವರು ತಮ್ಮ ಭಾಷಣವನ್ನು ಸಂಪೂರ್ಣವಾಗಿ ಉರ್ದು ಮಿಶ್ರಿತ ಹಿಂದಿ ಭಾಷೆಯಲ್ಲೇ ಮಾಡಿದರು.



ರಾಜ್ಯ ಸಭೆಯ ಉಪ ಸಭಾಪತಿ ಕೆ.ರೆಹಮಾನ್ ಖಾನ್, ಹಜ್ ಮತ್ತು ವಕ್ಫ್  ಸಚಿವ ಪ್ರೊ. ಮುಮ್ತಾಜ್ ಅಲಿ ಖಾನ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್‌ಕುಮಾರ್, ಮುಸ್ಲಿಂ ಧಾರ್ಮಿಕ  ಮೌಲಾನಾ ಮುಫ್ತಿ ಮಹಮದ್ ಅಶ್ರಫ್ ಆಲಿ ಬಕ್ವಿ  ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.