ಆರ್‌ಟಿಇ: ಸ್ವಯಂಪ್ರೇರಿತ ಪಿಐಎಲ್

7

ಆರ್‌ಟಿಇ: ಸ್ವಯಂಪ್ರೇರಿತ ಪಿಐಎಲ್

Published:
Updated:
ಆರ್‌ಟಿಇ: ಸ್ವಯಂಪ್ರೇರಿತ ಪಿಐಎಲ್

ಬೆಂಗಳೂರು: ರಾಜ್ಯದಲ್ಲಿ ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆ ಜಾರಿಯಾಗಿ ವರ್ಷ ಕಳೆದಿದ್ದರೂ, ಅಂದಾಜು 54 ಸಾವಿರ ಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಈ ಕುರಿತು ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲು ಮಾಡಿಕೊಂಡಿದೆ.`ಶಿಕ್ಷಣ ಹಕ್ಕಿಗಾಗಿ ಜನರ ಒಕ್ಕೂಟ' (ಪಿ.ಎ.ಎಫ್.ಆರ್.ಇ) ಸಂಸ್ಥೆ ಮಾರ್ಚ್ 30ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ, ಈ ಅಂಕಿ- ಸಂಖ್ಯೆಗಳನ್ನು ಬಹಿರಂಗಪಡಿಸಿದ್ದರು. ಇದನ್ನು ಆಧರಿಸಿ ಮಾರ್ಚ್ 31ರಂದು ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಆಧರಿಸಿ, ಹೈಕೋರ್ಟ್ ಪಿಐಎಲ್ ದಾಖಲು ಮಾಡಿಕೊಂಡಿದೆ.ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಶಿಕ್ಷಣ ಆಯುಕ್ತರಿಗೆ ನೋಟಿಸ್ ಜಾರಿಗೆ ಸೋಮವಾರ ಆದೇಶಿಸಿದೆ. ಅರ್ಜಿಯಲ್ಲಿ ಹೇಳಲಾದ ಅಂಶಗಳ ಕುರಿತು ವರದಿ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ.`ಕಡ್ಡಾಯ ಶಿಕ್ಷಣ' ಎಂದರೆ, ಸರ್ಕಾರವು 6-14 ವರ್ಷದ ಮಕ್ಕಳಿಗೆ ಉಚಿತ ಶಿಕ್ಷಣ ಒದಗಿಸಬೇಕು. ಮಕ್ಕಳು ಶಾಲೆಗಳಿಗೆ ದಾಖಲಾಗುವುದನ್ನು ಹಾಗೂ ಪ್ರಾಥಮಿಕ ಶಿಕ್ಷಣ ಪೂರೈಸುವುದನ್ನು ಖಚಿತಪಡಿಸಿಕೊಳ್ಳಬೇಕು. ಆದರೆ, ಪತ್ರಿಕೆಗಳಲ್ಲಿ ಬಂದಿರುವ ವರದಿ ಗಮನಿಸಿದರೆ, ಕಾಯ್ದೆಯ ಅನುಷ್ಠಾನದಲ್ಲಿ ಸರ್ಕಾರ ಸೋತಿರುವುದು ಕಂಡುಬರುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.`ಈ ವಿಚಾರದಲ್ಲಿ ಮಕ್ಕಳ ಮೂಲಭೂತ ಹಕ್ಕು ಉಲ್ಲಂಘನೆಯಾದಂತೆ ಭಾಸವಾಗುತ್ತಿದೆ' ಎಂದು ನ್ಯಾಯಪೀಠ ಹೇಳಿದೆ. ವಿಚಾರಣೆಯನ್ನು ಇದೇ 16ಕ್ಕೆ ಮುಂದೂಡಲಾಗಿದೆ. ವಕೀಲ ಆದಿತ್ಯ ಸೋಂಧಿ ಅವರನ್ನು ಈ ಪ್ರಕರಣದ `ಅಮಿಕಸ್ ಕ್ಯೂರಿ' (ನ್ಯಾಯಾಲಯದ ಸಹಾಯಕ) ಆಗಿ ನೇಮಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry