ಶುಕ್ರವಾರ, ಜುಲೈ 30, 2021
28 °C

ಆರ್‌ಬಿಐ: ಅಲ್ಪಾವಧಿ ಬಡ್ಡಿ ದರ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಮುಂಬರುವ ದಿನಗಳು ಇನ್ನಷ್ಟು ಕಠಿಣವಾಗಿರಲಿವೆ ಎಂದು ಎಚ್ಚರಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್,  ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಮತ್ತು ಬ್ಯಾಂಕ್‌ಗಳ ಉಳಿತಾಯ ಖಾತೆ ಬಡ್ಡಿ ದರಗಳನ್ನು ಶೇ 0.50ರಷ್ಟು ಹೆಚ್ಚಿಸಿದ್ದು,  ಇದು ತಕ್ಷಣದಿಂದಲೇ ಜಾರಿಗೆ ಬರಲಿವೆ.

ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಗಳಲ್ಲಿನ ಹಣಕ್ಕೆ ಬ್ಯಾಂಕ್‌ಗಳು ಪಾವತಿಸುವ ಬಡ್ಡಿ ದರಗಳನ್ನು ಸದ್ಯದ ಶೇ 3.5ರಿಂದ ಶೇ 4ಕ್ಕೆ ಹೆಚ್ಚಿಸಿರುವುದು  ಗ್ರಾಹಕರಿಗೆ ಸಾಕಷ್ಟು ಸಮಾಧಾನ ತರಲಿದೆ.

ಜಾಗತಿಕ ಕಚ್ಚಾ ತೈಲದ ಬೆಲೆ ಮಟ್ಟಕ್ಕೆ ಅನುಗುಣವಾಗಿ ಸ್ಥಳೀಯವಾಗಿಯೂ ತಕ್ಷಣ ತೈಲೋತ್ಪನ್ನಗಳ ಬೆಲೆ ಹೆಚ್ಚಿಸಬೇಕು. ತೈಲೋತ್ಪನ್ನಗಳ ಬೆಲೆಗಳನ್ನು ತಕ್ಷಣಕ್ಕೆ  ಹೆಚ್ಚಿಸದಿದ್ದರೆ, ವಿತ್ತೀಯ ಕೊರತೆ ಇನ್ನಷ್ಟು ಹೆಚ್ಚಲಿದೆ ಎಂದು ಎಚ್ಚರಿಸಿದೆ.

ಜಾಗತಿಕ ಮಾರುಕಟ್ಟೆಯಲ್ಲಿನ ಅನಿಶ್ಚಿತ ವಾತಾವರಣದ ಹಿನ್ನೆಲೆಯಲ್ಲಿ, 2011-12ನೇ ಸಾಲಿನಲ್ಲಿ ಆರ್ಥಿಕ ವೃದ್ಧಿ ದರವು ಸರ್ಕಾರವು ಲೆಕ್ಕ ಹಾಕಿರುವ ಶೇ 9ರ ಬದಲಿಗೆ ಶೇ 8ರಷ್ಟು ಇರಲಿದೆ ಎಂದು ಅಂದಾಜು ಮಾಡಲಾಗಿದೆ.

ಅಲ್ಪಾವಧಿಗೆ ಬ್ಯಾಂಕ್‌ಗಳಿಗೆ ಸಾಲ ನೀಡುವ (ರೆಪೊ) ಮತ್ತು ಬ್ಯಾಂಕ್‌ಗಳಿಂದ ಸಾಲ ಪಡೆಯುವ (ರಿವರ್ಸ್ ರೆಪೊ) ದರಗಳನ್ನು ಶೇ 0.50ರಷ್ಟು ಹೆಚ್ಚಿಸಿರುವುದರಿಂದ ಗೃಹ, ಆಟೊ ಮತ್ತಿತರ ಸಾಲಗಳ ಮೇಲಿನ ಬಡ್ಡಿ ದರಗಳು ತುಟ್ಟಿಯಾಗುವ ಸಾಧ್ಯತೆಗಳಿವೆ.

‘ಸದ್ಯದ ಹಣದುಬ್ಬರವು  ಭವಿಷ್ಯದ ಆರ್ಥಿಕ ಬೆಳವಣಿಗೆಗೆ ಗಮನಾರ್ಹ ಪ್ರಮಾಣದಲ್ಲಿ ಅಡ್ಡಿಯಾಗಲಿದೆ. ಅಲ್ಪಾವಧಿಯಲ್ಲಿ ಅಭಿವೃದ್ಧಿ ದರವನ್ನು ಕೆಲಮಟ್ಟಿಗೆ ಬಲಿಕೊಟ್ಟಾದರೂ ಹಣದುಬ್ಬರ ನಿಯಂತ್ರಿಸಬೇಕಾಗಿದೆ’ ಎಂದು ಆರ್‌ಬಿಐ ಗವರ್ನರ್ ಡಿ. ಸುಬ್ಬರಾವ್ ಅವರು ಮಂಗಳವಾರ ಇಲ್ಲಿ ತಿಳಿಸಿದರು.

ಕೇಂದ್ರೀಯ ಬ್ಯಾಂಕ್‌ನ ವಾರ್ಷಿಕ ಹಣಕಾಸು ನೀತಿ ಪ್ರಕಟಿಸಿ ಅವರು ಮಾತನಾಡುತ್ತಿದ್ದರು. ಸದ್ಯಕ್ಕೆ ಹಣದುಬ್ಬರವು ಶೇ 9ರಷ್ಟಿದೆ.  ಇದು ‘ಆರ್‌ಬಿಐ’ನ ಹಿತಕರ ಮಟ್ಟವಾಗಿರುವ ಶೇ 5ರಿಂದ 6ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.