ಬುಧವಾರ, ಜನವರಿ 22, 2020
17 °C
ಸುದ್ದಿ ಹಿನ್ನೆಲೆ

ಇತಿಹಾಸದ ಪುಟ ಸೇರಿದ ಮಿಗ್‌–21

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಲಿಂದ ಮೇಲೆ ಅಪಘಾತ, ಪೈಲಟ್‌ಗಳ ಸಾವಿಗೆ ಕಾರಣವಾಗಿ, ‘ಹಾರುವ ಶವಪೆಟ್ಟಿಗೆ’ ಎಂದೇ ಕುಖ್ಯಾತಿಗೆ ಒಳಗಾಗಿದ್ದ ಭಾರತದ ವಾಯುಪಡೆಯ ಮಿಗ್-21 (ಮಾದರಿ 77) ಯುದ್ಧ ವಿಮಾನಗಳ ಸೇವೆಯನ್ನು ಇತ್ತೀಚೆಗೆ ನಿಲ್ಲಿಸ­ಲಾಯಿತು. ಡಿಸೆಂಬರ್‌ 11ರಂದು ಕೊನೆಯ ಬಾರಿಗೆ ಹಾರಾಟ ನಡೆಸಿದ ಈ ಯುದ್ಧ ವಿಮಾನಗಳು ಇತಿಹಾಸದ ಪುಟ ಸೇರಿದವು.ಸುಮಾರು  ಐದು ದಶಕಗಳ ಕಾಲ ವಾಯುಪಡೆಗೆ ಸೇವೆ ಸಲ್ಲಿಸಿದ್ದ ಈ ಯುದ್ಧ ವಿಮಾನಗಳು 1965ರಲ್ಲಿ ಸೇನಾ ಕಾರ್ಯಾಚರಣೆಗೆ ಇಳಿದಿದ್ದರೂ 1971ರ ಯುದ್ಧದಲ್ಲಿ ಬಾಂಗ್ಲಾದೇಶದ ವಿಮೋಚನೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದವು.ಇವುಗಳ ಸೇರ್ಪಡೆಯಿಂದ  ವಾಯು­ಪಡೆಗೆ ಶಬ್ದಕ್ಕಿಂತ ಹೆಚ್ಚಿನ ವೇಗದಲ್ಲಿ (ಸೂಪರ್ ಸಾನಿಕ್) ಹಾರಾಟ ನಡೆಸಬಲ್ಲ ಯುದ್ಧ ವಿಮಾನ­ಗಳ ಸೇವೆ ಲಭ್ಯವಾಗಿತ್ತು.ನಿರ್ಣಾಯಕ ಪಾತ್ರ

1971ರಲ್ಲಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ನಡೆದ ಯುದ್ಧದಲ್ಲಿ  ಈ ಯುದ್ಧ ವಿಮಾನಗಳು ನಿರ್ಣಾಯಕ ಪಾತ್ರ ನಿರ್ವಹಿಸಿದ್ದವು. ಬಾಂಗ್ಲಾದೇಶ ವಿಮೋಚನೆ ಸಂದರ್ಭದಲ್ಲಿ ವಿಮಾನ ನಿಲ್ದಾಣಗಳ ಧ್ವಂಸ ಮತ್ತು ಢಾಕಾದಲ್ಲಿನ ಗವರ್ನರ್ ನಿವಾಸದ ಮೇಲೆ ಈ ವಿಮಾನಗಳು ನಡೆಸಿದ ದಾಳಿಯಿಂದಾ­ಗಿಯೇ ಪಾಕಿಸ್ತಾನವು ಸೋಲು ಒಪ್ಪಿಕೊಳ್ಳುವಂತಾಗಿತ್ತು. 1971ರ ನಂತರ, ಕಾರ್ಗಿಲ್ ಕದನದಲ್ಲಿಯೂ ಇವುಗಳ ಸೇವೆ ಪರೀಕ್ಷೆಗೆ ಒಳಪಟ್ಟಿತ್ತು.ಸಾಮರ್ಥ್ಯ

ಈ ಹಿಂದಿನ ಸೋವಿಯತ್ ಒಕ್ಕೂಟ  ತಯಾರಿಸಿದ್ದ ಈ ಯುದ್ಧ ವಿಮಾನಗಳ ಗರಿಷ್ಠ ಪ್ರಮಾಣದ ವೇಗವೇ ಅವುಗಳ ಪ್ರಮುಖ ಸಾಮರ್ಥ್ಯವಾಗಿತ್ತು.  ಕ್ಷಿಪಣಿ ಸಜ್ಜಿತ ಈ ವಿಮಾನಗಳು ವೈರಿ ವಿಮಾನಗಳನ್ನು ಸದೆಬಡಿಯಲು ಸೂಕ್ತವಾಗಿದ್ದವು. ‘ಮಿಗ್- –21 ( ಮಾದರಿ– 77)  ವಿಮಾನವು ಗಂಟೆಗೆ 1,350 ಕಿ.ಮೀ ವೇಗದಲ್ಲಿ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿತ್ತು.

ವೈರಿ ಪಡೆ  ವಿಮಾನಗಳನ್ನು ಹೊಡೆದುರುಳಿಸುವ ಉದ್ದೇಶಕ್ಕೆ ಬಳಸುತ್ತಿದ್ದರೂ, ಭಾರತೀಯ ವಾಯು­ಪಡೆಯು ಅದನ್ನು ನೆಲದ ಮೇಲಿನ ದಾಳಿಗೂ ಸಜ್ಜುಗೊಳಿಸಿತ್ತು.ತರಬೇತಿ

ಯುದ್ಧ ವಿಮಾನಗಳ ಪೈಲಟ್‌ಗಳು ಇನ್ನು ಮುಂದೆ ಸುಧಾರಿಸಿದ ಜೆಟ್ ತರಬೇತಿ ಯುದ್ಧ ವಿಮಾನ ‘ಹಾಕ್’ ನಲ್ಲಿ ತರಬೇತಿ ಪಡೆಯಲಿದ್ದಾರೆ. ಇದು ಕೂಡ ಗರಿಷ್ಠ ಮಟ್ಟದ ವೇಗದಲ್ಲಿ ಹಾರಾಟ ನಡೆಸಿದರೂ ಸೂಪರ್ ಸಾನಿಕ್ ಅಲ್ಲ. ಧ್ವನಿವೇಗವನ್ನೂ ಮೀರಿ ಸಂಚರಿಸುವ ಸಾಮರ್ಥ್ಯ ಮಾತ್ರ ಇದಕ್ಕಿಲ್ಲ. ಸದ್ಯಕ್ಕೆ 1980ರಲ್ಲಿ ಸೇರ್ಪಡೆಗೊಂಡ ಮಿರಾಜ್ - 2000 ಯುದ್ಧ ವಿಮಾನಗಳನ್ನು ತರಬೇತಿ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ.ಸಾವಿನ ಸಂಖ್ಯೆ

ಅನಧಿಕೃತ ಅಂದಾಜುಗಳ ಪ್ರಕಾರ, ನಾಲ್ಕು ದಶಕಗಳ ಅವಧಿಯಲ್ಲಿ ಈ ವಿಮಾನಗಳು ಅಪಘಾತಕ್ಕೀಡಾಗಿ 170 ಪೈಲಟ್‌ಗಳ ಜೀವ ಬಲಿ ತೆಗೆದುಕೊಂಡಿವೆ. ಜತೆಗೆ ಅನೇಕ ನಾಗರಿಕರೂ ಮೃತಪಟ್ಟಿದ್ದಾರೆ. ಅನೇಕ ಸಂದರ್ಭಗಳಲ್ಲಿ ಪೈಲಟ್‌ಗಳು ವಿಮಾನದಿಂದ ಹೊರಗೆ ಜಿಗಿದು ಪ್ರಾಣ ಉಳಿಸಿಕೊಂಡ ನಿದರ್ಶನಗಳೂ ಇವೆ.ಈ ಯುದ್ಧ ವಿಮಾನವು ಯುದ್ಧದ ಸಂದರ್ಭದಲ್ಲಿ ವೈರಿ ಪಡೆ ಸದೆಬಡೆಯಲು ಸರ್ವ ರೀತಿಯಲ್ಲಿಯೂ   ಸಮರ್ಥವಾಗಿತ್ತು. ಆದರೆ, ಕೆಲ ಸಂದರ್ಭಗಳಲ್ಲಿ ಇದರ ನಿರ್ವಹಣೆ ಕಷ್ಟಕರವಾಗಿ ದುರಂತಗಳು ಘಟಿಸು­ತ್ತಿದ್ದವು. ತಂತ್ರಜ್ಞಾನ ಸುಧಾರಣೆ­ಯೊಂದಿಗೆ ಯುದ್ಧ ವಿಮಾನಗಳ ಹಾರಾಟ ಸುರಕ್ಷತೆಯಲ್ಲಿ ಸುಧಾರಣೆ­ಯಾಗಿದ್ದರೂ  ಅಲ್ಲೊಂದು ಇಲ್ಲೊಂದು ಅವಘಡಗಳು ನಡೆಯುತ್ತಲೇ ಇದ್ದವು.ಇನ್ನು ಮುಂದೆ, ಈ ಯುದ್ಧ ವಿಮಾನಗಳು ಆಕಾಶದಲ್ಲಿ ಶಬ್ದಕ್ಕಿಂತ ಹೆಚ್ಚಿನ ವೇಗದಲ್ಲಿ ಹಾರಾಟ ನಡೆಸುವ ಬದಲಿಗೆ ಸ್ತುಸಂಗ್ರಹಾಲಯದಲ್ಲಿ ಮಾತ್ರ ಕಾಣಲು ಸಿಗಲಿವೆ.ಬಿಡಿಭಾಗಗಳ ಪೂರೈಕೆಯಲ್ಲಿನ ಅಡಚಣೆಯಿಂದಾಗಿ  ಇವುಗಳ ನಿರಂತರ ಹಾರಾಟ ಸಾಧ್ಯವಿಲ್ಲದ ಪರಿಸ್ಥಿತಿ ಉದ್ಭವಿಸಿತ್ತು. ಹೀಗಾಗಿ ಈ  ಶ್ರೇಣಿಯ ಯುದ್ಧ ವಿಮಾನಗಳನ್ನು ಹಂತ ಹಂತವಾಗಿ ಕೈಬಿಡಲು ನಿರ್ಧರಿಸಲಾಗಿತ್ತು. ಫ್ರಾನ್ಸ್ ನಿರ್ಮಿತ ರಫೇಲ್ ಬಹು ಬಗೆಯ ಯುದ್ಧ ವಿಮಾನಗಳ ಸೇರ್ಪಡೆ ವಿಚಾರ ಇನ್ನೂ ಸಂಧಾನ ಹಂತದಲ್ಲಿ ಇದೆ. ಬದಲಿ ವಿಮಾನಗಳ ಸೇರ್ಪಡೆ ವಿಳಂಬವಾಗಲಿದೆ.ಪರ್ಯಾಯ ವ್ಯವಸ್ಥೆ

ಮಿಗ್‌ –21 ರ ಸ್ಥಾನವನ್ನು, ದೇಶಿಯವಾಗಿ ಅಭಿವೃದ್ಧಿ ಪಡಿಸಲಾಗಿರುವ ಲಘು ಯುದ್ಧ ವಿಮಾನ (ಎಲ್‌ಸಿಎ) ‘ತೇಜಸ್’, ತುಂಬುವ ಸಾಧ್ಯತೆ ಇದೆ. ಮುಂದಿನ ವರ್ಷಾಂತ್ಯದ ಹೊತ್ತಿಗೆ ‘ತೇಜಸ್’ ಕಾರ್ಯಾಚರಣೆಗೆ ಸಿದ್ಧಗೊಳ್ಳಲಿದೆ.

ಪ್ರತಿಕ್ರಿಯಿಸಿ (+)