ಗುರುವಾರ , ಜೂನ್ 24, 2021
29 °C
ಕೆಂದಟ್ಟಿ ಕ್ವಾರಿಯಲ್ಲಿ ವ್ಯರ್ಥವಾಗುತ್ತಿದೆ ನೀರು

ಇರುವ ನೀರು ಬೇಡ: ಶಾಶ್ವತ ನೀರಾವರಿ ಬೇಕು..!

ಪ್ರಜಾವಾಣಿ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಕೋಲಾರ: ಅಲ್ಲಿ ಚಿಲುಮೆಯಿಂದ ಬಂದ ರಾಶಿ ನೀರಿದೆ. ಅದು ರಾಷ್ಟ್ರೀಯ ಹೆದ್ದಾರಿ 4ರ ನಿರ್ಮಾಣಕ್ಕಾಗಿ ಕಲ್ಲು ಪೂರೈ­ಸಲು ನಡೆದ ಗಣಿಗಾರಿಕೆ ಸಂದ­ರ್ಭ­ದಲ್ಲಿ ಚಿಮ್ಮಿದ ನೀರು. ಅದನ್ನು ಹೊರ ಚೆಲ್ಲಿ, ಮುಚ್ಚಿದ ಚಿಲುಮೆಗಳನ್ನು ಮತ್ತೆ ತೆರೆದು ಬರುವ ನೀರನ್ನು ಜನ, ಜಾನುವಾರು ಬಳಸಿಕೊಳ್ಳಲು ಎಲ್ಲ ಅವ­ಕಾಶವೂ ಇದೆ. ಆದರೆ ಗ್ರಾಮ ಪಂಚಾ­ಯತಿಯಾಗಲೀ ಜಿಲ್ಲಾಡಳಿತ­ವಾಗಲೀ ಆ ಕಡೆಗೆ ಗಮನವನ್ನೇ ಹರಿ­ಸಿಲ್ಲ.ತೊಟ್ಟು ನೀರಿಗೂ ಪರದಾಡುತ್ತಿರುವ ಜಿಲ್ಲೆಯ ನಿರ್ಲಕ್ಷ್ಯಕ್ಕೆ ಒಳಗಾದ ಆ ನೀರಿ­ನಲ್ಲಿ ಬೆಂಗಳೂರಿನ ಯುವಕ–ಯುವತಿ­ಯರು ವಾರಾಂತ್ಯದ ದಿನಗಳಲ್ಲಿ ಬಂದು ಮೋಜಿನಾಟ ಆಡುತ್ತಾರೆ.ಪಿಕ್ ನಿಕ್ ಸ್ಪಾಟ್‌ ಆಗಿರುವ ಆ ಸ್ಥಳ ಮದ್ಯಪಾನ, ಮುಕ್ತ ಕಾಮದಂಥ ಸ್ವೇಚ್ಛಾ­ಚಾರಕ್ಕೂ ಹೇಳಿ ಮಾಡಿಸಿದ ತಾಣವಾಗಿ ಮಾರ್ಪಟ್ಟಿದೆ. ಅದನ್ನು ತಡೆಗಟ್ಟಬೇಕಾದ ಗ್ರಾಮ ಪಂಚಾಯತಿ, ಸುತ್ತಮುತ್ತಲ ಗ್ರಾಮಗಳ ಯುವಜನರು ಸುಮ್ಮನೆ ನೋಡುತ್ತಾ ನಿಲ್ಲುತ್ತಾರೆ.ಗ್ರಾಮಗಳ ಜಾನುವಾರುಗಳು ಮಾತ್ರ ಆ ನೀರಿನ ಕಡೆಗೆ ಆಸೆ ಕಣ್ಣಿಂದ ನೋಡುತ್ತ­ವಾದರೂ ಕುಡಿಯಲು ಆಸ್ಪದವೇ ಇಲ್ಲವಾಗಿದೆ. ಸ್ಥಳೀಯ ಜನ ಮತ್ತು ಜಾನುವಾರು ಇಲ್ಲಿ ಪರಕೀಯರಾಗಿ­ದ್ದಾರೆ. ಶಾಶ್ವತ ನೀರಾವರಿಗಾಗಿ ಹೋರಾಟ ನಡೆಯುತ್ತಿರುವ ಜಿಲ್ಲೆ­ಯಲ್ಲೇ ಇರುವ ನೀರನ್ನು ಬಳಕೆ ಮಾಡುವ ಪ್ರಯತ್ನವೇ ನಡೆಯುತ್ತಿಲ್ಲ.ಇಂಥ ವಿಪರ್ಯಾಸದ ದೃಶ್ಯವನ್ನು ನೋಡಲು ತಾಲ್ಲೂಕಿನ ಅರಾಭಿಕೊತ್ತ­ನೂರು ಗ್ರಾಮ ಪಂಚಾಯತಿಗೆ ಸೇರಿದ, ದೊಡ್ಡಯ್ಯೂರು ಪಕ್ಕದ ಬೆಟ್ಟದ ಹಿಂಭಾ­ಗಕ್ಕೆ ಬರಬೇಕು. ಕೆಂದಟ್ಟಿ ಗ್ರಾಮಕ್ಕೆ ಸೇರಿದ ಆ ಸ್ಥಳದಲ್ಲಿ ಐದು ವರ್ಷದಿಂದ ಸತತವಾಗಿ ನಡೆದ ಕಲ್ಲುಗಣಿಗಾರಿಕೆ ಪರಿ­ಣಾಮವಾಗಿ ಬೆಟ್ಟವೊಂದು ಕರಗಿ 150 ಅಡಿ ಆಳ, 300 ಅಡಿ ಅಗಲದ ಕಂದಕ ಉಂಟಾ­ಗಿದೆ. ರುದ್ರ ರಮಣೀಯ ಲೋಕವೊಂದು ತೆರೆದುಕೊಂಡಂತಿರುವ ಆ ಸ್ಥಳವು ಈಗ ಬೆಂಗಳೂರಿಗರ ಅತ್ಯಾಪ್ತ ಸ್ಥಳವಾಗಿ ಮಾರ್ಪಟ್ಟಿದೆ.ಪ್ರೇಮಿಗಳು, ವಿದ್ಯಾವಂತ ಯುವ­ಸಮೂಹ, ಕಾಲೇಜು ವಿದ್ಯಾರ್ಥಿ­ಗಳು, ಕುಟುಂಬಸ್ಥರು ಸೇರಿದಂತೆ ಎಲ್ಲರೂ ಯಾವುದೇ ಹಂಗಿಲ್ಲದೆ, ಎಗ್ಗು–ಸಿಗ್ಗಿಲ್ಲದೆ ಬೆರೆತು ನೀರಿನಲ್ಲಿ ದಿನ ಕಳೆ­ಯುತ್ತಿದ್ದಾರೆ. ಬೆಟ್ಟದ ತಳದ ಮೂಲೆ­ಗಳಲ್ಲಿ ಸಾಮೂ­ಹಿಕ ಮದ್ಯಪಾನ ನಡೆ­ದರೆ, ತಟದಲ್ಲೇ ಮಾಂಸವನ್ನು ಬೇಯಿಸಿ ತಿನ್ನುತ್ತಾರೆ, ನೀರಿನಲ್ಲಿ ವಾಹನ­ಗಳನ್ನು ತೊಳೆಯು­ವುದು, ಅಲ್ಲಿಯೇ ಸೋಪು, ಶಾಂಪೂ ಬಳಸಿ ಸ್ನಾನ ಮಾಡುವುದು ನಡೆ­ಯುತ್ತಿದೆ. ಮೇಲಿನ ಪ್ರದೇಶದ ಪೊದೆ­ಗಳಲ್ಲಿ ಪ್ರೇಮಿಗಳ ಸರಸ, ಸಲ್ಲಾಪ ನಡೆಯುತ್ತಿದೆ. ಪ್ರಪಾತದ ಅಂಚಿನಲ್ಲೇ ನಿಂತು ಫೋಟೋ ತೆಗೆಸಿಕೊಳ್ಳುವ ಸಾಹಸಗಳು ಕಂಡು ಬರುತ್ತಿವೆ. ಈ ಸ್ಥಳ­ದಲ್ಲಿ ನಡೆದಾಡಿದರೆ ಮದ್ಯದ ಬಾಟಲಿ­ಗಳ ಚೂರುಗಳು ಹೆಜ್ಜೆ ಹೆಜ್ಜೆಗೂ ಸಿಗುತ್ತವೆ.ಐದು ವರ್ಷದ ಹಿಂದೆ ಈ ಸ್ಥಳದಲ್ಲಿದ್ದ ಬೆಟ್ಟದಲ್ಲಿ ಕಲ್ಲುಗಣಿಗಾರಿಕೆ ಆರಂಭ­ವಾದಾಗ ಸುತ್ತಮುತ್ತಲಿನ ಚಿಕ್ಕ­ಯ್ಯೂರು, ದೊಡ್ಡಯ್ಯೂರು, ಚೆಲುವನ­ಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಜನ –ಜಾನುವಾರುಗಳ ಜೀವನ ಅಸ್ತ­ವ್ಯಸ್ತ­ಗೊಂಡಿತ್ತು. ಮನೆಗಳು ಬಿರುಕು ಬಿಟ್ಟಿದ್ದವು. ರೇಷ್ಮೆ, ಟೊಮೆಟೊ ಮೊದ­ಲಾದ ಬೆಳೆಗಳ ಮೇಲೆ ಕಲ್ಲಿನ ದೂಳು ಬಿದ್ದು ಬೆಳೆನಷ್ಟ ಸಾಮಾನ್ಯವಾಗಿತ್ತು. ಅಷ್ಟೇ ಇಲ್ಲದೆ, ಬೆಟ್ಟದಲ್ಲಿದ್ದ ಮತ್ತು ಸುತ್ತ­ಮುತ್ತಲಿದ್ದ ಅಪಾರ ಜೀವವೈವಿಧ್ಯಗಳು ಅಸ್ತಿತ್ವ ಕಳೆದುಕೊಂಡಿದ್ದವು.ಈಗ ಅಲ್ಲಿ ಬೆಟ್ಟ ಬರಿದಾಗಿದೆ. ಪ್ರಪಾತ ಮಾತ್ರ ಇದೆ. ಗಣಿಗಾರಿಕೆ ಸಮಯದಲ್ಲಿ ಕಾಣಿಸಿಕೊಂಡಿದ್ದ ನೀರಿನ ಚಿಲುಮೆಗಳನ್ನು ಗಣಿಗಾರಿಕೆಗೆ ತೊಂದರೆ­ಯಾಗು­ತ್ತದೆ ಎಂಬ ಕಾರಣಕ್ಕೆ ಮುಚ್ಚ­ಲಾಗಿತ್ತು.ಸರಿಯಾಗಿ ಮುಚ್ಚದ ಒರತೆ ನೀರೇ ಸರೋವರದಂತೆ ಅಲ್ಲಿ ಹಬ್ಬಿದೆ. ಆ ನೀರಿನಲ್ಲಿ ಈಜಾಡುವ ಪ್ರಯತ್ನದಲ್ಲಿ ಈಗಾಗಲೇ 10 ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲಿ ಈಜಾಡು­ವುದನ್ನು ತಪ್ಪಿಸಲು ಬಂದ ಗ್ರಾಮಸ್ಥರು, ಪೊಲೀಸರು ಬೆಂಗಳೂರಿನ ಯುವ­­ಜನರನ್ನು ವಾಪಸು ಕಳಿಸಿದ ನಿದರ್ಶನ­ಬಹಳ ಕಡಿಮೆ.ದೂರಿದರೂ ಪ್ರಯೋಜನವಿಲ್ಲ: ಇಲ್ಲಿನ ನೀರು ಸದ್ಯಕ್ಕೆ ಕುಡಿಯಲು ಯೋಗ್ಯವಿಲ್ಲ. ಅದನ್ನು ಹೊರ ಚೆಲ್ಲಿ ಮತ್ತೆ ಬರುವ ನೀರನ್ನು ಬಳಸಬಹುದು ಎಂದು ನೀರಿನ ಗುಣಮಟ್ಟ ಉಸ್ತುವಾರಿ ಮತ್ತು ನಿರೀ­ಕ್ಷಣಾ ಸಂಸ್ಥೆ ಸಲಹೆ ನೀಡಿದೆ. ಅದೇ ರೀತಿ ಮಾಡುವಂತೆ ನಾವೂ ಮನವಿ ಸಲ್ಲಿಸಿ­ದ್ದೇವೆ. ಆದರೆ ಇದುವರೆಗೂ ಗ್ರಾಮ ಪಂಚಾ­ಯತಿ ಗಮನವನ್ನೇ ಹರಿ­ಸಿಲ್ಲ ಎನ್ನುತ್ತಾರೆ ದೊಡ್ಡಯ್ಯೂರಿನ ಭುವ­ನೇಶ, ಚೆಲುವನಹಳ್ಳಿಯ ರಾಘ­ವೇಂದ್ರ ಮತ್ತು ಪ್ರಶಾಂತ್‌.ಭಾನುವಾರ ಮಧ್ಯಾಹ್ನ ‘ಪ್ರಜಾವಾಣಿ’ ಪ್ರತಿನಿಧಿ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ ನೂರಾರು ದ್ವಿಚಕ್ರ ವಾಹನ, ಹತ್ತಾರು ಕಾರು­, ಯುವಕ–ಯುವತಿ­ಯರು ನೀರಿನಲ್ಲಿ ಮೋಜು ಮಾಡು­ತ್ತಿದ್ದರು. ಅವರೆಲ್ಲರನ್ನೂ ನೋಡುತ್ತಾ ಹಳ್ಳಿಗರು ಅಸಹಾಯಕ­ರಾಗಿ ನಿಂತಿದ್ದರು.

ಕ್ವಾರಿಯ ಸುತ್ತ ಮೇಲ್ಭಾಗದಲ್ಲಿ ತಂತಿ­ಬೇಲಿ ಅಳವಡಿಸುವಂತೆ ಕೋರಿ­­ದರೂ ಪ್ರಯೋಜನವಾಗಿಲ್ಲ. ನಮ್ಮ ಜಾನು­ವಾರು ಇಲ್ಲಿಗೆ ಬರು­ವಂತೆಯೇ ಇಲ್ಲ ಎಂಬ ಸನ್ನಿವೇಶ ನಿರ್ಮಾಣ­ವಾಗಿ­ರುವುದು ಸಂಕಟ ಮೂಡಿಸಿದೆ ಎಂದು ದೊಡ್ಡಯ್ಯೂರಿನ ವೃದ್ಧ ಸಾಲಪ್ಪ, ರೈತ­ರಾದ ಪುಟ್ಟಪ್ಪ ಮತ್ತು ನಾರಾಯಣ­ಸ್ವಾಮಿ ಹೇಳಿದರು.ನೀರು ಇಲ್ಲ ಎಂದು ಎಲ್ಲಿಂದಲೋ ತರುವ ನೀರಿಗಾಗಿ ಜಿಲ್ಲೆಯಲ್ಲಿ ಹೋರಾಟ­­­ ನಡೆಯುತ್ತಿದೆ. ಸರ್ಕಾ­ರವೂ ನೀರು ತರುವ ಪ್ರಯತ್ನಗಳನ್ನು ಮಾಡುತ್ತಲೇ ಇದೆ. ಆದರೆ ಸ್ಥಳೀಯ ಜಲಸಂಪನ್ಮೂಲ ಬಳಸಿಕೊಳ್ಳುವ ನಿಟ್ಟಿನಲ್ಲಿ ಸಣ್ಣ ಮಟ್ಟದ ಪ್ರಯತ್ನಗಳು ಏಕೆ ನಡೆಯುತ್ತಿಲ್ಲ? ಇಲ್ಲಿ ದೊರಕುವ ನೀರನ್ನು ಕನಿಷ್ಠ 5ರಿಂದ 10 ಹಳ್ಳಿಗೆ ಕುಡಿಯಲು ಪೂರೈಸುವ ಸಾಧ್ಯತೆ ಇದೆ ಎಂಬುದನ್ನು ಏಕೆ ಮನಗಾಣುತ್ತಿಲ್ಲ? ಎಂದು ಪ್ರಶ್ನಿಸುತ್ತಾರೆ ಲೇಖಕ ಎನ್.ಗೋವಿಂದಪ್ಪ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.