ಮಂಗಳವಾರ, ಮೇ 11, 2021
24 °C
75,000 ನಿರಾಶ್ರಿತರು, ಕೆಸರಿನಲ್ಲಿ ಮುಳುಗಿದ ಕೇದಾರನಾಥ

ಉತ್ತರದಲ್ಲಿ ಜಲಪ್ರಳಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡೆಹ್ರಾಡೂನ್/ಶಿಮ್ಲಾ/ನವದೆಹಲಿ (ಪಿಟಿಐ): ಉತ್ತರ ಭಾರತದಲ್ಲಿ ನಾಲ್ಕನೇ ದಿನವೂ  ವರುಣನ ಆರ್ಭಟ ಮುಂದುವರಿದಿದ್ದು, ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಪ್ರವಾಹ ಮತ್ತು ಭೂಕುಸಿತಕ್ಕೆ ಮಂಗಳವಾರ ಮತ್ತೆ 70ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಇದರಿಂದಾಗಿ ನಾಲ್ಕು ದಿನಗಳಲ್ಲಿ ಜಲಪ್ರಳಯಕ್ಕೆ ಬಲಿಯಾದವರ ಸಂಖ್ಯೆ 131 ಏರಿದೆ. ಇನ್ನೂ ಸಾವಿರಾರು ಜನರು ಕಾಣೆಯಾಗಿದ್ದು, 75 ಸಾವಿರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲ ನದಿ ಮತ್ತು ಉಪನದಿಗಳು ಕೆಸರು ತುಂಬಿದ ನೀರಿನಿಂದ ಉಕ್ಕಿ ಹರಿಯುತ್ತಿವೆ. ಮನೆ, ಮಠ, ವಾಹನ, ರಸ್ತೆ, ಜಾನುವಾರು  ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ಬಹತೇಕ ಕಟ್ಟಡ, ರಸ್ತೆ ಜಲಾವೃತಗೊಂಡಿದ್ದು, ಸಂಪರ್ಕ ಕಡಿದುಕೊಂಡಿವೆ. ಎರಡು ರಾಜ್ಯಗಳ ಪ್ರಮುಖ ಪ್ರವಾಸಿ ತಾಣ ಮತ್ತು ಯಾತ್ರಾಸ್ಥಳದಲ್ಲಿ  75 ಸಾವಿರಕ್ಕೂ ಹೆಚ್ಚು ಜನರು ಸಿಲುಕಿದ್ದಾರೆ. ಸೇನೆ ಮತ್ತು ಸ್ಥಳೀಯ ಪೊಲೀಸರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಉತ್ತರಪ್ರದೇಶದಲ್ಲಿ ಹಲವರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ

ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಸಾವು-ನೋವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ರಸ್ತೆಗಳು ಕೊಚ್ಚಿಹೋದ ಕಾರಣ ರಕ್ಷಣಾ ತಂಡಗಳು ಇನ್ನೂ ಹಲವು ಸ್ಥಳಗಳು ತೆರಳಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಸರಿನಲ್ಲಿ ದೇವಾಲಯ: ಪ್ರಸಿದ್ಧ ಯಾತ್ರಾಸ್ಥಳವಾದ ಕೇದಾರನಾಥ ದೇವಾಲಯ ಭಾಗಶಃ ಕೆಸರಿನಲ್ಲಿ ಹೂತು ಹೋಗಿದೆ. ದೇವಾಲಯದ ಒಂದು ಭಾಗದ ಗೋಡೆ ನೀರಿನಲ್ಲಿ ಕೊಚ್ಚಿಹೋಗಿದೆ.  ದೇವಾಲಯಕ್ಕೆ ಹಾನಿಯಾಗಿಲ್ಲ ಎಂದು  ಆಡಳಿತ ಮಂಡಳಿ ಹೇಳಿದೆ.ದೇವಾಲಯದ ಮೇಲಿನ ಅರ್ಧ ಭಾಗ ಮಾತ್ರ ಕಾಣುತ್ತಿದ್ದು ಆ ಪ್ರದೇಶದ ಉಳಿದ ಕಟ್ಟಡಗಳು ಸಂಪೂರ್ಣವಾಗಿ ಕೆಸರಿನಲ್ಲಿ ಹೂತು ಹೋಗಿವೆ ಎಂದು ಹೆಲಿಕಾಪ್ಟರ್‌ನಲ್ಲಿ ರಕ್ಷಣಾ ಕಾರ್ಯಕ್ಕೆ ತೆರಳಿದ ಸಿಬ್ಬಂದಿ ತಿಳಿಸಿದ್ದಾರೆ.ಯಾತ್ರೆ ಮೊಟಕು: ಕೇದಾರನಾಥ, ಬದರಿನಾಥ, ಗಂಗೋತ್ರಿ, ಯಮನೋತ್ರಿಗೆ ಹೋಗುವ ರಸ್ತೆಗಳು   ಕುಸಿದ ಕಾರಣ ಯಾತ್ರೆ ಸ್ಥಗಿತಗೊಳಿಸಲಾಗಿದೆ. ಅಲ್ಲಿಗೆ ತೆರಳಬೇಕಿದ್ದ ಸುಮಾರು 71, 400 ಯಾತ್ರಿ ಗಳು ರುದ್ರಪ್ರಯಾಗ ಮತ್ತು ಚಮೋಲಿಯಲ್ಲೇ ಉಳಿಯುಂತಾಗಿದೆ.ಚಮೋಲಿಯಲ್ಲಿ 28 ಸಾವಿರ, ರುದ್ರಪ್ರಯಾಗದಲ್ಲಿ 25, ಉತ್ತರ ಕಾಶಿಯಲ್ಲಿ ಹತ್ತು, ಕೇದಾರ ನಾಥದಲ್ಲಿ ಆರರಿಂದ ಎಂಟು, ಹೇಮಕುಂಡ ಸಾಹೀಬ್‌ನಲ್ಲಿ ಮೂರು ಮತ್ತು ಬದರೀನಾಥದಲ್ಲಿ ಎಂಟು ಸಾವಿರ ಯಾತ್ರಿಗಳು ಸಿಲುಕಿಕೊಂಡಿದ್ದಾರೆ ಎಂದು ವಿಪತ್ತು ನಿರ್ವಹಣಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. 

 

ಉತ್ತರಾಖಂಡ ರಾಜ್ಯದಲ್ಲಿ  ಇದುವರೆಗೂ 102 ಮಂದಿ ಸಾವಿಗೀಡಾಗಿದ್ದು, 175 ಮನೆಗಳಿಗೆ ಭಾರಿ ಹಾನಿ ಉಂಟಾಗಿದೆ. ರುದ್ರಪ್ರಯಾಗದಲ್ಲಿ ಭಾರಿ ಅನಾಹುತಗಳಾಗಿದ್ದು 20 ಜನರು ಮೃತಪಟ್ಟಿದ್ದಾರೆ. ಪ್ರವಾಸಿಗರು ಮತ್ತು ಯಾತ್ರಿಗಳು ಸೇರಿದಂತೆ 500 ಜನರು ಕಣ್ಮರೆಯಾಗಿದ್ದಾರೆ. 73ಕ್ಕೂ ಹೆಚ್ಚು ಕಟ್ಟಡಗಳು ನೆಲಸಮವಾಗಿವೆ.`ಕೇದಾರನಾಥ ಮಂದಿರದ ಬಳಿ 20ಕ್ಕೂ ಹೆಚ್ಚು ಶವಗಳು ಬಿದ್ದಿದ್ದು, ಬದುಕುಳಿದವರ ರಕ್ಷಣೆಗೆ ಆದ್ಯತೆ ನೀಡಲಾಗಿದೆ' ಎಂದು ಜಿಲ್ಲಾಡಳಿತ ತಿಳಿಸಿದೆ. ಅಲಕನಂದಾ ನದಿ ದಡದಲ್ಲಿದ್ದ 40 ಹೋಟೆಲ್‌ಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ.ಮಳೆ ಬಿಡುವು: ಮೂರು ದಿನಗಳಿಂದ ಭಾರಿ ಮಳೆಯಾಗಿದ್ದ ಕೇದಾರನಾಥ್ ಪರ್ವತ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಮಳೆ ಸ್ವಲ್ಪ ಬಿಡುವು ನೀಡಿತ್ತು. ಇದರಿಂದ ರಕ್ಷಣಾ ಕಾರ್ಯ ನಡೆಸಲು ಸಾಧ್ಯವಾಯಿತು. ವಾಯುದಳದ ಹೆಲಿಕಾಪ್ಟರ್‌ನಲ್ಲಿ 200 ಜನರನ್ನು ರಕ್ಷಿಸಲಾಗಿದೆ. ಅನಾರೋಗ್ಯಪೀಡಿತರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ.ಕೇದಾರನಾಥ್ ಪರ್ವತದಲ್ಲಿ ಸಿಕ್ಕಿ ಹಾಕಿಕೊಂಡ ಯಾತ್ರಿಗಳನ್ನು ರಕ್ಷಿಸಲು ಎರಡು ಐಎಎಫ್ ಹೆಲಿ ಕಾಪ್ಟರ್ ಮತ್ತು ಎರಡು ಖಾಸಗಿ ಹೆಲಿಕಾಪ್ಟರ್‌ಗಳನ್ನು ಬಳಸಲಾಗಿದೆ.ಹೇಮ್‌ಕುಂಡ ಸಾಹಿಬ್‌ಗೆ ಹೊರಟು ಪುಲ್ನಾ  ಮತ್ತು ಬುಂದಾರ್ ಗ್ರಾಮದಲ್ಲಿ ಸಿಲುಕಿಕೊಂಡಿ ರುವ ಯಾತ್ರಿಗಳಿಗೆ ಅಗತ್ಯ ದಿನಸಿ ಸಾಮಾಗ್ರಿಗಳನ್ನು ಖಾಸಗಿ ಹೆಲಿಕಾಪ್ಟರ್ ಮೂಲಕ ಸರಬರಾಜು ಮಾಡಲಾಗಿದೆ. ಡಜನ್ ಹೆಲಿಕಾಪ್ಟರ್ ಬಳಕೆ: ಉತ್ತರಕಾಶಿಯಲ್ಲಿ ಭಾಗೀರಥಿ ಮತ್ತು ಹೃಷಿಕೇಶದಲ್ಲಿ ಗಂಗಾ ನದಿಯ ಪ್ರವಾಹ ಸ್ವಲ್ಪ ಮಟ್ಟಿಗೆ ಕುಗ್ಗಿದೆ. ಉಳಿದಂತೆ ಉಪನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಇಡೀ ಉತ್ತರಾಖಂಡ ತತ್ತರಗೊಂಡಿದೆ.`ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲಿ ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲು ಸುಮಾರು ಒಂದು ಡಜನ್‌ಗಿಂತ ಹೆಚ್ಚು ಹೆಲಿಕಾಪ್ಟರ್‌ಗಳನ್ನು ಮಂಗಳವಾರ ಕಳುಹಿಸಲಾಗಿದೆ. ವಿವಿಧೆಡೆ ಸಂಕಷ್ಟದಲ್ಲಿರುವ ಜನರನ್ನು ಶೀಘ್ರವೇ ರಕ್ಷಿಸಲಾಗುವುದು' ಎಂದು ಕೇಂದ್ರ ಗೃಹ ಕಾರ್ಯದರ್ಶಿ ಆರ್.ಕೆ.ಸಿಂಗ್ ತಿಳಿಸಿದ್ದಾರೆ.`ಪ್ರವಾಹದಿಂದ ತತ್ತರಿಸಿರುವ ಪ್ರದೇಶಗಳಿಗೆ ಹೆಲಿಕಾಪ್ಟರ್‌ಗಳ ಮೂಲಕ ಆಹಾರ, ಔಷಧ ಮತ್ತು ಹೊದಿಕೆಗಳನ್ನು ಒದಗಿಸಲಾಗುತ್ತಿದೆ. ಉತ್ತರಾಖಂಡಕ್ಕೆ ನಾವು ಏಳು ಹೆಲಿಕಾಪ್ಟರ್‌ಗಳನ್ನು ಒದಗಿಸಿದ್ದೇವೆ. ರಾಜ್ಯ ಸರ್ಕಾರ ನಾಲ್ಕು  ಖಾಸಗಿ  ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ಪಡೆದಿದೆ. ಹಿಮಾಚಲ ಪ್ರದೇಶಕ್ಕೂ ನಾವು ಹೆಲಿಕಾಪ್ಟರ್‌ಗಳನ್ನು ಕಳುಹಿಸಲಿದ್ದೇವೆ' ಎಂದು ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಜ್ಯದಾದ್ಯಂತ ಕಟ್ಟೆಚ್ಚರ 

ಈ ಮಧ್ಯೆ ಉತ್ತರ ಪ್ರದೇಶದ ಎಲ್ಲಾ ನದಿಗಳ ನೀರಿನ ಮಟ್ಟ ಅಪಾಯದ ಅಂಚಿಗೆ ತಲುಪಿದ್ದು, ರಾಜ್ಯದಾದ್ಯಂತ ಕಟ್ಟೆಚ್ಚರ ಘೋಷಿಸಲಾಗಿದೆ. ಇಲ್ಲಿ ಮಳೆಯ ಅನಾಹುತಕ್ಕೆ ನಾಲ್ವರು ಬಲಿಯಾಗಿದ್ದಾರೆ.ಮಹರಾಜ್‌ಗಂಜ್‌ನಲ್ಲಿ ಸಿಡಿಲು ಬಡಿದು ಮೂವರು ಮಕ್ಕಳು ಸತ್ತಿದ್ದು, ಮುಜಾಫರ್‌ನಗರದಲ್ಲಿ ಮನೆ ಕುಸಿದಿದ್ದರಿಂದ ಒಬ್ಬ ಮಹಿಳೆ ಸತ್ತಿದ್ದಾರೆ. ಇತರ ಆರು ಮಂದಿಗೆ ಗಾಯಗಳಾಗಿವೆ.ಪ್ರಮುಖ ನದಿಗಳಾದ ಗಂಗಾ, ಯಮುನಾ ಮತ್ತು ಶಾರದಾ ಮೈದುಂಬಿ ಹರಿಯುತ್ತಿರುವುದರಿಂದ ರಾಜ್ಯ ಸರ್ಕಾರವು ನದಿ ತೀರದ ಗ್ರಾಮಗಳಿಗೆ ಮುನ್ನೆಚ್ಚರಿಕೆ ನೀಡಿದೆ. ಯಮುನಾ ನದಿಯ ಹತಿನಕುಂಡ್ ಅಣೆಕಟ್ಟೆಯಿಂದ ಎಂಟು ಲಕ್ಷ ಕ್ಯೂಸೆಕ್ ನೀರನ್ನು, ಶಾರದಾ ನದಿಯ ಬನ್‌ಬಸಾ ಅಣೆಕಟೆಯಿಂದ ನಾಲ್ಕು ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ ಎಂದು ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ದೀಪಕ್ ಸಿಂಘಾಲ್ ತಿಳಿಸಿದ್ದಾರೆ.ಯಮುನಾ ನದಿಯಲ್ಲಿ ಪ್ರವಾಹ ಹೆಚ್ಚಾಗಿದ್ದರಿಂದ  ಅಧಿಕಾರಿಗಳು ಕರ್ನಲ್, ಪಾಣಿಪತ್, ಸೋನಿಪತ್ ಮತ್ತು ಫರಿದಾಬಾದ್ ಜಿಲ್ಲೆಗಳ ಜನರಿಗೆ ಮುನ್ನೆಚ್ಚರಿಕೆ ನೀಡಿದ್ದರು. ಈ ಜಿಲ್ಲೆಗಳಲ್ಲಿ ಅನೇಕ ಮನೆಗಳು ಜಲಾವೃತಗೊಂಡಿವೆ.

ಯಮುನೆಯ ಆರ್ಭಟ

ಯಮುನಾ ನದಿಯು ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ದೆಹಲಿಯೂ ಪ್ರವಾಹದ ಭೀತಿ ಎದುರಾಗಿದೆ. ನದಿಯಂಚಿನ ಗ್ರಾಮಗಳಲ್ಲಿ ನೆಲೆಸುತ್ತಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.  ಹರಿಯಾಣದಿಂದ 1.54 ಲಕ್ಷ ಕ್ಯುಸೆಕ್ ನೀರನ್ನು ಮಂಗಳವಾರ ಬೆಳಿಗ್ಗೆ ನದಿಗೆ ಹರಿ ಬಿಟ್ಟಿದ್ದು, ನೀರಿನ ಮಟ್ಟ ಬುಧವಾರ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಜಿಲ್ಲಾಡಳಿತವು, ನದಿ ತೀರದಲ್ಲಿ ವಾಸಿಸುತ್ತಿರುವವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುತ್ತಿದೆ. 20 ತಾತ್ಕಾಲಿಕ ಶಿಬಿರಗಳನ್ನು ನಿರ್ಮಿಸಿದ್ದು ಅಲ್ಲಿ ಜನರಿಗೆ ವೈದ್ಯಕೀಯ ಮತ್ತು ಆಹಾರದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸಿ.ಎಂ ವೀರಭದ್ರ ಸಿಂಗ್ ರಕ್ಷಣೆ

ಭಾರಿ ಮಳೆ ಮತ್ತು ಭೂ ಕುಸಿತದಿಂದಾಗಿ ರಸ್ತೆ ಸಂಪರ್ಕ ಕಡಿದುಹೋಗಿರುವುದರಿಂದ ಕಳೆದ 60 ತಾಸುಗಳಿಂದ ಬುಡಕಟ್ಟು ಪ್ರದೇಶವಾದ ಕಿನೌರ್ ಜಿಲ್ಲೆಯಲ್ಲಿ ಉಳಿದಿದ್ದ ಹಿಮಾಚಲಪ್ರದೇಶ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರನ್ನು ಕಾಂಗ್ರೆಸ್ ಪಕ್ಷವು ಕಳುಹಿಸಿದ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ಅವರ ಜತೆ ವಯಸ್ಸಾದ ಹಾಗೂ ಅನಾರೋಗ್ಯಪೀಡಿತ ಇತರರನ್ನೂ ಸಹ ಹೆಲಿಕಾಪ್ಟರ್‌ನಲ್ಲಿ ಸುರಕ್ಷಿತ ಸ್ಥಳ ರಾಂಪುರಕ್ಕೆ ಕರೆ ತರಲಾಗಿದೆ.ಮಾಹಿತಿಗೆ ಸಹಾಯವಾಣಿ

ಬೆಂಗಳೂರು: ಉತ್ತರಾಖಂಡದ ಪ್ರವಾಹದಲ್ಲಿ ಸಿಲುಕಿರುವ ರಾಜ್ಯದ ಪ್ರವಾಸಿಗರ ಕುರಿತ ಮಾಹಿತಿಗೆ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದು. ಉತ್ತರಾಖಂಡ 0135 2710334, ಕರ್ನಾಟಕ 080-1070

ತುರ್ತು ಪರಿಹಾರ ಕಾರ್ಯದ ಉಸ್ತುವಾರಿಗೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ನವೀನ್‌ರಾಜ್ ಸಿಂಗ್, ಹಿರಿಯ ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳ್ಕರ್, ಕೆಎಎಸ್ ಅಧಿಕಾರಿ ಕರಿಗೌಡ ಅವರು ಬುಧವಾರ ಬೆಳಿಗ್ಗೆ ಉತ್ತರಾಖಂಡಕ್ಕೆ ತೆರಳಲಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.