ಉದ್ಯೋಗ ಖಾತ್ರಿ: ರೂ.4.21 ಕೋಟಿ ಬಿಡುಗಡೆ
ಮಡಿಕೇರಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 10 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಕೋರಿ ಜಿಲ್ಲಾ ಪಂಚಾಯ್ತಿ ಸಲ್ಲಿಸಿದ್ದ ಕೋರಿಕೆ ಮೇರೆಗೆ ರಾಜ್ಯ ಸರ್ಕಾರ ಇದೀಗ 4.21 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಸದ್ಯದಲ್ಲಿಯೇ, ರಾಜ್ಯ ಸರ್ಕಾರ ಇನ್ನೂ ಐದು ಕೋಟಿ ರೂಪಾಯಿ ಬಿಡುಗಡೆ ಮಾಡುವ ನಿರೀಕ್ಷೆ ಯಿದೆ. ಈಗ ಬಿಡುಗಡೆಯಾಗಿರುವ 4.21 ಕೋಟಿ ರೂಪಾಯಿಗಳ ಪೈಕಿ ಕನಿಷ್ಠ ಶೇ 60ರಷ್ಟು ಅಂದರೆ, 2.40 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ ಬಗ್ಗೆ ಎಂಎಸ್ಐನಲ್ಲಿ ದಾಖಲಿಸಿದರೆ, ಇನ್ನೂ ನಾಲ್ಕೈದು ಕೋಟಿ ರೂಪಾಯಿ ಬಿಡುಗಡೆಯಾಗಲಿದೆ.
ಇದಲ್ಲದೆ, ಸುವರ್ಣ ಗ್ರಾಮೋದಯ ಯೋಜನೆ ಯಡಿ ರಾಜ್ಯ ಸರ್ಕಾರ ಜಿಲ್ಲೆಗೆ 1.20 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಈ ಯೋಜನೆಯಡಿ ಆಯ್ಕೆಯಾದ ಗ್ರಾಮಗಳಲ್ಲಿ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಗ್ರಾಮಾ ಭಿವೃದ್ಧಿ ಕಾಮಗಾರಿಗಳಿಗೆ ಬಳಕೆ ಮಾಡಿಕೊಳ್ಳುವಂತೆ ಸೂಚಿಸಿ ಈಗಾಗಲೇ ಜಿ.ಪಂ. ಎಂಜಿನಿಯರಿಂಗ್ ವಿಭಾಗಕ್ಕೆ ಬಿಡುಗಡೆ ಮಾಡಲಾಗಿದೆ ಎಂದು ಜಿ.ಪಂ. ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
19.5 ಕೋಟಿ ರೂಪಾಯಿ ಖರ್ಚು: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2010-11ನೇ ಸಾಲಿನಲ್ಲಿ ಕೊಡಗು ಜಿಲ್ಲೆಗೆ ಬಿಡುಗಡೆಯಾದ 2281.91 ಲಕ್ಷ ರೂಪಾಯಿಗಳ ಅನುದಾನದಲ್ಲಿ ಇದುವರೆಗೆ (ಮಾ. 17ರವರೆಗೆ) 1942.83 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಎಂಐಎಸ್ ದಾಖಲಾತಿಯಂತೆ ಮಡಿಕೇರಿ ತಾಲ್ಲೂಕಿನಲ್ಲಿ 1453, ಸೋಮವಾರಪೇಟೆ ತಾಲ್ಲೂ ಕಿನಲ್ಲಿ 1067 ಹಾಗೂ ವಿರಾಜಪೇಟೆ ತಾಲ್ಲೂಕಿನಲ್ಲಿ 1486 ಕಾಮಗಾರಿಗಳನ್ನು ಪ್ರಾರಂಭಿಸಲಾಗಿದ್ದು, ಒಟ್ಟು 4006 ಕಾಮಗಾರಿಗಳ ಕೆಲಸ ಪ್ರಗತಿಯಲ್ಲಿದೆ. ಈ ಪೈಕಿ ಮಡಿಕೇರಿ ತಾಲ್ಲೂಕಿನಲ್ಲಿ 859, ಸೋಮವಾರಪೇಟೆ ತಾಲ್ಲೂಕಿನಲ್ಲಿ 768 ಹಾಗೂ ವಿರಾಜಪೇಟೆ ತಾಲ್ಲೂಕಿನಲ್ಲಿ 1151 ಸೇರಿದಂತೆ ಒಟ್ಟು 2778 ಕಾಮಗಾರಿ ಪೂರ್ಣಗೊಂಡಿವೆ.
ಈ ಯೋಜನೆಯಡಿ ಕನ್ವರ್ಜನ್ಸಿಯಡಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿರುವ ಎಂಟು ಇಲಾಖೆಗಳು ಒಟ್ಟು 700 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಕೆಲಸ ಪ್ರಗತಿಯಲ್ಲಿದೆ. ಮಾರ್ಚ್ ಅಂತ್ಯಕ್ಕೆ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
2010-11ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಒಟ್ಟು 10790.17 ಲಕ್ಷ ರೂಪಾಯಿ ಕಾಮಗಾರಿ ಗುಚ್ಛ ರೂಪಿಸಲಾಗಿದೆ. ಈ ಯೋಜನೆಯಡಿ 53.41 ಕೋಟಿ ರೂಪಾಯಿಗಳ ಕಾರ್ಮಿಕ ಬಜೆಟ್ಗೆ ಸರ್ಕಾರ ಅನುಮೋದನೆ ನೀಡಿದ್ದು, ಫೆಬ್ರುವರಿ ಅಂತ್ಯಕ್ಕೆ 1942.83 ಲಕ್ಷ ರೂಪಾಯಿ ಖರ್ಚಾಗಿದೆ. ಈ ವರ್ಷ ಮಂಜೂರಾಗಿರುವ ಪೂರ್ಣ ಅನುದಾನವನ್ನು ಬಳಕೆ ಮಾಡುವಂತೆ ಎಲ್ಲ ಅನುಷ್ಠಾನಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
10 ಕೋಟಿ ಬಿಡುಗಡೆಗೆ ಮನವಿ: ಈ ಯೋಜನೆಯಡಿ 10 ಕೋಟಿ ರೂಪಾಯಿ ಬಿಡುಗಡೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಇದರಲ್ಲಿ ನಾಲ್ಕೈದು ಕೋಟಿ ರೂಪಾಯಿಗಳಷ್ಟು ಬಿಲ್ ಪಾವತಿ ಬಾಕಿ ಇತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ 4.21 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಕಳೆದ ವರ್ಷ ಇದೇ ವೇಳೆಗೆ 12 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಈ ವರ್ಷ ಅದೇ ವೇಳೆಗೆ ಸುಮಾರು 19.5 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.