ಶುಕ್ರವಾರ, ಮೇ 27, 2022
27 °C

ಎಲ್ಲಾ ಗುರುವಿಗಾಗಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಗನ ಕನಸನ್ನು ಈಡೇರಿಸುತ್ತಿರುವ ಸಂಭ್ರಮದಲ್ಲಿದ್ದರು ನಟ ಜಗ್ಗೇಶ್. ಚಿತ್ರರಂಗದಲ್ಲಿ ಮಗನಿಗೊಂದು ಬ್ರೇಕ್ ಸಿಗುವಂತಾಗಬೇಕು ಎಂಬುದು ಜಗ್ಗೇಶ್ ಹೆಬ್ಬಯಕೆ ಕೂಡ. ಅದಕ್ಕಾಗಿಯೇ ಅವರು ನಿರ್ದೇಶನದ ಕ್ಯಾಪ್ ತೊಡಲು ಸಿದ್ಧರಾಗಿದ್ದು.ತಮ್ಮ ಚೊಚ್ಚಿಲ ನಿರ್ದೇಶನದ ಚಿತ್ರ `ಗುರು~ವಿನ ಮುಹೂರ್ತವನ್ನು ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಆಯೋಜಿಸಿದ್ದರು ಜಗ್ಗೇಶ್. ಚಿತ್ರಕ್ಕೆ ಕ್ಲಾಪ್ ಮಾಡಿದ್ದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ. ಜೊತೆಗೆ ಅಲ್ಲಿ ಗೃಹ ಸಚಿವ ಅಶೋಕ್ ಸೇರಿದಂತೆ ಶಿವರಾಜ್‌ಕುಮಾರ್, ಗಣೇಶ್, ಶ್ರೀನಗರ ಕಿಟ್ಟಿ, ಯಶ್, ತಾರಾ, ಸುಧಾರಾಣಿ ಮುಂತಾದ ತಾರೆಯರ ದಂಡೂ ನೆರೆದಿತ್ತು.ಸುದ್ದಿಗೋಷ್ಠಿಯಲ್ಲಿ ಮಾತಿಗಿಳಿದ ಜಗ್ಗೇಶ್ ತಮ್ಮ 30 ವರ್ಷದ ಬಣ್ಣದ ಲೋಕದ ಬದುಕಿನ ಕ್ಷಣಗಳನ್ನು ಕೆದಕತೊಡಗಿದರು. ಆರಂಭದ ದಿನಗಳಲ್ಲಿ ಅವರು ಅನುಭವಿಸಿದ ನೋವು, ಅವಮಾನ, ಹತಾಶೆಗಳ ನೆನಪು ಅವರ ಕಣ್ಣುಗಳನ್ನು ತೇವಗೊಳಿಸಿತು.ಸಹಾಯಕ ನಿರ್ದೇಶಕನಾಗಿ ಬದುಕು ಕಂಡುಕೊಳ್ಳುವ ಬಯಕೆಯೊಂದಿಗೆ ಚಿತ್ರರಂಗಕ್ಕೆ ಕಾಲಿಟ್ಟ ತಾವು ಕೆಲಸಕ್ಕಾಗಿ ಹುಡುಕಾಡಿದ ದಿನಗಳನ್ನು ನೆನೆದು ಭಾವುಕರಾದರು. ಇಷ್ಟೆಲ್ಲಾ ಸಂಕಟಗಳನ್ನು ಅನುಭವಿಸಿದ್ದರೂ 10 ರೂಪಾಯಿಗಾಗಿ ಅಕ್ಕನ ಬಳಿ ಕೈಚಾಚಬೇಕಾಗಿತ್ತು ಎನ್ನುತ್ತಿದ್ದಂತೆ ಅವರ ಕಣ್ಣ ಹನಿ ಕೆನ್ನೆ ಮೇಲೆ ಜಾರಿತು.ಮಾತು ಮುಂದುವರಿಸಲಾಗದೆ ಮೈಕನ್ನು ನಟ ಸುದರ್ಶನ್ ಕೈಗೆ ಹಸ್ತಾಂತರಿಸಿದರು.

`ನಾನು ಸಂಕಷ್ಟದಲ್ಲಿದ್ದ ಹಲವು ಬಾರಿ ನೆರವಾಗಿದ್ದು ಜಗ್ಗೇಶ್~ ಎಂದು ಸ್ಮರಿಸಿಕೊಂಡರು ಸುದರ್ಶನ್. ಅವರು ಸಹಾನುಭೂತಿ ಮತ್ತು ಸಹಾಯ ನೀಡುವ ಉದಾರ ವ್ಯಕ್ತಿ ಎಂದು ಜಗ್ಗೇಶ್ ಬಗ್ಗೆ ಹೊಗಳಿಕೆ ಮಳೆ ಸುರಿಸಿದರು. ಚಿತ್ರದಲ್ಲಿ ಅವರು `ಗುರು~ವಿಗೆ ತಂದೆಯಾಗಿ ನಟಿಸುತ್ತಿದ್ದಾರೆ. ನಿಜ ಬದುಕಿನಲ್ಲಿ ನಾನು ಜಗ್ಗೇಶ್‌ಗೆ ತಂದೆಯಿದ್ದಂತೆ ಎಂದರು.`ಗುರು~ ಆ್ಯಕ್ಷನ್ ಕಥೆಯುಳ್ಳ ಚಿತ್ರವಾದ್ದರಿಂದ ನಾಯಕ ನಟ ಗುರುರಾಜ್ ಅದಕ್ಕೆ ತಕ್ಕಂತೆ ದೇಹಾಕಾರ ಹೊಂದಲು ಬ್ಯಾಂಕಾಕ್ ಮತ್ತು ಥಾಯ್ಲೆಂಡ್‌ಗಳಲ್ಲಿ ತರಬೇತಿ ಪಡೆದು ಬಂದಿದ್ದಾರೆ. ಅಲ್ಲಿ ಅವರು ಮಾರ್ಷಿಯಲ್ ಆರ್ಟ್ಸ್ ಅನ್ನೂ ಕಲಿತಿದ್ದಾರಂತೆ. ತಂದೆ ತಾಯಿಯ ನಿರೀಕ್ಷೆಗಳನ್ನು ಪೂರೈಸುವ ಭರವಸೆ ಅವರದು.ನಾಯಕಿ ರಶ್ಮಿಗೌತಮ್ ತೆಲುಗು ಮೂಲದವರು. ತೆಲುಗು ಧಾರಾವಾಹಿಗಳು ಮತ್ತು ತಮಿಳಿನ ಒಂದು ಸಿನಿಮಾದಲ್ಲಿ ನಟಿಸಿರುವ ಅವರಿಗಿದು ಕನ್ನಡದಲ್ಲಿ ಮೊದಲ ಚಿತ್ರ.

ಮಗನ ಮೊದಲ ಚಿತ್ರವನ್ನು ತಮ್ಮ ಬ್ಯಾನರ್‌ನಲ್ಲಿಯೇ ನಿರ್ಮಿಸಬೇಕು ಎಂದುಕೊಂಡಿದ್ದ ಚಿತ್ರದ ನಿರ್ಮಾಪಕಿ ಪರಿಮಳಾ ಜಗ್ಗೇಶ್ ಪತಿಯ ಮೊದಲ ನಿರ್ದೇಶನದ ಚಿತ್ರವನ್ನು ನಿರ್ಮಿಸುತ್ತಿರುವ ಖುಷಿಯಲ್ಲಿದ್ದರು.ನಟ ಅಭಿಜಿತ್, ಶೈಲಶ್ರೀ, ಛಾಯಾಗ್ರಾಹಕ ರಮೇಶ್ ಬಾಬು, ಸಂಗೀತ ನಿರ್ದೇಶಕ ವಿನಯ ಚಂದ್ರ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.