ಭಾನುವಾರ, ಜೂಲೈ 12, 2020
29 °C

ಎಸ್‌ಎಸ್‌ಎಲ್‌ಸಿ ಫಲಿತಾಂಶ ವೃದ್ಧಿಗೆ ಹಾಸ್ಟೆಲ್ ದತ್ತು!

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಕೋಲಾರ: ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ದತ್ತು ಪಡೆದಿರುವ ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ, ವಿದ್ಯಾರ್ಥಿ ನಿಲಯಗಳಲ್ಲೂ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಉತ್ತಮಪಡಿಸುವ ಉದ್ದೇಶದಿಂದ, ಜಿಲ್ಲಾ ಮಟ್ಟದ ಅಧಿಕಾರಿಗಳು ತಲಾ ಒಂದು ವಿದ್ಯಾರ್ಥಿ ನಿಲಯವನ್ನು ದತ್ತು ಪಡೆದು ಕಾರ್ಯ ನಿರ್ವಹಿಸುವ ವಿನೂತನ ಪ್ರಯತ್ನವೊಂದಕ್ಕೆ ಚಾಲನೆ ನೀಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಈ ಪ್ರಯತ್ನ ಜಾರಿಗೊಳ್ಳಲಿದೆ.ಎಲ್ಲವೂ ಅವರು ಅಂದುಕೊಂಡಂತೆ ಅಧಿಕಾರಿಗಳು ಉತ್ಸಾಹದಿಂದ ಮುಂದೆ ಬಂದರೆ, ಮೂಲ ಸೌಕರ್ಯಗಳಿಂದಷ್ಟೆ ಅಲ್ಲದೆ, ಕಳಪೆ ಫಲಿತಾಂಶದಿಂದಲೂ ಬಳಲುತ್ತಿರುವ ವಿದ್ಯಾರ್ಥಿ ನಿಲಯಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ಮೂಡಲಿದೆ. ‘ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಸ್ಟೆಲ್ ದತ್ತು ಪಡೆಯಬೇಕು. ಆದರೆ ಅದು ಕಡ್ಡಾಯವಲ್ಲ. ಯಾರಿಗೂ ಒತ್ತಾಯವಿಲ್ಲ. ಈ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಉತ್ಸಾಹದಿಂದ ಮುಂಬರುವ ಅಧಿಕಾರಿಗಳಿಗೆ ಆದ್ಯತೆ ನೀಡಲಾಗುವುದು. ಫಲಿತಾಂಶವನ್ನು ಈ ಬಾರಿ ಉತ್ತಪಡಿಸಲು ಅಧಿಕಾರಿಗಳನ್ನು ಜಿಲ್ಲಾಡಳಿತ ಕೋರಲಿದೆ ಎಂದು ಡಿಸಿ ಶುಕ್ರವಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.‘ಜಿಲ್ಲೆಯಲ್ಲಿರುವ ಬಹುತೇಕ ಹಾಸ್ಟೆಲ್‌ಗಳಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ಎಲ್ಲೆಡೆ ವಾರ್ಡನ್‌ಗಳಿಲ್ಲ. ಕೆಲವೆಡೆ ಇದ್ದರೂ ಕಾರ್ಯನಿರ್ವಹಿಸುತ್ತಿಲ್ಲ. ವಿದ್ಯಾರ್ಥಿಗಳಲ್ಲದವರ ಗೂಂಡಾಗಿರಿಯೂ ನಡೆಯತ್ತಿರುವುದು ಗಮನಕ್ಕೆ ಬಂದಿದೆ. ಇವೂ ಸೇರಿದಂತೆ ಹಾಸ್ಟೆಲ್‌ಗಳಲ್ಲಿ ಹಲವು ಸಮಸ್ಯೆಗಳಿವೆ. ಅವುಗಳನ್ನು ನೀಗಿಸುತ್ತಲೇ ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮಗೊಳಿಸುವ ಜಂಟಿ ಯತ್ನದ ಪೂರ್ವಭಾವಿಯಾಗಿ ದತ್ತು ಪರಿಕಲ್ಪನೆಯನ್ನು ರೂಪಿಸಿ ಜಾರಿಗೆ ತರಲಾಗುತ್ತಿದೆ. ಮೂಲಸೌಕರ್ಯಗಳ ಕೊರತೆ ನೀಗಿಸುವುದು ಮತ್ತು ಫಲಿತಾಂಶವನ್ನು ಉತ್ತಮಪಡಿಸುವುದು- ಈ ಎರಡೂ ನೆಲೆಯಲ್ಲಿಯೂ ಹಾಸ್ಟೆಲ್‌ಗಳನ್ನು ವಿಶೇಷವಾಗಿ ಪರಿಭಾವಿಸಲಾಗಿದೆ’ ಎಂದು ಅವರು ತಿಳಿಸಿದರು.ಸಭೆ: ಹಾಸ್ಟೆಲ್ ದತ್ತು ಪಡೆಯುವ ವಿಚಾರಕ್ಕೆ ಸಂಬಂಧಿಸದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಶೀಘ್ರವೇ ನಡೆಸಲಾಗುವುದು. ಪರೀಕ್ಷೆಗೆ ಇನ್ನು 69 ದಿನ ಮಾತ್ರ ಉಳಿದಿದೆ. ಅಷ್ಟರಲ್ಲಿ ಹಾಸ್ಟೆಲ್‌ಗಳಲ್ಲಿ ದತ್ತು ಯೋಜನೆ ಜಾರಿಗೆ ಬಂದರೆ ಫಲಿತಾಂಶವನ್ನು ಉತ್ತಮಗೊಳಿಸಲು ಸಾಧ್ಯವಿದೆ ಎಂಬ ಉದ್ದೇಶ ಹೇಗೆ ಈಡೇರುವುದೋ ಕಾದು ನೋಡಬೇಕಿದೆ ಎಂದರು.ವಾರ್ಡನ್ ಸಭೆ: ಜಿಲ್ಲಾ ಪಂಚಾಯಿತಿ ಸಿಇಒ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆಗೆ ವಾರ್ಡನ್‌ಗಳ ಸಭೆಯನ್ನೂ ಕೆಲವೇ ದಿನಗಳ ಹಿಂದೆ ನಡೆಸಲಾಗಿದೆ. ಇರುವ ಸೌಕರ್ಯಗಳಲ್ಲೆ ಫಲಿತಾಂಶ ಹೆಚ್ಚಿಸಲು ವಿಶೇಷ ಕಾಳಜಿಯಿಂದ ಕಾರ್ಯನಿರ್ವಹಿಸಬೇಕು. ವಿದ್ಯಾರ್ಥಿಗಳ ಸಮಸ್ಯೆ ಅರಿತು ಹೆಚ್ಚು ಕಾಲ ಹಾಸ್ಟೆಲ್‌ಗಳಲ್ಲೆ ಇರಬೇಕು ಎಂದು ಅವರೆಲ್ಲರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.ನೇಮಕ:  ಹಾಸ್ಟೆಲ್‌ಗಳ ಅವ್ಯವಸ್ಥೆ ನೀಗಿಸುವ ಮೊದಲ ಪ್ರಯತ್ನವಾಗಿ, ನಿವೃತ್ತ ಅಧಿಕಾರಿಗಳನ್ನು ವಾರ್ಡನ್ ಆಗಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುವುದು. ನಂತರ ಅವರಿಗೆ ಹಾಸ್ಟೆಲ್ ನಿರ್ವಹಣೆ ಜೊತೆಗೆ ಶೈಕ್ಷಣಿಕ ಜವಾಬ್ದಾರಿಗಳನ್ನೂ ನೀಡಲಾಗುವುದು. ಒಟ್ಟಾರೆಯಾಗಿ ಶಾಲೆಗಳು ಮತ್ತು ಹಾಸ್ಟೆಲ್‌ಗಳಲ್ಲಿ ಫಲಿತಾಂಶ ಉತ್ತಮಪಡಿಸುವುದು ಜಿಲ್ಲಾಡಳಿತದ ಗುರಿಯಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.ಎಸ್‌ಎಸ್‌ಎಲ್‌ಸಿ ಫಲಿತಾಂಶ ಉತ್ತಮಗೊಳಿಸುವ ಏಕೈಕ ಉದ್ದೇಶದಿಂದ ಸರ್ಕಾರಿ ಶಾಲೆಯನ್ನು ದತ್ತು ಪಡೆದಿರುವೆ. ದತ್ತು ಪಡೆಯುವ ವಿಚಾರದಲ್ಲಿ ಇತರೆ ಅಧಿಕಾರಿಗಳಿಗೆ ಮೇಲ್ಪಂಕ್ತಿ ಹಾಕಿಕೊಡುವ ಉದ್ದೇಶವೂ ಈ ಪ್ರಯತ್ನದ ಹಿಂದೆ ಇದೆ. ಈ ಬಾರಿ ಶೇ 100 ರಷ್ಟಲ್ಲದಿದ್ದರೂ, ಜಿಲ್ಲಾವಾರು ಫಲಿತಾಂಶ ಪಟ್ಟಿಯಲ್ಲಿ ಕೋಲಾರವನ್ನು ಸಾಧ್ಯವಾದಷ್ಟು ಮಟ್ಟಿಗೆ ಮೇಲಕ್ಕೆ ತರಬಲ್ಲವೆಂಬ ಭರವಸೆಯಂತೂ ಇದೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.