ಮಂಗಳವಾರ, ಏಪ್ರಿಲ್ 20, 2021
32 °C

ಏಕಾಗ್ರತೆ, ಮಿದುಳು ಆಯಸ್ಸು ಹೆಚ್ಚಿಸುವ 7 ಗಂಟೆ ಸುಖನಿದ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ರಾತ್ರಿ ಸಮಯದಲ್ಲಿ ನಿಗದಿತವಾಗಿ ಏಳು ಗಂಟೆಗಳ ಸುಖ ನಿದ್ರೆ ಮಾಡಿ, ನಿಮ್ಮ ಮಿದುಳಿನ ಆಯಸ್ಸನ್ನು ಎರಡು ವರ್ಷ ಹೆಚ್ಚಿಸಿಕೊಳ್ಳಿ...!ಇದು ಜಾಹೀರಾತಲ್ಲ. ಅಮೆರಿಕದ ಸಂಶೋಧಕರ ತಂಡವೊಂದು ನಡೆಸಿದ ಪ್ರಯೋಗದಿಂದ ಹೊರ ಬಂದ ಫಲಿತಾಂಶ!



ಅಮೆರಿಕದ ಸಂಶೋಧಕರ ತಂಡವೊಂದು 70ರ ವೃದ್ಧೆಯರ ಮೇಲೆ ಈ ಸಂಶೋಧನೆ ನಡೆಸಿದೆ. ಆ ಪ್ರಕಾರ  ವೃದ್ದೆಯೊಬ್ಬರು ರಾತ್ರಿವೇಳೆ ಏಳು ಗಂಟೆಗಳ ಕಾಲ ಸುಖವಾಗಿ ನಿದ್ರಿಸಿದರೆ, ಅವರ ಜ್ಞಾಪಕ ಶಕ್ತಿ ಹಾಗೂ ಏಕಾಗ್ರತೆಯಲ್ಲಿ ಏರಿಕೆಯಾಗಿದೆ. ಒಂಬತ್ತು ಗಂಟೆ ನಿದ್ದೆ ಮಾಡಿದ ವೃದ್ಧೆಯ ಮಿದುಳಿಗಿಂತ ಹೆಚ್ಚು ಕ್ರಿಯಾಶೀಲವಾಗಿ ರುವುದನ್ನು ಸಂಶೋಧಕರು ದಾಖಲಿಸಿರುವುದಾಗಿ  `ಡೇಲಿ ಮೇಲ್~ ವರದಿ ಮಾಡಿದೆ.



`ಅತೀ ನಿದ್ದೆ ಮಾಡುವವರು ಹಾಗೂ ನಿದ್ದೆಗೆಡುವವರಿಗಿಂತ ರಾತ್ರಿ ವೇಳೆ ಏಳು ಗಂಟೆ ನಿದ್ರೆ ಮಾಡುವವರ ಮಿದುಳು ಕ್ರಿಯಾಶೀಲವಾಗಿದ್ದು, ಅವರಲ್ಲಿ ಏಕಾಗ್ರತೆಯೂ ಹೆಚ್ಚಾಗಿರುತ್ತದೆ. ಮಾತ್ರವಲ್ಲ, ಜೊತೆಗೆ ಎರಡು ವರ್ಷ ಆಯಸ್ಸು ಕೂಡ ಹೆಚ್ಚಾಗುತ್ತದೆ~ ಎಂಬುದನ್ನು ವಿಜ್ಞಾನಿಗಳು ಸಂಶೋಧನೆಯ ಫಲಿತಾಂಶದಿಂದ ಬಲವಾಗಿ ನಂಬಿದ್ದಾರೆ.



ಇದಕ್ಕೂ ಮುನ್ನ ನಡೆಸಿದ ಸಂಶೋಧನೆಗಳಲ್ಲಿ `ಏಳು ಗಂಟೆಗಿಂತ ಹೆಚ್ಚು ಕಾಲ ನಿದ್ದೆ ಮಾಡಿದರೆ ತೂಕ ಹೆಚ್ಚಾಗುವ ಜೊತೆಗೆ ಹೃದ್ರೋಗ ಸಮಸ್ಯೆಗಳು ಹಾಗೂ ಮಧುಮೇಹ ರೋಗಕ್ಕೂ ಕಾರಣವಾಗುತ್ತದೆ~ ಎಂದು ತಿಳಿದುಬಂದಿತ್ತು. ಆದರೆ  ಈ ಹೊಸ ಸಂಶೋಧನೆ ಮಾತ್ರ ಏಕಾಗ್ರತೆ ಸಮಸ್ಯೆ ಕುರಿತು ಬೆಳಕು ಚೆಲ್ಲಿದೆ.



ಈ ಸಂಶೋಧನೆಯನ್ನು ಕೆನಡಾದ ವ್ಯಾಂಕೊವರ್‌ನಲ್ಲಿ ಇತ್ತೀಚೆಗೆ ನಡೆದ ಅಲ್ಜಮೈರ್ ಸಂಘದ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಡಿಸಲಾಗಿದೆ. ಐದು ವರ್ಷಗಳ ಕಾಲ ನಡೆಸಿದ ಈ ಅಧ್ಯಯನದಲ್ಲಿ  70ರ ಹರೆಯದ 15ಸಾವಿರ ಮಹಿಳೆಯರು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.