ಶುಕ್ರವಾರ, ಜೂಲೈ 3, 2020
29 °C

ಒಕ್ಕೂಟ ವ್ಯವಸ್ಥೆಗೆ ಯುಪಿಎ ಕಂಟಕ: ಅಡ್ವಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಕ್ಕೂಟ ವ್ಯವಸ್ಥೆಗೆ ಯುಪಿಎ ಕಂಟಕ: ಅಡ್ವಾಣಿ

ನವದೆಹಲಿ (ಪಿಟಿಐ): ಕೇಂದ್ರ ಯುಪಿಎ ಸರ್ಕಾರ ಭಾರತ ಒಕ್ಕೂಟ ವ್ಯವಸ್ಥೆಗೆ ಕಂಟಕವಾಗಿದೆ ಎಂದು ಬಿಜೆಪಿ ಹಿರಿಯ ಧುರೀಣ ಎಲ್.ಕೆ. ಅಡ್ವಾಣಿ ಅವರು ಆರೋಪಿಸಿದ್ದಾರೆ. ರಾಜ್ಯಗಳ ಕೂಗು ಆಲಿಸಲು ಅಂತರರಾಜ್ಯ ಮಂಡಳಿಗೆ ಪುನಶ್ಚೇತನ ನೀಡುವಂತೆಯೂ ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.ಎನ್‌ಡಿಎ ಅಧಿಕಾರವಧಿಯಲ್ಲಿ ಕ್ರಿಯಾಶೀಲವಾಗಿದ್ದ ಅಂತರರಾಜ್ಯ ಮಂಡಳಿ ನಂತರದಲ್ಲಿ ನಿಷ್ಕ್ರಿಯವಾಗಿದೆ. 2006ರ ನಂತರ ಒಮ್ಮೆಯೂ ಮಂಡಳಿಯ ಸಭೆ ನಡೆದಿಲ್ಲ ಎಂದು ಅವರು ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ.ಇದಕ್ಕೆ ಪೂರಕವಾಗಿ ಲಖನೌದಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಕೂಡ ಈ ಕುರಿತು ನಿರ್ಣಯ ಅಂಗೀಕರಿಸಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮುಂದಿಟ್ಟ ಪ್ರಸ್ತಾವವನ್ನು ಕಾರ್ಯಕಾರಿಣಿ ಅವಿರೋಧವಾಗಿ ಅಂಗೀಕರಿಸಿತು.ಪ್ರಾದೇಶಿಕ ಮತ್ತು ಅಂತರ ರಾಜ್ಯ ಸಮಸ್ಯೆ ಕುರಿತು ಚರ್ಚಿಸಲು ಅಂತರರಾಜ್ಯ ಮಂಡಳಿ ಅಗತ್ಯ ಎಂಬ ಸಂವಿಧಾನದ 263 ಕಲಂ ಆಶಯದಂತೆ 1990ರಲ್ಲಿ ಮಂಡಳಿಯನ್ನು ರಚಿಸಲಾಗಿತ್ತು. ಆದರೆ, ಅದು ಕ್ರಿಯಾಶೀಲವಾದದ್ದು 1998ರ ಎನ್‌ಡಿಎ ಅಧಿಕಾರವಧಿಯಲ್ಲಿ ಎಂದು ಅಡ್ವಾಣಿ ಹೇಳಿದ್ದಾರೆ. ತಾವು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಪ್ರತಿವರ್ಷ ತಪ್ಪದೆ ಮಂಡಳಿಯ ಸಭೆ ನಡೆಸಲಾಗಿತ್ತು. ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೂ ಸದಸ್ಯರಾಗಿರುವ ಮಂಡಳಿ, ಸರ್ಕಾರಿಯಾ ಆಯೋಗದ 247 ಶಿಫಾರಸುಗಳಿಗೆ ಅನುಮೋದನೆ ನೀಡಿತ್ತು ಎಂಬ ವಿಷಯವನ್ನು ಅವರು ಪ್ರಸ್ತಾಪಿಸಿದ್ದಾರೆ.ಅಂತರ ರಾಜ್ಯ ಸಮಸ್ಯೆ ಮತ್ತು ಪ್ರಾದೇಶಿಕ ಕೂಗುಗಳನ್ನು ಆಲಿಸಲು ತುರ್ತಾಗಿ ಅಂತರರಾಜ್ಯ ಮಂಡಳಿಗೆ ಪುನಶ್ಚೇತನ ನೀಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.ಮಲತಾಯಿ ಧೋರಣೆ:  ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್‌ಗೆ ನಿಗದಿಯಾಗಿದ್ದ ಸೀಮೆಎಣ್ಣೆಯ ಪಾಲನ್ನು ಕಡಿತಗೊಳಿಸಲಾಗಿದೆ. ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ರಾಜ್ಯಪಾಲರು ಕೇಂದ್ರಕ್ಕೆ ಶಿಫಾರಸು ಮಾಡಿದ್ದರು ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.