ಸೋಮವಾರ, ಮೇ 17, 2021
21 °C

ಕತ್ತಲ ಕೂಪದಲ್ಲಿ ಕೋಲಾರ ರಸ್ತೆಗಳು

ಕೆ.ನರಸಿಂಹಮೂರ್ತಿ/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ಗವ್ವೆನ್ನುವ ಕತ್ತಲು, ಕಳ್ಳರ ಭಯ, ದೀಪವಿಲ್ಲದೆ ಬರುವ ವಾಹನಗಳಿಂದ ಅಪಘಾತದ ಆತಂಕ, ಹಳ್ಳಗಳ ಸಮೀಪ ಬೀಳುವ ಅನಿರೀಕ್ಷಿತ ಸನ್ನಿವೇಶ. ಇದು ನಗರದ ಪ್ರಮುಖವಾದ, ಆದರೆ ಬೀದಿದೀಪಗಳೇ ಇಲ್ಲದ ಕೆಲವು ರಸ್ತೆಗಳಲ್ಲಿ ರಾತ್ರಿ ವೇಳೆ ಸಂಚರಿಸುವರ ನಿತ್ಯದ ಸಂಕಟ. ಹತ್ತಾರು ತಿಂಗಳಿಂದ ನಗರದ ಕೆಲವು ಪ್ರಮುಖ ರಸ್ತೆಗಳಲ್ಲಿ ಬೀದಿದೀಪಗಳೇ ಇಲ್ಲ. ಈ ಸಮಸ್ಯೆ ಜೊತೆಗೆ, ಕೆಟ್ಟಿರುವ ಬೀದಿ ದೀಪಗಳ ರಿಪೇರಿ ಕೆಲಸವೂ ಕೂಡ ಸರಿಯಾಗಿ ನಡೆಯುತ್ತಿಲ್ಲ.ನಗರದ ಗಾಂಧಿವನದಿಂದ ಜಿಲ್ಲಾ ಆಸ್ಪತ್ರೆವರೆಗಿನ ಜೋಡಿ ರಸ್ತೆಯಲ್ಲಿ ಹತ್ತಾರು ತಿಂಗಳಿಂದ ಬೀದಿ ದೀಪ ಗಳೇ ಇಲ್ಲ. ವಿಪರ್ಯಾಸವೆಂದರೆ ಗಾಂಧಿವನದ ಒಂದು ಬದಿಯಲ್ಲಿರುವ ನಗರ ಪೊಲೀಸ್‌ಠಾಣೆ ಮುಂದೆಯೇ ಬೀದಿ ದೀಪವಿಲ್ಲ. ಅಲ್ಲಿಂದ ರಸ್ತೆಯುದ್ದಕ್ಕೂ ಶುರು ವಾಗುವ ಗವ್ವೆನ್ನುವ ಕತ್ತಲು ಜಿಲ್ಲಾ ಆಸ್ಪತ್ರೆವರೆಗೂ ಪಾದಚಾರಿಗಳನ್ನು, ದ್ವಿಚಕ್ರ ವಾಹನ ಸವಾರರನ್ನು ತಬ್ಬಿಬ್ಬು ಮಾಡುತ್ತದೆ. ವಾಹನಗಳ ಕಣ್ಣುಕುಕ್ಕುವ ಬೆಳಕು ಕೂಡ ಗಾಭರಿ ಮೂಡಿಸುತ್ತವೆ. ಇಲ್ಲಿ ಬೆಸ್ಕಾಂ ಕಚೇರಿ ಆವರಣದ ದೀಪಗಳಿಲ್ಲದೇ ಹೋಗಿದ್ದರೆ ಸನ್ನಿವೇಶ ಇನ್ನಷ್ಟು ಭೀಕರವಾಗಿರುತ್ತಿತ್ತು.ನಗರ ಪೊಲೀಸ್‌ಠಾಣೆ ಮುಂಭಾಗದಿಂದ ಹೊರಟು ಎಡಕ್ಕೆ ತಿರುಗಿ ಬಂಗಾರಪೇಟೆ ರಸ್ತೆಗೆ ತಲುಪಲು ಇರುವ ರಸ್ತೆಯುದ್ದಕ್ಕೂ ಬೀದಿದೀಪಗಳಿಲ್ಲ. ಅಲ್ಲಿಯೂ ಕತ್ತಲು ಆವರಿಸಿರುತ್ತದೆ. ಆ ರಸ್ತೆಯಲ್ಲಿ ಹಳ್ಳಕೊಳ್ಳಗಳೂ ಹೆಚ್ಚಿರುವುದರಿಂದ ಸಂಚರಿಸುವುದು ಕಷ್ಟ.ಮತ್ತೊಂದೆಡೆ, ಕೋಲಾರಮ್ಮ ದೇವಾಲಯದ ಮುಂಭಾಗದಿಂದ ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕ ಕಲ್ಪಿಸುವ ವೃತ್ತದವರೆಗೂ ಗವ್ವೆನ್ನುವ ಕತ್ತಲು ಸ್ವಾಗತಿಸುತ್ತದೆ. ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದೊಳಗಿನ ದೀಪವನ್ನು ಹೊರತುಪಡಿಸಿದರೆ ಪೂರ್ತಿ ಕತ್ತಲು ಆವರಿಸಿರುತ್ತದೆ. ಮುಳಬಾಗಲು ಕಡೆಯಿಂದ ಬಸ್‌ಗಳಲ್ಲಿ ಬಂದು ಆ ರಸ್ತೆ ಮೂಲಕ ಕೋಟೆ ಬಡಾವಣೆಗೆ ನಡೆದು ಬರುವವರಿಗೆ ಭಯಾನಕ ಅನುಭವ ಕಟ್ಟಿಟ್ಟ ಬುತ್ತಿ.ಶ್ರೀನಿವಾಸಪುರ ಟೋಲ್‌ಗೇಟ್ ವೃತ್ತದಿಂದ ಅರಳ್ಳಿ ಗೇಟ್‌ವರೆಗಿನ ಬೀದಿದೀಪಗಳಲ್ಲಿ ಹಲವು ಕೆಟ್ಟು ತಿಂಗಳು ಗಳಾಗಿವೆ. ಆದರೆ ಅವುಗಳನ್ನು ರಿಪೇರಿ ಮಾಡಿಲ್ಲ. ಅರಳ್ಳಿ ಗೇಟ್ ಸಮೀಪದಲ್ಲೆ ಮೂರುದೀಪದ ಕಂಬದಲ್ಲಿ ಎರಡು ದೀಪಗಳು ಸದಾಕಾಲ ಬೆಳಗುತ್ತಿರುತ್ತವೆ.ಹಲವು ತಿಂಗಳಿಂದ  ನಗರಸಭೆ ಸದಸ್ಯರ ಗುಂಪು ಗಾರಿಕೆ, ಬಣ ರಾಜಕಾರಣ ಮತ್ತು ಆಂತರಿಕ ಕಲಹಗಳೇ ಮೇಲುಗೈಯಾಗಿ ನಗರಸಭೆಗೆ ಗ್ರಹಣ ಹಿಡಿದಂತಾಗಿದೆ. ಬೀದಿ ದೀಪಗಳಿಲ್ಲದ ರಸ್ತೆಗಳ ಕಡೆಗೆ ನಗರಸಭೆ ಗಮನವನ್ನೇ ಹರಿಸಿಲ್ಲ ಎನ್ನುತ್ತಾರೆ ಕೋಟೆ ಬಡಾವಣೆ ನಿವಾಸಿ ರವೀಂದ್ರನಾಥ್. ಬೆಸ್ಕಾಂ ಆಗಲಿ, ನಗರಸಭೆಯಾಗಲೀ ಬೀದಿ ದೀಪಗಳ ನಿರ್ವಹಣೆ ವಿಚಾರದಲ್ಲಿ ಗುತ್ತಿಗೆದಾರರೊಡನೆ ಕಟ್ಟುನಿಟ್ಟಾಗಿ ವರ್ತಿಸುವುದು ಅಗತ್ಯ ಎಂಬುದು ಅವರ ಆಗ್ರಹ.ಬೀದಿದೀಪ ಕೆಟ್ಟರೆ ನಗರಸಭೆಗೆ ಹೋಗಿ ದೂರು  ದಾಖಲಿಸಿ ಹಲವು ದಿನಗಳಾದರೂ ರಿಪೇರಿ ಮಾಡಲು ಸಿಬ್ಬಂದಿಯೇ ಬರುವುದಿಲ್ಲ. ಬಲ್ಬ್‌ಗಳು ಕೆಟ್ಟರಂತೂ ಸ್ವಂತ ಕಾಸಿಂದ ಹೊಸದನ್ನು ಹಾಕಿಸುವುದು ಅನಿವಾರ್ಯವಾಗಿದೆ. ಕೋಲಾರಮ್ಮ ದೇವಾಲಯಕ್ಕೆ ಸಂಜೆ ವೇಳೆ ಬರುವುದು ಕಷ್ಟವಾಗಿದೆ ಎಂಬುದು ಭಕ್ತರಾದ ಗಂಗಮ್ಮ, ತುಳಸಮ್ಮ, ಚೆನ್ನಪ್ಪ ನುಡಿ.ಕೋಟಿಗಳ ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿಯೇನೋ ನಡೆಯುತ್ತಿದೆ. ಆದರೆ ಬೀದಿದೀಪಗಲ್ಲದ ರಸ್ತೆಗಳಲ್ಲಿ ಬೆಳಕು ಹರಿಸುವವರು ಯಾರು ಎಂಬುದು ಪ್ರಶ್ನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.