ಶುಕ್ರವಾರ, ಫೆಬ್ರವರಿ 26, 2021
22 °C

ಕಾಯಕಲ್ಪಕ್ಕೆ ಕಾದಿವೆ ವಸತಿಗೃಹ

ಪ್ರಜಾವಾಣಿ ವಾರ್ತೆ ನಾಗೇಂದ್ರ ಖಾರ್ವಿ Updated:

ಅಕ್ಷರ ಗಾತ್ರ : | |

ಕಾಯಕಲ್ಪಕ್ಕೆ ಕಾದಿವೆ ವಸತಿಗೃಹ

ಕಾರವಾರ: ಹೆಸರಿಗೆ ಕೇಂದ್ರ ಇವು ಕೇಂದ್ರ ಸರ್ಕಾರಿ ನೌಕರರ ವಸತಿ ಗೃಹವಾಗಿದ್ದರೂ ನೋಡಲು ಪಾಳು ಬಿದ್ದಿರುವ ಕಟ್ಟಡದಂತಿವೆ. ಸದಾ ಬಾಗಿಲು ಮುಚ್ಚಿಕೊಂಡಿರುವ ಮನೆ, ಗೋಡೆಯ ಮೇಲೆ ಹಬ್ಬಿರುವ ಗಿಡದ ಬೇರು. ನೇತಾಡುತ್ತಿರುವ ವೈರ್‌ಗಳು... ಹೀಗೆ ನಗರದ ಸೋನಾರವಾಡದಲ್ಲಿರುವ ಅಂಚೆ ನೌಕರರ ವಸತಿ ಗೃಹಗಳು ನಿರ್ವಹಣೆ ಸಮಸ್ಯೆಯಿಂದಾಗಿ ಶಿಥಿಲಾವಸ್ಥೆ ತಲುಪಿವೆ.ಸುಮಾರು 25 ವರ್ಷಗಳ ಹಿಂದೆ ನಿರ್ಮಾಣವಾಗಿರುವ ವಸತಿಗೃಹಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುದರಿಂದ ಕೆಲವೆಡೆ ಗೋಡೆ ಬಿರುಕು ಬಿಟ್ಟರೆ ಮತ್ತೆ ಕೆಲವು ಕಡೆಗಳಲ್ಲಿ ಸಿಮೆಂಟ್ ಪ್ಲಾಸ್ಟರ್ ಕಿತ್ತುಹೋಗಿದ್ದು  ಅಪಾಯಕಾರಿ ಸ್ಥಿತಿಯಲ್ಲಿವೆ. ಕಿಟಕಿ ಬಾಗಿಲಿಗೆ ಬಳಸಿದ ಗಾಜುಗಳು ಒಡೆದು ಹೋಗಿದ್ದರಿಂದ ಪಕ್ಷಿಗಳು ವಸತಿ ಗೃಹದೊಳಗೆ ಗೂಡು ಕಟ್ಟಿವೆ. ಬೂತ ಬಂಗಲೆಯಂತಾಗಿರುವ ವಸತಿ ಗೃಹಗಳು ಬಾವಲಿಗಳ ಆಶ್ರಯತಾಣವಾಗಿವೆ.ಈ ಅವ್ಯವಸ್ಥೆಯಿಂದಾಗಿ 15ಕ್ಕೂ ಹೆಚ್ಚು ವಸತಿಗೃಹಗಳಿದ್ದರೂ ಕೇವಲ 8-9 ವಸತಿ ಗೃಹಗಳಲ್ಲಿ ಮಾತ್ರ ಸಿಬ್ಬಂದಿ ವಾಸವಾಗಿದ್ದಾರೆ. ಸದ್ಯಕ್ಕೆ ಇವರೇ ವಸತಿಗೃಹಗಳನ್ನು ನಿರ್ವಹಣೆ ಮಾಡಿಕೊಳ್ಳುತ್ತಿದ್ದಾರೆ. ಖಾಲಿ ಇರುವ ವಸತಿ ನಿಲಯಗಳ ಹೊರಭಾಗದ ಗೋಡೆಗಳ ಮೇಲೆ ಗಿಡಗಳು ಬೆಳೆದಿವೆ. ಗಿಡದ ಬೇರು ಗೋಡೆ ತುಂಬ ವ್ಯಾಪಿಸುತ್ತಿದ್ದು ಅಲ್ಲಲ್ಲಿ ಗೋಡೆಗಳು ಬಿರುಕು ಬಿಟ್ಟಿರುವುದು ಕಂಡುಬಂದಿದೆ. ಆವರಣದ ತುಂಬ ಗಿಡಕಂಟಿಗಳು ಬೆಳೆದಿದ್ದು ಕಾಡಿನಂತೆ ಗೋಚರವಾಗುತ್ತಿದೆ.ಮಳೆಗಾಲದಲ್ಲಿ ಆವರಣದೊಳಗೆ ಬಿದ್ದ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಳೆಗಾಲ ಪೂರ್ಣ ನೀರು ಆವರಣದೊಳಗೇ ನಿಂತು ಸೊಳೆ, ಕ್ರಿಮಿಕೀಟಗಳ ಉತ್ಪತ್ತಿಯ ತಾಣವಾಗಿದೆ. ಸಿಬ್ಬಂದಿಗೆ ನೀರು ಪೂರೈಸಲು ತೆರೆದ ಬಾವಿ ಇದೆ. ಬಾವಿಯ ನೀರು ಕಲುಷಿತವಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ. ಈ ಕಾರಣದಿಂದಾಗಿ ಸಿಬ್ಬಂದಿ ಬೊರ್‌ವೆಲ್ ನೀರು ಬಳಸುತ್ತಿದ್ದಾರೆ.ವಸತಿ ಗೃಹಗಳ ಆವರಣದೊಳಗೆ ಅವೈಜ್ಞಾನಿಕ ರೀತಿಯಲ್ಲಿ ಕಸದತೊಟ್ಟಿ ನಿರ್ಮಿಸಲಾಗಿದೆ. ಪ್ರವೇಶ ದ್ವಾರದಲ್ಲಿಯೇ ಕಸದ ತೊಟ್ಟಿ ನಿರ್ಮಿಸಲಾಗಿದ್ದು ಮೊದಲು ದುರ್ವಾಸನೆಯ ಅನುಭವ ಪಡೆದು ನಂತರ ಗೃಹಗಳಿಗೆ ಹೋಗಬೇಕಾಗಿದೆ. ಕಸದ ವಿಲೇವಾರಿಯನ್ನೂ ಸರಿಯಾಗಿ ಮಾಡದೇ ಇರುವುದರಿಂದ ಸದಾ ದುರ್ನಾತ ಬೀರುತ್ತಿರುತ್ತದೆ.ತಂತ್ರಜ್ಞಾನದ ಯುಗದಲ್ಲಿ ಗ್ರಾಹಕರನ್ನು ಆಕರ್ಷಿಸಲು ಅಂಚೆ ಇಲಾಖೆ ಹೊಸಹೊಸ ಯೋಜನೆಗಳನ್ನು ಪ್ರಕಟಿಸುತ್ತಿದೆ. ಆದರೆ. ಸಿಬ್ಬಂದಿ ಮಾತ್ರ ಪಾಳುಬಿದ್ದ ಕಟ್ಟಡದಲ್ಲಿ ವಾಸ ಮಾಡಬೇಕಾದ ಪರಿಸ್ಥಿತಿ ಇದೆ.

`ವಸತಿ ಗೃಹಗಳಲ್ಲಿ ಅನೇಕ ಸಮಸ್ಯೆಗಳಿಗೆ. ಅದನ್ನು ಕೇಳುವವರು ಯಾರೂ ಇಲ್ಲ. ಸಣ್ಣಪಟ್ಟು ದುರಸ್ತಿಗಳಿದ್ದರೆ ನಾವೇ ಅದನ್ನು ಮಾಡಿಕೊಳ್ಳುತ್ತೇವೆ. ಮೂಲಸೌಲಭ್ಯಗಳು ಸರಿಯಾಗಿ ಇಲ್ಲದೇ ಇರುವುದರಿಂದ ಒಬ್ಬೊಬ್ಬರಾಗಿ ವಸತಿ ಗೃಹವನ್ನು ಬಿಡುತ್ತಿದ್ದಾರೆ. ಅವ್ಯವಸ್ಥೆಗಳ ಮಧ್ಯೆ ಅನಿವಾರ್ಯವಾಗಿ ನಾವು ವಾಸಮಾಡಬೇಕಾಗಿದೆ~ ಎಂದು ಹೆಸರು ಹೆಳಲು ಇಚ್ಛಿಸದ ಸಿಬ್ಬಂದಿಯೊಬ್ಬರು `ಪ್ರಜಾವಾಣಿ~ಯೊಂದಿಗೆ ಅಸಮಾಧಾನ ಹಂಚಿಕೊಂಡರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.