ಗುರುವಾರ , ಜೂನ್ 17, 2021
22 °C

ಕಾಯ್ಕಿಣಿ ಕತೆ: ಕನ್ನಡತನದ ವಿಸ್ತಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಕನ್ನಡ ನಿಘಂಟಿಗೆ ಸೇರಿಸಬಹುದಾದ ಉತ್ತಮ ಪದಗಳನ್ನು ಕತೆಗಾರರು ನೀಡಲು ಸಾಧ್ಯವಿದೆ ಎಂಬುದಕ್ಕೆ ಜಯಂತ ಕಾಯ್ಕಿಣಿ ಅವರೇ ಸಾಕ್ಷಿ. ಅವರ ಕತೆಗಳಲ್ಲಿರುವ ನವಿರಾದ ಭಾಷೆಯು ಕನ್ನಡತನದ ವಿಸ್ತಾರತೆಯ ಭಾಗವಾಗಿ ಕಾಣಿಸುತ್ತದೆ~ ಎಂದು ಸಾಹಿತಿ ಅ.ರಾ.ಮಿತ್ರ ಅಭಿಪ್ರಾಯ ಪಟ್ಟರು.ಅಂಕಿತ ಪುಸ್ತಕ ಪ್ರಕಾಶನವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕವಿ ಜಯಂತ ಕಾಯ್ಕಿಣಿ ಅವರ ` ಚಾರ್‌ಮಿನಾರ್~ ಕಥಾ ಸಂಕಲನ ಮತ್ತು `ಎಲ್ಲೋ ಮಳೆಯಾಗಿದೆ~ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.`ಜಯಂತ ಅವರ ಕತೆಗಳು ಈಗಾಗಲೇ ರಚಿತಗೊಂಡಿರುವ ವಸ್ತುವಿಷಯಗಳನ್ನೇ ಒಳಗೊಂಡಿದ್ದರೂ, ಹದವಾದ ಭಾಷೆ ಮತ್ತು ಸನ್ನಿವೇಶದಿಂದ ಓದುಗರನ್ನು ಆಕರ್ಷಿಸುತ್ತದೆ. ವಿಭಿನ್ನ ಸಂಸ್ಕೃತಿಯ ಸಾರವನ್ನೇ ಕತೆಯ ಸಾಮಗ್ರಿಯಾಗಿಸಿರುವುದು ಅವರ ಹೆಚ್ಚುಗಾರಿಕೆ~ ಎಂದ ಅವರು, `ಅಪರಿಚಿತ ವಿಷಯಗಳಿಗೂ ಸೊಗಸಾದ ಚೌಕಟ್ಟು ನೀಡಲಾಗಿದ್ದು, ಕತೆ ಹೇಳುವ ಶೈಲಿಗೆ ಓದುಗ ಮಣಿಯುತ್ತಾನೆ~ ಎಂದು ಹೇಳಿದರು.`ಕವಿಗಳು ಮತ್ತು ಚಿತ್ರ ಸಾಹಿತಿಗಳು ತಮ್ಮ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ಮರೆತು ಒಂದೆಡೆ ಸೇರುವುದು ಕನ್ನಡ ಮಟ್ಟಿಗೆ ಉತ್ತಮ ಬೆಳವಣಿಗೆ. ಈ ಬೆಳವಣಿಗೆಯ ದ್ಯೋತಕವಾಗಿ ಈ ಸಮಾರಂಭವನ್ನು ಆಯೋಜಿಸಿರುವುದು ಸಂತೋಷದ ವಿಚಾರ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಂಗೀತ ನಿರ್ದೇಶಕ ಹಂಸಲೇಖ, `ಕನ್ನಡ ಭಾಷೆಯ ಗೌರವ  ಹೆಚ್ಚಿಸುವ ಸಲುವಾಗಿಯೇ ಬರೆದಂತಿರುವ ಜಯಂತ ಅವರ ಕವಿತೆಗಳು ಮತ್ತು ಇಂಗ್ಲಿಷ್ ಪದದ ಮುಲಾಜಿಗೆ ಒಳಗಾಗದೇ ಇರುವ ಅವರ ಭಾಷಾ ಶಿಸ್ತು ನನ್ನನ್ನು ನಾಚಿಸುತ್ತದೆ. ನಾನು ಚಿತ್ರರಂಗದಲ್ಲಿ ಕಾಲಿಡುವ ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಮತ್ತು ಚಿತ್ರ ಸಾಹಿತಿಗಳ ದೊಡ್ಡ ನಿರ್ವಾತ ಸೃಷ್ಟಿಯಾಗಿತ್ತು.ಈ ಸಂದರ್ಭದಲ್ಲಿ ನನ್ನನ್ನು ಅರಸಿಕೊಂಡು ಬಂದ ಅವಕಾಶಗಳು ಬಿಡದೇ ಚಿತ್ರ ಸಾಹಿತ್ಯದಲ್ಲಿ ವಿಭಿನ್ನ ಭಾಷಾ ಮಾರ್ಗವನ್ನು ಹುಟ್ಟುಹಾಕುವಂತೆ ಮಾಡಿತ್ತು~ ಎಂದು ಹೇಳಿದರು.`ಕವಿಗಳು ಅಂತರಂಗದ ಒತ್ತಡಕ್ಕೆ ಮಣಿದು ಭಾವನೆಗಳನ್ನು ಪದಗಳಲ್ಲಿ ಪೋಣಿಸುತ್ತಾರೆ. ಆದರೆ ಚಿತ್ರಸಾಹಿತಿಗಳು ಚಿತ್ರರಂಗದ ಹಲವು ಒತ್ತಡಗಳ ನಡುವೆಯೇ ಸನ್ನಿವೇಶಕ್ಕೆ ತಕ್ಕಂತೆ ಹಾಡು ಬರೆಯುತ್ತಾರೆ. ಈ ಎರಡು ಪಂಗಡಗಳ ನಡುವೆ ಅಂತರ ಸೃಷ್ಟಿಯಾಗಿದೆ. ಮನೆ ಕವಿ ಮತ್ತು ಸಿನಿ ಕವಿಗಳು ಪರಸ್ಪರ ಸಹಕಾರ ಮತ್ತು ಸೌಹಾರ್ದತೆಯಿಂದ ಕಾರ್ಯನಿರ್ವಹಿಸುವಂತಹ ಪರಿಸರ ನಿರ್ಮಾಣವಾಗಬೇಕು~ ಎಂದು ಹೇಳಿದರು.ಕವಿ ಜಯಂತ ಕಾಯ್ಕಿಣಿ, `ತಂದೆ ಗೌರೀಶ್ ಕಾಯ್ಕಿಣಿ ಅವರಲ್ಲಿದ್ದ ಜೀವನ ಪ್ರೀತಿ ಮತ್ತು ನವಿರಾದ ಹಾಸ್ಯ ಪ್ರವೃತ್ತಿಯೇ ನನ್ನೆಲ್ಲಾ ಕಥೆಗಳಿಗೆ ಪ್ರೇರಣೆ. ಕತೆ ಬರೆಯುತ್ತಿದ್ದೇನೆ ಎಂದಾಗ ಖುಷಿ ಪಡುವ ನನ್ನಮ್ಮ , ಈಗಲೂ ಕತೆಗಳನ್ನು  `ಪ್ರಜಾವಾಣಿ~ಯ ಕಥಾ ಸ್ಪರ್ಧೆಗೆ ಕಳುಹಿಸು ಎಂದು ಹೇಳುತ್ತಿರುತ್ತಾರೆ~ ಎಂದು ನೆನಪಿಸಿಕೊಂಡರು.ಇದೇ ಸಂದರ್ಭದಲ್ಲಿ ನಡೆದ `ಸಿನಿ ಕವಿ ಸಮ್ಮಿಲನ~ ಕವಿಗೋಷ್ಠಿಯಲ್ಲಿ  ಚಿತ್ರ ಸಾಹಿತಿಗಳಾದ ಸಿ.ವಿ.ಶಂಕರ್, ದೊಡ್ಡರಂಗೇಗೌಡ, ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟ, ಎಚ್.ಎಸ್. ವೆಂಕಟೇಶ್‌ಮೂರ್ತಿ, ವಿ.ಮನೋಹರ್, ಎಂ.ಎನ್.ವ್ಯಾಸರಾವ್, ಕೆ.ಕಲ್ಯಾಣ್, ಬಿ.ಆರ್.ಲಕ್ಷ್ಮಣರಾವ್, ಭಂಗಿ ರಂಗ, ಗೋಪಾಲ ವಾಜಪೇಯಿ, ನಾಗೇಂದ್ರ ಪ್ರಸಾದ್, ಕವಿರಾಜ್  ಕವಿತೆಗಳನ್ನು ವಾಚಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.