ಮಂಗಳವಾರ, ಮೇ 11, 2021
22 °C

ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿ ಲೋಪ: ಸಿಎಜಿ ವರದಿಯಿಂದ ಬಹಿರಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು (ಪಿಟಿಐ): ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ಅನುಷ್ಠಾನ ಕರ್ನಾಟಕ ರಾಜ್ಯದಲ್ಲಿ ನ್ಯೂನತೆಗಳಿಂದ ಕೂಡಿತ್ತು ಎಂದು ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಾದ ಮಹಾಲೇಖಪಾಲರ  (ಸಿಎಜಿ) ವರದಿಯಲ್ಲಿ ಹೇಳಲಾಗಿದೆ.2007-12ರ ಅವಧಿಯಲ್ಲಿ ಈ ಯೋಜನೆಯ ಅನುಷ್ಠಾನವು ರಾಜ್ಯದಲ್ಲಿ ಸಮರ್ಪಕವಾಗಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.ವಾರ್ಷಿಕ ಯೋಜನೆಯ ಮಂಜೂರಾತಿ  ಆಮೆಗತಿಯಲ್ಲಿತ್ತು. ಹಲವು ಬಾರಿ ಮುಂದೂಡಿ, ಹಣಕಾಸು ವರ್ಷದ ಕೊನೆಯ ಹೊತ್ತಿಗೆ ಮಂಜೂರಾತಿ ಪಡೆಯಲಾಗಿತ್ತೆಂದು ವರದಿ ಹೇಳಿದೆ.ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದ ಸಮೀಕ್ಷೆಗಳಿಗಾಗಿ ನಿಗದಿ ಪಡಿಸಿದ ಹಣಕಾಸು ಅಸಮರ್ಪಕವಾಗಿತ್ತು ಪರಿಣಾಮವಾಗಿ ಸಮೀಕ್ಷೆಗಳೂ ಲೋಪದೋಷದಿಂದ ಕೂಡಿದ್ದವು. ಹೀಗಾಗಿ ಈ ಸಮೀಕ್ಷೆಗಳು ವಿಶ್ವಾಸಾರ್ಹತೆ ಹೊಂದಿಲ್ಲ ಎಂದೂ ವರದಿ ತಿಳಿಸಿದೆ.ಈ ಯೋಜನೆ ಸಂಬಂಧಿಸಿದಂತೆ ಮಾಡಲಾದ ಖರ್ಚು ವೆಚ್ಚಗಳ ಮಾಹಿತಿಯೂ ದೋಷಪೂರ್ಣವಾಗಿವೆ. ಹಲವು ಕೆಲಸಕಾರ್ಯಗಳು ಅಪೂರ್ಣ ಸ್ಥಿತಿಯಲ್ಲಿವೆ ಎಂದೂ ವರದಿ ಹೇಳಿದೆ.ಕಾಮಗಾರಿಯ ವಿಳಂಬ ಗತಿಯ ನಡೆಯಿಂದಾಗಿ ಯೋಜನಾ ವೆಚ್ಚ ಹೆಚ್ಚಾಗಿದೆ. ಹೀಗಾಗಿ ಹಲವು ಯೋಜನೆಗಳಿಗೆ ಬಂಡವಾಳ ಕಡಿಮೆಯಾಗಿ ಅವು ನೆನೆಗುದಿಗೆ ಬೀಳುವಂತಾಗಿದೆ ಎಂದು ಹೇಳಲಾಗಿದೆ.ಇದಲ್ಲದೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಯೋಜನೆಯಲ್ಲೂ ಹಲವು ನ್ಯೂನತೆಗಳನ್ನು ವರದಿ ಪತ್ತೆ ಹಚ್ಚಿದೆ.ಮುಖ್ಯಮಂತ್ರಿಗಳ ವಿಶೇಷ ಅನುದಾನ ಯೋಜನೆಯಡಿಯ 7 ನಗರಸಭೆಗಳಿಗೆ ಹಂಚಿಕೆ ಮಾಡಲಾದ ತಲಾ 100 ಕೋಟಿ ರೂಪಾಯಿಗಳನ್ನು ಸಮರ್ಪಕ ಸಮೀಕ್ಷೆಯಿಲ್ಲದೆ ಮಾಡಲಾಗಿತ್ತು ಎಂದು ವರದಿ ದೂಷಿಸಿದೆ.ಮುಖ್ಯವಾಗಿ ಟೆಂಡರ್ ಆಹ್ವಾನದಲ್ಲಿ ಪಾರದರ್ಶಕತೆ ತುಂಬಾ ಕಡಿಮೆಯಾಗಿತ್ತು. ಒಪ್ಪಂದ ನಿರ್ವಹಣೆಯೂ ಕೂಡ ಅಸಮರ್ಪಕವಾಗಿತ್ತು ಎಂದು ವರದಿ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.