ಶುಕ್ರವಾರ, ಮೇ 20, 2022
21 °C

ಕೂಲಿಂಗ್ ಪೇಪರ್‌ನಿಂದ ಡಿಎಲ್‌ಗೆ ಕುತ್ತು

ಪ್ರಜಾವಾಣಿ ವಾರ್ತೆ/ ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

ವಿಜಾಪುರ: ಕಾರು-ಜೀಪ್ ಮತ್ತಿತರ ವಾಹನಗಳ ಗಾಜಿಗೆ ಅಂಟಿಸಿರುವ ಕೂಲಿಂಗ್ ಪೇಪರ್ ತೆಗೆಯುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಯಾವಾಗ ತೆಗೆಯಬೇಕು? ಎಂಬ ಗೊಂದಲ ವಾಹನ ಮಾಲೀಕರಲ್ಲಿ.ಇದಕ್ಕೆ ಗಡುವು ಇಲ್ಲ ಎಂದು ಸಾರಿಗೆ ಇಲಾಖೆ ಹೇಳುತ್ತಿದ್ದರೆ, ಜಿಲ್ಲಾ ಪೊಲೀಸ್ ಇಲಾಖೆ ವಿಧಿಸಿದ್ದ ಗಡುವು ಮುಗಿದಿದೆ. ಇದೇ 11 (ಸೋಮವಾರ)ರಿಂದಲೇ ದಂಡ ವಿಧಿಸಲಾಗುವುದು ಎಂದು ಎಸ್ಪಿ ಹೇಳಿದ್ದಾರೆ.ವಿಜಾಪುರ ಜಿಲ್ಲೆಯೊಂದರಲ್ಲಿಯೇ ನೋಂದಣಿಯಾಗಿರುವ ವಾಹನಗಳ ಸಂಖ್ಯೆ 2.40 ಲಕ್ಷ. ಹೊರ ಜಿಲ್ಲೆಗಳಲ್ಲಿ ನೋಂದಣಿಯಾಗಿ ಜಿಲ್ಲೆಯಲ್ಲಿರುವ ವಾಹನಗಳು ಇದರ ಅರ್ಧದಷ್ಟು. ಅವುಗಳಲ್ಲಿ ಕಾರು ಮತ್ತು ಜೀಪ್‌ಗಳ ಸಂಖ್ಯೆ ಒಂದು ಲಕ್ಷಕ್ಕೂ ಅಧಿಕ. ಇಲ್ಲಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ನಿತ್ಯ 5-6 ಕಾರು ಮತ್ತು ಜೀಪ್‌ಗಳು ಹಾಗೂ 50 ದ್ವಿಚಕ್ರ ವಾಹನಗಳು ನೋಂದಣಿ ಯಾಗುತ್ತಿವೆ.ಕಾರು-ಜೀಪ್‌ಗಳ ಗಾಜುಗಳಿಗೆ ಕೂಲಿಂಗ್ ಪೇಪರ್ ಅಳವಡಿಸುವುದು ಸಂಪ್ರದಾಯವಾಗಿ ಬಿಟ್ಟಿತ್ತು. ಕೂಲಿಂಗ್ ಪೇಪರ್ ಅಂಟಿಸದ ವಾಹನಗಳೇ ಕಾಣಸಿಗುತ್ತಿರಲಿಲ್ಲ. ಪಾರದರ್ಶ ಕವಲ್ಲದ ಕೂಲಿಂಗ್ ಪೇಪರ್ ಇರುವ ವಾಹನಗಳಲ್ಲಿ ಅಪರಾಧ ಚಟುವಟಿಕೆಗಳು ನಡೆಯುತ್ತಿವೆ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್, ಕೂಲಿಂಗ್ ಪೇಪರ್ ತೆರವಿಗೆ ಆದೇಶ ನೀಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.`ಸುಪ್ರೀಂ ಕೋರ್ಟ್ ಆದೇಶದಂತೆ ಕೂಲಿಂಗ್ ಪೇಪರ್ ತೆಗೆಯುವುದು ಅನಿವಾರ್ಯ. ಪೊಲೀಸರ ಜೊತೆಗೆ ಸಾರಿಗೆ ಇಲಾಖೆಯ ಅಧಿಕಾರಿಗಳೂ ವಾಹನಗಳಿಗೆ ದಂಡ ವಿಧಿಸುವ ಅವಕಾಶವಿದೆ. ನಮ್ಮ ಇಲಾಖೆ ನಿಗದಿತ ಗಡುವು ವಿಧಿಸದಿದ್ದರೂ ಸಾರ್ವಜನಿಕರು ಸ್ವಯಂ ಪ್ರೇರಿತ ರಾಗಿ ಕೂಲಿಂಗ್ ಪೇಪರ್ ತೆಗೆಸಿಕೊಂಡು ನಿಯಮ ಪಾಲನೆ ಮಾಡಬೇಕು~ ಎಂಬುದು ಪ್ರಾದೇಶಿಕ ಸಾರಿಗೆ ಅಧಿಕಾರಿ ನಿಂಗಣ್ಣವರ ಅವರ ಮನವಿ.`ವಾಹನಗಳ ಗಾಜುಗಳಿಗೆ ಅಳವಡಿಸಿರುವ ಕೂಲಿಂಗ್ ಪೇಪರ್‌ನ್ನು ಸ್ವಯಂ ಪ್ರೇರಿತರಾಗಿ ತೆಗೆದುಹಾಕಲು ಸಾರ್ವಜನಿಕರಿಗೆ ಸೂಚನೆ ನೀಡಿ ಅದಕ್ಕೆ ಕಾಲಾವಕಾಶವನ್ನೂ ಕೊಡಲಾಗಿತ್ತು. ನನ್ನ ವಾಹನ ಸೇರಿದಂತೆ ಪೊಲೀಸ್ ಇಲಾಖೆಯ ಎಲ್ಲ ಕಾರು-ಜೀಪ್‌ಗಳಿಗೆ ಅಂಟಿಸಿದ್ದ ಕೂಲಿಂಗ್ ಪೇಪರ್ ತೆಗೆಸಿದ್ದೇವೆ. ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ತಮ್ಮ ಸರ್ಕಾರಿ ವಾಹನಗಳ ಕೂಲಿಂಗ್ ಪೇಪರ್ ತೆರವುಗೊಳಿಸುವಂತೆ ಸೂಚಿಸಲಾಗಿದೆ~ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಸಿ. ರಾಜಪ್ಪ ಹೇಳುತ್ತಾರೆ.`ಕೂಲಿಂಗ್ ಪೇಪರ್ ತೆಗೆಯುವ ಅಭಿಯಾನ ಇದೇ 11ರಿಂದ ಜಿಲ್ಲೆಯಾದ್ಯಂತ ಆರಂಭ ಗೊಳ್ಳಲಿದೆ. ಈ ಕುರಿತು ನಮ್ಮ ಎಲ್ಲ ಇನ್ಸ್ ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್‌ಗಳಿಗೆ ಸೂಚನೆ ನೀಡಲಾಗಿದೆ. ನಿತ್ಯ ಒಂದೆರಡು ಗಂಟೆಗಳ ಕಾಲ ಅವರು ಈ ಕಾರ್ಯಾಚರಣೆ ನಡೆಸಲಿದ್ದಾರೆ~ ಎಂದು ಅವರು ಹೇಳಿದರು.`ಮೊದಲ ದಿನ 100 ರೂಪಾಯಿ, ಎರಡನೇ ದಿನವೂ ತೆಗೆಸದಿದ್ದರೆ 200 ರೂಪಾಯಿ, ಮೂರನೇ ದಿನವೂ ತೆಗೆಸದಿದ್ದರೆ 300 ರೂಪಾಯಿ ದಂಡ ವಿಧಿಸಲಾಗುವುದು. ಮೂರು ದಿನ ನಿರಂತರ ದಂಡ ಪಾವತಿಸಿಯೂ ಆ ವಾಹನದ ಕೂಲಿಂಗ್ ಪೇಪರ್ ತೆಗೆಸದಿದ್ದರೆ ಆ ವಾಹನದ ಚಾಲಕನ ಚಾಲನಾ ಪರವಾನಗಿಯನ್ನು ರದ್ದು ಪಡಿಸಲಾಗುವುದು~ ಎಂದು ಅವರು ಎಚ್ಚರಿಸಿದ್ದಾರೆ.`ನಮ್ಮ ಸರ್ಕಾರಿ ಜೀಪ್‌ಗೆ ಕೂಲಿಂಗ್ ಪೇಪರ್ ಅಳವಡಿಸಲಾಗಿದೆ. ಅದನ್ನು ತೆಗೆದು ನಿಯಮ ಪಾಲಿಸೋಣ ಎಂದು ರೇಡಿಯಂ ಕೆಲಸ ಮಾಡುವವರ ಬಳಿ ಕಳಿಸಿದರೆ ಕೂಲಿಂಗ್ ಪೇಪರ್ ತೆಗೆಸಲು 500 ರೂಪಾಯಿ ಕೇಳಿದರು.ನಾವು ಕೂಲಿಂಗ್ ಪೇಪರ್ ಅಂಟಿಸಲಿಕ್ಕೇ ಅಷ್ಟು ಹಣ ನೀಡಿಲ್ಲ. ಆದೇಶಗಳನ್ನು ಹೇಗೆ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ, ಪರಿಸ್ಥಿತಿಯ ಲಾಭ ಹೇಗೆ ಪಡೆಯಲಾಗುತ್ತಿದೆ ಎಂಬುದಕ್ಕೆ ಇದು ತಾಜಾ ಉದಾಹರಣೆ~ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಹೇಳಿದರು.`ಕಾರು-ಜೀಪ್‌ಗಳ ಕೂಲಿಂಗ್ ಪೇಪರ್ ತೆಗೆಯುವುದು ಬಹಳ ಪ್ರಯಾಸದ ಕೆಲಸ. ಗಾಜಿಗೆ ಧಕ್ಕೆಯಾಗದಂತೆ ನಿಧಾನವಾಗಿ ಕೈಯಿಂದಲೇ ತೆಗೆಯಬೇಕು. ಯಾವುದೇ ಉಪಕರಣ ಬಳಸಲು ಸಾಧ್ಯವಿಲ್ಲ. ಒಬ್ಬ ಪರಿಣಿತ ವ್ಯಕ್ತಿ ಒಂದು ದಿನಕ್ಕೆ 5ರಿಂದ 6 ವಾಹನಗಳ ಕೂಲಿಂಗ್ ಪೇಪರ್‌ಗಳನ್ನು ಮಾತ್ರ ತೆಗೆಯಲು ಸಾಧ್ಯವಾಗುತ್ತಿದೆ.ಇದಕ್ಕಾಗಿ 300ರಿಂದ 600 ವರೆಗೆ ದರ ವಿಧಿಸುತ್ತಿದ್ದೇವೆ~ ಎಂದು ಇಲ್ಲಿಯ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದ ವಾಣಿಜ್ಯ ಸಂಕೀರ್ಣದಲ್ಲಿರುವ ನ್ಯಾಷನಲ್ ಡೆಕೊರ್‌ನ ಎಫ್.ಡಿ. ಶೇಖ ಹೇಳುತ್ತಾರೆ.`ಸುಪ್ರೀಂ ಕೋರ್ಟ್‌ನ ಆದೇಶ ಪಾಲನೆ ಅಷ್ಟೇ ನಮ್ಮ ಕೆಲಸ. ವಾಹನಗಳ ಕೂಲಿಂಗ್ ಪೇಪರ್ ತೆಗೆಸಲು ವಿಶೇಷ ವ್ಯವಸ್ಥೆಯನ್ನೇನು ನಾವು ಮಾಡಿಲ್ಲ. ಅದನ್ನು ಹಾಕಿಸಿಕೊಂಡವರೇ ತೆರವುಗೊಳಿಸಿಕೊಳ್ಳಬೇಕು~ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜಪ್ಪ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.