ಬುಧವಾರ, ಆಗಸ್ಟ್ 12, 2020
27 °C

ಕೆ.ಆರ್.ಪುರ ತೂಗುಸೇತುವೆ: ಪ್ರಯಾಸದ ಪ್ರಯಾಣ

ಪ್ರಜಾವಾಣಿ ವಾರ್ತೆ/ ಅನಿತಾ.ಈ Updated:

ಅಕ್ಷರ ಗಾತ್ರ : | |

ಕೆ.ಆರ್.ಪುರ ತೂಗುಸೇತುವೆ: ಪ್ರಯಾಸದ ಪ್ರಯಾಣ

ಬೆಂಗಳೂರು: ರಸ್ತೆ ದಾಟಲು ಹರಸಾಹಸ ಪಡುವ ಪಾದಚಾರಿಗಳು, ಬಸ್ಸು ತಪ್ಪಿಹೋಗುತ್ತದೆ ಎಂದು ಆತುರದಿಂದ ಆತಂಕದಲ್ಲಿ ಓಡಿ ಬರುವ ಪ್ರಯಾಣಿಕರು, ರಸ್ತೆ ಮಧ್ಯೆ ನಿಲ್ಲುವ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಲ್ಲುವ ಬಸ್ಸುಗಳು ಹಾಗೂ ಇದರ ಮಧ್ಯೆ ತೂಗು ಸೇತುವೆ ಏರಲು ಸಾಹಸ ಪಡುವ ವಾಹನ ಸವಾರರು...ಇದು ನಗರದ ಕೆ.ಆರ್.ಪುರ ತೂಗುಸೇತುವೆ ಮೇಲೆ ಕಂಡು ಬರುವ ದೃಶ್ಯಗಳು. ನಗರದ ಪೂರ್ವಭಾಗದ ಸಂಪರ್ಕಕ್ಕೆ ಇದೊಂದು ಬಹುಮುಖ್ಯ ಪ್ರದೇಶ. ಒಂದು ಕಡೆ ವರ್ತುಲ ರಸ್ತೆಗೆ ಸಂಪರ್ಕ ಕಲ್ಪಿಸುವ ಬಿಡಿಎ ಮೇಲು ಸೇತುವೆ, ಅದರ ಮುಂಭಾಗ ಹೊಸಕೋಟೆ ರಸ್ತೆಯನ್ನು ಸಂಪರ್ಕಿಸುವ ತೂಗು ಸೇತುವೆ, ಪಕ್ಕದಲ್ಲೇ ವೈಟ್‌ಫೀಲ್ಡ್‌ನತ್ತ ಸಾಗುವ ರಸ್ತೆ, ಬಿಡಿಎ ಮೇಲು ಸೇತುವೆ ಪಕ್ಕದಲ್ಲೇ ಇಂದಿರಾನಗರ ಹಾಗೂ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣವನ್ನು ಸೇರುವ ರಸ್ತೆ. ಒಟ್ಟಾರೆ ವರ್ಷಪೂರ್ತಿ ಜನಜಂಗುಳಿಯ ತಾಣವಿದು.ಕೆ.ಆರ್.ಪುರ ಹಾಗೂ ವೈಟ್‌ಫೀಲ್ಡ್ ಕಡೆ ಪ್ರಯಾಣಿಸುವ ಪ್ರಯಾಣಿಕರಿಗೆಂದೇ ತೂಗುಸೇತುವೆ ಬಳಿಯೇ ಟಿನ್‌ಫ್ಯಾಕ್ಟರಿ ಬಸ್ ನಿಲ್ದಾಣವನ್ನು ಮಾಡಲಾಗಿದೆ. ಆದರೆ ಕೆ.ಆರ್.ಪುರ ಕಡೆಗೆ ಹೋಗುವ ಸಾರ್ವಜನಿಕರು ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳು ಈ ಬಸ್ ನಿಲ್ದಾಣವನ್ನು ಬಳಸುವುದೇ ಇಲ್ಲ. ಬದಲಾಗಿ ಸುಗಮ ಸಂಚಾರದ ದೃಷ್ಟಿಯಿಂದ ನಿರ್ಮಿಸಿರುವ ತೂಗು ಸೇತುವೆ ಮೇಲೆ ಬಸ್ ನಿಲುಗಡೆ ಮಾಡಿ, ಅಲ್ಲೂ ಸಂಚಾರ ದಟ್ಟಣೆಯನ್ನು ಉಂಟುಮಾಡುತ್ತಿದ್ದಾರೆ. ಇದರಿಂದ ಈ ಸೇತುವೆಯನ್ನು ಬಳಸುವ ಇತರೆ ವಾಹನ ಸವಾರರು ಪರದಾಡುವಂತಾಗಿದೆ.ತೂಗುಸೇತುವೆ ಇರುವುದು ಸಂಚಾರ ದಟ್ಟಣೆ ಕಡಿಮೆ ಮಾಡಲು. ಆದರೆ ಪ್ರಪಂಚದ ಯಾವ ಭಾಗದಲ್ಲೂ ಕಾಣದ ರೀತಿಯಲ್ಲಿ ಅನಧಿಕೃತವಾಗಿ ಬಸ್ ನಿಲ್ದಾಣ ಸೇತುವೆಯ ಮೇಲಿದೆ. ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಲ್ಲುವ ಬಸ್ಸುಗಳು ಅರ್ಧ ರಸ್ತೆಯನ್ನು ಆಕ್ರಮಿಸಿಕೊಂಡರೆ, ಇನ್ನು ಕಾಲುಭಾಗದಲ್ಲಿ ಪ್ರಯಾಣಿಕರು ನಿಲ್ಲುತ್ತಾರೆ. ಇದರಿಂದಾಗಿ ಬೇರೆ ಯಾವುದೇ ವಾಹನಗಳು ಹೋಗಲು ದಾರಿಯೇ ಉಳಿಯುವುದಿಲ್ಲ. ಟಿನ್‌ಫ್ಯಾಕ್ಟರಿ ನಿಲ್ದಾಣದಲ್ಲಿ ಬಸ್‌ಗಳು ನಿಲ್ಲದೆ ಸೇತುವೆಯ ಮೇಲೆ ನಿಲ್ಲುವ ಬಸ್‌ಗಳನ್ನು ಏರಲು ಪ್ರಯಾಣಿಕರು ವಾಹನಗಳ ಮಧ್ಯವೇ ಅಪಾಯಕಾರಿಯಾಗಿ ನುಗ್ಗುವ ದೃಶ್ಯ ಇಲ್ಲಿ ಸಾಮಾನ್ಯ.ಅದರಲ್ಲೂ ಶುಕ್ರವಾರ ಹಾಗೂ ಶನಿವಾರದಂದು  ಕೆ.ಜಿ.ಎಫ್, ಮುಳಬಾಗಿಲು, ಚಿತ್ತೂರು ಹಾಗೂ ತಿರುಪತಿ ಮಾರ್ಗವಾಗಿ ತಮ್ಮ ಊರುಗಳಿಗೆ ತೆರಳುವ ಪ್ರಯಾಣಿಕರು ಸೇತುವೆ ಮೇಲೆ ಬಸ್‌ಗಳಿಗಾಗಿ ಕಾಯುತ್ತಾರೆ. ಅವರನ್ನು ಹತ್ತಿಸಿಕೊಳ್ಳುವ ಸಲುವಾಗಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಆಂಧ್ರಪ್ರದೇಶ ಸಾರಿಗೆ ಸಂಸ್ಥೆ ಹಾಗೂ ಖಾಸಗಿ ಬಸ್ಸುಗಳು 20ರಿಂದ 30 ನಿಮಿಷ ಸೇತುವೆ ಮೇಲೆ ನಿಲ್ಲುತ್ತದೆ. ಅದರ ಜೊತೆಗೆ ಪ್ರಯಾಣಿಕರನ್ನು ಬಿಡಲು ಬರುವವರು ಸಹ ತಮ್ಮ ವಾಹನಗಳನ್ನೂ ಸೇತುವೆ ಮೇಲೆ ನಿಲುಗಡೆ ಮಾಡುತ್ತಾರೆ.ಇವುಗಳ ಜೊತೆಗೆ ಸಂಜೆಯಾಗುತ್ತಿದ್ದಂತೆ ನಗರದಿಂದ ತ್ಯಾಜ್ಯವನ್ನು ಹೊತ್ತು ತರುವ ಲಾರಿಗಳ ಸಂಖ್ಯೆ ಹೆಚ್ಚಾಗುತ್ತದೆ. ಆಗ ತೂಗುಸೇತುವೆಯಿಂದ ಬೆನ್ನಿಗಾನಹಳ್ಳಿಯ ವರೆಗೆ ವಾಹನಗಳು ಸಾಲುಗಟ್ಟಿ ಗಂಟೆಗಟ್ಟಲೆ ನಿಲ್ಲುತ್ತವೆ. ಇದರಿಂದಾಗಿ ಕೆ.ಆರ್.ಪುರ ಹಾಗೂ ವೈಟ್‌ಫೀಲ್ಡ್ ಕಡೆ ಹೋಗುವ ವಾಹನ ಸವಾರರು ಕೇವಲ 200 ಮೀ ದೂರವನ್ನು ದಾಟಲು 30ರಿಂದ 40 ನಿಮಿಷಗಳು ಕಾಯಬೇಕಾಗುತ್ತದೆ.ಏನಂತಾರೆ...?

ಸರಿಯಾದ ಜಾಗದಲ್ಲಿ ನಿಲ್ದಾಣ ಇಲ್ಲ

ಟಿನ್‌ಫ್ಯಾಕ್ಟರಿ ಜಂಕ್ಷನಿನಲ್ಲಿ ಸರಿಯಾದ ಸ್ಥಳದಲ್ಲಿ ಬಸ್ ನಿಲ್ದಾಣ ಮಾಡದ ಕಾರಣ ಅನಾವಶ್ಯಕವಾಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ಸುಗಳು ಸೇರಿದಂತೆ ಹಲವಾರು ಜನರು ತಮ್ಮ ವಾಹನಗಳನ್ನು ಮೇಲ್ಸೇತುವೆ ಹಾಗೂ ರಸ್ತೆಯ ಮೇಲೆ ಗಂಟೆಗಟ್ಟಲೆ ನಿಲ್ಲಿಸಿಕೊಳ್ಳುತ್ತಾರೆ. ಸಂಜೆಯಾಗುತ್ತಿದ್ದಂತೆ ಬಿಬಿಎಂಪಿ ಕಸದ ಲಾರಿಗಳು ರಸ್ತೆಗಿಳಿಯುತ್ತವೆ. ಹೀಗಿರುವಾಗ ನಿತ್ಯ ಹೆಚ್ಚಿನ ಸಮಯ ರಸ್ತೆಯ ಮೇಲೆ ಕಳೆಯುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ವ್ಯವಸ್ಥಿತವಾಗಿ ಬಸ್ ನಿಲ್ದಾಣವನ್ನು ನಿರ್ಮಿಸಿ, ಸಂಚಾರಿ ದಟ್ಟಣೆಯನ್ನು ಕಡಿಮೆ ಮಾಡಬೇಕು. 

- ರವಿ, ಕಾರು ಚಾಲಕಮನೆ ಸೇರಲು ರಾತ್ರಿಯಾಗುತ್ತದೆ

ನಿತ್ಯ ಕೆ.ಆರ್.ಪುರದ ಚನ್ನಸಂದ್ರದಿಂದ ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತೇನೆ. ಸಂಜೆ 6 ಗಂಟೆಗೆ ಕೆಲಸ ಮುಗಿಯುತ್ತದೆ ಆದರೂ ಕಚೇರಿಯಲ್ಲೇ ರಾತ್ರಿ 8ರ ವರೆಗೆ ಸಮಯ ಕಳೆದು ಬರುತ್ತೇನೆ. ಕಾರಣ ಎಷ್ಟೇ ಬೇಗ ಬಂದರೂ ಮನೆ ತಲುಪುವುದು ಮಾತ್ರ ರಾತ್ರಿಯಾದ ಮೇಲೆ. ಅದರಲ್ಲೂ ಶುಕ್ರವಾರ ಹಾಗು ಶನಿವಾರಗಳಲ್ಲಂತೂ ಆಗುವ ಸಂಚಾರಿ ದಟ್ಟಣೆಯಿಂದ ಮಧ್ಯ ರಾತ್ರಿ ಮನೆ ಸೇರುತ್ತೇನೆ. ಈ ಹಿಂದೆ ಇಲ್ಲಿ ಬಿಎಂಟಿಸಿ ಬಸ್ ನಿಲ್ದಾಣ ಬಿಟ್ಟರೆ ಕೆಎಸ್‌ಆರ್‌ಟಿಸಿ, ಎಪಿಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ಸುಗಳ ನಿಲುಗಡೆಗೆ ಅವಕಾಶ ಇರಲಿಲ್ಲ. ಆದರೆ ಇತ್ತೀಚೆಗೆ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ಸುಗಳ ಹಾವಳಿ ಹೆಚ್ಚಾಗಿ ಹೋಗಿದೆ.

- ಜಗದೀಶ್, ಖಾಸಗಿ ಸಂಸ್ಥೆ ಉದ್ಯೋಗಿಬಿಎಂಟಿಸಿ ಬಸ್‌ಗಳಿಗೆ ಮಾತ್ರ ನಿಲುಗಡೆ

ಟಿನ್‌ಫ್ಯಾಕ್ಟರಿ ಬಳಿ ಇರುವ ಬಿಎಂಟಿಸಿ ನಿಲ್ದಾಣದಲ್ಲಿ ಕೆ.ಆರ್. ಪುರದ ಕಡೆಗೆ ಹೋಗುವ ಬಸ್ಸುಗಳನ್ನು ನಿಲ್ಲಿಸಿದರೆ ವೈಟ್‌ಪೀಲ್ಡ್ ಕಡೆ ಹೋಗುವ ವಾಹನಗಳಿಗೆ ತಡೆಯಾಗುತ್ತದೆ. ಇದರಿಂದಾಗಿ ಸಂಚಾರಿ ದಟ್ಟಣೆ ಮತ್ತಷ್ಟು ಹೆಚ್ಚಾಗುತ್ತದೆ. ಹೀಗಾಗಿ ಕೇವಲ ಬಿಎಂಟಿಸಿ ಬಸ್ಸುಗಳಿಗೆ ಮಾತ್ರ ತೂಗು ಸೇತುವೆಯ ಆರಂಭದಲ್ಲಿ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ಕೆಎಸ್‌ಆರ್‌ಟಿಸಿ, ಎಪಿಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ಸುಗಳವರು ರಾತ್ರಿ 10 ಗಂಟೆ ನಂತರ ನಮ್ಮ ಕಣ್ಣು ತಪ್ಪಿಸಿ ಒಮ್ಮಮ್ಮೆ ಅಲ್ಲಿ ನಿಲುಗಡೆ ಮಾಡುತ್ತಾರೆ. ನಿತ್ಯ ಸಂಚಾರಿ ಪೊಲೀಸರು ಆ ಸ್ಥಳದಲ್ಲಿ ಕೆಲಸಮಾಡುತ್ತಾರೆ. ಬಿಎಂಟಿಸಿ ಹೊರತು ಪಡಿಸಿ ಉಳಿದ ಬಸ್ಸುಗಳನ್ನು ಐಟಿಐ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಸೂಚಿಸಲಾಗಿದೆ.

- ಆರ್.ಎಂ. ಅಜಯ್ ಪೊಲೀಸ್ ಇನ್‌ಸ್ಪೆಕ್ಟರ್ ಸಂಚಾರಿ ವಿಭಾಗ ಕೆ.ಆರ್.ಪುರಬಿಎಂಟಿಸಿ ನಿಲ್ದಾಣ ಮಾಡಿಯೇ ಇಲ್ಲ

ಮೇಲ್ಸೇತುವೆಯ ಆರಂಭದಲ್ಲಿ ಬಿಎಂಟಿಸಿ ಬಸ್ ನಿಲ್ದಾಣವನ್ನು ಮಾಡಿಯೇ ಇಲ್ಲ. ಸೇತುವೆಯಿಂದ 50 ಮೀಟರ್ ದೂರದಲ್ಲಿರುವ ಮಾರಿಯಮ್ಮ ದೇವಾಲಯದ ಬಳಿ ಬಿಎಂಟಿಸಿ ಬಸ್ ನಿಲ್ದಾಣವನ್ನು ಮಾಡಲಾಗಿದೆ. ಬಸ್ಸುಗಳನ್ನು ಅಲ್ಲಿಯೇ ನಿಲ್ಲಿಸಬೇಕು. ಮೇಲ್ಸೇತುವೆ ಮೇಲೆ ಅಥವಾ ಅದರ ಬಳಿ ಬಸ್ ನಿಲ್ಲಿಸಲು ಯಾರಿಗೂ ಅನುಮತಿ ನೀಡಿಲ್ಲ. ಒಂದು ವೇಳೆ ಹಾಗೇನಾದರೂ ಇದ್ದಲ್ಲಿ ಸ್ಥಳ ಪರಿಶೀಲನೆ ನಡೆಸಿ ಕ್ರಮ ಜರುಗಿಸುತ್ತೇವೆ.

- ಅಂಜುಮ್ ಪರ್ವೇಜ್‌ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಟಿನ್‌ಫ್ಯಾಕ್ಟರಿಯಲ್ಲಿ ನಿಲುಗಡೆ ಇಲ್ಲ

ಬೆಂಗಳೂರಿನಿಂದ ಹೊರಡುವ ಕೆಎಸ್‌ಆರ್‌ಟಿಸಿ ಬಸ್ಸುಗಳಿಗೆ ಬೈಯ್ಯಪ್ಪನಹಳ್ಳಿಯ ಮೆಟ್ರೊ ನಿಲ್ದಾಣದ ಹಿಂಭಾಗದಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ ಎಂದು ಮಾಡಲಾಗಿದೆ. ಅದನ್ನು ಬಿಟ್ಟರೆ ಕೆ.ಆರ್.ಪುರದಲ್ಲಿ ನಿಲುಗಡೆಗೆ ಅನುಮತಿ ನೀಡಲಾಗಿದೆ ವಿನಃ ಟಿನ್‌ಫ್ಯಾಕ್ಟರಿಯಲ್ಲಿ ಯಾವುದೇ ನಿಲುಗಡೆಯೇ ಇಲ್ಲ. ಅಲ್ಲದೆ ಅಲ್ಲಿ ಯಾವ ನಿಲ್ದಾಣವೂ ಇಲ್ಲ. ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಈವರೆಗೆ ಬಂದಿಲ್ಲ. ಹಾಗೇನಾದರೂ ಇದ್ದಲ್ಲಿ, ತಾನೇ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಜರುಗಿಸುತ್ತೇನೆ.

- ಮಂಜುನಾಥ ಪ್ರಸಾದ್ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.