ಮಂಗಳವಾರ, ಜೂನ್ 15, 2021
21 °C

ಕೆಜಿಎಫ್ ಚಿನ್ನದ ಗಣಿ ಮುಚ್ಚಿ 11 ವರ್ಷ

ಪ್ರಜಾವಾಣಿ ವಾರ್ತೆ/ಕೃಷ್ಣಮೂರ್ತಿ Updated:

ಅಕ್ಷರ ಗಾತ್ರ : | |

ಕೆಜಿಎಫ್: ಕೆಜಿಎಫ್‌ನ ಚಿನ್ನದ ಗಣಿಗಾರಿಕೆ ಅಧಿಕೃತವಾಗಿ ಕೊನೆಗೊಂಡು ಮಾ.1ಕ್ಕೆ  ಹನ್ನೊಂದು ವರ್ಷ ತುಂಬಿದೆ.

ಹಳೇ ಸೈಕಲ್ಲನ್ನೇರಿ, ಅದಕ್ಕೆ ಊಟದ ಕ್ಯಾರಿಯರ್ ಮತ್ತು ಹೆಲ್ಮೆಟ್ ಸಿಗಿಸಿಕೊಂಡು ಒಂದು ಶತಮಾನಕ್ಕೂ ಹೆಚ್ಚು ಕಾಲ ಒಂದೇ ವ್ಯವಸ್ಥೆಯಲ್ಲಿ ಜೀವನ ನಡೆಸುತ್ತಿದ್ದ ಕಾರ್ಮಿಕರು ಅಂದು ಮುಚ್ಚಿದ ಗಣಿ ಬಾಗಿಲುಗಳನ್ನು ನೋಡಿ ನಿಟ್ಟುಸಿರು ಬಿಟ್ಟ ದಿನಕ್ಕೆ ಒಂದೊಂದೇ ವರ್ಷಗಳು ಜೋಡಣೆಯಾಗುತ್ತಿವೆ. ಸರ್ಕಾರ ನೀಡಿದ ವಾಗ್ದಾನಗಳು ಈವರೆಗೆ ಈಡೇರಿಲ್ಲ. ಗಣಿಗಾರಿಕೆ ನಿಂತ ಮೇಲೆ ಸುಮಾರು ಎಪ್ಪತ್ತೈದು ಸಾವಿರ ಜನಸಂಖ್ಯೆಯುಳ್ಳ ಬಿಜಿಎಂಎಲ್ ಕಾಲೊನಿಗಳು ಕೊಳೆಗೇರಿಯಾಗಿ ಪರಿವರ್ತನೆಯಾದವು. ಸುಮಾರು ಒಂದು ಶತಮಾನಗಳ ಕಾಲ ವಿದ್ಯುತ್ ಕಡಿತವನ್ನೇ ಕಾಣದ ಗಣಿ ಕಾರ್ಮಿಕರು ಕೊನೆಗೆ ತಮ್ಮ ಮನೆಗೆ ಒಂದು ವಿದ್ಯುತ್ ದೀಪವನ್ನು ಹಾಕಿಕೊಳ್ಳಲೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು.ಗಣಿ ಕಾಲೊನಿಗಳಿಂದ ನಗರಸಭೆಗೆ ಆದಾಯ ಬರುವುದಿಲ್ಲ ಎಂಬ ಕಾರಣವನ್ನೊಡ್ಡಿದ ಪೌರಾಡಳಿತ ನಿರ್ದೇಶನಾಲಯ, ಗಣಿ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಬೇಡಿ ಎಂಬ ನಿರ್ದೇಶನ ನೀಡಿತ್ತು. ಸುಮಾರು 400 ಕ್ಕೂ ಹೆಚ್ಚು ಗಣಿ ಕಾಲೊನಿಗಳಲ್ಲಿ ಶೇ.90 ರಷ್ಟು ಜನ ಈಗಲೂ ಸಾರ್ವಜನಿಕ ಶೌಚಾಲಯ ಉಪಯೋಗಿಸುತ್ತಿದ್ದಾರೆ.

 

ನೀರಿಲ್ಲದ, ವಿದ್ಯುತ್ ಸಂಪರ್ಕವಿಲ್ಲದ, ವರ್ಷಕ್ಕೆ ಒಮ್ಮೆಯೂ ಸ್ವಚ್ಛಗೊಳಿಸದ ಶೌಚಾಲಯಗಳನ್ನು ಜನ ವಿಧಿಯಿಲ್ಲದೆ ಉಪಯೋಗಿಸುತ್ತಿದ್ದಾರೆ. ಹತ್ತಕ್ಕೆ ಹತ್ತು ಅಡಿ ವಿಸ್ತೀರ್ಣದಲ್ಲಿ ಕಟ್ಟಲಾದ ವಸತಿಗೃಹಗಳನ್ನು ದುರಸ್ತಿ ಮಾಡಲು ಗಣಿ ಭದ್ರತಾ ಸಿಬ್ಬಂದಿ ಬಿಡುತ್ತಿಲ್ಲ. ಮನೆ ಮುಂದೆ ಹರಿಯುತ್ತಿರುವ ಚರಂಡಿ ನೀರಿನಿಂದ ಉಂಟಾಗುತ್ತಿರುವ ಕಾಯಿಲೆಗಳನ್ನು ಮೂಕರಾಗಿ ಅನುಭವಿಸುತ್ತಿದ್ದಾರೆ.ಗಣಿ  ಕಾರ್ಮಿಕರಿಗೆ ಬದಲಿ ಉದ್ಯೋಗ ನೀಡುತ್ತೇವೆ ಎಂಬ ಘೋಷಣೆ ಕೂಡ ಕಾರ್ಯಗತಗೊಂಡಿಲ್ಲ. ಕಾರ್ಮಿಕರಿಂದ ಪಶುಸಂಗೋಪನೆ ಮಾಡಿಸಲು ನಡೆಸಿದ ಪ್ರಯತ್ನ ಕೂಡ ವಿಫಲವಾಯಿತು. ಬದಲಿ ಕಾರ್ಖಾನೆಗಳನ್ನು ಸ್ಥಾಪಿಸಲಾಗುವುದು, ವಿಶ್ವದ ಅತ್ಯಂತ ಆಳದ ಗಣಿಗಳನ್ನು ಪ್ರವಾಸೋದ್ಯಮ ತಾಣವನ್ನಾಗಿ ಮಾಡಲಾಗುವುದು, ಗಣಿಯ ಸುಮಾರು ಹನ್ನೆರಡು ಸಾವಿರ ಎಕರೆ ಪ್ರದೇಶವನ್ನು ಕೈಗಾರಿಕಾ ವಲಯ ಎಂದು ಘೋಷಿಸಿ, ಉದ್ಯಮಿಗಳನ್ನು ಆಹ್ವಾನಿಸಲಾಗುವುದು ಎಂಬ ಘೋಷಣೆಗಳೆಲ್ಲಾ ಈಗ ಅರ್ಥ ಕಳೆದುಕೊಂಡಿವೆ.ಸರ್ಕಾರ ತನ್ನ ಜವಾಬ್ದಾರಿಯನ್ನು ಮರೆತಿದ್ದರೂ ಗಣಿ ಕೆಲಸ ಕಳೆದುಕೊಂಡ ಕಾರ್ಮಿಕರು ಈಗ ವಿವಿಧ ವೃತ್ತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಪ್ರತಿನಿತ್ಯ ಹತ್ತು ಸಾವಿರಕ್ಕೂ ಹೆಚ್ಚು ಜನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಕ್ಕೆ ಕೆಲಸಕ್ಕೆ ಹೋಗಿ ಬದಲಿ ಉದ್ಯೋಗಾವಕಾಶವನ್ನು ಸಷ್ಟಿಸಿಕೊಂಡಿದ್ದಾರೆ.ಈಚೆಗೆ ಹೈಕೋರ್ಟ್ ನೀಡಿದ ಚಿನ್ನದ ಗಣಿಯ ಪುನರುಜ್ಜೀವನ ಕುರಿತ ನಿರ್ದೇಶನ ಕಾರ್ಮಿಕರಲ್ಲಿ ಹೊಸ ಆಸೆ ಮೂಡಿಸಿತ್ತು .  ಪ್ರಕರಣ ಈಗ ಸುಪ್ರಿಂ ಕೋರ್ಟಿನ ಅಂಗಳದಲ್ಲಿದೆ. ತೀರ್ಪಿಗಾಗಿ ಗಣಿ ಕಾರ್ಮಿಕರು ಮತ್ತು ಜನತೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.