ಮಂಗಳವಾರ, ಜನವರಿ 28, 2020
24 °C

ಕೆಪಿಎಸ್‌ಸಿ: ಸಿಸಿಟಿವಿ ದೃಶ್ಯ ಕಟ್‌!

ಪ್ರಜಾವಾಣಿ ವಾರ್ತೆ / ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮ್ಮ ಕಳ್ಳಾಟಗಳು ಗೊತ್ತಾ­­ಗ­ಬಾರದು ಎಂದು  ಲೋಕ­ಸೇವಾ ಆಯೋಗದ ಕಚೇರಿ ‘ಉದ್ಯೋಗ ಸೌಧ’ದಲ್ಲಿನ ಸಿಸಿಟಿವಿಯಲ್ಲಿ ದಾಖ­ಲಾದ ದೃಶ್ಯಗಳನ್ನು ಕೆಪಿಎಸ್‌ಸಿ ಅಧಿಕಾರ­ಸ್ಥರು ನಾಶ ಮಾಡಿದ್ದಾರೆ  ಎನ್ನುವ ಅಂಶವನ್ನು ಸಿಐಡಿ ಪೊಲೀಸರು ಪತ್ತೆ ಮಾಡಿದ್ದಾರೆ.ಉದ್ಯೋಗ ಸೌಧದಲ್ಲಿ ಒಟ್ಟು 25 ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಅಲ್ಲಿ ನಡೆಯುವ ಎಲ್ಲ ಚಟುವಟಿಕೆಗಳು ಪಾರ­ದರ್ಶಕವಾಗಿರಬೇಕು, ಭ್ರಷ್ಟಾಚಾರ ಮತ್ತು ಅಕ್ರಮಗಳ ಹೊರತಾಗಿರಬೇಕು ಹಾಗೂ ಸೌಧಕ್ಕೆ ಭದ್ರತೆ ಇರಬೇಕು ಎಂಬ ದೃಷ್ಟಿಯಿಂದ ಸಿಸಿಟಿವಿ ಅಳವಡಿಸ­ಲಾಗಿದೆ ಎಂದು ಸಿಐಡಿ ಪೊಲೀಸರಿಗೆ  ಕೆಪಿಎಸ್‌ಸಿ ಕಾರ್ಯದರ್ಶಿ ತಿಳಿಸಿದ್ದಾರೆ. ಆದರೆ ಪರಿಶೀಲನೆಯ ನಂತರ ಕಂಡು ಬಂದ ಅಂಶ ಎಂದರೆ ‘ಸಂದರ್ಶನದ ಕೊಠಡಿ ಹಾಗೂ ಸದಸ್ಯರ ಕೊಠಡಿಗಳಲ್ಲಿ ಮಾತ್ರ ಸಿಸಿಟಿವಿ ಇಲ್ಲ. ಅಲ್ಲಿ ನಡೆಯುವ ಯಾವುದೇ ಚಟವಟಿಕೆಗಳನ್ನು ದಾಖಲಿ­ಸು­ವ ವ್ಯವಸ್ಥೆ ಇರಲಿಲ್ಲ’.ಎಲ್ಲ 25 ಸಿಸಿಟಿವಿಗಳನ್ನು ಎರಡು ಡಿವಿಆರ್‌ (ಡಿಜಿಟಲ್‌ ವೀಡಿಯೊ ರೆಕಾ­ರ್ಡರ್‌)ಗಳಿಗೆ ಸಂಪರ್ಕಿಸಲಾಗಿದೆ. ಎರಡೂ ಡಿವಿಆರ್‌ಗಳ ನಿಯಂತ್ರಣ ಕೆಪಿಎಸ್‌ಸಿ ಅಧ್ಯಕ್ಷರು ಮತ್ತು ಕಾರ್ಯ­ದರ್ಶಿ ಕೊಠಡಿಯಲ್ಲಿವೆ. ಅಲ್ಲಿಂದಲೇ ಅವರು ಉದ್ಯೋಗ ಸೌಧದಲ್ಲಿ ಏನು ನಡೆಯುತ್ತಿವೆ ಎನ್ನುವುದನ್ನು ಗಮನಿ­ಸಲು ಸಾಧ್ಯವಾಗುವಂತೆ ಕಂಪ್ಯೂಟರ್‌ ಪರದೆಗಳಿವೆ.ಸಿಸಿಟಿವಿಯಲ್ಲೂ ನಕಲಿ: ಎಲ್‌.ಜಿ. ಕಂಪೆನಿ ಉತ್ಪಾದಿಸಿದ ಎರಡೂ ಡಿವಿಆರ್‌­ಗಳನ್ನು ತನಿಖೆಯ ದೃಷ್ಟಿಯಿಂದ ಸಿಐಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಡಿವಿಆರ್‌–1010­ಟಿಇಎಫ್‌ಕ್ಯು­002­707 ಹಾಗೂ ಡಿವಿಆರ್‌–2­010­ಟಿ­ಇ­ಸಿಜಿ­002715 ಕ್ರಮ ಸಂಖ್ಯೆ ಹೊಂದಿವೆ. ಎರಡೂ ಡಿವಿಆರ್‌ಗಳನ್ನು 2010ರ ಅಕ್ಟೋಬರ್‌ನಲ್ಲಿ ತಯಾರಿಸ­ಲಾಗಿದೆ.ಡಿವಿಆರ್‌–1 ಸರಿಯಾಗಿದೆ. ಆದರೆ ಡಿವಿಆರ್‌–2ನ್ನು ಬದಲಾಯಿಸಲಾಗಿದೆ. ಡಿವಿಆರ್‌ಗಳ ಖರೀದಿ ವಿವರಗಳಲ್ಲಿ ಇರುವ ಕ್ರಮ ಸಂಖ್ಯೆಗೂ ಸಿಐಡಿ ವಶ­ಪಡಿಸಿಕೊಂಡ ಡಿವಿಆರ್‌–2 ಸಂಖ್ಯೆಗೂ ವ್ಯತ್ಯಾಸವಿದೆ. ಡಿವಿಆರ್‌–1ರ ನಂಬರ್‌ ಸರಿಯಾಗಿಯೇ ಇದೆ. ಇದನ್ನು ಉದ್ದೇಶ­ಪೂರ್ವಕವಾಗಿಯೇ ಮಾಡಲಾಗಿದೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಿದಾಗ ಇನ್ನಷ್ಟು ಸತ್ಯಗಳು ಹೊರಬಂದಿವೆ.ಕೆಪಿಎಸ್‌ಸಿಗೆ ಈ ಡಿವಿಆರ್‌ಗಳನ್ನು ಒದಗಿಸಿದ ಮಾರಾಟಗಾರರನ್ನು ಸಿಐಡಿ ಪೊಲೀಸರು ಸಂಪರ್ಕಿಸಿ ವಿವರಗಳನ್ನು ಪಡೆದಿದ್ದಾರೆ. ಕೆಪಿಎಸ್‌ಸಿಯಲ್ಲಿರುವ ಡಿವಿಆರ್‌–2ನ್ನು ತಾವು ಒದಗಿಸಿಲ್ಲ. ಅಲ್ಲದೆ ಅದು ತಮ್ಮ ಕಂಪೆನಿಯ ಉತ್ಪಾದನೆಯೂ ಅಲ್ಲ ಎಂದು ಅವರು ಹೇಳಿದ್ದಾರೆ. 28–2–2012ರಿಂದ ಈ ಡಿವಿಆರ್‌ಗಳ ಮೇಲ್ವಿಚಾರಣೆಯನ್ನು  ಕೆಪಿಎಸ್‌ಸಿ ಉಪ ಕಾರ್ಯದರ್ಶಿ ಲಕ್ಷ್ಮಣ್‌ ಎಸ್‌.ಕುಕೇನ್‌  ನೋಡಿಕೊಳ್ಳು­ತ್ತಿದ್ದರು.

  ಡಿವಿಆರ್‌ ಮತ್ತು ಬಯೋ­ಮೆಟ್ರಿಕ್‌ ವ್ಯವಸ್ಥೆಯ ನಿಯಂತ್ರಣ ಮಾಡುವ ಕೋಣೆಯ ಜವಾಬ್ದಾರಿ­ಯ­ನ್ನು ಪ್ರಸನ್ನ, ಎಸ್‌.ಶಶಿಕುಮಾರ್‌, ಎಚ್‌.­ಎಂ.­ಕಿರಣ್‌ ನೋಡಿಕೊಳ್ಳು­ತ್ತಿದ್ದ­ರು­.­ ಆಯೋಗದ ಕಾರ್ಯದರ್ಶಿ, ಅಧ್ಯಕ್ಷ ಹಾಗೂ ಸದಸ್ಯರ ಸಲಹೆಯಂತೆ ಡಿವಿ­ಆರ್‌–2ನ್ನು ಉಪ ಕಾರ್ಯದರ್ಶಿ ಕುಕೇನ್‌ ಮತ್ತು ಅವರ ಸಹಾಯಕರು ಬದಲಾಯಿಸಿದ್ದರು ಎನ್ನುವುದು ತನಿಖೆ­ಯಿಂದ ದೃಢಪಟ್ಟಿದೆ.ಮೂಲ ಡಿವಿಆರ್‌ನಲ್ಲಿ ಇರುವ ದಾಖಲೆಗಳನ್ನು ನಾಶ ಮಾಡುವ ಉದ್ದೇಶ­ದಿಂದಲೇ ಡಿವಿಆರ್‌ ಬದಲಾ­ವಣೆ ಮಾಡಲಾಗಿದೆ ಎಂದು ಸಿಐಡಿ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಉದ್ಯೋಗ ಸೌಧದ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಸಿಸಿಟಿವಿಗಳ ಮಾಹಿತಿ­ಯನ್ನು ಹೊಂದಿರುವ ಡಿವಿಆರ್‌ ಬದ­ಲಾ­ಯಿ­ಸಲಾಗಿಲ್ಲ. ಯಾಕೆಂದರೆ ಅಲ್ಲಿ ದಾಖಲಾದ ದೃಶ್ಯಗಳು ಹೆಚ್ಚು ಮಹತ್ವ­ದ್ದಾಗಿರಲಿಲ್ಲ. ಆದರೆ ಡಿವಿಆರ್‌–2ನಲ್ಲಿ ದಾಖಲಾದ ದೃಶ್ಯಗಳು ಮಹತ್ವ­ದ್ದಾ­ಗಿದ್ದವು.

ಅಭ್ಯರ್ಥಿಗಳ ಚಲನವಲನ, ಅಧ್ಯಕ್ಷರು ಮತ್ತು ಸದಸ್ಯರ ಏಜೆಂಟ್‌ಗಳ ಚಲನ­ವಲನಗಳು ಡಿವಿಆರ್‌–2ನಲ್ಲಿ ಸೆರೆ­ಯಾಗಿದ್ದವು.ಮೂಲ ಡಿವಿಆರ್‌–2 ಪತ್ತೆ ಮಾಡುವ ಕಾರ್ಯ ನಡೆಯುತ್ತಿದೆ. ಈ ಡಿವಿಆರ್‌ ಜೊತೆಗೆ ಸಂಪರ್ಕ ಹೊಂದಿದ 16 ಸಿಸಿಟಿವಿಗಳಿವೆ. ಇದರಲ್ಲಿ ಆಯೋ­ಗದ ಅಧ್ಯಕ್ಷರ ಕೋಣೆಗೆ ಹೋಗುವವರ ವಿವರಗಳನ್ನು ದಾಖಲಿಸುವಂತೆ 2ನೇ ಮಹಡಿಯ ಎಡಬದಿಗೆ ಲಿಫ್ಟ್‌ನ ಮೇಲೆ ಒಂದು ಸಿಸಿಟಿವಿ ಇದೆ. ರಹಸ್ಯಶಾಖೆ ಮತ್ತು  ಸಂದರ್ಶನ ಕೊಠಡಿಗೆ ಹೋಗುವ ವ್ಯಕ್ತಿಗಳ ದೃಶ್ಯವನ್ನು ಸೆರೆ ಹಿಡಿಯಲು ಅನುಕೂಲವಾಗುವಂತೆ ಮೊದಲ ಮಹಡಿಯ ಎಡಬದಿಗೆ ಲಿಫ್ಟ್‌ನ ಮೇಲೆ ಒಂದು ಸಿಸಿಟಿವಿ ಇದೆ.

ನೇಮಕಾತಿ ವಿಭಾಗಕ್ಕೆ ಹೋಗುವವರ ದೃಶ್ಯವನ್ನು ಸೆರೆ ಹಿಡಿಯಲು ಅನುಕೂಲ­ವಾಗುವಂತೆ 3ನೇ ಮಹಡಿಯ ಎಡ ಬದಿಗೆ ಲಿಫ್ಟ್‌ನ ಮೇಲಿನ ಭಾಗದಲ್ಲಿ ಇನ್ನೊಂದು ಸಿಸಿಟಿವಿ ಇಡಲಾಗಿದೆ. ಉದ್ಯೋಗ ಸೌಧದ ಪ್ರವೇಶದ್ವಾರವನ್ನು ದಾಖಲಿಸಲು ಅನುಕೂಲವಾಗುವ ಹಾಗೆ ಒಂದು, 4ನೇ ಮಹಡಿಯಲ್ಲಿ ಪರೀಕ್ಷಾ ಕೊಠಡಿಗೆ ಹೋಗುವವರನ್ನು ದಾಖಲಿಸಲು ಅನುಕೂಲವಾಗುವ ಹಾಗೆ ಒಂದು, ಸಹಾಯಕ ಕಾರ್ಯ­ದರ್ಶಿ­ಗಳ ಕೋಣೆಗೆ ಹೋಗುವ ವ್ಯಕ್ತಿಗಳ ದೃಶ್ಯವನ್ನು ಸೆರೆ ಹಿಡಿಯಲು ಅನುಕೂಲ­ವಾಗುವಂತೆ ಒಂದು ಸಿಸಿಟಿವಿ ಇದೆ. ಈ ಸಿಸಿಟಿವಿಗಳಲ್ಲಿ ದಾಖಲಾದ ದೃಶ್ಯಗಳನ್ನು ನಾಶ ಮಾಡಲಾಗಿದೆ.2011ರ ಗೆಜೆಟೆಡ್‌ ಅಧಿಕಾರಿಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು 25–6–2013ರಂದು ದೂರು ದಾಖಲಾದ ನಂತರ ಈ ಡಿವಿಆರ್‌ ಬದಲಾವಣೆ ಮಾಡಲಾಗಿದೆ. ಆರೋಪಿ­ಗಳು ಅಪರಾಧದ ಜೊತೆಗೆ ಸಾಕ್ಷ್ಯವನ್ನು ನಾಶ ಮಾಡುವ ಕೆಲಸವನ್ನೂ ಮಾಡಿದ್ದಾರೆ. ಅದೇ ಉದ್ದೇಶದಿಂದ 26–6–2013 ಅಥವಾ ಅದಕ್ಕೂ ಮೊದಲು ಡಿವಿಆರ್‌–2 ಬದಲಾವಣೆ ಮಾಡಿದ್ದಾರೆ. ಮೂಲ ಡಿವಿಆರ್‌ ಬದಲಿಗೆ 500ಜಿಬಿ ತಂದು ಹಾಕಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

(ಕೆಪಿಎಸ್‌ಸಿ ಸುಧಾರಣೆಗೆ ಸಿಐಡಿ ಸಲಹೆ: ನಾಳಿನ ಸಂಚಿಕೆಯಲ್ಲಿ)

ಪ್ರತಿಕ್ರಿಯಿಸಿ (+)