ಮಂಗಳವಾರ, ಮಾರ್ಚ್ 9, 2021
23 °C

ಕೆಲಸಕ್ಕಿದ್ದ ಮಳಿಗೆಗೆ ಕನ್ನ ಹಾಕಿದ ನೌಕರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಲಸಕ್ಕಿದ್ದ ಮಳಿಗೆಗೆ ಕನ್ನ ಹಾಕಿದ ನೌಕರ!

ಬೆಂಗಳೂರು: ಬಾಗಲೂರು ಸಮೀಪದ ದ್ವಾರಕಾನಗರದ ‘ರಾಜೇಶ್ವರಿ ಜ್ಯುವೆಲರಿ’ ಮಳಿಗೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ಮಳಿಗೆಯ ನೌಕರ ಸೇರಿ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.‘ಗೋಪಾಲ್‌ ಉರ್ಫ್‌್ ಗೋಪಾರಾಮ್‌್   (24), ಪಾರಸ್‌ಮಾಲ್‌, ಎ. ಮಂಜುನಾಥ್‌ ಹಾಗೂ ಎನ್‌. ಮುನಿಯಪ್ಪ ಬಂಧಿತರು. ಅವರಿಂದ 2 ಕೋಟಿ ಮೌಲ್ಯದ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ’ ಎಂದು ಬಾಗಲೂರು ಪೊಲೀಸರು ತಿಳಿಸಿದರು.‘ರಾಜಸ್ತಾನ ಮೂಲದ ಆರೋಪಿ ಗೋಪಾಲ್‌, ಕೆಲಸ ಹುಡುಕಿಕೊಂಡು 13 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಯಲಹಂಕದಲ್ಲಿದ್ದ  ಸಂಬಂಧಿಕರೊಬ್ಬರ ಜ್ಯುವೆಲರಿ ಮಳಿಗೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಅಲ್ಲಿ ಆತನಿಗೆ ಕಡಿಮೆ ಸಂಬಳ ನೀಡುತ್ತಿದ್ದ ಮಾಲೀಕರು, ದಿನಪೂರ್ತಿ ದುಡಿಸಿಕೊಳ್ಳುತ್ತಿದ್ದರು.

‘ಸಂಬಳ ಹೆಚ್ಚಿಸಬೇಕು ಎಂದು ಗೋಪಾಲ್‌ ಒತ್ತಾಯಿಸಿದಾಗ ಸ್ವಂತದ್ದೊಂದು ಮಳಿಗೆ ಇಟ್ಟುಕೊಡುವುದಾಗಿ ಭರವಸೆ ನೀಡಿದ್ದರು. ಆದರೆ ಮಳಿಗೆ ಮಾಡಿಕೊಡದ ಮಾಲೀಕರು, ಕೆಲಸದಿಂದಲೇ ತೆಗೆದು ಹಾಕಿದ್ದರು’ ಎಂದು ಮಾಹಿತಿ ನೀಡಿದರು.‘ಎರಡು ವರ್ಷ ರಾಜಸ್ತಾನಕ್ಕೆ ಹೋಗಿದ್ದ ಆರೋಪಿ, ಪುನಃ ನಗರಕ್ಕೆ ಬಂದು ‘ರಾಜಲಕ್ಷ್ಮೀ ಜ್ಯುವೆಲರ್‌’ ಮಳಿಗೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಅದರ ಮಾಲೀಕರು ಸಹ ಹೊಸ ಅಂಗಡಿ ಹಾಕಿಕೊಡುವುದಾಗಿ ಹೇಳಿ, ಕಡಿಮೆ ಸಂಬಳ ಕೊಟ್ಟು ದುಡಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ಬೇರೆ ಹುಡುಗನನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದ ಮಾಲೀಕರು, ಗೋಪಾಲನೇ ಕೆಲಸದಿಂದ ಬಿಟ್ಟು ಹೋಗಲಿ ಎಂದು ಕಿರುಕುಳ ನೀಡುತ್ತಿದ್ದರು. ಸರಿಯಾಗಿ ಸಂಬಳವನ್ನೂ ನೀಡುತ್ತಿರಲಿಲ್ಲ.

‘ಮಾಲೀಕರ ವರ್ತನೆಯಿಂದ ಬೇಸತ್ತ ಗೋಪಾಲ್‌, ತನ್ನ ಸಹಚರರ ಮೂಲಕ ಮಳಿಗೆ ಕಳವು ಮಾಡಲು ಯೋಜನೆ ರೂಪಿಸಿದ್ದ. ಅದರಂತೆ ಆಗಸ್ಟ್‌ 5ರಂದು ಗ್ರಾಹಕರ ನೆಪದಲ್ಲಿ ಮಳಿಗೆಗೆ ಬಂದಿದ್ದ ಸಹಚರರು, ಅಂಗಡಿಯಲ್ಲಿದ್ದವರನ್ನು ಹೆದರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು’ ಎಂದು ತನಿಖಾಧಿಕಾರಿ ತಿಳಿಸಿದರು.ಪೊಲೀಸರನ್ನೇ ಯಾಮಾರಿಸಿದ್ದ: ಘಟನೆ ನಡೆದ ದಿನದಂದು ಗೋಪಾಲ್‌ ಮಾತ್ರ ಮಳಿಗೆಯಲ್ಲಿದ್ದ.  ಕಳ್ಳತನ ಬಳಿಕ ಸ್ಥಳಕ್ಕೆ ಬಂದಿದ್ದ ಪೊಲೀಸರಿಗೆ ತಪ್ಪು ಮಾಹಿತಿ ನೀಡಿ ತನಿಖೆಯ ದಾರಿ ತಪ್ಪಿಸಿದ್ದ.

‘ಕೆಲ ಅಪರಿಚಿತರು ಬಂದು ಹೆದರಿಸಿ ಚಿನ್ನಾಭರಣ ಕದ್ದೊಯ್ದಿದ್ದಾರೆ. ಅವರು ಯಾರು ಎಂಬುದು ನನಗೆ ಗೊತ್ತಿಲ್ಲವೆಂದು ಗೋಪಾಲ್‌ ಹೇಳಿಕೆ ನೀಡಿದ್ದ. ಮಾಲೀಕ ಗೋವಿಂದ್‌ಸಿಂಗ್‌್ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದಾಗ ಆತನೇ ಆರೋಪಿ ಎಂಬುದು ಗೊತ್ತಾಯಿತು’ ಎಂದು ತನಿಖಾಧಿಕಾರಿ ತಿಳಿಸಿದರು.‘ಕದ್ದ ಚಿನ್ನಾಭರಣವನ್ನು ವಾಹನದಲ್ಲಿ ತೆಗೆದುಕೊಂಡು ಹೋಗಿ ಮನೆಯೊಂದರಲ್ಲಿ ಮುಚ್ಚಿಟ್ಟಿದ್ದರು. ಅದೇ ಚಿನ್ನಾಭರಣ ಬಳಸಿ ಹೊಸ ಮಳಿಗೆ ತೆರೆಯಲು ಗೋಪಾಲ್‌್ ಯೋಚಿಸಿದ್ದ’ ಎಂದು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.