ಶನಿವಾರ, ಮೇ 8, 2021
26 °C

ಕೊಚ್ಚಿ ಜೊತೆಗಿನ ಒಪ್ಪಂದ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ/ಐಎಎನ್‌ಎಸ್): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ ಕೊಚ್ಚಿ ಟಸ್ಕರ್ಸ್ ಕೇರಳ ಜೊತೆಗಿನ ಒಪ್ಪಂದವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರದ್ದುಮಾಡಿದೆ.ಬ್ಯಾಂಕ್ ಖಾತರಿ ಮೊತ್ತ ವನ್ನು ನೀಡಲು ತಂಡ ವಿಫಲವಾದ ಕಾರಣ ಮಂಡಳಿ ಈ ನಿರ್ಧಾರ ಕೈಗೊಂಡಿದೆ.

ಇದರಿಂದ ಸಾಕಷ್ಟು ವಿವಾದಗಳೊಂದಿಯೇ ಐಪಿಎಲ್‌ಗೆ ಕಾಲಿರಿಸಿದ್ದ ಕೊಚ್ಚಿ ತಂಡ ಒಂದೇ ವರ್ಷದಲ್ಲಿ ಲೀಗ್‌ನಿಂದ ಹೊರಬಿದ್ದಿದೆ. ಸೋಮವಾರ ನಡೆದ ಬಿಸಿಸಿಐ ವಾರ್ಷಿಕ ಮಹಾಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.`ಕೊಚ್ಚಿ ಫ್ರಾಂಚೈಸಿ ಒಪ್ಪಂದದ ನೀತಿ ಸಂಹಿತೆಯನ್ನು ಮುರಿದಿದೆ. ಇದರಿಂದ ಬಿಸಿಸಿಐ ತನ್ನ ವಶದಲ್ಲಿರುವ ಬ್ಯಾಂಕ್ ಖಾತರಿ ಮೊತ್ತವನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಅದೇ ರೀತಿ ಕೊಚ್ಚಿ ತಂಡದ ಒಪ್ಪಂದವನ್ನು ರದ್ದುಮಾಡಿದೆ~ ಎಂದು ನೂತನ ಅಧ್ಯಕ್ಷ ಎನ್. ಶ್ರೀನಿವಾಸನ್ ನುಡಿದರು.ಮಂಡಳಿಯು ಕೊಚ್ಚಿ ತಂಡಕ್ಕೆ ಐಪಿಎಲ್‌ಗೆ ಮರಳಲು ಇನ್ನೊಂದು ಅವಕಾಶ ನೀಡುತ್ತದೆಯೇ ಎಂಬ ಪ್ರಶ್ನೆಗೆ ಅವರು, `ಇಲ್ಲ. ಕೊಚ್ಚಿ ತಂಡದ ನೀತಿ ಸಂಹಿತೆ ಉಲ್ಲಂಘಿಸಿದೆ. ಅದನ್ನು ಮತ್ತೆ ಸರಿಪಡಿಸಲು ಸಾಧ್ಯವಿಲ್ಲ~ ಎಂದು ಉತ್ತರಿಸಿದ್ದಾರೆ.ಮಂಡಳಿಯ ಜೊತೆಗಿನ ಒಪ್ಪಂದದ ಪ್ರಕಾರ ಫ್ರಾಂಚೈಸಿ ಪ್ರತಿ ವರ್ಷ 156 ಕೋಟಿ ರೂ. ಮೊತ್ತವನ್ನು ಬ್ಯಾಂಕ್ ಖಾತರಿ ರೂಪದಲ್ಲಿ ಪಾವತಿಸಬೇಕಿತ್ತು. ಆದರೆ ನಿಗದಿತ ದಿನಾಂಕದೊಳಗೆ ಇದನ್ನು ಪಾವತಿಸಲು ವಿಫಲವಾಗಿದೆ.ಕೊಚ್ಚಿ ತಂಡವನ್ನು ಹರಾಜಿನಲ್ಲಿ 1550 ಕೋಟಿ ರೂ.ಗೆ ಖರೀದಿಸಲಾಗಿತ್ತು. ಗುಜರಾತ್ ಮೂಲದ ಉದ್ಯಮಿಗಳು ತಂಡವನ್ನು ಖರೀದಿಸಿದ್ದರು. ಈ ವೇಳೆ ಮಾಡಿದ ಒಪ್ಪಂದದಂತೆ ಮುಂದಿನ 10 ವರ್ಷಗಳವರೆಗೆ ಬ್ಯಾಂಕ್ ಖಾತರಿ ಮೊತ್ತ ಪಾವತಿಸಬೇಕಾಗಿತ್ತು.ಕಾನೂನು ಹೋರಾಟ: ತಮ್ಮ ಜೊತೆಗಿನ ಒಪ್ಪಂದವನ್ನು ರದ್ದುಗೊಳಿಸಿದ ಮಂಡಳಿಯ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಂಡದ ನಿರ್ದೇಶಕ ಮುಖೇಶ್ ಪಾಟೀಲ್ ಹೇಳಿದ್ದಾರೆ. `ನಾವು ಬಿಸಿಸಿಐಗೆ ನೀಡಲು ಯಾವುದೇ ಬಾಕಿ ಹಣ ಉಳಿದಿಲ್ಲ. ಮಂಡಳಿಯ ನಿರ್ಧಾರ ಕಾನೂನುಬಾಹಿರವಾದದ್ದು ಎಂದಿದ್ದಾರೆ.ರೂ. 190 ಕೋಟಿ ಲಾಭ

ಮುಂಬೈ (ಪಿಟಿಐ):
ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಎನಿಸಿರುವ ಬಿಸಿಸಿಐ 2010-11ರ ಅವಧಿಯಲ್ಲಿ 189.72 ಕೋಟಿ ರೂ. ನಿವ್ವಳ ಲಾಭ ಪಡೆದಿದೆ.ಬಿಸಿಸಿಐ ಖಜಾಂಚಿ ಎಂ.ಪಿ. ಪಾಂಡೋವ್ ತಮ್ಮ ವರದಿಯಲ್ಲಿ ಈ ವಿಷಯ ತಿಳಿಸಿದರು. ಮೂರು ವರ್ಷದ ಅಧಿಕಾರದ ಅವಧಿ ಪೂರ್ಣಗೊಂಡ ಕಾರಣ ಪಾಂಡೋವ್ ಸೋಮವಾರ ಹುದ್ದೆಯಿಂದ ಕೆಳಗಿಳಿದರು.2010-11ರ ಅವಧಿಯಲ್ಲಿ ಬಿಸಿಸಿಐ ಒಟ್ಟು 2026.39 ಕೋಟಿ ರೂ. ಆದಾಯ ಗಳಿಸಿದೆ. ಇದರಲ್ಲಿ ಹೆಚ್ಚಿನ ಪಾಲು ಮಾಧ್ಯಮ ಪ್ರಸಾರ ಹಕ್ಕು (1047 ಕೋಟಿ) ಮತ್ತು ಪ್ರಾಯೋಜಕರಿಂದ (434.77 ಕೋಟಿ) ಬಂದಿವೆ. ಅದೇ ರೀತಿ ಐಪಿಎಲ್ ತಂಡಗಳ ಹರಾಜು (289.44 ಕೋಟಿ), ಐಸಿಸಿ/ ಏಷ್ಯನ್ ಕ್ರಿಕೆಟ್ ಸಮಿತಿ (104.80 ಕೋಟಿ), ಬಡ್ಡಿ ಮತ್ತು ಇತರ ಮೂಲಗಳಿಂದ (73.68 ಹಾಗೂ 76.63 ಕೋಟಿ) ಮಂಡಳಿಗೆ ಆದಾಯ ಲಭಿಸಿದೆ. ಈ ಅವಧಿಯಲ್ಲಿ ಮಂಡಳಿ ಒಟ್ಟು 1836.67 ಕೋಟಿ ರೂ. ಖರ್ಚು ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.