ಸೋಮವಾರ, ಜನವರಿ 20, 2020
27 °C

ಕೋಪದ ಬೆಂಕಿಯಲ್ಲಿ...

ಡಿ.ಗರುಡ Updated:

ಅಕ್ಷರ ಗಾತ್ರ : | |

ಇಂಗ್ಲೆಂಡ್ ಪ್ರವಾಸ ಕಾಲದಲ್ಲಿ ಸತತ ನಾಲ್ಕು ಟೆಸ್ಟ್ ಸೋತಾಗ ಭಾರತ ತಂಡದ ಮೇಲೆ ಕೋಪದ ಕೆಂಡ ಸುರಿಯಲಾಗಿತ್ತು. ಈಗ ಆಸ್ಟ್ರೇಲಿಯಾದಲ್ಲಿ ಸತತ ಮೂರು ಟೆಸ್ಟ್ ಪಂದ್ಯಗಳಲ್ಲಿ ನಿರಾಸೆಯಾಗಿದೆ.

ಸ್ವದೇಶದಲ್ಲಿ ವಿಂಡೀಸ್ ವಿರುದ್ಧ ಸರಣಿ ಗೆದ್ದಾಗ ತಣ್ಣಗಾಗಿದ್ದ ಟೀಕಾಕಾರರು ಮತ್ತೆ ಎದ್ದು ಕುಳಿತಿದ್ದಾರೆ. ಕಾಂಗರೂಗಳ ನಾಡಿನ ವೇಗದ ಪಿಚ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳು ಸಾಲು ಸಾಲಾಗಿ ನೆಲಕಚ್ಚುತ್ತಿದ್ದಂತೆಯೇ ಮಾಜಿ ಕ್ರಿಕೆಟಿಗರು ಕಟು ಮಾತುಗಳನ್ನು ಹರಿಬಿಟ್ಟಿದ್ದಾರೆ.

ಈ ಟೀಕೆಗಳ ಪ್ರವಾಹದಲ್ಲಿ ನಾಲ್ಕು ಅಂಶಗಳು ಎದ್ದು ಕಾಣಿಸಿವೆ. ಮೊದಲನೆಯದು ಹಣ ಮಾಡುವ ಆಸೆಯಲ್ಲಿ ಸರಣಿಪೂರ್ವ ಶಿಬಿರ ಆಯೋಜಿಸುವುದನ್ನು ಬಿಸಿಸಿಐ ಮರೆತಿದ್ದು. ತಾಲೀಮು ಹಾಗೂ ದೇಶಿ ಕ್ರಿಕೆಟ್‌ನಲ್ಲಿ ಆಡುವುದಕ್ಕೆ ಹಿರಿಯ ಆಟಗಾರರಿಗೆ ಅವಕಾಶ ಸಿಗದಂತೆ ಬಿಗುವಿನ ಕಾರ್ಯಕ್ರಮ ಪಟ್ಟಿಯನ್ನು ಒಪ್ಪಿಕೊಂಡಿದ್ದು, ಐಪಿಎಲ್ ಟ್ವೆಂಟಿ-20 ಟೂರ್ನಿಯಂಥ `ಫಾಸ್ಟ್‌ಫುಡ್~ ಕ್ರಿಕೆಟ್‌ಗೆ ಒತ್ತು ನೀಡಿದ್ದು ಹಾಗೂ ಬಿಸಿಸಿಐ ತಾಂತ್ರಿಕ ಸಮಿತಿಯು ದೀರ್ಘ ಕಾಲದಿಂದ ತಣ್ಣಗೇ ಕುಳಿತಿದ್ದು. ಇವೇ ನಾಲ್ಕು ಸಮಸ್ಯೆಯ ಮೂಲಗಳು. ಇವುಗಳನ್ನು ಸರಿ ಮಾಡಬೇಕು ಎನ್ನುವುದು ಅವರ ಧ್ವನಿ.ಕ್ರಿಕೆಟ್ ತಾಂತ್ರಿಕ ಸಮಿತಿಯು ಸರಿಯಾದ ರೀತಿಯಲ್ಲಿ ಕೆಲಸ ಮಾಡಿದರೆ ದೇಶದ ಆಟಗಾರರು ಯಾವುದೇ ರೀತಿಯ ಅಂಗಳದಲ್ಲಿ ನಿರ್ಭಯವಾಗಿ ಬ್ಯಾಟಿಂಗ್ ಮಾಡಲು ಸಾಧ್ಯ ಎನ್ನುವುದು ಕೆಲವು ಪ್ರಜ್ಞಾವಂತ ಕ್ರಿಕೆಟ್ ಪಂಡಿತರ ವಿಶ್ಲೇಷಣೆ.

ಅವರು ಟೆಸ್ಟ್‌ನಲ್ಲಿನ ನೀರಸ ಬ್ಯಾಟಿಂಗ್ ಪ್ರದರ್ಶನಕ್ಕೆ ಐಪಿಎಲ್ ಅನ್ನು ಹೊಣೆಯಾಗಿಸುವುದಿಲ್ಲ. ಮೂಲ ಸಮಸ್ಯೆಯ ಕಡೆಗೆ ಮಾತ್ರ ಅವರ ಗಮನ. ಯಾವುದೇ ಒಂದು ಕ್ರಿಕೆಟ್ ಪ್ರಕಾರದ ಜನಪ್ರಿಯತೆಯಿಂದ ಚೆಂಡು-ದಾಂಡಿನ ಆಟದ ಮೂಲ ಸ್ವರೂಪಕ್ಕೆ ಧಕ್ಕೆ ಆಗುತ್ತದೆನ್ನುವ ಗದ್ದಲದ ನಡುವೆ ಇಂಥವರ ಅಭಿಪ್ರಾಯಗಳು ಮರೆಯಾಗಿ ಹೋಗ್ದ್ದಿದು ದುರಂತ.ಎಪ್ಪತ್ತೆಂಟು ವರ್ಷ ವಯಸ್ಸಿನ ಬಾಪು ನಾಡಕರ್ಣಿ ಅವರಿಗೆ ಐಪಿಎಲ್ ಬಗ್ಗೆ ಆಕ್ಷೇಪವಿಲ್ಲ. `ತಿದ್ದುವ ಕೆಲಸ ಆಗಬೇಕಾಗಿದ್ದು ಅಂತರರಾಷ್ಟ್ರೀಯ ಮಟ್ಟವನ್ನು ಮುಟ್ಟಿದ ಮೇಲೆ ಅಲ್ಲ. ಪ್ರಾಥಮಿಕ ತರಬೇತಿ ಹಂತದಲ್ಲಿ. ಹೊಸಬರನ್ನು ಎಲ್ಲ ರೀತಿಯ ಪರಿಸ್ಥಿತಿಯಲ್ಲಿ ಆಡುವ ಮಟ್ಟದಲ್ಲಿ ಸಜ್ಜುಗೊಳಿಸುತ್ತಿಲ್ಲ. ಬದಲಿಗೆ ಹೊಸದಾಗಿ ಬಂದ ಕ್ರಿಕೆಟ್ ಪ್ರಕಾರವನ್ನು ದೂರಲಾಗುತ್ತಿದೆ~ ಎಂದಿರುವ ಅವರು `ನಮ್ಮ ಆಟಗಾರರ ಮೇಲೆ ಪರಿಣಾಮ ಆಗಿದ್ದರೆ, ಟ್ವೆಂಟಿ-20 ಆಡುವ ಬೇರೆ ದೇಶಗಳ ಕ್ರಿಕೆಟಿಗರ ಮೇಲೂ ಅಂಥ ಪ್ರಭಾವ ಆಗಬೇಕಿತ್ತು. ಆಸ್ಟ್ರೇಲಿಯಾದವರು ಆಡುವ ರೀತಿ ನೋಡಿದರೆ ಹಾಗೆ ಅನಿಸದು~ ಎಂದಿದ್ದಾರೆ.

ಅವರ ಈ ಮಾತು ಸರಿಯಾದ ದಿಕ್ಕಿನಲ್ಲಿ ಯೋಚಿಸುವುದಕ್ಕೆ ಮಾರ್ಗಸೂಚಿ.ಆದರೆ ಕೆಲವರು ಮಾತ್ರ, ಬಾಯಿ ಬಿಟ್ಟರೆ `ಐಪಿಎಲ್~ ಮೇಲೆ ಬೀಳುತ್ತಾರೆ. ಟಿ-20 ಪರಿಣಾಮವಾಗಿ  ಟೆಸ್ಟ್‌ನಲ್ಲಿ ಆಡುವುದನ್ನು ಆಟಗಾರರು ಮರೆಯುತ್ತಿದ್ದಾರೆ. ಆಕ್ರಮಣಕಾರಿ ಆಟದ ಆತುರ ಹೆಚ್ಚುತ್ತಿದೆ. ಈಗಿನ ದುಃಸ್ಥಿತಿಗೆ ನೇರವಾಗಿ ಐಪಿಎಲ್ ಕಾರಣ ಎನ್ನುವುದು ಹೆಚ್ಚಿನ ಮಾಜಿ ಕ್ರಿಕೆಟಿಗರ ಅಭಿಪ್ರಾಯ.

ಆದರೆ ನಾಡಕರ್ಣಿ ಅವರಂಥವರು ಮಾತ್ರ `ಕೆಲವೇ ವಾರ ನಡೆಯುವ ಚುಟುಕು ಕ್ರಿಕೆಟ್ ಟೂರ್ನಿಯೊಂದು ಸತ್ವಯುತವಾಗಿ ಸಜ್ಜಾದ ಬ್ಯಾಟ್ಸ್‌ಮನ್‌ಗಳ ನೈಜ ಆಟದ ಶೈಲಿ ಸಂಪೂರ್ಣವಾಗಿ ಬದಲಿಸದು~ ಎಂಬ ವಾದ ಮುಂದಿಟ್ಟಿದ್ದಾರೆ.ಕ್ರಿಕೆಟ್ ಮಂಡಳಿ ಮೊದಲು ಹಣದ ಬಗ್ಗೆ ಯೋಚಿಸುತ್ತದೆ. ಅದಕ್ಕೆ ಕಾರಣ ಬಿಸಿಸಿಐ ಉನ್ನತ ಹುದ್ದೆಯಲ್ಲಿ ಇರುವವರೆಲ್ಲ ವ್ಯಾಪಾರಿಬುದ್ಧಿ ಹೊಂದಿದವರೇ ಆಗಿದ್ದಾರೆ. ಭಾರತ ತಂಡದ ಮಾಜಿ ನಾಯಕ ಬಿಷನ್ ಸಿಂಗ್ ಬೇಡಿ ಅವರು ಕ್ರಿಕೆಟ್ ಮಂಡಳಿ ವಿರುದ್ಧ ಸದಾ ಖಡ್ಗ ಹಿರಿದು ನಿಲ್ಲುವುದೂ ಇದೇ ಕಾರಣಕ್ಕೆ.

`ಕ್ರಿಕೆಟ್ ವೃತ್ತಿಪರರು ದೇಶದಲ್ಲಿ ಈ ಆಟದ ಆಡಳಿತವನ್ನು ನಡೆಸುತ್ತಿಲ್ಲ. ಅದರಿಂದ ಎಲ್ಲವೂ ಹಾದಿ ತಪ್ಪುತ್ತಿದೆ. ಕ್ರಿಕೆಟಿಗರೇ ಆಡಳಿತ ನಡೆಸಬೇಕು, ಬಾಕಿ ಎಲ್ಲರೂ ಗೌರವ ಪದಾಧಿಕಾರಿಗಳಾಗಿ ಉಳಿಯಬೇಕು. ಆಗ ಒಂದಿಷ್ಟು ತಿದ್ದುವ ಕೆಲಸ ಆಗುತ್ತದೆ~ ಎಂದು ಬೇಡಿ ಹೇಳುತ್ತಲೇ ಬಂದಿದ್ದಾರೆ.ಅವರೂ ಟ್ವೆಂಟಿ-20 ಎಂದರೆ ಕೆಂಡಾಮಂಡಲ. `ಮೂಲ ಕ್ರಿಕೆಟ್ ಎಂದರೆ ಅದು ಟೆಸ್ಟ್. ಅದಕ್ಕೆ ತತ್ವ ಎನ್ನುವುದಿದೆ. ಆದರೆ ಐಪಿಎಲ್‌ನಲ್ಲಿ ಏನಿದೆ? ಕೇವಲ `ಹಿಟ್~-`ರನ್~.  ಕ್ರಿಕೆಟ್ ವಾಣಿಜ್ಯ ಕ್ರೀಡೆ ಎಂದು ಒಪ್ಪುವುದಾದರೂ, ಬಿಸಿಸಿಐ ಈ ಆಟವನ್ನು ಎಷ್ಟರ ಮಟ್ಟಿಗೆ ವ್ಯಾಪಾರೀಕರಣ ಮಾಡಬೇಕೆಂದು ಒಂದು ಗಡಿ ರೇಖೆ ಹಾಕಿಕೊಳ್ಳಬೇಕು~ ಎನ್ನುತ್ತಾರೆ.ಅಷ್ಟೇ ಅಲ್ಲ, ಬಿಸಿಸಿಐ ಕ್ರಿಕೆಟ್ ತಾಂತ್ರಿಕ ಸಮಿತಿ ಕೆಲಸ ಮಾಡುತ್ತಿರುವ ರೀತಿಯೂ ಅವರ ಅಸಮಾಧಾನಕ್ಕೆ ಕಾರಣ.ದೇಶದಲ್ಲಿ ಕ್ರಿಕೆಟ್ ಆಟವನ್ನು ತಾಂತ್ರಿಕವಾಗಿ ಬೆಳೆಸಲು ಈ ಸಮಿತಿಯ ಪಾತ್ರವೇನು ಎನ್ನುವುದೇ ಅವರನ್ನು ಬಿಡಿಸಲಾಗದ ಸಮಸ್ಯೆಯಾಗಿ ಕಾಡುತ್ತಿದೆ. `ಸುನಿಲ್ ಗಾವಸ್ಕರ್ ಅವರು ದೀರ್ಘ ಕಾಲ ಇದರ ಮುಖ್ಯಸ್ಥರಾಗಿದ್ದರು. ಈಗ ಸೌರವ್ ಗಂಗೂಲಿ ಆ ಸ್ಥಾನದಲ್ಲಿದ್ದಾರೆ. ಆದರೆ ಆಟದ ಅಭಿವೃದ್ಧಿಗೆ ಮಾಡಿದ್ದಾದರೂ ಏನು?~ ಎಂದು ಬಹಿರಂಗವಾಗಿಯೇ ಸವಾಲೆಸೆದಿದ್ದಾರೆ.ತಂಡಕ್ಕೆ ಆಯ್ಕೆಯಾಗುವ ಪ್ರತಿಯೊಬ್ಬ ಆಟಗಾರನನ್ನು ಸೂಕ್ತವಾದ ರೀತಿಯಲ್ಲಿ ಬಳಸಿಕೊಳ್ಳುವಂಥ ಯೋಚನೆಯೂ ಇಲ್ಲದಂಥ ಪರಿಸ್ಥಿತಿಯಿಂದಲೂ ಬೇಡಿಗೆ ಕಸಿವಿಸಿ. ಅವರು ಮಾತ್ರವಲ್ಲ, ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ದಿಲೀಪ್ ವೆಂಗ್‌ಸರ್ಕರ್ ಅವರದ್ದೂ ಅದೇ ರಾಗ. `ಸರಿಯಾಗಿ ತಂಡವನ್ನು ಯೋಜಿಸುವುದೇ ಇಲ್ಲ~ ಎಂದು ತಮ್ಮ ಬೇಸರವನ್ನು ಹೊರಗೆ ಹಾಕಿದ್ದಾರೆ `ಕರ್ನಲ್~.ಒಟ್ಟಿನಲ್ಲಿ ಅಸಮಾಧಾನದ ಕಾವಲಿಯಲ್ಲಿ ಭಾರತದ ಕ್ರಿಕೆಟ್ ಬೆಂದು ಹೋಗಿದೆ. ಆಸ್ಟ್ರೇಲಿಯಾ ವಿರುದ್ಧದ ಕೊನೆಯೊಂದು ಟೆಸ್ಟ್‌ನಲ್ಲಿ ಗೆದ್ದರೂ ಈ ಬಿಸಿ ಸ್ವಲ್ಪ ತಣ್ಣಗಾಗುತ್ತದೆ.     

                            

ಪ್ರತಿಕ್ರಿಯಿಸಿ (+)