ಬುಧವಾರ, ಜೂನ್ 23, 2021
23 °C
ದಾವಣಗೆರೆ: 1984, 1989, 1991ರ ಚುನಾವಣೆಯಲ್ಲಿ ಸತತ ವಿಜಯಮಾಲೆ

ಕ್ಷೇತ್ರದ ಏಕೈಕ ಹ್ಯಾಟ್ರಿಕ್‌ ಸಂಸದ ಚನ್ನಯ್ಯ ಒಡೆಯರ್‌

ಪ್ರಜಾವಾಣಿ ವಾರ್ತೆ/ ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ದಾವಣಗೆರೆ: ಒಡೆಯರ್ ಎಂದ ತಕ್ಷಣ ರಾಜ್ಯದ ಜನರಿಗೆ ತಟ್ಟನೆ ನೆನಪಾಗುವುದು ಮೈಸೂರಿನ ಯದುವಂಶದ ಅರಸರು.

ಆದರೆ, ಒಡೆಯರ್‌ ಎಂಬ ಶಬ್ದ ಕಿವಿಗೆ ಬಿದ್ದರೆ ಜಿಲ್ಲೆಯ ಜನರ ಸ್ಮೃತಿಪಟಲದಲ್ಲಿ ಮೊದಲು ಮೂಡುವುದು ಚನ್ನಯ್ಯ ಒಡೆಯರ್‌ ಹೆಸರು.1984ರಿಂದ ಸತತ ಮೂರು ಬಾರಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ದಾಖಲಿಸುವ ಮೂಲಕ ಹ್ಯಾಟ್ರಿಕ್‌ ಸಂಸದ ಎನಿಸಿಕೊಂಡವರು ಕುರುಬ ಸಮಾಜದ ಧಾರ್ಮಿಕ ಮುಖಂಡರೂ ಆಗಿದ್ದ ಚನ್ನಯ್ಯ ಒಡೆಯರ್‌.ಕ್ಷೇತ್ರದ ಇದುವರೆಗಿನ ಇತಿಹಾಸದಲ್ಲೇ ಸತತ ಮೂರು ಬಾರಿ ಗೆಲ್ಲುವ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡಿದ ಏಕೈಕ ಸಂಸದರೂ ಅವರೊಬ್ಬರೆ.ಜಗಳೂರು ತಾಲ್ಲೂಕಿನ ಬಿಳಚೋಡು ಗ್ರಾಮದ ಕೃಷಿಕ ಕುಟುಂಬದ ಒಡೆಯರ್‌ ಬಿಎ,ಎಲ್‌ಎಲ್‌ಬಿ ಪದವೀಧರ. ಅವರು ಅಂದು ಕುರುಬ ಸಮಾಜದ ಪ್ರಶ್ನಾತೀತ ನಾಯಕರಾಗಿದ್ದರು.ರಾಜಕೀಯ ಜೀವನದ ಆರಂಭದಲ್ಲಿ ಜನತಾ ಪಕ್ಷದ ಜತೆ ಗುರುತಿಸಿಕೊಂಡಿದ್ದ ಅವರನ್ನು ಅಂದು ಮುಖ್ಯಮಂತ್ರಿಯಾಗಿದ್ದ ಆರ್.ಗುಂಡೂರಾವ್‌ ಸ್ವತಃ ಬಿಳಿಚೋಡಿಗೆ ಬಂದು ಕಾಂಗ್ರೆಸ್‌ ಸೇರುವಂತೆ ಮನ ಒಲಿಸಿದ್ದರು. ಇದು ಒಡೆಯರ್‌ ಅವರ ನಾಯಕತ್ವದ ಗುಣ ಹೇಗಿತ್ತು ಎನ್ನುವುದಕ್ಕೆ ಸಾಕ್ಷಿ.ಹಾಲಿ ಸಂಸದರಾಗಿದ್ದ ಚಂದ್ರಶೇಖರಪ್ಪ ಅವರಿಗೆ 1984 ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಟಿಕೆಟ್‌ ನೀಡಿ, ದಾವಣಗೆರೆ ಕ್ಷೇತ್ರಕ್ಕೆ ಚನ್ನಯ್ಯ ಒಡೆಯರ್‌ಗೆ ಟಿಕೆಟ್‌ ಕೊಡಿಸಿದ್ದರು ಗುಂಡೂರಾವ್‌!ಇಂದಿರಾ ಗಾಂಧಿ ಹತ್ಯೆಯಿಂದಾಗಿ ಅವಧಿಗಿಂತ ಒಂದು ವರ್ಷ ಮೊದಲೇ ಲೋಕಸಭಾ ಚುನಾವಣೆಗೆ ಹೋಗಲು ಕೇಂದ್ರದ ಅಂದಿನ ಕಾಂಗ್ರೆಸ್‌ ಸರ್ಕಾರ ನಿರ್ಧರಿಸಿತ್ತು. ಅದರ ಫಲವಾಗಿ 1984ರಲ್ಲಿ ಲೋಕಸಭೆಗೆ ಚುನಾವಣೆ ನಡೆಯಿತು.ಅನಿರೀಕ್ಷಿತವಾಗಿ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದ ಒಡೆಯರ್‌ ತಮ್ಮ ಜನಪ್ರಿಯತೆ ಹಾಗೂ ಇಂದಿರಾ ಹತ್ಯೆಯ ಅನುಕಂಪದ ಅಲೆ ಹಾಗೂ ರಾಜೀವ್‌ ಗಾಂಧಿ ಹೆಸರಿನ ಬಲದ ಮೇಲೆ ಗೆಲುವು ದಾಖಲಿಸಿದರು. ಚಲಾವಣೆಯಾದ 5,51,048 ಮತದಲ್ಲಿ 2,90,003 ಮತಗಳನ್ನು ಪಡೆದು, ತಮ್ಮ ಸಮೀಪದ ಪ್ರತಿಸ್ಪರ್ಧಿ ಜನತಾ ಪಕ್ಷದ ಕೆ.ಜಿ.ಮಹೇಶ್ವರಪ್ಪ ಅವರನ್ನು 65,741 ಮತಗಳ ಅಂತರದಲ್ಲಿ ಮಣಿಸಿದ್ದರು.

ಮಹೇಶ್ವರಪ್ಪ 2,24,262 ಮತ, ಸಿಪಿಐನ ಪಂಪಾಪತಿ ಕೇವಲ 7,406 ಮತ ಪಡೆದಿದ್ದರು.ಪಂಪಾಪತಿ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳಾದ ಎನ್‌.ಎಚ್‌.ಮಲ್ಲಪ್ಪ (4,014 ಮತ), ಕೆಂಚವೀರಪ್ಪ (2,559 ಮತ), ಜಯಪ್ಪ ಅಲ್ಲೇರ (2,247 ಮತ), ಟಿ.ಬಸಪ್ಪ (1,793 ಮತ), ಬಿ.ಗುರುಲಿಂಗಪ್ಪ (1,211 ಮತ), ಎ.ಬಿ.ಪುಟ್ಟಪ್ಪ (1,123 ಮತ), ಎಸ್‌. ನಾಗರಾಜ್‌ (1,062 ಮತ), ಕುಬೇಂದ್ರ ನಾಯ್ಕ (516 ಮತ) ಠೇವಣಿ ಕಳೆದುಕೊಂಡಿದ್ದರು.1989ರ ಚುನಾವಣೆಯಲ್ಲೂ ಗೆಲುವು

1989ರಲ್ಲಿ ನಡೆದ ಚುನಾವಣೆ 84ರ ಚುನಾವಣೆಗಿಂತ ಭಿನ್ನವಾಗಿತ್ತು. ಆಡಳಿತ ವಿರೋಧಿ ಅಲೆ ರಾಜ್ಯದಲ್ಲೂ ಕಾಂಗ್ರೆಸ್‌ಗೆ ಸಂಕಷ್ಟ ತಂದಿತ್ತು. ಜನತಾದಳದ ಗಾಳಿ ರಾಜ್ಯದಲ್ಲಿ  ಜೋರಾಗಿತ್ತು. ಏಕಕಾಲದಲ್ಲಿ ವಿಧಾನಸಭೆ ಹಾಗೂ ಲೋಕಸಭೆಗೆ ಚುನಾವಣೆ ನಡೆದಿತ್ತು. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ದಳದ ನೇತೃತ್ವ ವಹಿಸಿದ್ದರು.  ಆದರೂ, ಒಡೆಯರ್‌ ಅವರ ಮೇಲೆ ನಂಬಿಕೆ ಇಟ್ಟು ಕಾಂಗ್ರೆಸ್‌  ಟಿಕೆಟ್‌ ನೀಡಿತು. ಪಕ್ಷದ ನಂಬಿಕೆಯನ್ನು ಒಡೆಯರ್‌ ಹುಸಿ ಮಾಡಲಿಲ್ಲ.ಚಲಾವಣೆಯಾದ 7,42,962 ಮತಗಳಲ್ಲಿ 3,69,969 ಮತ ಪಡೆದು ತಮ್ಮ ಪ್ರತಿಸ್ಪರ್ಧಿ ಕೆ.ಜಿ.ಮಹೇಶ್ವರಪ್ಪ ಅವರನ್ನು 76,120 ಮತಗಳ ಅಂತರದಿಂದ ಸೋಲಿಸಿದ್ದರು. ಮಹೇಶ್ವರಪ್ಪ 2,93,849 ಮತ ಪಡೆದರೆ,  ಎನ್‌.ಗಂಗಾಧರಯ್ಯ (ಜನತಾ ಪಕ್ಷ–ಜೆಪಿ) 35,909 ಮತ ಪಡೆದಿದ್ದರು. ಪಕ್ಷೇತರರಾದ ಎನ್‌.ಎಂ.ಚಂದ್ರಶೇಖರ ಸ್ವಾಮಿ (5,015 ಮತ), ಟಿ. ಷಣ್ಮುಖಪ್ಪ (2,548 ಮತ) ಠೇವಣಿ ಕಳೆದುಕೊಂಡಿದ್ದರು.1991ರ ಚುನಾವಣೆ: ಪ್ರಯಾಸದ ಗೆಲುವು

1991ರ ಲೋಕಸಭಾ ಚುನಾವಣೆಯ ವೇಳೆಗಾಗಲೇ ಕ್ಷೇತ್ರದ ರಾಜಕೀಯ ಚಿತ್ರಣ ಬದಲಾಗುತ್ತಾ ಸಾಗಿತ್ತು. ಕಾಂಗ್ರೆಸ್‌ಗೆ ಪರ್ಯಾಯವಾಗಿ ಜನತಾದಳದ ಸ್ಥಾನದಲ್ಲಿ ಬಿಜೆಪಿ ಪ್ರಬಲ ಪಕ್ಷವಾಗಿ ಹೊರಹೊಮ್ಮಿತ್ತು. ಒಡೆಯರ್‌ ಅವರ ಜನಪ್ರಿಯತೆಯ ಗ್ರಾಫ್‌ ಕೂಡ ಭೂಮುಖವಾಗಿತ್ತು.ಅಂತಹ ಸಂದರ್ಭದಲ್ಲೂ ಒಡೆಯರ್‌ಗೆ ಮೂರನೇ ಬಾರಿ ಕಾಂಗ್ರೆಸ್‌ ಟಿಕೆಟ್‌ ನೀಡಿತು. ಅಂದಿನ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಕೂಡ ಒಡೆಯರ್‌ಗೆ ಸಾಥ್‌ ನೀಡಿದ್ದರು. ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಸ್ಪರ್ಧೆಯಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಜನ ಭಾವಿಸಿದ್ದರು. ಆದರೆ, ಅದೇ ಸಂದರ್ಭದಲ್ಲಿ ತಮಿಳುನಾಡಿನಲ್ಲಿ ನಡೆದ ರಾಜೀವ್‌ ಗಾಂಧಿ ಹತ್ಯೆ ದೇಶದೆಲ್ಲೆಡೆ ಕಾಂಗ್ರೆಸ್‌ ಪರ ಅನುಕಂಪದ ಅಲೆ ಎಬ್ಬಿಸಿತ್ತು. ಅದರ ಲಾಭ ದಾವಣಗೆರೆಯ ಮೇಲೂ ಆಯಿತು.ಅಂತಹ ಪೂರಕ ಸಂದರ್ಭದಲ್ಲೂ ಒಡೆಯರ್‌ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಅಂದಿನ ಸಾಮಾನ್ಯ ಮುಖಂಡ ಶಿರಮಗೊಂಡನಹಳ್ಳಿಯ ಮಂಡಲ ಪ್ರಧಾನ ಎಸ್‌.ಎ.ರವೀಂದ್ರನಾಥ್ ವಿರುದ್ಧ ಕೇವಲ 455 ಮತಗಳ ಅಂತರದ ಗೆಲುವು ಪಡೆದರು.ಚಲಾವಣೆಯಾದ 6,14,169 ಮತಗಳಲ್ಲಿ ಒಡೆಯರ್  2,37,542 ಮತ ಪಡೆದರೆ, ರವೀಂದ್ರನಾಥ್‌ 2,37,087, ಜನತಾದಳದ ಡಿ.ಜಿ.ಬಸವನಗೌಡ  1,05,260 ಮತ ಪಡೆದಿದ್ದರು. ಉಮ್ಮರ್‌ ಖಾನ್‌ ಸಾಬ್‌ ಹಾಗೂ 10ಮಂದಿ ಪಕ್ಷೇತರರು ಠೇವಣಿ ಕಳೆದುಕೊಂಡಿದ್ದರು.ಬಸ್‌ನಲ್ಲೇ ಪ್ರಯಾಣಿಸುತ್ತಿದ್ದ ಒಡೆಯರ್!

ಒಡೆಯರ್‌ ಸರಳ ನಡೆಯ ವ್ಯಕ್ತಿ. ಜಗಳೂರು ತಾಲ್ಲೂಕು ಬೋರ್ಡ್‌ ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದ್ದ ಅವರು 1980ರಲ್ಲಿ ಜನತಾ ಪಕ್ಷದಿಂದ ಹರಿಹರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ನಂತರ ಕಾಂಗ್ರೆಸ್‌ ಸೇರಿದರು.

ಎರಡು ಬಾರಿ ವಿಧಾನ ಪರಿಷತ್‌ ಸದಸ್ಯರು, ಮೂರು ಬಾರಿ ಸಂಸದರಾದರೂ, ಅವರು ಸರಳ ವ್ಯಕ್ತಿತ್ವ ಉಳಿಸಿಕೊಂಡಿದ್ದರು.

ಎರಡನೇ ಬಾರಿ ಸಂಸದರಾಗುವವರೆಗೂ ಬಸ್‌ನಲ್ಲೇ ಪ್ರಯಾಣ ಮಾಡುತ್ತಿದ್ದರು.1989ರಲ್ಲಿ ಎರಡನೇ ಬಾರಿ ಗೆದ್ದ ನಂತರ ಒಂದು ನೀಲಿ ಬಣ್ಣದ 519 ನೋಂದಣಿ ಸಂಖ್ಯೆಯ ಅಂಬಾಸೆಡರ್‌ ಕಾರು  ಖರೀದಿಸಿದ್ದರು.

ಅಂತಹ ಹೇಳಿಕೊಳ್ಳುವಂತ ಆಸ್ತಿ ಮಾಡದ ಅವರು, ಮೂವರು ಮಕ್ಕಳನ್ನು ವೈದ್ಯರು, ಎಂಜಿನಿಯರ್‌ ಹಾಗೂ ವಕೀಲರನ್ನಾಗಿ ಮಾಡಿದ್ದೇ ಸಾಧನೆ ಎನ್ನುತ್ತಿದ್ದರು. 

–ಬಿ.ಎಂ.ಸತೀಶ್‌, ಕುರುಬ ಸಮಾಜದ ಮುಖಂಡರು, ಒಡೆಯರ್‌ ಅವರ ಕಿರಿಯ ಒಡನಾಡಿ.1984ರ ಚುನಾವಣೆಯ ಅಂಕಿ–ಅಂಶ

ಒಟ್ಟು ಮತದಾರರು:                       7,90,941

ಚಲಾವಣೆಯಾದ ಮತ:                   5,51,048

ಚನ್ನಯ್ಯ ಒಡೆಯರ್‌ (ಕಾಂಗ್ರೆಸ್‌):         2,90,003

ಕೆ.ಜಿ.ಮಹೇಶ್ವರಪ್ಪ (ಜೆಎನ್‌ಪಿ):            2,24262

ಎಂ.ಪಂಪಾಪತಿ (ಸಿಪಿಐ):                      7,406

1989ರ ಚುನಾವಣೆಯ ಅಂಕಿ–ಅಂಶ

ಒಟ್ಟು ಮತದಾರರು:                     10,79,519

ಚಲಾವಣೆಯಾದ ಮತ:                   7,42,962

ಚನ್ನಯ್ಯ ಒಡೆಯರ್‌ (ಕಾಂಗ್ರೆಸ್‌):          3,69,969

ಕೆ.ಜಿ.ಮಹೇಶ್ವರಪ್ಪ (ಜನತಾ ದಳ):         2,93,849

ಎನ್‌.ಗಂಗಾಧರಯ್ಯ (ಜನತಾ ಪಕ್ಷ–ಜೆಪಿ)    35,909

1991ರ ಚುನಾವಣೆಯ ಅಂಕಿ–ಅಂಶ

ಒಟ್ಟು ಮತದಾರರು:                     10,92,655

ಚಲಾವಣೆಯಾದ ಮತ:                   6,14,169

ಚನ್ನಯ್ಯ ಒಡೆಯರ್‌ (ಕಾಂಗ್ರೆಸ್‌):         2,37,542

ಎಸ್‌.ಎ.ರವೀಂದ್ರನಾಥ:                    2,37,087

ಡಿ.ಜಿ.ಬಸವನಗೌಡ (ಜನತಾದಳ):         1,05,260

ಉಮ್ಮರ್‌ ಖಾನ್‌ ಸಾಬ್‌ (ಎಂಎಸ್‌ಡಿ)         4,039

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.