ಭಾನುವಾರ, ಜನವರಿ 26, 2020
31 °C

ಖಾಸಗಿ ಐ.ಟಿ.ಐ.ಗಳಿಗೆ ನ್ಯಾಯ ಸಿಗಲಿ

ಎಸ್.ಎಂ.ನೆರಬೆಂಚಿ,ಮುದ್ದೇಬಿಹಾಳ Updated:

ಅಕ್ಷರ ಗಾತ್ರ : | |

ಬೆಳಗಾವಿಯಲ್ಲಿ ನಡೆದ ವಿಧಾನ­ಮಂಡಲ ಅಧಿ­ವೇಶ­ನದಲ್ಲಿ ಕಾರ್ಮಿಕ ಸಚಿವ ಪರಮೇಶ್ವರ ನಾಯಕ ಅವರು ಖಾಸಗಿ ಐ.ಟಿ.ಐ.­ಗಳಿಗೆ ಇನ್ನು ಮುಂದೆ ವಿದ್ಯಾರ್ಥಿ ಕೇಂದ್ರಿತ ಅನು­ದಾನ ಕೊಡ­ಲಾ­ಗುವುದು ಎಂದು ಹೇಳಿದ್ದಾರೆ. ಈ ಹೇಳಿಕೆ, ೮-–೧೦ ವರ್ಷಗಳಿಂದ ಕೆಲಸ ಮಾಡಿದ ಸಿಬ್ಬಂದಿ­ಯಲ್ಲಿ ಹತಾಶೆ ಮೂಡಿಸಿದೆ.ಏಕೆಂದರೆ ಏಳು ವರ್ಷ ಪೂರೈಸಿದ ಖಾಸಗಿ ಐ.ಟಿ.ಐ.ಗಳಿಗೆ ಸಿಬ್ಬಂದಿ ಆಧಾ­ರಿತ ಅನುದಾನ ಕೊಡಲಾಗು­ವು­ದೆಂದು ೧೯೯೭ರಲ್ಲಿ ಅಂದಿನ ಜನತಾದಳ ಸರ್ಕಾ­ರ ಆದೇಶ ಹೊರ­ಡಿಸಿ ಆಗ ೧೦೪ ಐ.ಟಿ.ಐ.­ಗಳಿ­ಗೆ ಅನು­­­ದಾನ ನೀಡಿತ್ತು. ಜೊತೆಗೆ ಮುಂದೆ ಬರು­ವಂತ­­ಹ ಐ.ಟಿ.ಐ.­ಗಳಿಗೂ ಇದನ್ನು ವಿಸ್ತರಿಸ­ಲಾಗು­ವು­­­­ದೆಂದು ತಿಳಿಸಿತ್ತು. ಇದನ್ನು ನಂಬಿ­ಕೊಂಡೇ ಸಂಸ್ಥೆ­ಗಳು ಐ.ಟಿ.ಐ.ಗಳನ್ನು ಸ್ಥಾಪಿ­ಸಿವೆ. ಸಿಬ್ಬಂದಿ­­ಗೆ ವೇತನ ಅನುದಾನದ ಭರವಸೆ ಕೊಟ್ಟಿವೆ.ಈಗಿನ ಮುಖ್ಯಮಂತ್ರಿಗಳು ಆಗಿನ ಹಣಕಾಸು ಸಚಿವರು ಎಂಬುದು ಗಮನಾರ್ಹ. ಈಗಾಗಲೇ ೨೦೦೧ರ  ಪೂರ್ವದಲ್ಲಿ ಸ್ಥಾಪನೆಯಾದ ೧೯೯ ಐ.ಟಿ.ಐ.ಗಳು ವೇತನಾನುದಾನಕ್ಕೆ ಒಳಪಟ್ಟಿದ್ದು  ನಂತರ­ದಲ್ಲಿ ಏಳು ವರ್ಷ ಕಳೆದಿರುವ ಐ.ಟಿ.ಐ.­ಗಳು ಕೂಡ ೧೯೯೭ರ ಆದೇಶದಂತೆ ಸರ್ಕಾರದ ವೇತನಾನುದಾನಕ್ಕೆ  ಅರ್ಹತೆ ಪಡೆದಿವೆ. ಇನ್ನು ವಿದ್ಯಾರ್ಥಿ­ ಕೇಂದ್ರಿತ ಅನುದಾನವೆಂಬುದು ಪಿ.ಎಸ್.ಎಸ್ ಥಾಮಸ್ ಆಯೋಗವು ೨೦೦೭­ರಲ್ಲಿ ಶಿಫಾರಸು ಮಾಡಿದ ಅನುದಾನಗಳಲ್ಲಿ ಒಂದು.  ಅದರಂತೆ ಇದನ್ನು  ಹೊಸದಾಗಿ ಸ್ಥಾಪ­ನೆ­ಯಾದ ಐ.ಟಿ.ಐ.ಗಳ ಸಿಬ್ಬಂದಿಗೆ ವಿದ್ಯಾರ್ಥಿ­ಗಳ ಸಂಖ್ಯಾಧಾರದ ಮೇಲೆ ಗೌರವಧನವಾಗಿ ಕೊಡುವುದು.ಇನ್ನೊಂದು,  ಏಳು ವರ್ಷ ಪೂರೈಸಿದ  ಐ.ಟಿ.ಐ­ಗಳಿಗೆ ವೇತನ ಅನುದಾನ­ವನ್ನೇ ನೀಡು­ವುದು. ವರದಿಯನ್ನು ತಡವಾಗಿ ಅರ್ಥ ಮಾಡಿ­ಕೊಂಡ ಹಿಂದಿದ್ದ ಸರ್ಕಾರದ ಕಾರ್ಮಿಕ ಸಚಿವರು ೨೦೧೨ರಲ್ಲಿ ೪೪೩ ಐ.ಟಿ.ಐ.ಗಳಿಗೆ ವೇತನ ಅನು­ದಾನ ಕೊಡಲು ಬದ್ಧ ಎಂದು ಹೇಳಿದ್ದರು. ಆದರೆ ಇಂದಿನ ಕಾರ್ಮಿಕ ಸಚಿವರು ವಿದ್ಯಾರ್ಥಿ ಕೇಂದ್ರಿತ ಅನುದಾನ ಕೊಡುವುದಾಗಿ ಹೇಳಿದ್ದು ಸರಿಯಲ್ಲ. ಇಂದು ಉದ್ಯೋಗಾ­ಧಾರಿ­ತ ಹಾಗೂ ಸ್ವಾವ ಲಂಬ­ನೆ ಶಿಕ್ಷಣದ ಅಗತ್ಯವನ್ನು ತಜ್ಞರು ಒತ್ತಿ ಹೇಳುತ್ತಿ­ರು­ವಾಗ ಇಂಥ ಶಿಕ್ಷಣ ತರಬೇತಿಯಲ್ಲಿ  ತೊಡಗಿ­ರುವ  ತಂತ್ರಜ್ಞರನ್ನು ನಿರ್ಲಕ್ಷಿಸು­ತ್ತಿರು­ವುದು ಸರಿಯಲ್ಲ.  ಇನ್ನಾದರೂ ಸರ್ಕಾರ ವೇತನ ಅನುದಾನ ಮುಂದು­ವರಿಸುವ ತೀರ್ಮಾನ ಕೈಗೊಳ್ಳುವುದು ನ್ಯಾಯೋಚಿತ.

ಪ್ರತಿಕ್ರಿಯಿಸಿ (+)