ಶುಕ್ರವಾರ, ಜೂನ್ 25, 2021
30 °C

ಗಾನ ಕೋಗಿಲೆ ಮಾನ್ಯ ಉಡುಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಹಾಗೆ ತನ್ನ 8ನೇ ವಯಸ್ಸಿನಲ್ಲೇ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಗಳಿಸಿದ ಉದಯೋನ್ಮುಖ ಗಾಯಕಿ ಮಾನ್ಯ ಉಡುಪಿ. ತನ್ನ ಕೋಗಿಲೆ ಕಂಠದಿಂದ ಸಾವಿರಾರು ಜನರಿಂದ ಮೆಚ್ಚುಗೆ ಪಡೆದಿರುವ ಈಕೆ ಕನ್ನಡ, ಹಿಂದಿ, ಮರಾಠಿ ಭಾಷೆಯಲ್ಲಿನ ರಂಗಗೀತೆ ಸೇರಿದಂತೆ ಭಕ್ತಿಗೀತೆ, ಭಾವಗೀತೆ, ಜಾನಪದ ಗೀತೆ ಹಾಗೂ ಚಿತ್ರ ಗೀತೆಗಳನ್ನು ನಿರರ್ಗಳವಾಗಿ ಹಾಡಬಲ್ಲಳು. ಪ್ರಸ್ತುತ ಬೆಂಗಳೂರಿನ ವಿದ್ಯಾವರ್ಧಕ ಶಾಲೆಯಲ್ಲಿ ಒದುತ್ತಿದ್ದಾಳೆ.ಮಾನ್ಯ ವಯಸ್ಸು ಆಗಿನ್ನೂ ಎರಡರ ಗಡಿ ದಾಟಿರಲಿಲ್ಲ. ಹೇಳಿಕೊಟ್ಟ ಶ್ಲೋಕಗಳೆಲ್ಲವನ್ನೂ ತನ್ನ ಮಧುರ ಕಂಠದಿಂದ ಚಾಚು ತಪ್ಪದಂತೆ ಪಠಿಸುತ್ತಿದ್ದ ಮೊಮ್ಮಗಳು ಮಾನ್ಯಳ ಜ್ಞಾಪಕಶಕ್ತಿ ಕಂಡು ಅಜ್ಜಿಗೆ ಬೆರಗು ಉಂಟಾಯ್ತು. ಮಾನ್ಯಳ ಕಂಠಕ್ಕೊಂದು ಲಾಲಿತ್ಯವಿದೆ ಎಂಬುದನ್ನು ಗುರ್ತಿಸಿದ ಅಜ್ಜಿ ರೇಖಾ ಮಾನ್ಯಗೆ ಸಂಗೀತ ಹೇಳಿಕೊಡಲು ಆರಂಭಿಸಿದರು.

 

ಹೀಗೆ ಚಿಕ್ಕ ವಯಸ್ಸಿನಲ್ಲೇ ಸಂಗೀತಾಭ್ಯಾಸ ಪ್ರಾರಂಭಿಸಿದ ಮಾನ್ಯ ತನ್ನ 4ನೇ ವಯಸ್ಸಿಗೆ ಕಾಲಿಡುವ ವೇಳೆಗೆ ಸಂಗೀತದ ಪಟ್ಟುಗಳನ್ನು ಕಲಿತುಕೊಂಡಳು. ಅಂದಿನಿಂದಲೇ ಸಾರ್ವಜನಿಕ ಸಮಾರಂಭ, ಸ್ಪರ್ಧೆಗಳಲ್ಲಿ ಭಾಗವಹಿಸಿ ಕೇಳುಗರನ್ನು ಮಂತ್ರ ಮುಗ್ಧಗೊಳಿಸುತ್ತಾ ಬಂದಳು.ಮಾನ್ಯ 5ನೇ ವಯಸ್ಸಿನಲ್ಲಿದ್ದಾಗ ರಾಷ್ಟ್ರ ಮಟ್ಟದ 10 ಟ್ಯಾಲೆಂಟೆಡ್ ಮಕ್ಕಳಲ್ಲಿ ಒಬ್ಬಳು ಎಂಬ ಅಗ್ಗಳಿಕೆಗೆ ಪಾತ್ರಳಾದಳು. ಆರ್ಟ್ ಆಫ್ ಲಿವಿಂಗ್ ನಡೆಸುವ `ಬಾಲ ಉತ್ಸವ~ ಕಾರ್ಯಕ್ರಮದಲ್ಲಿ ಈಕೆ ನೀಡಿದ ಸುಗಮ ಸಂಗೀತಕ್ಕಾಗಿ `ರಾಷ್ಟ್ರ ಪ್ರಶಸ್ತಿ~ ಕೂಡ ಲಭಿಸಿದೆ.ಇದಲ್ಲದೇ ಬಾಲಭವನದಲ್ಲಿ ನಿರಂತರವಾಗಿ 14 ಸುಗಮ ಗೀತೆಗಳನ್ನು ಹಾಡಿ ಎಲ್ಲರ ಹುಬ್ಬೇರುವಂತೆ ಮಾಡಿದಳು. 25 ನಿಮಿಷ ನಿರಂತರವಾಗಿ ಹಾಡಿದ ಈಕೆಯ ಮಧುರ ಗಾನಕ್ಕೆ ಕರ್ನಾಟಕ ಸರ್ಕಾರ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಿದೆ.ಮಾನ್ಯಳ ಮಧುರ ಕಂಠಕ್ಕೆ ಅರಳು ಮಲ್ಲಿಗೆ ಪ್ರತಿಭೆ ಪುರಸ್ಕಾರ, ವಿಶ್ವ ಕನ್ನಡ ಕಣ್ಮಣಿ, ಡಾ. ಶಿವರಾಮ ಕಾರಂತ ಸದ್ಭಾವನಾ ಪ್ರಶಸ್ತಿ, ಬಸವ ಪ್ರಶಸ್ತಿ, ಗಾನ ಕೋಗಿಲೆ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಪುಟ್ಟ ವಯಸ್ಸಿನಲ್ಲಿಯೇ 100 ಕ್ಕೂ ಹೆಚ್ಚು ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಬಹುಮಾನ ಪಡೆದಿದ್ದಾಳೆ.ಮಾನ್ಯ ಪ್ರತಿಭೆ ಕೇವಲ ಸಂಗೀತಕ್ಕಷ್ಟೆ ಸೀಮಿತಗೊಂಡಿಲ್ಲ. ಈಕೆ ಚಿತ್ರಕಲೆ, ನತ್ಯ, ಏಕಪಾತ್ರಾಭಿನಯದಲ್ಲೂ ಸೈ ಎನಿಸಿಕೊಂಡಿದ್ದಾಳೆ. 2010ರಂದು ಗುಲ್ಬರ್ಗಾದಲ್ಲಿ ನಡೆದ `ಗುಲ್ಬರ್ಗಾ ಕಂಪು~ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಂದ ಮೆಚ್ಚುಗೆ ಪಡೆದಿದ್ದಾಳೆ.ಸಾಧನೆಯ ಮೆಟ್ಟಿಲೇರುತ್ತಿರುವ ಮಾನ್ಯ ಕುಟುಂಬದ ಬೆಂಬಲದಿಂದ ಆಕಾಶವಾಣಿ, ದೂರದರ್ಶನ ಹಾಗೂ ಖಾಸಗಿ ವಾಹಿನಿಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾಳೆ.ದಸರಾ ಹಬ್ಬದ ಪ್ರಯುಕ್ತ ಕೊಲ್ಲೂರಿನ ಮೂಕಾಂಬಿಕೆ ದೇವಿಯ ಸನ್ನಿಧಿಯಲ್ಲಿ ಹಾಗೂ ಮೈಸೂರು ದಸರಾ ಮಹೋತ್ಸವದಲ್ಲಿ ಎರಡು ಗಂಟೆ ಸಂಗೀತ ಕಛೇರಿ ನೀಡಿದ್ದಾರೆ.ಬೆಳಗಾಂನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಧಾರವಾಡದ ಬಾಲ ವಿಕಾಸ ಸಂಸ್ಥೆಯಿಂದ ಭಾಗವಹಿಸಿದ್ದಾರೆ. ಸೊಲ್ಲಾಪುರದಲ್ಲೂ ಮೂರು ಗಂಟೆ ಸಂಗೀತ ಕಛೇರಿ ನೀಡಿ ಪ್ರಶಂಸೆಗೆ ಪಾತ್ರರಾಗಿರುತ್ತಾರೆ.ರಾಷ್ಟ್ರೀಯ ಭಾವೈಕ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಾಲ ಕಲಾಶತಿ ಪ್ರಶಸ್ತಿಯನ್ನು ಸುಶೀಲ ಕುಮಾರ್ ಸಿಂಧೆ ಅವರಿಂದ ಪಡೆದಿದ್ದಾರೆ. ಅಂದಹಾಗೆ, ಬಹುಮುಖ ಪ್ರತಿಭೆ ಮಾನ್ಯ ಉಡಪಿಗೆ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಹಾಡುವ ಕನಸು ಇದೆಯಂತೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.