ಬುಧವಾರ, ಮೇ 12, 2021
20 °C

ಗುಮ್ಮಗೋಳಕ್ಕೆ ಒಲಿದ ರಾಷ್ಟ್ರಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಮ್ಮಗೋಳ (ಧಾರವಾಡ ಜಿಲ್ಲೆ):  ಗ್ರಾಮದಲ್ಲಿ ಶೇ 100ರಷ್ಟು ಕರ ವಸೂಲಿ, ಶೇ 95ಕ್ಕೂ ಹೆಚ್ಚು ಮನೆಗಳಿಗೆ ಶೌಚಾಲಯ ಸೌಲಭ್ಯ, ಅಲ್ಲಲ್ಲಿ ಸಾರ್ವಜನಿಕ ಶೌಚಾಲಯ, ಇಂಧನ ಮಿತವ್ಯಯಕ್ಕಾಗಿ ಬೀದಿಗಳಿಗೆ ಸೌರ ವಿದ್ಯುತ್ ದೀಪಗಳ ಅಳವಡಿಕೆ, ನಗರಗಳನ್ನೂ ನಾಚಿಸುವಷ್ಟು ಅಚ್ಚುಕಟ್ಟಾಗಿ ರಸ್ತೆ ಸೂಚನಾ ಫಲಕಗಳ ಅಳವಡಿಕೆ, ಕಸ ಸಂಗ್ರಹಣೆ ವ್ಯವಸ್ಥೆ...-ಇದು ಯಾವುದೋ ಅಭಿವೃದ್ಧಿ ಹೊಂದಿದ ದೇಶದ ನಗರ ಅಥವಾ ಪಟ್ಟಣದ ಚಿತ್ರಣವವಲ್ಲ. ಬದಲಾಗಿ ಈ ಬಾರಿ ಬರ ಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಜಿಲ್ಲೆಯ ನವಲಗುಂದ ತಾಲ್ಲೂಕಿನ ಗುಮ್ಮಗೋಳ ಎಂಬ ಮಾದರಿ ಗ್ರಾಮದ ಯಶೋಗಾಥೆ.ಅದಕ್ಕೆಂದೇ ಈ ಬಾರಿ ಹುಡುಕಿಕೊಂಡು ಬಂದಿದೆ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ನೀಡುವ ರಾಷ್ಟ್ರ ಪ್ರಶಸ್ತಿ. `ಪಂಚಾಯಿತಿಗಳ ಸಬಲೀಕರಣ ಹಾಗೂ ಉತ್ತರದಾಯಿತ್ವವನ್ನು ಪ್ರೋತ್ಸಾಹಿಸುವ ಯೋಜನೆ~ಯಡಿ (ಪಿಇಎಐಎಸ್) ರಾಷ್ಟ್ರದ ವಿವಿಧ ಪಂಚಾಯಿತಿಗಳಿಗೆ ನೀಡಲಾಗುವ ಪ್ರಶಸ್ತಿಯನ್ನು ರಾಷ್ಟ್ರೀಯ ಪಂಚಾಯತ್‌ರಾಜ್ ದಿನದ ಅಂಗವಾಗಿ ನವದೆಹಲಿಯ ವಿಜ್ಞಾನ ಭವನದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ವಿತರಿಸಲಾಯಿತು.

 

ಗುಮ್ಮಗೋಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಈರೇಶನವರ ಅವರು ಗ್ರಾಮದ ಪರವಾಗಿ ಪ್ರಶಸ್ತಿಪತ್ರ ಹಾಗೂ ಗ್ರಾಮದ ಅಭಿವೃದ್ಧಿಗೆ ನೀಡಲಾದ 13 ಲಕ್ಷ ರೂಪಾಯಿಯ ಚೆಕ್ ಸ್ವೀಕರಿಸಿದರು.

ಜಿಲ್ಲಾ ಕೇಂದ್ರದಿಂದ 32 ಕಿ.ಮೀ. ದೂರವಿರುವ ಈ ಗ್ರಾಮದಲ್ಲಿ ಆಡಳಿತ ವಿಕೇಂದ್ರೀಕರಣ ಅಚ್ಚುಕಟ್ಟಾಗಿ ನಡೆದಿದೆ ಎಂಬುದನ್ನು ತಿಳಿಸಲು ಅಲ್ಲಿ ಅಳವಡಿಸಲಾದ ಫಲಕಗಳೇ ಸಾಕ್ಷಿ.ಗುಮ್ಮಗೋಳ ಹಾಗೂ ಬ್ಯಾಲಾಳ ಗ್ರಾಮಗಳ ವ್ಯಾಪ್ತಿಯನ್ನು ಒಳಗೊಂಡ ಗ್ರಾಮ ಪಂಚಾಯಿತಿ ಆಡಳಿತವು ಸೌಕರ್ಯ ಸಮಿತಿ, ಉತ್ಪಾದನಾ ಸಮಿತಿ, ಸಾಮಾಜಿಕ ನ್ಯಾಯ ಸಮಿತಿ, ನೀರು, ನೈರ್ಮಲ್ಯ ಸಮಿತಿ ಹೀಗೆ ಹಲವು ಉಪಸಮಿತಿಗಳನ್ನು ರಚಿಸಿದೆ. ಇವು ಅಚ್ಚುಕಟ್ಟಾಗಿ ತಮ್ಮ ಕೆಲಸಗಳನ್ನು ಪಾಲಿಸಿಕೊಂಡು ಹೋಗುತ್ತಿವೆ. ಕಸ ವಿಲೇವಾರಿಗೆಂದು ಅಲ್ಲಲ್ಲಿ ಕಸ ಸಂಗ್ರಹಣಾ ತೊಟ್ಟಿಗಳನ್ನು ಇಡಲಾಗಿದ್ದು, ಗ್ರಾಮಸ್ಥರು ಕಸವನ್ನು ಅದರಲ್ಲಿಯೇ ಹಾಕುತ್ತಾರೆ. ಪಂಚಾಯಿತಿ ಕಸ ಸಾಗಿಸುವ ವಾಹನವನ್ನು ಖರೀದಿಸಿದ್ದು, ತೊಟ್ಟಿಗಳಲ್ಲಿ ಸಂಗ್ರಹವಾದ ಕಸವನ್ನು ದಿನಂಪ್ರತಿ ವಿಲೇವಾರಿ ಮಾಡುತ್ತದೆ.ಮನೆಮನೆಗೂ ಶೌಚಾಲಯಗಳನ್ನು ಅಳವಡಿಸಿಕೊಳ್ಳುವುದನ್ನು ಕಡ್ಡಾಯಗೊಳಿಸಿರುವುದರಿಂದ ಗುಮ್ಮಗೋಳದ 493 ಮನೆ ಹಾಗೂ ಬ್ಯಾಲಾಳದ 297 ಮನೆಗಳಲ್ಲಿ ಶೇ 95ರಷ್ಟು ಮನೆಗಳ ಮುಂದೆ ಶೌಚಾಲಯಗಳು ಎದ್ದುನಿಂತಿವೆ.ಕರ ವಸೂಲಿ: ಸೌಲಭ್ಯ ಪಡೆಯುವುದಷ್ಟನ್ನೇ ತಮ್ಮ ಹಕ್ಕು ಎಂದು ಭಾವಿಸದ ಗ್ರಾಮಸ್ಥರು ಕರ ತುಂಬುವ ಕರ್ತವ್ಯವನ್ನೂ ಅಚ್ಚುಕಟ್ಟಾಗಿ ಪಾಲಿಸುತ್ತಾರೆ. 2006-07 ರಿಂದ ಇಲ್ಲಿಯವರೆಗೆ ಶೇ 100ರಷ್ಟು ತೆರಿಗೆ ಸಂಗ್ರಹಿಸುವ ಮೂಲಕ ಈ ಗ್ರಾಮ ಪಂಚಾಯಿತಿ ಇತಿಹಾಸ ಬರೆದಿದೆ.ಗ್ರಾಮ ನೈರ್ಮಲ್ಯವನ್ನು ಸಾಧಿಸಿದ್ದಕ್ಕಾಗಿ 2007-08ನೇ ಸಾಲಿನಲ್ಲಿ `ರಜತ ನೈರ್ಮಲ್ಯ~ ರಾಷ್ಟ್ರ ಪ್ರಶಸ್ತಿ ಪಡೆದ ಈ ಗ್ರಾಮ ಪಂಚಾಯಿತಿ ಅದರೊಂದಿಗೆ 4 ಲಕ್ಷ ರೂಪಾಯಿ ನಗದು ಬಹುಮಾನವನ್ನು ಪಡೆದಿತ್ತು. ಒಟ್ಟು 11 ಮಂದಿ ಸದಸ್ಯರಿರುವ ಈ ಗ್ರಾಮ ಪಂಚಾಯಿತಿಯಲ್ಲಿ ಐದು ಮಂದಿ ಮಹಿಳಾ ಸದಸ್ಯರು ಎಂಬುದೂ ವಿಶೇಷವೇ.ಪ್ರಶಸ್ತಿ ಪಡೆದ ಬಳಿಕ ನವದೆಹಲಿಯಿಂದ `ಪ್ರಜಾವಾಣಿ~ಗೆ ಪ್ರತಿಕ್ರಿಯೆ ನೀಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಈರೇಶನವರ, `ಪಾರದರ್ಶಕ ಆಡಳಿತದ ಮೂಲಕ ಜನರ ವಿಶ್ವಾಸ ಗಳಿಸಿ ಗ್ರಾಮದಲ್ಲಿ ಇಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ. ಗ್ರಾಮನೈರ್ಮಲ್ಯ, ಕಸ ವಿಲೇವಾರಿ ಘಟಕ ಸ್ಥಾಪನೆ, ಸಮರ್ಪಕ ಕುಡಿಯುವ ನೀರಿನ ಪೂರೈಕೆ, ಸಂಪನ್ಮೂಲ ಕ್ರೋಡೀಕರಣವು ಎಲ್ಲ ಸದಸ್ಯರ ಒಗ್ಗಟ್ಟಿನಿಂದ ಸಾಧ್ಯವಾಗಿದೆ~ ಎಂದರು.`ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಪ್ರಗತಿಯ ಬಗ್ಗೆ ಬದ್ಧತೆ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಗುಮ್ಮಗೋಳ ಗ್ರಾಮ ಪಂಚಾಯಿತಿ. ಮಾದರಿ~ ಎಂದು ಧಾರವಾಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎ.ಮೇಘಣ್ಣವರ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.