ಗುರುವಾರ , ಮೇ 28, 2020
27 °C

ಗೆದ್ದು ಬೀಗಿದ ಬಿಜೆಪಿ, ಪಾಠ ಕಲಿಯದ ಪ್ರತಿಪಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಕೇವಲ ನಾಲ್ಕು ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ 25 ಸ್ಥಾನಗಳನ್ನು ಮಡಿಲಿಗೆ ಹಾಕಿಕೊಂಡಿದೆ. ಕಳೆದ ಬಾರಿ 14 ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 6ಕ್ಕೆ ತೃಪ್ತಿ ಪಟ್ಟುಕೊಂಡಿದೆ. ಕಳೆದ ಬಾರಿ 10 ಸ್ಥಾನಗಳನ್ನು ಗೆದ್ದು ಬೀಗಿದ್ದ ಜೆಡಿಎಸ್ ಈ ಬಾರಿ ಕೇವಲ 2 ಸ್ಥಾನ ಪಡೆದು ಸೊರಗಿದೆ. ಕಳೆದ ಬಾರಿ 2 ಸದಸ್ಯ ಬಲ ಹೊಂದಿದ್ದ ಸಿಪಿಐ ಈ ಬಾರಿ ಖಾತೆಯನ್ನೇ ತೆರೆಯಲಿಲ್ಲ.ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಸ್ವಾಭಾವಿಕವಾಗಿ ಸೋಲು- ಗೆಲುವಿನ ಕಾರಣ ಹುಡುಕುವ ಪ್ರಕ್ರಿಯೆ ಪ್ರಾರಂಭವಾಗಿದೆ. ಮೂರೂ ರಾಜಕೀಯ ಪಕ್ಷಗಳ ಚಿಂತಕರ ಚಾವಡಿಯ ವಿಶ್ಲೇಷಣೆ ಇದು. ಪಾಸಿಟಿವ್ ಪ್ರಚಾರ: ಬೆಂಗಳೂರಿನಲ್ಲಿ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರ ಸ್ವಾಮಿ ಅವರು ದಿನಕ್ಕೊಂದು ಹಗರಣ ಬಯಲಿಗೆ ಎಳೆಯುತ್ತಿದ್ದರೂ ಜಿಲ್ಲೆಯಲ್ಲಿ ಬಿಜೆಪಿ ಕಳೆಗುಂದಲಿಲ್ಲ. ಇದಕ್ಕೆ ಮುಖ್ಯ ಕಾರಣ ಬಿಜೆಪಿ ಶಾಸಕರು ರೂಪಿಸಿದ ವ್ಯವಸ್ಥಿತ ರಣತಂತ್ರ.‘ವಿರೋಧ ಪಕ್ಷದ ನಾಯಕರು ನಮ್ಮನ್ನು ಬೈಯುತ್ತಿದ್ದಾರೆ. ಅವ್ರಿಗೆ ಬೈಯೋದು ಬಿಟ್ಟರೆ ಬೇರೆ ಕೆಲಸವಿಲ್ಲ. ಆದರೆ ನಮಗೆ ಹಾಗಲ್ಲ. ಶಾಸಕರಾಗಿ ನಾವು ಮಾಡಿದ ಕೆಲಸ, ನಮ್ಮ ಸರ್ಕಾರದ ಕನಸು, ಜಿಲ್ಲಾ ಪಂಚಾಯಿತಿಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎಂಬ ಆಲೋಚನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ ಇದೆ...’ ಎಂದೇ ಶೃಂಗೇರಿ ಶಾಸಕ ಡಿ.ಎನ್.ಜೀವರಾಜ್ ಮತ್ತು ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಭಾಷಣ ಪ್ರಾರಂಭಿಸುತ್ತಿದ್ದರು.ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಹಿಡಿದು ಸ್ಥಳೀಯ ಶಾಸಕರವರೆಗೆ ಎಲ್ಲರ ವೈಯಕ್ತಿಕ ವಿಚಾರಗಳನ್ನು ಬಹಿರಂಗ ಸಭೆಗಳಲ್ಲಿ ದೂಷಿಸುತ್ತಿದ್ದ ಜೆಡಿಎಸ್‌ಗೆ ಹಾಗೂ ಒಳಜಗಳಗಳಿಂದ ಹೈರಾಣಾಗಿದ್ದ ಕಾಂಗ್ರೆಸ್‌ಗೆ ಈ ಪಾಸಿಟಿವ್ ಪ್ರಚಾರದ ಶಕ್ತಿ ಫಲಿತಾಂಶ ಪ್ರಕಟವಾಗುವವರೆಗೆ ಅರ್ಥವಾಗಲೇ ಇಲ್ಲ. ಬಿಜೆಪಿಗೆ ಸಹ ಈ ಪಾಸಿಟಿವ್ ಶಕ್ತಿಯ ಬಗ್ಗೆ ಕೊನೆಯವರೆಗೆ ನಂಬಿಕೆ ಇರಲಿಲ್ಲ. ‘ಇಷ್ಟೊಂದು ಸ್ಥಾನ ಗೆಲ್ಲಬಹುದು ಅಂತ ನಾವು ಊಹಿಸಿಯೂ ಇರಲಿಲ್ಲ. ನಮ್ಮ ನಿರೀಕ್ಷೆ ಮೀರಿ ಜನ ನಮ್ಮನ್ನು ಆಶೀರ್ವದಿಸಿದ್ದಾರೆ’ ಎಂದೇ ಬಿಜೆಪಿ ಶಾಸಕರೊಬ್ಬರು ಪ್ರತಿಕ್ರಿಯಿಸಿದರು.ಅತಿ ಆತ್ಮವಿಶ್ವಾಸ: ಚುನಾವಣೆ ಘೋಷಣೆಯಾದ ದಿನದಿಂದ ಶುರುವಾದ ರಾಜಕೀಯ ಲೆಕ್ಕಾಚಾರದಲ್ಲಿ ಹಾಗೂ ಎಲ್ಲ ಮಾಧ್ಯಮಗಳಲ್ಲಿ ಪ್ರಕಟವಾದ ಸಮೀಕ್ಷೆಗಳಲ್ಲಿ ಜೆಡಿಎಸ್ ಕಾಂಗ್ರೆಸ್‌ಗಿಂತ ಉತ್ತಮ ಪ್ರದರ್ಶನ ನೀಡಬಹುದು ಎಂಬ ವಿಶ್ಲೇಷಣೆ ಇರುತ್ತಿತ್ತು. ತರೀಕೆರೆ ತಾಲ್ಲೂಕಿನಲ್ಲಿ ಧರ್ಮೇಗೌಡರು, ಕಡೂರು ತಾಲ್ಲೂಕಿನಲ್ಲಿ ವೈ.ಎಸ್.ವಿ.ದತ್ತ ಹಾಗೂ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಬೋಜೇಗೌಡರು ನೆಲೆ ನಿಂತು ಮುಂದಿನ ವಿಧಾನಸಭಾ ಚುನಾವಣೆಗೆಂದು ಕ್ಷೇತ್ರಗಳನ್ನು ಭದ್ರಪಡಿಸಿಕೊಳ್ಳಲು ಯತ್ನಿಸುತ್ತಿದ್ದರು.ಆದರೆ ಲಿಂಗದಹಳ್ಳಿ ಮತ್ತು ಯಗಟಿಯಲ್ಲಿ ಕ್ರಮವಾಗಿ ಧರ್ಮೇಗೌಡ- ವೈ.ಎಸ್.ವಿ.ದತ್ತ ಅವರ ವೈಯಕ್ತಿಕ ವರ್ಚಸ್ಸಿನ ಮೇಲೆ ಜೆಡಿಎಸ್ ತಲಾ ಒಂದೊಂದು ಕ್ಷೇತ್ರಗಳನ್ನು ಗೆದ್ದಿದ್ದು ಬಿಟ್ಟರೆ ಉಳಿದೆಡೆ ಅಸ್ತಿತ್ವವನ್ನೇ ಕಳೆದುಕೊಂಡಿತು. ಇದೀಗ ಜೆಡಿಎಸ್ ಚಿಂತಕರ ಚಾವಡಿ ತನ್ನ ನಾಯಕರ ಅತಿ ಆತ್ಮವಿಶ್ವಾಸವನ್ನೇ ದೂರುತ್ತಿದೆ.ತೀರದ ಜಗಳ: ಅಭ್ಯರ್ಥಿಗಳ ಆಯ್ಕೆ, ವಿಶ್ವಾಸದ್ರೋಹ, ಕಾಲೆಳೆಯುವ ರಾಜಕಾರಣ ಎಲ್ಲದಕ್ಕೂ ಈ ಬಾರಿ ಕಾಂಗ್ರೆಸ್ ಅಕ್ಷರಷಃ ಉದಾಹರಣೆಯಾಯಿತು. ಇಡೀ ಜಿಲ್ಲೆಯಲ್ಲಿ ಕುತೂಹಲ ಕೆರಳಿಸಿದ್ದ ಯಗಟಿ ಕ್ಷೇತ್ರದಲ್ಲಿ ಸುಜಾತ ಕೃಷ್ಣಮೂರ್ತಿ ಅವರು ಸೋಲುವುದರೊಂದಿಗೆ ಕಡೂರು ತಾಲ್ಲೂಕಿನಲ್ಲಿ ಕಾಂಗ್ರೆಸ್ ಅಸ್ತಿತ್ವವನ್ನೇ ಕಳೆದುಕೊಂಡಿತು. ‘ಯುದ್ಧ ಪ್ರಾರಂಭವಾಗುವ ನಮ್ಮ ಸೇನಾನಿಗಳು ಸೋಲಿಗೆ ಕಾರಣ ಹುಡುಕುತ್ತಾರೆ. ಮೊದಲಿನಿಂದ ಕೊನೆಯವರೆಗೂ ಅವರ ಹೇಳಿಕೆಗಳು ಅದೇ ಧಾಟಿಯಲ್ಲಿರುತ್ತವೆ’ ಎಂದು ಕಾರ್ಯಕರ್ತರು ಕೊರಗುತ್ತಾರೆ.ಸೋಲಿನ ಲೆಕ್ಕಾಚಾರದಲ್ಲಿ ನಿರತರಾಗಿರುವ ತಳಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಮಾತುಕತೆಯಲ್ಲಿ ಕಾಂಗ್ರೆಸ್ ಮುಖಂಡರು ಒಗ್ಗಟ್ಟಾಗಿ ಕಾರ್ಯನಿರ್ವ ಹಿಸದಿರುವುದು ಹಾಗೂ ಕೆಲವೆಡೆ ‘ತಟಸ್ಥ’ರಾದದ್ದು,  ಕೆಲವು ಕ್ಷೇತ್ರಗಳಲ್ಲಿ ಗುಟ್ಟಾಗಿ ಮತ್ತೊಂದು ಪಕ್ಷಕ್ಕೆ ಬೆಂಬಲಿಸಿದ ಸಂಗತಿಗಳೂ ಚರ್ಚೆಯಾಗುತ್ತಿವೆ.ನಗದಾಗದ ಪ್ರಭಾವ: ಜಿಲ್ಲೆಯಲ್ಲಿ ಎಚ್.ಡಿ.ಕುಮಾರ ಸ್ವಾಮಿ ಅವರ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿರುವ ಸಂಗತಿ ಸಮೀಕ್ಷೆ ಸಂದರ್ಭದಲ್ಲಿ ತಿಳಿದು ಬಂದಿತ್ತು. ಆದರೆ ಅದನ್ನು ನಗದಾಗಿಸಿಕೊಳ್ಳುವಲ್ಲಿ ಮುಖಂಡರು ಸಂಪೂರ್ಣ ವಿಫಲರಾಗಿದ್ದಾರೆ. ಪತ್ರಿಕಾಗೋಷ್ಠಿ- ಪತ್ರಿಕಾ ಹೇಳಿಕೆಗಳ ಮೂಲಕ ಸುದ್ದಿಯಲ್ಲಿರಲು ಇಷ್ಟಪಡುವ ಜೆಡಿಎಸ್ ನಾಯಕರು ಜನರ ಬಳಿಗೆ ಹೋಗಿ ಸಂಘಟಿಸಲಿಲ್ಲ ಎನ್ನುವುದು ಕಾರ್ಯಕರ್ತರ ದೂರು.ಸಿಪಿಐಗೆ ನಿರೀಕ್ಷಿತ ಸೋಲು: ಜನಪರ ಕಾಳಜಿ ಮತ್ತು ಪೂರ್ವ ಸಿದ್ಧತೆಯ ಮಾತಿನಿಂದ ಜಿಲ್ಲಾ ಪಂಚಾಯಿತಿ ಸಭೆಯ ಗಮನ ಸೆಳೆಯುತ್ತಿದ್ದ ರಾಧಾ ಸುಂದರೇಶ್ ಅವರೂ ಈ ಬಾರಿ ಸೋತಿದ್ದಾರೆ. ಕ್ಷೇತ್ರದ ಆಯ್ಕೆಯಲ್ಲಿ ರಾಧಕ್ಕ ತಪ್ಪು ಮಾಡಿದರು ಎನ್ನುವುದು ಸಿಪಿಐ ಕಾರ್ಯಕರ್ತರ ವಾದ. ಆದರೆ ಅದನ್ನು ರಾಧಾ ಸುಂದರೇಶ್ ಒಪ್ಪುವುದಿಲ್ಲ. ತಮ್ಮ ಸೋಲಿಗೆ ಕಾಂಗ್ರೆಸ್‌ನ ಹಣಬಲ ಕಾರಣ ಎಂದು ಅವರು ದೂರುತ್ತಾರೆ.ಹೊಸ ಮುಖಗಳು: ಒಂದೆರಡು ಸ್ಥಾನಗಳನ್ನು ಹೊರತು ಪಡಿಸಿದರೆ ಉಳಿದೆಲ್ಲಾ ಕ್ಷೇತ್ರಗಳಲ್ಲಿ ಹೊಸಬರೇ ಗೆದ್ದಿದ್ದಾರೆ. ಕಳೆದ ಬಾರಿಯ ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಎಣಿಸಿ ನೋಡಿದರೆ ನಾಲ್ಕು ಮಂದಿ ಸದಸ್ಯರು ಮಾತ್ರ ಪೂರ್ವ ಸಿದ್ಧತೆಯೊಂದಿಗೆ ಬರುತ್ತಿದ್ದರು. ಉಳಿದವರು ಆಶು ಕವಿಗಳಾಗಿ ತಮ್ಮ ಭಾಷಾಜ್ಞಾನ ಪ್ರದರ್ಶಿಸಿ ಸಮಯ ತಿನ್ನುತ್ತಿದ್ದರು.ಜನಪರ ಕಾಳಜಿಯಿಂದ ಸಭೆಯ ಗಮನ ಸೆಳೆಯುತ್ತಿದ್ದ ಸಾತಿ ಸುಂದರೇಶ್, ರಾಧಾ ಸುಂದರೇಶ್, ಸಂದೀಪ್, ಬೆಳ್ಳಿ ಪ್ರಕಾಶ್, ಆಂತೋಣಿ, ರಾಮದಾಸ್ ಇನ್ನು ಮುಂದೆ ಜಿಲ್ಲಾ ಪಂಚಾಯಿತಿ ಸಭೆಗಳಲ್ಲಿ ಇರುವುದಿಲ್ಲ. ಅವರ ಸ್ಥಾನವನ್ನು ಕವಿತಾ, ಕುಕ್ಕುಡಿಕೆ ರವೀಂದ್ರ, ಸವಿತಾ ರಮೇಶ್, ಕಲ್ಮರುಡಪ್ಪ, ರೇಖಾ ಹುಲಿಯಪ್ಪ ಗೌಡ ಅವರಂಥವರು ಹೇಗೆ ತುಂಬುತ್ತಾರೆ ಎಂಬುದಕ್ಕೆ ಕಾಲವೇ ಉತ್ತರ ಹೇಳಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.