ಸೋಮವಾರ, ಜನವರಿ 20, 2020
27 °C

ಗೆದ್ದ ಸಿದ್ದರಾಮಯ್ಯ, ಸೋಲದ ಪ್ರತಿಪಕ್ಷ

ಪ್ರಜಾವಾಣಿ ವಾರ್ತೆ/ ಎ.ಎಂ.ಸುರೇಶ Updated:

ಅಕ್ಷರ ಗಾತ್ರ : | |

ಗೆದ್ದ ಸಿದ್ದರಾಮಯ್ಯ, ಸೋಲದ ಪ್ರತಿಪಕ್ಷ

ಸುವರ್ಣಸೌಧ (ಬೆಳಗಾವಿ): ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸುವರ್ಣ­ಸೌಧದಲ್ಲಿ ನಡೆದ ವಿಧಾನಮಂಡಲದ ಮೊದಲ ಅಧಿವೇಶನ ಬಹುತೇಕ ಸುಗಮವಾಗಿತ್ತು. ಹತ್ತು ದಿನದ ಕಲಾಪದಲ್ಲಿ ಒಟ್ಟು ೧೩ ಮಸೂದೆಗಳು ಅಂಗೀಕಾರವಾದವು. ಅಕ್ರಮ - ಸಕ್ರಮಕ್ಕೆ ಸಂಬಂಧಿ­ಸಿದ ಮಸೂದೆಗೆ ಮೇಲ್ಮನೆಯಲ್ಲಿ ವಿರೋಧ ವ್ಯಕ್ತವಾದ ಕಾರಣ ಅದನ್ನು ತಡೆಹಿಡಿಯಲಾಯಿತು.ಕಬ್ಬಿಗೆ ಹೆಚ್ಚಿನ ದರ ನಿಗದಿಪಡಿಸುವಂತೆ ಆಗ್ರಹಿಸಿ ಸುವರ್ಣಸೌಧದ ಎದುರು ರೈತರು ಧರಣಿ ನಡೆಸುತ್ತಿದ್ದ ಸಂದರ್ಭದಲ್ಲೇ ಕಬ್ಬು ಬೆಳೆಗಾರ ವಿಠಲ ಭೀಮಪ್ಪ ಅರಭಾವಿ ಆತ್ಮಹತ್ಯೆ ಮಾಡಿಕೊಂಡ ವಿಷಯ ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರತಿಧ್ವನಿಸಿತ್ತು. ಬಿಜೆಪಿ, ಕೆಜೆಪಿ ಧರಣಿ ನಡೆಸಿ ಕಲಾಪಕ್ಕೆ ಅಡ್ಡಿಯನ್ನುಂಟು ಮಾಡಿದ ಕಾರಣ ಅನಿರ್ದಿಷ್ಟ ಕಾಲ ಕಲಾಪ ಮುಂದೂಡಬಹುದು ಎಂಬ ಆತಂಕ ಅಧಿವೇಶನದ ನಾಲ್ಕನೆ ದಿನವೇ ವ್ಯಕ್ತವಾಗಿತ್ತು.ಆದರೆ, ಧರಣಿ ನಡೆಸುವ ವಿಷಯದಲ್ಲಿ ಪ್ರತಿಪಕ್ಷಗಳಲ್ಲೇ ಒಮ್ಮತ ಇರಲಿಲ್ಲ. ಬಿಜೆಪಿ ಹಾಗೂ ಕೆಜೆಪಿ ಈ ವಿಷಯವನ್ನು ರಾಜಕೀಯ­ವಾಗಿ ಬಳಸಿಕೊಳ್ಳಲು ಮುಂದಾದರೆ, ಅಧಿಕೃತ ವಿರೋಧ ಪಕ್ಷವಾದ ಜೆಡಿಎಸ್ ಸರ್ಕಾರದ ಪರ­ವಾಗಿ ನಿಲ್ಲುವ ಮೂಲಕ ಕಲಾಪ ನಡೆಯಬೇಕು ಎಂದು ಪಟ್ಟುಹಿಡಿಯಿತು. ಪ್ರತಿಪಕ್ಷಗಳಲ್ಲಿನ ಈ ಒಡಕು ಧ್ವನಿ ಆಡಳಿತ ಪಕ್ಷಕ್ಕೆ ವರವಾಯಿತು.ರೈತ ಆತ್ಮಹತ್ಯೆ  ಮಾಡಿಕೊಂಡ ವಿಷಯ, ಒಂದು ರೀತಿಯಲ್ಲಿ ಆಡಳಿತ ಪಕ್ಷದಲ್ಲಿ ಒಗ್ಗಟ್ಟಿಗೆ ಕಾರಣವಾಯಿತು. ರೈತನ ಆತ್ಮಹತ್ಯೆ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ, ಕೆಜೆಪಿ ಸದಸ್ಯರು ಒಟ್ಟಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರೆ, ಇದಕ್ಕೆ  ಪ್ರತಿಯಾಗಿ ಸಚಿವರು, ಶಾಸಕರು ಸಿದ್ದರಾಮಯ್ಯ ಪರವಾಗಿ ನಿಲ್ಲುವ ಮೂಲಕ ಸದನದಲ್ಲಿ ಒಗ್ಗಟ್ಟು ಪ್ರದರ್ಶಿಸಿದರು.‘ಬಿದಾಯಿ’ ಯೋಜನೆಯನ್ನು ವಿಸ್ತರಿಸುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಕೆಜೆಪಿಯ ಬಿ.ಎಸ್.ಯಡಿಯೂರಪ್ಪ ಅವರು ಅಧಿವೇಶನ ಶುರುವಾಗುತ್ತಿದ್ದಂತೆಯೇ ಸದನದಲ್ಲೂ ಧರಣಿ ಮುಂದುವರಿಸಿದರು.‘ಸರ್ಕಾರ ಈ ವಿಷಯದಲ್ಲಿ ಮುಕ್ತ ಮನಸ್ಸಿನಿಂದ ಇದೆ. ಮುಂದಿನ ದಿನಗಳಲ್ಲಿ ಎಲ್ಲ ವರ್ಗದವರಿಗೂ ಬಿದಾಯಿ ಯೋಜನೆಯನ್ನು ವಿಸ್ತರಿಸಲಾಗು­ವುದು’ ಎಂದು ಸಿದ್ದರಾಮಯ್ಯ ಭರವಸೆ ನೀಡಿ­ದರೂ ಧರಣಿ ಕೈಬಿಡಲು ಒಪ್ಪಿರಲಿಲ್ಲ. ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ  ಹಾಗೂ ಪ್ರತಿಪಕ್ಷಗಳ ಮುಖಂಡರ ಮಾತಿಗೂ ಯಡಿಯೂರಪ್ಪ ಕಿಮ್ಮತ್ತು ನೀಡಿರಲಿಲ್ಲ.ಆದರೆ, ರೈತ ಆತ್ಮಹತ್ಯೆ ಮಾಡಿಕೊಂಡ ವಿಷಯ ಗೊತ್ತಾಗುತ್ತಿದ್ದಂತೆಯೇ ಏಕಾಏಕಿ ಧರಣಿ ಕೈಬಿಟ್ಟು ರೈತನ ಶವ ಇದ್ದ ಆಸ್ಪತ್ರೆಗೆ ಧಾವಿಸಿದರು. ಅಷ್ಟೆ ಅಲ್ಲದೆ ಈ ವಿಷಯವನ್ನು ಮುಂದಿಟ್ಟು­ಕೊಂಡು ಸದನದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರಯತ್ನಿಸಿದರು. ಆದರೆ, ಉಳಿದ ಪಕ್ಷಗಳು ಅವರೊಂದಿಗೆ ಹೆಜ್ಜೆ ಹಾಕದ ಕಾರಣ ಈ ವಿಷಯದಲ್ಲೂ ಯಶಸ್ಸು ಕಾಣಲು ಸಾಧ್ಯವಾಗಲಿಲ್ಲ. ಈ ಎರಡೂ ವಿಷಯಗಳಲ್ಲಿ ಯಡಿಯೂರಪ್ಪ  ಏಕಾಂಗಿಯಾದರು.ಕೃಷ್ಣಾ ವಿವಾದ: ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲೇ ಕೃಷ್ಣಾ ನ್ಯಾಯಮಂಡಳಿಯಿಂದ ರಾಜ್ಯ ಕೋರಿದ್ದ ೧೨ ಅಂಶಗಳಿಗೆ ಸ್ಪಷ್ಟನೆ ಹೊರಬಿತ್ತು. ಹೀಗಾಗಿ ಸ್ಪಷ್ಟೀಕರಣದ ಸಾಧಕ–- ಬಾಧಕಗಳ ಬಗ್ಗೆ ಸದನದಲ್ಲಿ ಸಾಕಷ್ಟು ಚರ್ಚೆ­ಯಾಯಿತು. ಕೃಷ್ಣಾ ವಿಷಯದ ಜೊತೆಗೆ ಕಳಸಾ - ಬಂಡೂರಿ, ಕಬ್ಬಿಗೆ ಹೆಚ್ಚಿನ ದರ ನಿಗದಿಪಡಿಸು­ವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ನಡೆದ ಚರ್ಚೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು.ನಿರಾಸಕ್ತಿ: ೧೪ನೇ ವಿಧಾನಸಭೆ ಅಸ್ತಿತ್ವಕ್ಕೆ ಬಂದು ಆರು ತಿಂಗಳಾಗಿದ್ದು ಹೆಚ್ಚಿನ ಸದಸ್ಯರು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಸದನದಲ್ಲಿ ಇಡೀ ದಿನ ಕುಳಿತು ಕಲಾಪದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ನಿಯಮಾವಳಿಗಳು, ಸದನದ ನಡಾವಳಿ, ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳ­ಬೇಕಾಗಿರುವುದು ಹೊಸ ಸದಸ್ಯರ ಕರ್ತವ್ಯ. ಆದರೆ ಬಹಳಷ್ಟು ಸದಸ್ಯರು ಕಲಾಪದಲ್ಲಿ ಸಕ್ರಿಯವಾಗಿ ಭಾಗವಹಿಸಲಿಲ್ಲ.ತಮ್ಮ ಪ್ರಶ್ನೆ ಅಥವಾ ಸದನದಲ್ಲಿ ಎತ್ತಿದ ವಿಷಯಗಳಿಗೆ ಉತ್ತರ ಬರುತ್ತಿದ್ದಂತಯೇ ಹಲ­ವರು ಜಾಗ ಖಾಲಿ ಮಾಡುತ್ತಿದ್ದರು. ಕೆಲವರು ಸಹಿ ಹಾಕಿದ ನಂತರ ಸ್ವಲ್ಪ ಹೊತ್ತು ಹಾಜರಿದ್ದು ಹೊರ ಹೋಗುತ್ತಿದ್ದರು. ಬೆರಳೆಣಿಕೆಯಷ್ಟು ಸದಸ್ಯ­ರು ಕಲಾಪ ಮುಗಿಯುವವರೆಗೂ ಕುಳಿತು ಚರ್ಚೆ­ಗಳಲ್ಲಿ ಭಾಗವಹಿಸಿ ಗಮನ ಸೆಳೆದರು.ಅಗತ್ಯ ಸೇವೆಗಳ ಮಸೂದೆ, ಕಲ್ಲುಪುಡಿ ಘಟಕಗಳ ಮೇಲಿನ ನಿಯಂತ್ರಣ, ಪರಿಶಿಷ್ಟ ಜಾತಿ/ಪಂಗಡ ವರ್ಗದವರಿಗೆ ಮೀಸಲಾದ ಹಣ­ವನ್ನು ಖರ್ಚು ಮಾಡದೆ ಇದ್ದರೆ ಅಧಿಕಾರಿಗಳನ್ನು ಆರು ತಿಂಗಳು ಜೈಲಿಗೆ ಕಳುಹಿಸುವ ಮಸೂದೆ, ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ೪೧೭ ಎಂಜಿನಿಯರ್‌­ಗಳ ಸೇವೆಯನ್ನು ರಕ್ಷಿಸುವುದಕ್ಕೆ ಸಂಬಂಧಪಟ್ಟ ಮಸೂದೆ ಸೇರಿದಂತೆ ೧೩ ಮಸೂದೆಗಳು ಚರ್ಚೆ ಮೂಲಕ ಅಂಗೀಕಾರವಾದವು. ಹಲವು ವರ್ಷಗಳ ನಂತರ ಮಸೂದೆಗಳ ಮೇಲೆ ವ್ಯಾಪಕ ಚರ್ಚೆಯಾಯಿತು.ಕಳೆದ ಎರಡು ಅಧಿವೇಶನಗಳಿಗೆ ಹೋಲಿಸಿದರೆ ಈ ಬಾರಿ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಚರ್ಚೆಗಳಲ್ಲಿ ಭಾಗವಹಿಸಿ ವಿಷಯವನ್ನು ಮಂಡಿಸಿದ ರೀತಿ ಮೆಚ್ಚುಗೆಗೆ ಪಾತ್ರವಾಯಿತು.ಮುಜುಗರ: ಆಡಳಿತ ಪಕ್ಷದ ಹಿರಿಯ ಸದಸ್ಯರಾದ ಕೆ.ಆರ್.ರಮೇಶ್ ಕುಮಾರ್, ಬಸವರಾಜ ರಾಯರೆಡ್ಡಿ, ಕೆ.ಶಿವಮೂರ್ತಿ ಅವರು ಕೆಲವೊಮ್ಮೆ  ಸರ್ಕಾರಕ್ಕೆ ಮುಜುಗರವಾಗುವಂತೆ ನಡೆದುಕೊಂಡಿದ್ದು ಉಂಟು. ಇದು ಅತಿ­ಯಾಯಿತು ಅನಿಸಿದಾಗ ‘ಆಡಳಿತ ಪಕ್ಷದ ಸದಸ್ಯರೇ ಈ ರೀತಿ ನಡೆದುಕೊಂಡರೆ ಹೇಗೆ?’ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ರಾಯ­ರೆಡ್ಡಿ ಅವರನ್ನು ಎಚ್ಚರಿಸಿದ್ದೂ ನಡೆಯಿತು.ಎಚ್ಚರಿಕೆ ಹೆಜ್ಜೆ: ಕಲಾಪ ಸುಗಮವಾಗಿ ನಡೆಯುವುದರಲ್ಲಿ ಸ್ಪೀಕರ್ ಪಾತ್ರ ಪ್ರಮುಖ­ವಾದುದು. ಸದನದ ಕಲಾಪ ದಾರಿ ತಪ್ಪ­ಬಹುದು. ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಬಹುದು ಅನಿಸಿದಾಗ ಸ್ಪೀಕರ್  ನೀಡಿದ ರೂಲಿಂಗ್, ತೆಗೆದುಕೊಂಡ ತೀರ್ಮಾನಗಳು ಮೆಚ್ಚುಗೆಗೆ ಪಾತ್ರವಾದವು. ಬಹಳ ವರ್ಷಗಳ ನಂತರ ಸ್ಪೀಕರ್ ಸ್ಥಾನದಲ್ಲಿ ಸಮರ್ಥರು ಕುಳಿತಿದ್ದಾರೆ ಎಂಬ ಅಭಿಪ್ರಾಯವನ್ನು ಕೆಲವು ಶಾಸಕರು ವ್ಯಕ್ತಪಡಿಸಿದರು.ತಿಳಿಯಾದ ವಾತಾವರಣ : ಅಧಿವೇಶನ ಆರಂಭವಾದ ಸಂದರ್ಭದಲ್ಲಿ ಕಬ್ಬು ಬೆಳೆಗಾರರು ಸೇರಿದಂತೆ ಹಲವು ಸಂಘಟನೆಯವರು ಬೆಳಗಾವಿ­ಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಸುವರ್ಣ­ಸೌಧಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರು. ಇದರಿಂದಾಗಿ ಯಾವಾಗ ಏನಾಗುತ್ತದೊ ಎಂಬ ಆತಂಕ ಮನೆ ಮಾಡಿತ್ತು. ಆದರೆ, ಅಧಿವೇಶನದ ಅವಧಿ ಅರ್ಧ ಮುಗಿಯುತ್ತಿದ್ದಂತೆಯೇ ಪರಿಸ್ಥಿತಿ ತಿಳಿಯಾಗುವ ಲಕ್ಷಣಗಳು ಕಂಡುಬಂದವು.ಕಬ್ಬು ಬೆಳೆಗಾರರು ಹೋರಾಟ ಕೈಬಿಟ್ಟರು. ಪ್ರತಿಭಟನೆ, ಧರಣಿಗಳು ಕಡಿಮೆಯಾದವು. ಅಧಿವೇಶನದ ಕೊನೆಯ ದಿನವಾದ ಶುಕ್ರವಾರವಂತೂ ವಾತಾವರಣ ಸಂಪೂರ್ಣ ತಿಳಿಯಾಗಿತ್ತು. ಧರಣಿ, ಪ್ರತಿಭಟನೆಗೆ ಹಾಕಿದ್ದ ಪೆಂಡಾಲ್ ಗಳು ಮಾಯವಾಗಿದ್ದವು. ಭದ್ರತೆಯ ಹೊಣೆಹೊತ್ತಿದ್ದ ಪೊಲೀಸರು ‘ಅಂತೂ ಮುಗಿಯಿತಲ್ಲಾ’ ಎಂದು ನೆಮ್ಮದಿಯ ನಿಟ್ಟುಸಿರುಬಿಟ್ಟರು.

ಪ್ರತಿಕ್ರಿಯಿಸಿ (+)