ಬುಧವಾರ, ಏಪ್ರಿಲ್ 14, 2021
31 °C

ಗೊಂಡರ ಭೀಮಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೊಂಡರ ಭೀಮಾಯಣ

ಭೀಮಾಯಣ: ಎಕ್ಸ್‌ಪೀರಿಯನ್ಸಸ್ ಅಫ್ ಅನ್‌ಟಚಬಿಲಿಟಿ ಕಲೆ: ದುರ್ಗಾಬಾಯ್ ವ್ಯಾಮ್, ಸುಭಾಷ್ ವ್ಯಾಮ್ ಕಥೆ: ಶ್ರೀವಿದ್ಯಾ ನಟರಾಜನ್, ಎಸ್.ಆನಂದ್ ಪುಟ: 112, ಬೆಲೆ: 395 ರೂ. ಪ್ರ: ನವಯಾನ ಪಬ್ಲಿಷಿಂಗ್, 155, 2ನೇ ಮಹಡಿ, ಶಹಾಪುರ್ ಜತ್, ನವದೆಹಲಿ- 110049ಬೆಕ್ಕಿನ ತಲೆಯಿಂದ ಹೊರಟು ಹರಡಿಕೊಂಡ ರಂಗಿನ ವೃಕ್ಷದೊಳಗೆಲ್ಲ ಬಣ್ಣಬಣ್ಣದ ಪಕ್ಷಿಗಳು ಚಿಲಿಪಿಲಿಗುಟ್ಟುತ್ತಿವೆ. ನಮ್ಮಟ್ಟಿಯ ತಿಮ್ಮ, ಯಂಕ್ಟನಂತಿರುವ ಶಿವನ ಕೈಯೊಳಗೆ ಮರದ ಕವಲಿನಂತಿರುವ ತ್ರಿಶೂಲ. ತ್ರಿಶೂಲದ ಮೇಲೊಂದು ಹುಲಿ. ದೇವರು ಮೈದುಂಬಿದವನೊಬ್ಬ ತ್ರಿಶೂಲವನ್ನು ಏರುತ್ತಿದ್ದಾನೆ. ಶಿವನ ಒಂದು ಮಗ್ಗುಲಿಗೆ ಹುಲಿ ಬೆಕ್ಕು, ಇನ್ನೊಂದು ಮಗ್ಗುಲಿಗೆ ಅವನಿಗಿಂತ ಎತ್ತರವಿರುವ ಕಾಳಮ್ಮನಂತಿರುವ ಪಾರ್ವತಿ.ಬಣ್ಣದ ರೆಕ್ಕೆ ಬಿಚ್ಚಿ ಬಾಯಿಗಿಂತಲೂ ದೊಡ್ಡದಾದ ಹಣ್ಣನ್ನು ಕಚ್ಚಿಕೊಂಡಿರುವ ನವಿಲು. ಹಕ್ಕಿಯದೊ, ಚಿಟ್ಟೆಯದೊ ಎಂದು ದಂಗುಬಡಿಸುವ ರಂಗಿನ ರೆಕ್ಕೆಗಳು...ಕೆಂಪು, ನೀಲಿ, ಹಳದಿ, ಹಸಿರು, ಕಂದು, ನೇರಳೆ ಬಣ್ಣಗಳು ಪಕ್ಷಿಗಳು, ಮರಗಳು, ಶಿವ - ಪಾರ್ವತಿ - ಬೆಕ್ಕು ಏನೆಲ್ಲ ಆಗಿ ಭೂಮಿ ಹುಟ್ಟಿದ ಕತೆಯನ್ನು, ದುರ್ಗಾದೇವಿಯ ಕತೆಯನ್ನು ಕ್ಯಾನ್‌ವಾಸಿನ ಮೇಲೆ ಹೇಳಿದ್ದರು. ಆ ಮಾಂತ್ರಿಕ ಲೋಕದೊಳಗೆ ಕಣ್ಣರಳಿಸಿ ಅಲೆದಾಡುತ್ತ ಆ ಲೋಕವ ಸೃಷ್ಟಿಸಿದ ಒಡತಿಯ ಕಂಡೆ. ಒಡೆತನದ ಹಮ್ಮೇ ಇಲ್ಲದ, ರವಷ್ಟೂ ಕಪಟವಿಲ್ಲದ ಕಣ್ಣುಗಳ ಅಪ್ಪಟ ಕಲಾವಿದೆ ಆಕೆ. ರಂಗುಗಳ ಮೂಲವೇ ಬೆಳಕನ್ನು ಪ್ರತಿಫಲಿಸುವ ಬಿಳುಪಲ್ಲವೆ!ಆ ಕಲಾವಿದೆಯ ಹೆಸರು ನನ್‌ಕುಶಿಯಾ ಶ್ಯಾಮ್. ಆಕೆಯ ಗಂಡ ಜನ್‌ಗಡ್‌ಸಿಂಗ್ ಶ್ಯಾಮ್. ಆಕೆ ಮಧ್ಯಪ್ರದೇಶದ ದಿಂಡೋರ್ ಜಿಲ್ಲೆಯ ಸನ್‌ಪುರಿ ಗ್ರಾಮದವಳು. ಆಕೆ ಮಧ್ಯಪ್ರದೇಶದ ದಿಂಡೋರ್ ಜಿಲ್ಲೆಯ ಸನ್‌ಪುರಿ ಗ್ರಾಮದವಳು. ಆತ ಪಾಟನ್‌ಗಡ್ ಗ್ರಾಮದವನು. (ಇಬ್ಬರೂ ಪ್ರಧಾನ್ ಗೊಂಡ್ ಆದಿವಾಸಿ ಸಮುದಾಯಕ್ಕೆ ಸೇರಿದವರು). ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನಡೆದ ‘ಖೋಜ್ 2003’ ಕಲಾಮೇಳದಲ್ಲಿ ಭಾಗವಹಿಸಲು ಆಕೆ ಬೆಂಗಳೂರಿಗೆ ಬಂದಿದ್ದಳು. ಸ್ನೇಹಿತರೊಂದಿಗೆ ಅವರನ್ನು ಮಾತನಾಡಿಸಲು ಹೋಗಿದ್ದೆ. ಮರದ ನೆರಳಲ್ಲಿ ಕೂತು ತನ್ನ ಬದುಕಿನ ಖುಷಿ ಇಂಗಿಹೋದ ಕತೆಯನ್ನು ಮೆಲ್ಲನೆ ಮಾತುಗಳಲ್ಲಿ ಹೇಳಿದ್ದಳು.ಹಾಡಿಯಿಂದ ನಾಡಿಗೆ

ಸ್ವಾಮಿನಾಥನ್ ಎಂಬ ಕಲಾವಿದ ಸಂತ ಮಧ್ಯಪ್ರದೇಶದ ಭಾರತ್‌ಭವನದ ಮುಖ್ಯಸ್ಥರಾಗಿದ್ದ ಸಮಯವದು. ಆತ ಕಲೆಯ ಗಮಲಿನ ಜಾಡು ಹಿಡಿದು ಅಲೆದಾಡಿದ್ದು ಬೆಟ್ಟ - ಗುಡ್ಡ - ದಟ್ಟಡವಿಯಲ್ಲಿನ ಗಿರಿಜನರ ಹಾಡಿಗಳಲ್ಲಿ. ಹಾಗೆ ಅಲೆದಾಡುವಾಗ ಮನೆಯೊಂದರ ಗೋಡೆಯ ಮೇಲೆ ಜೀವ ತಳೆದಂತೆ ನಿಂತಿದ್ದ ‘ಬಜರಂಗ ಬಲಿ’ಯನ್ನು ನೋಡಿ ದಂಗಾಗಿ ಹೋದರು. ಚಿತ್ರ ಬಿಡಿಸಿದ್ದು ಆ ಮನೆಯ ಜನ್‌ಗಡ್‌ಸಿಂಗ್ ಶ್ಯಾಮ್ ಎಂದು ಪತ್ತೆ ಹಚ್ಚಿದರು. ನರ್ಮದಾ ನದಿ ತೀರದಲ್ಲಿ ದೊರಕುವ ಕೆಂಪು, ಕಪ್ಪು, ಹಳದಿ ಮಣ್ಣಿನಿಂದ ಹಾಗೂ ವಿವಿಧ ರೀತಿಯ ಹೂ ಮತ್ತು ಎಲೆಗಳನ್ನು ಕುದಿಸಿ ಬಣ್ಣ ಮಾಡಿಕೊಂಡು, ಕಡ್ಡಿತುದಿಗೆ ಬಟ್ಟೆ ಸುತ್ತಿ ಬ್ರಶ್ ಮಾಡಿಕೊಂಡು ಅಲ್ಲಿನ ಗೊಂಡ್ ಆದಿವಾಸಿಗಳು ಚಿತ್ರ ಬಿಡಿಸುತ್ತಾರೆ. ಚಿತ್ರದ ಮೋಡಿಗೆ ಒಳಗಾದ ಸ್ವಾಮಿನಾಥನ್‌ರವರು ಎರಡು ವಾರ ಬಿಟ್ಟು ಮತ್ತೆ ಬಂದರು. ಮಗನನ್ನು ತನ್ನೊಡನೆ ಕಳಿಸಿಕೊಡಬೇಕೆಂದು ಜನ್‌ಗಡ್‌ಸಿಂಗ್‌ನ ತಾಯಿಯನ್ನು ಇನ್ನಿಲ್ಲದಂತೆ ಗೋಗರೆದರು.ಮನೆಯವರ ವಿರೋಧವನ್ನೂ ಲೆಕ್ಕಿಸದೆ ಪ್ರೀತಿಸಿ ಮದುವೆಯಾಗಿದ್ದ ಜನ್‌ಗಡ್‌ಸಿಂಗ್ ಮತ್ತು ನನ್‌ಕುಶಿಯಾ ಒಬ್ಬರನ್ನೊಬ್ಬರು ಬಿಟ್ಟಿರುತ್ತಿರಲಿಲ್ಲ. ರಟ್ಟೆ ಮುರಿದುಕೊಂಡು ಕೂಲಿ ಮಾಡಿ ಬದುಕುತ್ತಿದ್ದರು. ಮನೆಯನ್ನು ಅಂದಗೊಳಿಸಲು ಚಿತ್ರಬಿಡಿಸುತ್ತಿದ್ದರು. ಅವರಿಬ್ಬರನ್ನು ಅಗಲಿಸುವುದು ಸ್ವಾಮಿನಾಥನ್ ಅವರಿಗೂ ಬೇಡವಾಗಿತ್ತು. ಬಹಳ ಒತ್ತಾಯ ಮಾಡಿ, ತನ್ನ ಮಕ್ಕಳಂತೆಯೇ ನೋಡಿಕೊಳ್ಳುವುದಾಗಿ ಆತನ ತಾಯಿಗೆ ಮಾತು ಕೊಟ್ಟು, ಇಬ್ಬರನ್ನೂ ಭೋಪಾಲದ ಭಾರತ್‌ಭವನಕ್ಕೆ ಕರೆತಂದರು. ಕೊಟ್ಟ ಮಾತಿನಂತೆ ನಡೆದುಕೊಂಡರು.ತನ್ನ ಚಿತ್ರಗಳ ಮೂಲಕ ಜನ್‌ಗಡ್‌ಸಿಂಗ್ ಹೊಸತೊಂದು ಸಂಚಲನವನ್ನೇ ಉಂಟು ಮಾಡಿದ, ಮನೆಮಾತಾಗಿ ಹೋದ. ತನ್ನ ನೆಚ್ಚಿನ ಮಡದಿ, ಮೂರು ಮುದ್ದಿನ ಮಕ್ಕಳನ್ನು (ಮಯಂತ್‌ಕುಮಾರ್ ಶ್ಯಾಮ್, ಮನೀಶ್‌ಕುಮಾರ್ ಶ್ಯಾಮ್, ಜಪಾನಿಕುಮಾರಿ ಶ್ಯಾಮ್) ಗಾಢವಾಗಿ ಪ್ರೀತಿಸುತ್ತಿದ್ದ ಜನ್‌ಗಡ್‌ಸಿಂಗ್‌ಗೆ ಭಾರತ್‌ಭವನದ ಪ್ರತಿಷ್ಠೆಯಾಗಲಿ, ಸಿಕ್ಕ ಖ್ಯಾತಿಯಾಗಲಿ ಎಂದೂ ತಲೆಗೇರಲಿಲ್ಲ. ತನ್ನ ಸಮುದಾಯದ ಹಲವಾರು ಕಲಾವಿದರಿಗೆ ಅವರ ಮನೆ ಆಶ್ರಯ ತಾಣವಾಗಿತ್ತು.ವಿದೇಶಗಳಲ್ಲೂ ಆತನ ಹೆಸರು ಜನಪ್ರಿಯವಾಗಿ ಜಪಾನಿಗೆ ಬರಲು ಆಹ್ವಾನ ಬಂತು. ಮೊತ್ತಮೊದಲ ಬಾರಿಗೆ ಹೆಂಡತಿ ಮಕ್ಕಳನ್ನು ಬಿಟ್ಟು ಮೂರು ತಿಂಗಳು ಜಪಾನಿಗೆ ಹೋದ. ಹಿಂತಿರುಗಿ ಬರುವಾಗ ಆತನನ್ನು ಬರಮಾಡಿಕೊಳ್ಳಲು ನನ್‌ಕುಶಿಯಾ ಕಲ್ಕತ್ತಾವರೆಗೂ ಹೋಗಿದ್ದಳು. ಹೆಚ್ಚು ಮಾತನಾಡದೆ ಮೌನವಾಗಿದ್ದ ಗಂಡನನ್ನು ನೋಡಿ ಆಕೆಗೆ ಆಶ್ಚರ್ಯವಾಯಿತು. ಯಾಕೆ ಎಂದು ಕೇಳಿದಾಗ ಎಲ್ಲರನ್ನು ಬಿಟ್ಟು ಮೂರು ತಿಂಗಳ ಕಾಲ ಒಬ್ಬನೆ ಇದ್ದುದರಿಂದ ಹೀಗಾಗಿದೆ ಎಂದ.2001ರಲ್ಲಿ ಜನ್‌ಗಡ್‌ಸಿಂಗ್ ಎರಡನೆ ಬಾರಿಗೆ ಜಪಾನಿಗೆ ಹೋದ. ಬರೆದ ಪ್ರತಿಯೊಂದು ಪತ್ರದಲ್ಲೂ ವಾಪಸ್ಸು ಬರುವ ಮಾತನ್ನೇ ಆಡಿದ. ಜುಲೈ 1ರಂದು ನನ್‌ಕುಶಿಯಾ ಫೋನು ಮಾಡಿದಾಗ ಮಕ್ಕಳನ್ನು ನೆನಪಿಸಿಕೊಂಡು ಅತ್ತಿದ್ದ. ಜುಲೈ 3ರಂದು ಜನಗಡ್‌ಸಿಂಗ್ ತೀರಿಕೊಂಡನೆಂಬ ಸುದ್ದಿ ಭಾರತ್‌ಭವನವನ್ನು ತಲುಪಿತು. ಆತ ಆತ್ಮಹತ್ಯೆ ಮಾಡಿಕೊಂಡನೆಂದು ಹೇಳಲಾಯಿತು.‘ನನಗೆ ಸಿಡಿಲುಬಡಿದಂತಾಯಿತು. ಒಬ್ಬರನ್ನೊಬ್ಬರು ಅಗಲದೆ ಇಪ್ಪತ್ತು ವರ್ಷ ಒಟ್ಟಿಗೆ ಬದುಕಿದ್ದೆವು. ಎಂದೂ ಸಾವನ್ನು ಚಿಂತಿಸಿದವನೇ ಅಲ್ಲ ಅವನು. ಅವನಿಲ್ಲದ ದುಃಖವನ್ನು ಭರಿಸಲು ನನಗೆ ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ಗೊತ್ತಾಗದಂತೆ ಒಬ್ಬಳೇ ಅಳುತ್ತೇನೆ. ಚಿತ್ರ ಬಿಡಿಸುವ ಮೂಲಕ ದುಃಖವನ್ನು ಮರೆಯಲು ಪ್ರಯತ್ನಿಸುತ್ತೇನೆ. ನನ್ನ ಗಂಡನ ಹೆಸರನ್ನು ಜೀವಂತವಾಗಿಡಲು ಮತ್ತು ಅವರ ಕಲೆಯನ್ನು ಮಕ್ಕಳಿಗೆ ಕಲಿಸಲು ಚಿತ್ರರಚನೆಯನ್ನು ಮುಂದುವರೆಸಿದ್ದೇನೆ. ಅದರಲ್ಲಿಯೇ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳುತ್ತಿದ್ದೇನೆ. ಮಕ್ಕಳೂ ಚೆನ್ನಾಗಿ ಚಿತ್ರ ಬಿಡಿಸುತ್ತಾರೆ.ಬದುಕು ಸಾಗುತ್ತಿದೆ. ಅದರ ಜೊತೆಯಲ್ಲೆ ಭೀತಿಯೂ ಬೆಂಬಿಡದೆ ಸಾಗಿ ಬರುತ್ತಿದೆ. ಮೋಸಹೋಗುತ್ತೇನೆ ಎಂಬ ಭೀತಿ, ಯಾರನ್ನಾಗಲಿ ನಂಬಲು ಭೀತಿ, ಅಪರಿಚಿತವಾದ ಈ ದೊಡ್ಡ ಜಗತ್ತಿನಲ್ಲಿ ಕಳೆದುಹೋಗುತ್ತೇನೆ ಎಂಬ ಭೀತಿ.... ಕಂಡು ಕೇಳರಿಯದ ಜಗತ್ತಿನಲ್ಲಿ ನನ್ನ ಗಂಡನೂ ಇಂತಹುದೇ ಭೀತಿಯಲಿ ನಲುಗಿರಬೇಕು...’2003ರಲ್ಲಿ ನನ್‌ಕುಶಿಯಾ ಹೇಳಿದ ಕಥೆಯನ್ನು ಪ್ರಕಟಿಸುವ ಸಲುವಾಗಿ ಬರೆದೆ. ಕಾಣದ ನಾಡಲಿ ತಬ್ಬಲಿಯಂತಾದ ಜನಗಡ್‌ಸಿಂಗ್‌ಶ್ಯಾಮ್, ನಾಗರೀಕ ಜಗತ್ತನ್ನು ಕುರಿತಂತೆ ನನ್ನೊಳಗೆ ಹುಟ್ಟಿಸಿದ ಪ್ರಶ್ನೆಗಳಿಂದಾಗಿ ಅದು ಹಾಗೇ ಉಳಿದಿತ್ತು. ‘ಭೀಮಾಯಣ’ದ ಗೊಂಡ್ ಆದಿವಾಸಿ ಕಲೆಯ ಚಿತ್ರಗಳು ಮರೆಯಲ್ಲಿದ್ದ ನೆನಪನ್ನು ಪ್ರಕಟಪಡಿಸುವಂತೆ ಮಾಡಿವೆ.ಭೀಮಯಾನದ ಭೀಮಾಯಣ

ನವಯಾನ ಪ್ರಕಾಶನದ ಆನಂದ್ ಅವರು ಅಂಬೇಡ್ಕರ್ ಕುರಿತು ತಾವು ಪ್ರಕಟಿಸಿರುವ ಪುಸ್ತಕ ‘ಭೀಮಾಯಣ’ದ ಬಿಡುಗಡೆಯ ಸಂದರ್ಭದಲ್ಲಿ ಪುಸ್ತಕ ಕುರಿತಂತೆ ಮಾತನಾಡಲು ನನ್ನನ್ನು ಕರೆದಿದ್ದರು. ಮುಂಚಿತವಾಗಿಯೇ ಪುಸ್ತಕವನ್ನು ಕಳಿಸಿದರು. ಪುಸ್ತಕವನ್ನು ಕಂಡ ಕೂಡಲೇ ಮನಸ್ಸು ಹಾತೊರೆದಿದ್ದು ಅದನ್ನು ‘ನೋಡಲು’, ಕಾರಣ ಚಿತ್ರಗಳೇ ಆ ಪುಸ್ತಕದ ಹೈಲೈಟ್! ಪ್ರಧಾನ್ ಗೊಂಡ್ ಆದಿವಾಸಿ ಸಮುದಾಯದ ದುರ್ಗಾ ಮತ್ತು ಸುಭಾಷ್ ದಂಪತಿಗಳು ಚಿತ್ರಗಳನ್ನು ಬಿಡಿಸಿದ್ದಾರೆ. ತಮ್ಮ ಮಾಂತ್ರಿಕತೆ ಮತ್ತು ವಿಸ್ಮಯತೆಯಿಂದಾಗಿ ಚಿತ್ರಗಳು ಪುಸ್ತಕದ ಜೀವಾಳವಷ್ಟೇ ಆಗದೆ, ಅಂಬೇಡ್ಕರ್ ಅವರ ವ್ಯಕ್ತಿತ್ವಕ್ಕೆ ಹೊಸದೊಂದು ಆಯಾಮವನ್ನೇ ನೀಡಿವೆ. ‘ಚಿತ್ರ ರಚಿಸಿಕೊಡಿ’ ಎಂದು ಕೇಳಿದಾಗ ಆ ಕಲಾವಿದ ದಂಪತಿಗಳಿಗೆ ಅಂಬೇಡ್ಕರ್ ಬಗ್ಗೆ ಏನೂ ತಿಳಿದಿರಲಿಲ್ಲ. ‘ನಗರದ ಮುಖ್ಯಚೌಕದಲ್ಲಿ ಒಂದು ಬಗಲಲ್ಲಿ ಪುಸ್ತಕಗಳನ್ನು ಹಿಡಿದುಕೊಂಡು, ಏನನ್ನೋ ತೋರುವವರಂತೆ ಮತ್ತೊಂದು ಕೈಯನ್ನು ಮುಂಚಾಚಿರುವ ಪ್ರತಿಮೆಯೇ ಬಾಬಾಸಾಹೇಬ್ ಅಂಬೇಡ್ಕರ್’ ಎಂದು ಮಗಳು ಮಾಡಿಕೊಟ್ಟ ಪರಿಚಯವೇ ಅವರಿಗಾದ ಅಂಬೇಡ್ಕರರ ಕುರಿತ ಮೊದಲ ಪರಿಚಯ. ಅಲ್ಲಿಂದ ಮುಂದೆ ಅಂಬೇಡ್ಕರ್ ಕುರಿತ ಕಥೆಗಳನ್ನು ಅಲಿಸಿದರು. ಪುಸ್ತಕದಲ್ಲಿ ದಾಖಲಾಗಿರುವ ಸಂದರ್ಭಗಳನ್ನು ಮನನ ಮಾಡಿಕೊಂಡರು. ಪ್ರಕಾಶಕರನ್ನು ಭೇಟಿಯಾಗಲು ಅವರ ಮನೆಗೆ ಬಂದಾಗ ಅವರಿರಲಿಲ್ಲ. ಆ ಸಂದರ್ಭದಲ್ಲಿ ಮನೆ ಮಾಲೀಕರು ಗಮಾರರೆಂದು ನಿಂದಿಸಿದ ರೀತಿಯಿಂದ ಅಂಬೇಡ್ಕರ್‌ಗೆ ಆದ ಅಸ್ಪೃಶ್ಯತೆಯ ಅನುಭವವನ್ನು ಮನಗಂಡರು. ಅವರು ಅದ್ಭುತ ಕಲಾವಿದರು, ಹಲವಾರು ಪುಸ್ತಕಗಳಿಗೆ ಚಿತ್ರರಚಿಸಿದ್ದಾರೆ. ವಿದೇಶಗಳಿಗೂ ಹೋಗಿ ಬಂದಿದ್ದಾರೆ ಎಂದು ಆನಂದ್‌ರವರು ಹೇಳಿದ ಮೇಲೂ ಆಕೆಯ ವರ್ತನೆ ಬದಲಾಗಲಿಲ್ಲ.ಅಸ್ಪೃಶ್ಯತೆಯ ಅವಮಾನವನ್ನು ಮೀರಿಕೊಂಡು ದಮನಿತರಿಗೆ ಭರವಸೆಯ ಬೆಳಕಾದ ಅಂಬೇಡ್ಕರ್ ಅವರ ನೋವನ್ನು ತಮ್ಮದೆಂದು ಭಾವಿಸಿದರು. ಆ ಅನುಭೂತಿಯನ್ನೇ ಚಿತ್ರವಾಗಿಸಿದರು.ಪುಸ್ತಕದಲ್ಲಿ, ಅಕ್ಷರ ರೂಪದಲ್ಲಿ ದಾಖಲಾಗಿರುವುದು ಚಾರಿತ್ರಿಕ ಸತ್ಯಗಳು. ಅಸ್ಪೃಶ್ಯ ಜಾತಿಗೆ ಸೇರಿದ ಬಾಲಕ ಭೀಮರಾವ್ ಈ ನಾಡಿನ ಅಸ್ಪೃಶ್ಯದ ಸ್ವಾಭಿಮಾನದ ಚೇತನವಾಗಿ ರೂಪುಗೊಳ್ಳಲು ನಾಂದಿಹಾಡಿದ ಅಸ್ಪೃಶ್ಯತೆಯ ಅನುಭವಗಳನ್ನು ಸಂಕ್ಷಿಪ್ತವಾಗಿ ಅಚ್ಚುಕಟ್ಟಾಗಿ ದಾಖಲಿಸಲಾಗಿದೆ. ಅಸ್ಪೃಶ್ಯತೆ ಗತಕಾಲದ ಇತಿಹಾಸವಲ್ಲ, ವರ್ತಮಾನದ ವಾಸ್ತವ ಎಂಬುದನ್ನು ಮನವರಿಕೆ ಮಾಡಿಕೊಡುವಂತಹ ಸಾಕ್ಷಿಗಳನ್ನು ಸಹ ಪುಸ್ತಕ ದಾಖಲಿಸಿದೆ. ಪುಸ್ತಕದಲ್ಲಿ ‘ವಾಟರ್’, ‘ಶೆಲ್ಟರ್’, ‘ಟ್ರಾವೆಲ್’ (ನೀರು, ವಸತಿ, ಪಯಣ) ಎಂಬ ಮೂರು ಅಧ್ಯಾಯಗಳಿವೆ. ಮೊದಲೆರೆಡು ಅಧ್ಯಾಯಗಳಲ್ಲಿ ಮೂಲಭೂತ ಅಗತ್ಯಗಳಿಗೂ ಬಾಲಕನಾಗಿ, ಯುವಕನಾಗಿ ಅಂಬೇಡ್ಕರ್ ಅನುಭವಿಸಿದ ಅಸ್ಪೃಶ್ಯತೆಯ ಅನುಭವಗಳಿವೆ. ಮೂರನೆ ಅಧ್ಯಾಯದಲ್ಲಿ, ಅಸ್ಪೃಶ್ಯತೆಯ ಅನುಭವವನ್ನೇ ಆತ್ಮಾಭಿಮಾನದ ದ್ರವ್ಯವಾಗಿಸಿಕೊಂಡ ಸ್ವಾಭಿಮಾನಿ ಅಂಬೇಡ್ಕರ್, ಅಸ್ಪೃಶ್ಯರ ಚೇತನವನ್ನು ಬಡಿದೆಬ್ಬಿಸಲು ನಡೆಸಿದ ಪಯಣದ ವಿವರಗಳಿವೆ.ಮೊದಲ ಅಧ್ಯಾಯದಲ್ಲಿ ನೀರಿಗಾಗಿ ಅವಮಾನಿತನಾಗುವ ಬಾಯಾರಿದ ಬಾಲಕ ಭೀಮರಾವ್ ನೀರೊಳಗೂ ಮೀನೇ ಆಗಿಬಿಟ್ಟಿದ್ದಾನೆ. ಬಂಧುಗಳೊಂದಿಗೆ ತಂದೆಯಿದ್ದ ಊರಿಗೆ ರೈಲಿನಲ್ಲಿ ಪಯಣಿಸುತ್ತಿರುವ ಸಂದರ್ಭದ ಚಿತ್ರದಲ್ಲಿ ಹುಲಿ ಎಂಜಿನ್ ಆಗಿದೆ, ಬಸವನಹುಳುಗಳು ಚಕ್ರಗಳಾಗಿವೆ, ಹಾವುಗಳೇ ಹಳಿಯಾಗಿವೆ, ಕಣ್ಣುಗಳೆ ಕಿಟಿಕಿಗಳಾಗಿವೆ. ಚಿತ್ರ ನೋಡುತ್ತಿದ್ದರೆ ಕಾಡಿನೊಳಗೆ ರೈಲೋ, ರೈಲಿನೊಳಗೆ ಕಾಡೊ ಎನಿಸುತ್ತದೆ. ಚಂದದ ಹುಂಜವೊಂದು ಸಮಯ ಸೂಚಿಸುವ ಗಡಿಯಾರವಾಗಿದೆ. ತನ್ನದೆ ನೆಲದಲ್ಲಿ ಬಾವಿ ತೋಡಿಸಿದ ಕಾರಣಕ್ಕೆ ದಲಿತನೊಬ್ಬ ಕೊಲೆಯಾದ ಸಂದರ್ಭವನ್ನು ಸೂಚಿಸುವ ಚಿತ್ರದಲ್ಲಿ ಗುದ್ದಲಿಯೇ ಕಣ್ಣೀರುಹಾಕುತ್ತಿದೆ. ಇದು ಮನುಷ್ಯರ ಹೃದಯಹೀನತೆಗೆ ಸಾಕ್ಷಿಯಂತಿದೆ.ಬೊಗಸೆ ನೀರಿಗೆ ಅವಮಾನಿತನಾಗುವ ಬಾಲಕ ಭೀಮರಾವ್ ಮುಂದೆ ಸಾವಿರಾರು ಅಸ್ಪೃಶ್ಯರನ್ನು ಸಂಘಟಿಸಿ ಚೌಡರ್‌ಕೆರೆಯನ್ನು ಮುಟ್ಟಿ, ನೀರು ಕುಡಿಯುವ ಹೋರಾಟವನ್ನು ಹಮ್ಮಿಕೊಂಡರು. ಹೋರಾಟಕ್ಕಾಗಿ ಜನರನ್ನು ಹುರಿದುಂಬಿಸಲು ಅಂಬೇಡ್ಕರ್ ಅವರು ಭಾಷಣ ಮಾಡುತ್ತಿರುವ ಸಂದರ್ಭದ ಚಿತ್ರದಲ್ಲಿ, ಅಂಬೇಡ್ಕರ್ ಅವರ ಮಾತುಗಳೇ ನೀರಿನ ಹಲವು ಕವಲುಗಳಾಗಿ ಹರಿಯುತ್ತ ತುಂತುರಾಗಿ ಜನರನ್ನು ತಲುಪುತ್ತಿದೆ. ಕೆರೆಯ ಮೀನುಗಳು ಬ್ರಾಹ್ಮಣರ ಕಡೆಯಿಂದ ಇಳಿಯುತ್ತಿದ್ದರೆ ಅಂಬೇಡ್ಕರೆಡೆಗೆ ಹತ್ತುತ್ತಿವೆ. ಅಸ್ಪೃಶ್ಯರು ಮುಟ್ಟಿದ ಕೆರೆಯ ನೀರನ್ನು ತಾವು ಬಳಸಲಾಗುವುದಿಲ್ಲವೆಂಬ ಹೊಟ್ಟೆಕಿಚ್ಚಿನಿಂದ ದಲಿತರಿಗೂ ದಕ್ಕದಂತೆ ಮಾಡಲು ಸವರ್ಣೀಯರೆಲ್ಲ ಕೆರೆಯೊಳಗೆ ಕಕ್ಕಸು ಮಾಡುತ್ತಿರುವ ಚಿತ್ರ ಜಾತೀಯತೆಯ ಹೊಲಸಿಗೆ ಸಾಕ್ಷಿಯಾಗಿದೆ.ಎರಡನೇ ಅಧ್ಯಾಯದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳ ಪದವಿ ಪಡೆದುಕೊಂಡು ಭವಿಷ್ಯವನ್ನು ಅರಸುತ್ತಿರುವ ಸಂದರ್ಭವಿದೆ. ಆ ಚಿತ್ರದಲ್ಲಿ ಅಂಬೇಡ್ಕರ್ ಉತ್ತಮ ಪೋಷಾಕು ಧರಿಸಿದ್ದಾರೆ. ಕೈಯಲ್ಲಿ ಹತ್ತು ಹಲವು ಪದವಿಗಳು, ಪುಸ್ತಕಗಳು, ಸೂಟ್‌ಕೇಸುಗಳು. ಮೇಧಾವಿಗೂ ಸಾಟಿಯಾಗಬಲ್ಲ, ಉತ್ತಮ ಬದುಕಿಗೂ ಅರ್ಹರಾದ ಅವರು ವಸತಿಗಾಗಿ, ಉನ್ನತ ಭವಿಷ್ಯಕ್ಕಾಗಿ ಪರದಾಡುತ್ತ ಏಕಾಕಿಯಾಗಿದ್ದಾರೆ. ಇಲ್ಲಿ ಪ್ರತಿಭೆಗೂ ಅಂಟಿದ ಜಾತಿ ಕಲ್ಮಶವನ್ನು ಸೂಕ್ಷ್ಮವಾಗಿ ಬಿಚ್ಚಿಡಲಾಗಿದೆ.ಅದೇ ಅಧ್ಯಾಯದಲ್ಲಿ ಅಸ್ಪೃಶ್ಯನೆಂಬ ಕಾರಣಕ್ಕೇ ಫಾರ್ಸಿ ುನೆಮಾಲೀಕರಿಂದ ಹೊರ ಹಾಕಿಸಿಕೊಂಡು ವಸತಿಹೀನವಾಗಿ ತನ್ನ ಸಾಮಾನುಗಳೊಂದಿಗೆ ಉದ್ಯಾನವನದಲ್ಲಿ ಅಂಬೇಡ್ಕರ್ ಕೂತಿರುವ ದೃಶ್ಯವಿದೆ. ಆ ಚಿತ್ರದಲ್ಲಿ ವಸತಿಹೀನ ಅಂಬೇಡ್ಕರ್ ಮನುಷ್ಯರಷ್ಟೆ ಅಲ್ಲ, ಹಲವು ಜೀವಿಗಳಿಗೆ ಆಶ್ರಯ ನೀಡುವ ಉದ್ಯಾನವನವೇ ಆಗಿದ್ದಾರೆ.ಮೂರನೇ ಅಧ್ಯಾಯದಲ್ಲಿ ದಲಿತರನ್ನು ಸಂಘಟಿಸಲು ಅಂಬೇಡ್ಕರ್ ನಡೆಸಿದ ಸುತ್ತಾಟದ ವಿವರ ನೀಡುವ ಚಿತ್ರಗಳಿವೆ. ಈ ಚಿತ್ರದಲ್ಲಿ ಅಂಬೇಡ್ಕರ್ ಅವರೇ ಬಸ್ ಆಗಿಬಿಟ್ಟಿದ್ದಾರೆ. ದಲಿತರ ಸಂಚಲನೆಗೆ ದಲಿತರೇ ವಾಹನಗಳಾಗಬೇಕಾದ ವಾಸ್ತವತೆಯನ್ನು ಈ ಚಿತ್ರ ಬಿಂಬಿಸುತ್ತದೆ.ಹೋದೆಡೆಯಲ್ಲೆಲ್ಲ ದಲಿತರ ಚೇತನವನ್ನು ಹುರಿದುಂಬಿಸುವ ಮಾತುಗಳನ್ನು ಅಂಬೇಡ್ಕರ್ ಆಡುತ್ತಿದ್ದರು. ಅಂತಹ ಸಂದರ್ಭವನ್ನು ಸೂಚಿಸುವ ಚಿತ್ರದಲ್ಲಿ ಅಂಬೇಡ್ಕರ್ ಅವರ ಕೈಗಳೇ ಕೊಂಬೆರೆಂಬೆಗಳಾಗಿ ಹತ್ತು ಹಲವು ದಿಕ್ಕಿಗೆ ಚಾಚಿಕೊಂಡಿದೆ.ಜೀವಾಂಕುರದ ಮೂಲವೇ ಜಲ. ಜಲ, ಜಲಚರಗಳು, ಪಶು, ಪಕ್ಷಿ, ಸಸ್ಯಸಂಕುಲ, ಮಾನವಕುಲ ಅವರ ನೋವು ನಲಿವುಗಳು.... ಎಲ್ಲವೂ ಒಂದರೊಳಗೊಂದು ಹೆಣೆದುಕೊಂಡು ಜೀವಜಾಲವಾಗಿದೆ. ನಿರಂತರವಾಗಿ ಚಲಿಸುವ ಜೀವಜಾಲಕೆ ಕೊನೆ ಮೊದಲುಂಟೆ? ಈ ಕಾರಣಕ್ಕೇ ಇರಬೇಕು, ಚಿತ್ರಬಿಡಿಸುವ ಮೊದಲು ಕಲಾವಿದ ದಂಪತಿಗಳು ಹಾಕಿದ ಮೊದಲ ಕಂಡೀಷನ್- ‘ನಮ್ಮ ಕಲೆ ಮುಕ್ತವಾದುದು. ಅಲ್ಲಿ ಯಾರಾದರೂ ಉಸಿರಾಡಬಹುದು. ಆದ್ದರಿಂದ ‘ಚೌ’ಕಟ್ಟಿ’ನೊಳಗೆ ನಾವು ಚಿತ್ರ ಬಿಡಿಸುವುದಿಲ್ಲ’ ಎಂದು. ಹಾಗಾಗಿಯೇ ಪುಸ್ತಕದೊಳಗಿನ ಚಿತ್ರಗಳು ಕಟ್ಟಿನಲ್ಲಿ ಬಂಧಿಯಾಗದೆ ನೀರಿನಂತೆ ಕೊನೆಮೊದಲಿಲ್ಲದೆ ಹರಿದಿವೆ.ಅಕ್ಷಯರೂಪದ ಅರಿವು

ಪ್ರತಿಸಾರಿ ನೋಡಿದಾಗಲೂ ಬೆರಗುಗೊಳಿಸುವ, ಹೊಸದೇನೊ ಹೊಳಹನ್ನು ನೀಡುವ, ಬದುಕಿನ ಚಲನೆಯ ಸಂಕೇತದಂತಿರುವ ಚಿತ್ರಗಳನ್ನು ಕುರಿತು ಬರೆಯುವುದೆಂದರೆ ಕಾಲಿಗೆ ಕಲ್ಲುಗುಂಡು ಕಟ್ಟಿಕೊಂಡು ಹಾರಲು ಪ್ರಯಾಸಪಟ್ಟಂತೆ. ಆದಿವಾಸಿ ಕಲಾದಂಪತಿಗಳು ಅಂಬೇಡ್ಕರ್ ಅವರ ಬದುಕನ್ನು ಗ್ರಹಿಸಿರುವ ರೀತಿ ಅನನ್ಯವಾದುದು. ಲೋಕವೇ ತಾನಾಗಿ, ತಾನೇ ಲೋಕವೂ ಆಗಿ ನಿರಂತರವಾಗಿ ಚಲಿಸುವ ಬದುಕಿನ ಪರಿಯ ಅರಿತವರಿಗೆ ಮೇಲುಕೀಳಿನ ಮೈಲಿಗೆಗಳಿಲ್ಲ. ಇಂತಹ ಅರಿವಿನ ಬೆಳಕನ್ನೇ ಅಜ್ಞಾನದ ಕತ್ತಲಿಗೆ ಮದ್ದೆಂದು ಬುದ್ಧ ಸಕಲರಿಗೆ ಹಂಚಿದ. ಇಂಥದೊಂದು ಅರಿವಿನ ತುಣುಕೇ ಕಲಾವಿದರ ಅನನ್ಯತೆಯ ಮೂಲವಾಗಿದೆ ಎಂಬುದನ್ನು ಅವರೊಂದಿಗೆ ಒಡನಾಡಿದ ಗಳಿಗೆಗಳಲ್ಲಿ ಕಂಡುಕೊಂಡೆ.ಪುಸ್ತಕವನ್ನು ನೋಡುತ್ತ ನೋಡುತ್ತ ನನ್‌ಕುಶಿಯಾ ಇನ್ನಿಲ್ಲದಂತೆ ನೆನಪಾಗುತ್ತಿದ್ದಳು. ಈ ಚಿತ್ರಗಳೊಂದಿಗೆ ಆಕೆಯದೇನೋ ನಂಟಿದೆ ಎನಿಸುತ್ತಿತ್ತು. ಪುಸ್ತಕದ ಕೊನೆಯಲ್ಲಿ ಕಲಾವಿದರ ಪರಿಚಯವನ್ನು ನೀಡಲಾಗಿದೆ. ಅದನ್ನು ಓದಿದಾಗ ಕಲಾವಿದ ಸುಭಾಷ್ ನನ್‌ಕುಶಿಯಾಳ ಸೋದರನೆಂದು ತಿಳಿಯಿತು! ಜನ್‌ಗಡ್ ಜೀಜಾ ಹಾಗೂ ನನ್‌ಕುಶಿಯ ದೊಡ್ಡಮರದ ಆಳವಾದ ಬೇರುಗಳಂತೆ, ನಾವಿಬ್ಬರೂ ಆ ಮರದ ಕೊಂಬೆಗಳು ಎಂದರು.ಪುಸ್ತಕ ಬಿಡುಗಡೆಯ ದಿನದಂದು ಬೆಳಗಿನಿಂದ ಸಂಜೆಯವರೆಗೂ ದುರ್ಗಾ ಮತ್ತು ಸುಭಾಷರೊಂದಿಗೆ ಇದ್ದೆ. ಅವರು ಭೇಟಿ ನೀಡಬೇಕಾಗಿದ್ದ ಜಾಗಗಳಿಗೆಲ್ಲ ಕರೆದುಕೊಂಡು ಹೋದೆ. ಆಮೇಲೆ ಊಟ ಮಾಡುವಾಗ ನನ್‌ಕುಶಿಯಾಳನ್ನು ಭೇಟಿಯಾದ ಬಗ್ಗೆ ಹೇಳಿದೆ. ಆಶ್ಚರ್ಯಪಟ್ಟು- ‘ಇಸ್‌ಲಿಯೆ ಆಪ್ ಪರಾಯೆ ನಹಿ ಲಗ್ತೆ, ಅಪ್ನೆ ಲಗ್ತೆ ಹೈ ಏ ಅಪ್ನಾಪನ್ ಬಡೀ ಚೀಸ್ ಹೈ’ ಎಂದರು (ಅದಕ್ಕೆ ನೀವು ಬೇರೆ ಅನ್ನಿಸಲ್ಲ, ನಮ್ಮೋರು ಅನ್ನಿಸುತ್ತೆ. ನಮ್ಮುದು ಅನ್ನೋ ಭಾವ ದೊಡ್ದು).ಅದ್ಭುತವಾದ ಚಿತ್ರಗಳ ಮೂಲಕ ಅಂಬೇಡ್ಕರ್ ಅವರ ಹೊಸ ಪರಿಚಯ ನೀಡಿದ ದುರ್ಗಾ, ಸುಭಾಷ್ ದಂಪತಿಗಳಿಗೆ ಶರಣು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.