ಗುರುವಾರ , ಫೆಬ್ರವರಿ 25, 2021
31 °C

ಚಿತ್ರವಾಯ್ತು ಆನಂದ ಲಹರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರವಾಯ್ತು ಆನಂದ ಲಹರಿ

ಸನಾತನ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಆದಿ ಶಂಕರಾಚಾರ್ಯರ ಕಲ್ಪನೆಯನ್ನು ಚಿತ್ರರೂಪಕ್ಕಿಳಿಸಿದ ಕಲಾವಿದ ಹುಣಸಗಹಳ್ಳಿ ಜಯದೇವ. ದೇವರು ಹಾಗೂ ಶಂಕರಾಚಾರ್ಯರ ಭಕ್ತಿಭಾವದ ಸಂಬಂಧವನ್ನು ತೋರ್ಪಡಿಸುವ ಚಿತ್ರಗಳನ್ನು ರಚಿಸಿದ್ದಾರೆ. ಕಲಾಸಕ್ತರಲ್ಲಿ ಗೊಂದಲ ಮೂಡಿಸದೆ ಚಿತ್ರಭಾಷೆಗೆ ಒಗ್ಗುವಂತೆ ಸರಳೀಕರಿಸಿ ಚಿತ್ರಿಸಿರುವುದು ಕಲಾವಿದರ ಪ್ರತಿಭೆಗೆ ಸಾಕ್ಷಿ.ದೈವತ್ವ, ಭಕ್ತಿಗೆ ಸಂಬಂಧಿಸಿದ ಅನೇಕ ಚಿತ್ರಗಳನ್ನು ಇವರು ರಚಿಸಿದ್ದು ಪ್ರತಿಯೊಂದು ಅಂಶವೂ ಸೂಕ್ಷ್ಮವಾಗಿ ಚಿತ್ರಿತವಾಗಿದೆ. ನೋಡುಗನ ಮನಸ್ಸಲ್ಲಿ ಯಾವುದೇ ಗೊಂದಲವನ್ನುಳಿಸದೆ ಚಿತ್ರಗಳು ಅರ್ಥವಿವರಣೆ ನೀಡುತ್ತವೆ. ಬಳಸಿರುವ ಬಣ್ಣ, ಸಂಕೇತಗಳು ಅರ್ಥ ಸ್ಫುರಿಸುವಂತಿದೆ.ತಂದೆ ಎಚ್‌.ಡಿ. ಮುತ್ತಣ್ಣ ಅವರ ಆದರ್ಶಗಳನ್ನೇ ಬದುಕಿನಲ್ಲಿ ಅಳವಡಿಸಿಕೊಂಡು ಚಿತ್ರಕಲೆಗೆ ಆಕರ್ಷಿತರಾಗಿ ಚಿತ್ರಕಲೆಯನ್ನು ಅಭ್ಯಸಿಸಿದವರು ಜಯದೇವ. ಮೈಸೂರಿನ ಚಾಮರಾಜೇಂದ್ರ ಚಿತ್ರಕಲಾ ಶಾಲೆಯಲ್ಲಿ ಎಸ್‌.ಎನ್‌. ಸ್ವಾಮಿ, ಎಫ್‌.ಎಂ. ಸೂಫಿ, ವೈ ಸುಬ್ರಹ್ಮಣ್ಯರಾಜು ಅವರಲ್ಲಿ ಕಲಾಭ್ಯಾಸ ಮಾಡಿದ್ದಾರೆ.ಹದಿನಾರು ವರ್ಷಗಳ ಹಿಂದೆಯೇ ಜಯದೇವ ಅವರನ್ನು ಆಕರ್ಷಿಸಿದ ಶಂಕರಾಚಾರ್ಯ ಅವರ ಆನಂದ ಲಹರಿ, ಕಲೆಯ ರೂಪದಲ್ಲಿ ಈಗ ಸಾಕಾರಗೊಂಡಿದೆ. ನಲವತ್ತು ಚಿತ್ರಗಳು ಈ ಆನಂದ ಲಹರಿಯ ಭಾಗವಾಗಿದ್ದು ಪ್ರತಿಯೊಂದು ಚಿತ್ರವೂ ಮನಸೂರೆಗೊಳ್ಳುವಂತಿದೆ.

ಈ ಕಲಾಕೃತಿ ‘ಸಚಿತ್ರ ಆನಂದಲಹರಿ’ ಪ್ರದರ್ಶನ ಫೆಬ್ರುವರಿ 5ರಿಂದ ಫೆಬ್ರುವರಿ 9ರವರೆಗೆ ನಡೆಯಲಿದೆ. ಬುಧವಾರ ಸಂಜೆ 6ಕ್ಕೆ ಉದ್ಘಾಟನೆಗೊಳ್ಳಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್‌ ಕ್ರಿಯೇಟಿವ್‌ ಟೀಚಿಂಗ್‌ ಅಧ್ಯಕ್ಷ ಡಾ. ಗುರುರಾಜ ಕರ್ಜಗಿ ಭಾಗವಹಿಸಲಿದ್ದಾರೆ.ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರ ಕೃಪ ರಸ್ತೆ. ಬೆಳಿಗ್ಗೆ 11ರಿಂದ ಸಂಜೆ 7ರವರೆಗೆ ವೀಕ್ಷಣೆಗೆ ಅವಕಾಶವಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.