ಸೋಮವಾರ, ಮೇ 23, 2022
21 °C

ಜಪಾನ್: ವಿಕಿರಣ ತಗುಲಿ ಮೂವರು ಅಸ್ವಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೊಕಿಯೊ/ಫುಕುಶಿಮಾ (ಪಿಟಿಐ): ಭೂಕಂಪ ಮತ್ತು ಸುನಾಮಿಯಿಂದ ತತ್ತರಿಸಿರುವ ಜಪಾನ್‌ನ ಫುಕುಶಿಮಾ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಮೂವರು ಕೆಲಸಗಾರರಿಗೆ ಗುರುವಾರ ಅತ್ಯಧಿಕ ಮಟ್ಟದ ವಿಕಿರಣ ತಗುಲಿ, ತೀವ್ರ ಗಾಯಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಸ್ಥಾವರದ 3ನೇ ರಿಯಾಕ್ಟರ್ ಟರ್ಬೈನ್ ಕಟ್ಟಡದಲ್ಲಿನ ಕೇಬಲ್‌ಗಳ ಮೇಲೆ ಈ ನೌಕರರು ಗಂಭೀರ ಸ್ಥಿತಿಯಲ್ಲಿ ಅಸ್ವಸ್ಥರಾಗಿ ಬಿದ್ದಿದ್ದರು. ತೀವ್ರ ಗಾಯಗೊಂಡಿರುವ ಇವರಿಗೆ 170-180 ಮಿಲಿಸೀವರ್ಟ್ ವಿಕಿರಣ ತಗುಲಿದ್ದು, ಈಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಪಾನ್‌ನ ಪರಮಾಣು ಮತ್ತು ಕೈಗಾರಿಕಾ ಸುರಕ್ಷತಾ ಸಂಸ್ಥೆ ತಿಳಿಸಿರುವುದಾಗಿ ‘ಕ್ಯೋಡೊ’ ಸುದ್ದಿಸಂಸ್ಥೆ ವರದಿ ಮಾಡಿದೆ.ಬಾಟಲಿ ನೀರು ಆಮದು: ಈ ಮಧ್ಯೆ, ಕಲುಷಿತಗೊಂಡ ನಲ್ಲಿ ನೀರು ಕುಡಿಯಲು ಯೋಗ್ಯವಾಗಿಲ್ಲದ ಕಾರಣ ಜನರು ಆತಂಕಕ್ಕಿಡಾಗಿರುವ ಹಿನ್ನೆಲೆಯಲ್ಲಿ ಬಾಟಲಿ ನೀರು ಆಮದು ಮಾಡಿಕೊಳ್ಳಲು ಆಡಳಿತ ಯೋಜಿಸಿದೆ. ಜೊತೆಗೆ, ಬಾಟಲಿ ನೀರಿನ ತಯಾರಿಕೆ ಹೆಚ್ಚಿಸುವಂತೆ ಸಂಬಂಧಿಸಿದ ಕಾರ್ಖಾನೆಗಳಿಗೆ ಸರ್ಕಾರ ಮನವಿ ಮಾಡಿರುವುದಾಗಿ ಮುಖ್ಯ ಸಂಪುಟ ಕಾರ್ಯದರ್ಶಿ ಯುಕಿಯೊ ಎಡೇನೊ ತಿಳಿಸಿದ್ದಾರೆ.

 

ಆಹಾರ ಆಮದು ರದ್ದು:  ಇದರೊಂದಿಗೆ, ಜಪಾನ್‌ನಿಂದ ಆಹಾರ ವಸ್ತುಗಳ ಆಮದನ್ನು ರಷ್ಯಾ, ಕೆನಡಾ, ಆಸ್ಟ್ರೇಲಿಯಾ, ಫಿಲಿಪ್ಪೀನ್ಸ್, ಹಾಕಾಂಗ್ ಹಾಗೂ ಸಿಂಗಪುರ ಸ್ಥಗಿತಗೊಳಿಸಿವೆ. ದಕ್ಷಿಣ ಕೊರಿಯಾ ಈ ಬಗ್ಗೆ ಚಿಂತನೆ ನಡೆಸಿದೆ. ವಿಕೋಪಪೀಡಿತ ಫುಕುಶಿಮಾ ಪ್ರದೇಶದಿಂದ ಡೈರಿ ಉತ್ಪನ್ನಗಳು ಮತ್ತು ತರಕಾರಿಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಷೇಧಿಸುವುದಾಗಿ ಅಮೆರಿಕದ ಆಹಾರ ಮತ್ತು ಔಷಧ ಆಡಳಿತವು (ಎಫ್‌ಡಿಎ) ಪ್ರಕಟಿಸಿದ ನಂತರ ಈ ನಿರ್ಧಾರ ಹೊರಬಿದ್ದಿದೆ.ಮುಂದುವರಿದ ಭೂಕಂಪ: ಈ ನಡುವೆ, ಸುನಾಮಿಪೀಡಿತ ಮಿಯಾಗಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುರುವಾರ ರಿಕ್ಟರ್ ಮಾಪಕ ಪ್ರಕಾರ, 6.1ರ ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದು ಜಪಾನ್‌ನಲ್ಲಿ ಭೂಕಂಪ ಭೀತಿ ಮುಂದುವರಿಯುವಂತೆ ಮಾಡಿದೆ ಎಂದು ಹವಾಮಾನ ಸಂಸ್ಥೆ ತಿಳಿಸಿದೆ.

 

ಕ್ಯಾಮೆರಾನ್-ನವೊಟೊ ಚರ್ಚೆ:ಜಪಾನ್‌ನಲ್ಲಿನ ಇತ್ತೀಚಿನ ಪರಿಸ್ಥಿತಿ ಮತ್ತು ಫುಕುಶಿಮಾ ಪರಮಾಣು ವಿದ್ಯುತ್ ಸ್ಥಾವರದಲ್ಲಿನ ಬಿಕ್ಕಟ್ಟು ಪರಿಹಾರ ಕಾರ್ಯಗಳ ಬಗ್ಗೆ ಪ್ರಧಾನಿ ನವೊಟೊ ಕಾನ್ ಮತ್ತು ಬ್ರಿಟಿಷ್ ಪ್ರಧಾನಿ ಡೇವಿಡ್ ಕ್ಯಾಮರಾನ್ ಗುರುವಾರ ದೂರವಾಣಿ ಸಂಭಾಷಣೆ ನಡೆಸಿದರು. ಜಪಾನ್‌ಗೆ ನೆರವು ನೀಡುವಂತೆ ಬ್ರಸ್ಸೆಲ್ಸ್‌ನಲ್ಲಿ ನಡೆಯುವ ಎರಡು ದಿನಗಳ ಐರೋಪ್ಯ ಶೃಂಗಸಭೆಯಲ್ಲಿ ಇತರ ಐರೋಪ್ಯ ರಾಷ್ಟ್ರಗಳ ನಾಯಕರಿಗೆ ಮನವಿ ಮಾಡುವುದಾಗಿ ಕ್ಯಾಮರಾನ್ ಭರವಸೆ ನೀಡಿದ್ದಾರೆ ಎಂದೂ ವಿದೇಶಾಂಗ ಸಚಿವಾಲಯ ಹೇಳಿದೆ.

ಪರಮಾಣು ಸ್ಥಾವರಗಳ ಸುರಕ್ಷತೆಗೆ ಅಮೆರಿಕ ಕ್ರಮ

ವಾಷಿಂಗ್ಟನ್ (ಪಿಟಿಐ): ಅಮೆರಿಕದ ಪರಮಾಣು ನಿಯಂತ್ರಣ ಆಯೋಗವು (ಎನ್‌ಆರ್‌ಸಿ) ಜಪಾನ್ ಪರಮಾಣು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ತನ್ನ ಪರಮಾಣು ವಿದ್ಯುತ್ ಸ್ಥಾವರಗಳ ಸುರಕ್ಷತೆಯ ಬಗ್ಗೆ ಎರಡು ಕವಲಿನ ಪರಿಶೀಲನೆ ನಡೆಸುವುದಾಗಿ ಪ್ರಕಟಿಸಿದೆ.‘ನಮ್ಮ ಗಮನ ಯಾವಾಗಲೂ ಅಮೆರಿಕ ಜನರ ಆರೋಗ್ಯ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸುವುದಾಗಿದೆ. ದೇಶದಲ್ಲಿ ಪರಮಾಣು ಸ್ಥಾವರಗಳು ಮತ್ತು ವಿಕಿರಣಶೀಲ ಸಾಮಗ್ರಿಗಳಿಗೆ ಸಂಬಂಧಿಸಿದಂತೆ ನಮ್ಮ ಲೈಸೆನ್ಸಿಂಗ್ ಮತ್ತು ಪ್ರಮಾದಗಳ ಬಗ್ಗೆ ಗಮನ ಹರಿಸುವ ಮೂಲಕ ಇವುಗಳನ್ನು ಖಚಿತಪಡಿಸಿಕೊಳ್ಳಬೇಕಿದೆ’ ಎಂದು ಎನ್‌ಆರ್‌ಸಿ ಅಧ್ಯಕ್ಷ ಗ್ರೆಗೋರಿ ಜ್ಯಾಕ್‌ಜ್ಕೊ ತಿಳಿಸಿದ್ದಾರೆ.‘ಜಪಾನ್‌ನಿಂದ ಲಭ್ಯವಾಗುವ ಎಲ್ಲ ಮಾಹಿತಿಗಳನ್ನು ಪರೀಕ್ಷಿಸಿ, ಅಮೆರಿಕ ಘಟನೆಯ ತೊಡಕುಗಳನ್ನು ಅರಿತುಕೊಳ್ಳುವುದು ಅವಶ್ಯಕವಾಗಿದೆ. ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ರಕ್ಷಿಸಲು ನಮ್ಮ ಕಾರ್ಯಕ್ರಮಗಳು ಮತ್ತು ನಿಯಮಗಳಲ್ಲಿ ಬದಲಾವಣೆ ಮಾಡುವ ಕುರಿತು ನಾವು ವ್ಯವಸ್ಥಿತ ಮತ್ತು ಕ್ರಮಬದ್ಧ ಪರಿಶೀಲನೆ ಮಾಡಬೇಕಿದೆ’ ಎಂದು ಅವರು ಹೇಳಿದ್ದಾರೆ.

ಹಿರಿಯ ಪರಮಾಣು ವ್ಯವಸ್ಥಾಪಕರು ಮತ್ತು ಮಾಜಿ ಎನ್‌ಆರ್‌ಸಿ ಪರಿಣತರನ್ನು ಒಳಗೊಂಡ ಕಾರ್ಯಪಡೆ ಮೂಲಕ ತಪಾಸಣೆ ಕೈಗೊಳ್ಳಲು ಆಯೋಗ ನಡೆಸಿದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.ಈ ಅನುಭವಿಗಳ ತಂಡವು ಜಪಾನ್‌ನಲ್ಲಿನ ಪರಿಸ್ಥಿತಿಯನ್ನು ಅರಿತು ಅಮೆರಿಕದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಜರುಗಿಸಲಿದೆ ಎಂದು ಅವರು ತಿಳಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.