ಗುರುವಾರ , ಮೇ 6, 2021
21 °C

ಜಿಲ್ಲಾಡಳಿತದ ಮೇಲೆ ಒತ್ತಡ ತಂತ್ರವೇ?

ಪ್ರಜಾವಾಣಿ ವಾರ್ತೆ/ ಎಂ.ಜಿ.ಬಾಲಕೃಷ್ಣ Updated:

ಅಕ್ಷರ ಗಾತ್ರ : | |

ಮಂಗಳೂರು: ನೀರಿನ ಕೊರತೆಯಿಂದಲೇ ಮಂಗಳೂರು ತೈಲ ಶುದ್ಧೀಕರಣ ಕಂಪೆನಿಯ (ಎಂಆರ್‌ಪಿಎಲ್) ಎರಡು ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಂಪೆನಿ ಪ್ರಕಟಣೆ ಹೊರಡಿಸಿದ್ದು ಜಿಲ್ಲಾಡಳಿತದ ಮೇಲೆ ಒತ್ತಡ ಹೇರುವ ತಂತ್ರವೇ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.ತುಂಬೆ ಅಣೆಕಟ್ಟೆಯಲ್ಲಿ ನೀರಿನ ಕೊರತೆ ಎದುರಾಗಿರುವುದರಿಂದ ಉದ್ದಿಮೆಗಳ ಬದಲಿಗೆ ಜನತೆಯ ಕುಡಿಯುವ ನೀರಿಗೆ ಆದ್ಯತೆ ನೀಡುವುದು ಜಿಲ್ಲಾಡಳಿತದ ಉದ್ದೇಶವಾಗಿತ್ತು. ಅದರಂತೆ ಎಂಸಿಎಫ್‌ಗೆ ಮೊದಲೇ ನೀರು ಪೂರೈಕೆಯನ್ನು ಸ್ಥಗಿತಗೊಳಿಸಿ, ಎಂಆರ್‌ಪಿಎಲ್‌ಗೂ ನೀರು ಬಳಸದಂತೆ ಸೂಚಿಸಿತ್ತು.

 

ಜಿಲ್ಲಾಡಳಿತದ ಈ ಸೂಚನೆಯನ್ನೇ ತಿರುಗುಬಾಣ ವನ್ನಾಗಿ ಕಂಪೆನಿ ಮಾಡಿಕೊಂಡಿದೆ. ಪೆಟ್ರೋಲಿಯಂ ಉತ್ಪನ್ನಗಳಿಗೆ ಅಭಾವ ಎದುರಾದೀತು ಎಂಬ ಚಿತ್ರಣವನ್ನು ಬಿಂಬಿಸುವ ಸಲುವಾಗಿ ಎರಡು ಘಟಕಗಳನ್ನು ಸ್ಥಗಿತಗೊಳಿಸಿದ್ದನ್ನು ಕಂಪೆನಿ ದೊಡ್ಡದಾಗಿ ಪ್ರಚಾರಗೊಳಿಸಿದೆ ಎಂದು ಹೇಳಲಾಗುತ್ತಿದೆ.ವಾಸ್ತವವಾಗಿ ಎಂಆರ್‌ಪಿಎಲ್‌ನ 3ನೇ ಹಂತದ ಘಟಕ ಪ್ರಾಯೋಗಿಕವಾಗಿ ಕಾರ್ಯಾಚರಣೆ ಆರಂಭಿಸಿದ್ದು 15 ದಿನಗಳ ಹಿಂದೆಯಷ್ಟೇ. ಅಂದರೆ 3ನೇ ಹಂತದ ಕಾಮಗಾರಿ ಈಗ ನಡೆಯುತ್ತಿದೆ. ಈ ಘಟಕದಲ್ಲಿ ಶುದ್ಧೀಕರಣ ಕಾರ್ಯ ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಯೇ ಇಲ್ಲ. ಎರಡನೇ ಘಟಕವನ್ನು ವಾರ್ಷಿಕ ನಿರ್ವಹಣೆಗಾಗಿ ಸ್ಥಗಿತಗೊಳಿಸಲು ನಾಲ್ಕು ತಿಂಗಳ ಹಿಂದೆಯೇ ನಿರ್ಧರಿಸಲಾಗಿತ್ತು. ಅದರಂತೆ ಏಪ್ರಿಲ್ 17ರಂದು ಈ ಘಟಕ ಸ್ಥಗಿತಗೊಳ್ಳಲಿತ್ತು.ನೀರು ಬಳಸಬಾರದು ಎಂಬ ಜಿಲ್ಲಾಡಳಿತದ ಆದೇಶವನ್ನು ಪ್ರತಿ ಅಸ್ತ್ರವಾಗಿ ಮಾಡಿಕೊಳ್ಳುವ ಸಲುವಾಗಿ, ನಿಗದಿತ ಸಮಯಕ್ಕಿಂತ ನಾಲ್ಕು ದಿನ ಮುಂಚಿತವಾಗಿಯೇ ಎರಡನೇ ಘಟಕವನ್ನು ಸ್ಥಗಿತಗೊಳಿಸಿ ನೀರಿನ ಅಭಾವಕ್ಕಾಗಿಯೇ ಸ್ಥಗಿತಗೊಳಿಸಿದ್ದಾಗಿ ಕಂಪೆನಿ ಪ್ರಕಟಣೆ ನೀಡಿದೆ ಎಂದು ಹೇಳಲಾಗಿದೆ.`ನೀರಿನ ಅಭಾವದಿಂದ ಎಂಆರ್‌ಪಿಎಲ್‌ಗೆ ಬಿಸಿ ತಟ್ಟಿಲ್ಲ ಎಂದಲ್ಲ, ಆದರೆ ಅದನ್ನು ಮೊದಲಾಗಿಯೇ ಯೋಚಿಸಿ ವಾರ್ಷಿಕ ನಿರ್ವಹಣೆಯಂತಹ ಕಾರ್ಯ ಗಳನ್ನು ಈ ಅವಧಿಗೆ ನಿದಗಿಪಡಿಸಲಾಗಿರುತ್ತದೆ. ನಾಲ್ಕಾರು ತಿಂಗಳು ಮೊದಲೇ ಇದೆಲ್ಲ ನಿರ್ಧಾರವಾಗಿರುತ್ತದೆ. ಕಂಪೆನಿಯೊಳಗೆ ಉದ್ಯಾನಗಳಿಗೆ ನೀರು ಹಾಕುವುದು ಸಹಿತ ಇತರ ಕಡೆ ನೀರು ಬಳಕೆಯಲ್ಲಿ ಕಡಿತ ಮಾಡಲಾಗಿದೆ. ಆದರೆ ಇಡೀ ಕಂಪೆನಿಯೇ ಸ್ಥಗಿತಗೊಳ್ಳುವಂತಹ ಸ್ಥಿತಿಯಂತೂ ಸದ್ಯಕ್ಕಿಲ್ಲ~ ಎಂದು ಕಂಪೆನಿಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಲಭ್ಯ ಇರುವ ನೀರಿನಲ್ಲಿ ಒಂದನೇ ಘಟಕ ಮುಂದಿನ ಹಲವಾರು ದಿನ ತನ್ನ ಉತ್ಪಾದನಾ ಕಾರ್ಯ ಮುಂದು ವರಿಸಲಿದೆ. ಒಂದನೇ ಘಟಕ ನಡೆಯುವಷ್ಟು ನೀರಿನ ಸಂಗ್ರಹ ಈಗಲೂ ಇದೆ. ಒಂದು ವಾರ ಅಥವಾ 10 ದಿನಗಳಲ್ಲಿ ಉತ್ಪಾದನಾ ಕಾರ್ಯ ಸ್ಥಗಿತಗೊಳ್ಳುವ ಸಾಧ್ಯತೆಯಂತೂ ಇಲ್ಲ.

 

ಎರಡನೇ ಘಟಕ ಸ್ಥಗಿತಗೊಳಿಸುವುದರಿಂದ ಉದ್ಭವವಾಗುವ ಪೆಟ್ರೋಲಿಯಂ ಕೊರತೆಯನ್ನು ನೀಗಿಸಲು ಬದಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.