ಮಂಗಳವಾರ, ಜನವರಿ 21, 2020
18 °C

ಜಿಲ್ಲಾ ಆಸ್ಪತ್ರೆ ಪ್ರಾಥಮಿಕ ಚಿಕಿತ್ಸೆಗಷ್ಟೇ ಸೀಮಿತ

ಪ್ರಜಾವಾಣಿ ವಾರ್ತೆ/ ಎಸ್‌. ಸಂಪತ್‌ Updated:

ಅಕ್ಷರ ಗಾತ್ರ : | |

ಜಿಲ್ಲಾ ಆಸ್ಪತ್ರೆ ಪ್ರಾಥಮಿಕ ಚಿಕಿತ್ಸೆಗಷ್ಟೇ ಸೀಮಿತ

ರಾಮನಗರ: ವಿಶೇಷ ವಾರ್ಡ್, ತೀವ್ರ ನಿಗಾ ಘಟಕ, ಸುಟ್ಟ ಗಾಯ ಚಿಕಿತ್ಸಾ ಘಟಕ, ಟ್ರಾಮಾ ಘಟಕ ಹಾಗೂ ಶುಚಿತ್ವ ಇಲ್ಲದ, ಹೆಸರಿಗೆ ಮಾತ್ರ ಜಿಲ್ಲಾ ಸರ್ಕಾರಿ ಆಸ್ಪತ್ರೆ ಎಂಬ ನಾಮಫಲಕ...ರಾಮನಗರವು 2007ರ ಆಗಸ್ಟ್‌ನಲ್ಲಿ ಹೊಸ ಜಿಲ್ಲೆಯಾಗಿ­ಯೇನೋ ರಚನೆಯಾಯಿತು. ಆದರೆ ಇಲ್ಲಿನ ಆಸ್ಪತ್ರೆಗೆ ಜಿಲ್ಲಾ ಆಸ್ಪತ್ರೆಯ ಲಕ್ಷಣಗಳು ಮಾತ್ರ ಬರಲಿಲ್ಲ. ತಾಲ್ಲೂಕು ಆಸ್ಪತ್ರೆಯಾಗಿದ್ದಾಗ ಇದ್ದಂತಹ 100 ಹಾಸಿಗೆ ಆಸ್ಪತ್ರೆಯನ್ನೇ ಜಿಲ್ಲಾ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಆದರೆ ಇಲ್ಲಿನ ಸೇವಾ, ಸೌಲಭ್ಯ ಮತ್ತು ಸವಲತ್ತುಗಳು ಮಾತ್ರ ಮೇಲ್ದರ್ಜೆಗೆ ಏರಿಲ್ಲ!ಹಾಸಿಗೆಗಳ ಸಂಖ್ಯೆ, ವೈದ್ಯರು ಹಾಗೂ ಸಿಬ್ಬಂದಿ ಸಂಖ್ಯೆಯಲ್ಲಿ ಹೆಚ್ಚಳವಾಗಿಲ್ಲ. ಹೊಸ ಹುದ್ದೆಗಳು ಸೃಷ್ಟಿಯಾಗಿಲ್ಲ. ತಾಲ್ಲೂಕು ಆಸ್ಪತ್ರೆಗೆಂದು ಮಂಜೂರಾಗಿದ್ದ ಹುದ್ದೆ­ಗಳಲ್ಲಿಯೇ ಸಾಕಷ್ಟು ಖಾಲಿ ಉಳಿದಿವೆ. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳ ಪರದಾಟಕ್ಕೆ ಅಂತ್ಯವೇ ಇಲ್ಲದಂತಾಗಿದೆ.ಪ್ರಾಥಮಿಕ ಚಿಕಿತ್ಸೆಗೆ ಸೀಮಿತ: ತೀವ್ರ ನಿಗಾ ಘಟಕ ಹಾಗೂ ವಿಶೇಷ ವಾರ್ಡ್‌ ಇಲ್ಲದ ಕಾರಣ ಆಸ್ಪತ್ರೆಗೆ ತುರ್ತು ಚಿಕಿತ್ಸೆಗೆಂದು ಬರುವ ರೋಗಿಗಳನ್ನು ಬೆಂಗಳೂರಿನ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಗುತ್ತಿದೆ. ನಾಯಿ ಕಚ್ಚಿದ ಹಾಗೂ ಹಾವು ಕಚ್ಚಿದ ಸಂದರ್ಭದಲ್ಲಿಯೂ ಈ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತಿದೆ.ಬೆಂಗಳೂರು– ಮೈಸೂರು ರಾಜ್ಯ ಹೆದ್ದಾರಿ ಕಾರಣ ಹೆಚ್ಚು ಅಪಘಾತಗಳು ಆಗುತ್ತಿರುತ್ತವೆ. ಗಾಯಗೊಂಡವರನ್ನು ‘ಜಿಲ್ಲಾ’ ಸರ್ಕಾರಿ ಆಸ್ಪತ್ರೆಗೆ ಕರೆತಂದರೆ, ಅವರಿಗೆ ಇಲ್ಲಿ ಸಿಗುವುದು  ಪ್ರಥಮ ಚಿಕಿತ್ಸೆ ಮಾತ್ರ. ಹೆಚ್ಚಿನ ಚಿಕಿತ್ಸೆಗೆ ರೋಗಿಗಳು ಬೆಂಗಳೂರಿನ ಹಾದಿಯನ್ನೇ ಹಿಡಿಯಬೇಕಾದ ದುಃಸ್ಥಿತಿ ರಾಮನಗರದ ಆಸ್ಪತ್ರೆಯಲ್ಲಿದೆ.ಸೀಮಿತ ಅವಧಿಯಲ್ಲಿ ಮಾತ್ರ ಸೇವೆ: ಜಿಲ್ಲಾ ಆಸ್ಪತ್ರೆಗೆ ಬೇಕಾದಷ್ಟು ವೈದ್ಯರು, ಘಟಕಗಳು ಮತ್ತು ಸಿಬ್ಬಂದಿ ಇಲ್ಲಿಲ್ಲ. ಹಾಗಾಗಿ ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ರೋಗಿಗಳಿಗೆ ಎಲ್ಲ ಬಗೆಯ ಚಿಕಿತ್ಸೆ ಸೌಲಭ್ಯ ದೊರೆಯುತ್ತಿಲ್ಲ. ಒಂದು ವಿಭಾಗದಲ್ಲಿ ಒಬ್ಬೊಬ್ಬರೇ ವೈದ್ಯರು ಇರುವ ಕಾರಣ ಅವರಿಂದಲೇ ದಿನದ 24 ಗಂಟೆಯೂ ಸೇವೆ ನಿರೀಕ್ಷಿಸುವುದು ಸರಿಯಲ್ಲ ಎಂದು ವೈದ್ಯರೇ ಅಳಲು ತೋಡಿಕೊಳ್ಳುತ್ತಾರೆ.ಜಿಲ್ಲಾ ಆಸ್ಪತ್ರೆಯ ಕಟ್ಟಡವಂತೂ ಶಿಥಿಲಾವಸ್ಥೆಯಲ್ಲಿದ್ದು, ಹೊಸ ಕಾಮಗಾರಿ ಕೈಗೊಳ್ಳಲಾಗದ ಸ್ಥಿತಿ ತಲುಪಿದೆ ಎಂಬುದನ್ನು ಪಿಡಬ್ಲ್ಯುಡಿ ಎಂಜಿನಿಯರ್‌ಗಳೇ ತಿಳಿಸಿದ್ದಾರೆ. ಆಸ್ಪತ್ರೆಯ ಅಡುಗೆ ಕೋಣೆಯಂತೂ ಈಗಲೋ ಆಗಲೋ ಬಿದ್ದು ಹೋಗುವ ಹಂತ ತಲುಪಿದೆ. ಇನ್ನು ಆಸ್ಪತ್ರೆಯ ಸುತ್ತ ಪಾರ್ಥೇನಿಯಂ ಗಿಡಗಳದ್ದೇ ಕಾರುಬಾರು. ಇದರಿಂದ ಶುಚಿತ್ವದ ಕೊರತೆ ಎದ್ದು ಕಾಣುತ್ತಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಹಗಲು ಹೊತ್ತಿನಲ್ಲಿಯೂ ಸೊಳ್ಳೆ ಉಪಟಳ ವಿಪರೀತವಾಗಿದೆ ಎಂದು ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದ ಶ್ರೀನಿವಾಸ್‌ ದೂರುತ್ತಾರೆ.ತಂತ್ರಜ್ಞರ ಕೊರತೆ: ಇತ್ತೀಚೆಗೆ ಆಸ್ಪತ್ರೆಯಲ್ಲಿ ಹೈಟೆಕ್‌ ಪ್ರಯೋಗಾಲಯ, ‘ಡಯಾಲಿಸಿಸ್‌’ ಘಟಕ, ರಕ್ತ ಸಂಗ್ರಹ ಕೇಂದ್ರ ಆರಂಭವಾಗಿದೆ. ಪ್ರಯೋಗಾಲಯ ಮತ್ತು ‘ಡಯಾಲಿಸಿಸ್‌’ ಘಟಕದಲ್ಲಿ ತಂತ್ರಜ್ಞರ ಕೊರತೆ ಇದೆ. ಹೀಗಾಗಿ ಇಲ್ಲಿ ದಿನದ 24 ಗಂಟೆಯೂ ಸೇವೆ ದೊರೆಯುತ್ತಿಲ್ಲ. ಇರುವ ಅಲ್ಪ ತಂತ್ರಜ್ಞರ ಮೇಲೆಯೇ ಒತ್ತಡ ಇದ್ದು, ವಾರದ ರಜೆ ಸಿಗುವುದೂ ಕಷ್ಟವಾಗಿದೆ ಎಂದು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ.‘ಡಯಾಲಿಸಿಸ್‌’ ಘಟಕದಲ್ಲಿ ಆರು ‘ಪ್ಲಾಂಟ್‌’ಗಳಿದ್ದು, ವಾರಕ್ಕೆ 30 ಜನ ಇಲ್ಲಿ ರಕ್ತ ಶುದ್ಧೀಕರಿಸಿಕೊಳ್ಳುತ್ತಾರೆ. ಇನ್ನೂ 20ಕ್ಕೂ ಹೆಚ್ಚು ಜನ ಸೇವೆಗಾಗಿ ಸರದಿಯಲ್ಲಿ ಕಾಯುತ್ತಿದ್ದಾರೆ. ಹೆಚ್ಚು ತಂತ್ರಜ್ಞರು ಇದ್ದಿದ್ದರೆ ದಿನದ 24 ಗಂಟೆಯೂ ಈ ಘಟಕ ಕೆಲಸ ಮಾಡುತ್ತಿತ್ತು. ಆಗ ಇನ್ನಷ್ಟು ಜನರಿಗೆ ಈ ಸೇವೆ ಒದಗಿಸಲು ಸಾಧ್ಯವಾಗುತ್ತಿತ್ತು ಎಂದು ವೈದ್ಯರು ಹೇಳುತ್ತಾರೆ.ಔಷಧಿ ಸಂಗ್ರಹಣೆಗೂ ಜಾಗವಿಲ್ಲ: ಆಸ್ಪತ್ರೆಯಲ್ಲಿ ಔಷಧಿ ಸಂಗ್ರಹಿಸಿ ಇಟ್ಟುಕೊಳ್ಳಲು ಸ್ಥಳಾವಕಾಶದ ಕೊರತೆ ಇದೆ. ಔಷಧಿ ತುಂಬಿದ ಡಬ್ಬಿಗಳನ್ನು ಆಸ್ಪತ್ರೆಯ ಮೆಟ್ಟಿಲು ಅಡಿಯಲ್ಲಿ ಬೇಕಾಬಿಟ್ಟಿ ಇಡುವುದು ಇಲ್ಲಿ ಸಾಮಾನ್ಯವಾಗಿದೆ.ಆಸ್ಪತ್ರೆಗೆ ದಿನಕ್ಕೆ ಸರಾಸರಿ 800 ಹೊರ ರೋಗಿಳು ಬರುತ್ತಾರೆ. 100 ಹಾಸಿಗೆ ಪೈಕಿ 80 ಹಾಸಿಗೆಗಳು ಸಾಮಾನ್ಯವಾಗಿ ಭರ್ತಿಯಾಗಿರುತ್ತವೆ. ಬೆಂಗಳೂರು ಸನಿಹ ಇರುವ ಕಾರಣಕ್ಕೆ ಆರ್ಥಿಕವಾಗಿ ಸ್ಥಿತಿವಂತರು ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗಳಿಗೆ ಹೋಗು­ತ್ತಾರೆ ಎಂಬುದನ್ನು ಇಲ್ಲಿನ ವೈದ್ಯರೇ ತಿಳಿಸುತ್ತಾರೆ.

ಇಲ್ಲೂ ಲಂಚ ಇದೆ: ಆಸ್ಪತ್ರೆಯ ಹಲವೆಡೆ ಗೋಡೆಗಳ ಮೇಲೆ ಆಸ್ಪತ್ರೆಯಲ್ಲಿ ಎಲ್ಲ ಸೇವೆ ಉಚಿತ. ಹಣ ಪಾವತಿಸಬೇಕಾಗಿಲ್ಲ ಎಂಬ ಫಲಕಗಳನ್ನು ಹಾಕಲಾಗಿದೆ. ಆದರೆ ಹೆರಿಗೆ ಪ್ರಕರಣಗಳಲ್ಲಿ ರೂ 3,000ದಿಂದ 5,000 ಲಂಚ ಪಡೆಯಲಾಗುತ್ತಿದೆ ಎಂದು ಆಸ್ಪತ್ರೆಯಲ್ಲಿ ಹೆರಿಗೆಯಾಗಿರುವ ಮಹಿಳೆಯ ಸಂಬಂಧಿ ಯೋಗೇಶ್‌ ದೂರುತ್ತಾರೆ.‘ನಾವು ದಲಿತರು. ನನ್ನ ಸಹೋದರಿಯನ್ನು ಪ್ರಸೂತಿ ಕೋಣೆಗೆ ಕರೆದೊಯ್ಯಲಾಯಿತು. ಕೆಲ ಹೊತ್ತಿನ­ಲ್ಲಿಯೇ ನರ್ಸ್‌, ನಾರ್ಮಲ್‌ ಆಗುವುದಿಲ್ಲ, ಆಪರೇಷನ್‌ ಮಾಡಬೇಕು ಎಂದರು. ಅದಕ್ಕೆ ಒಪ್ಪಿದೆ. ಆಪರೇಷನ್‌ ನಂತರ  ಸಿಬ್ಬಂದಿ ನಮ್ಮಿಂದ 3 ಸಾವಿರ ರೂಪಾಯಿ ಪಡೆದರು. ಬೇರೆ ಸಮುದಾಯದವರಾದರೆ 5 ಸಾವಿರ ರೂಪಾಯಿ ಪಡೆಯುತ್ತಾರೆ ಎಂಬುದು ವಿಚಾರಿಸಿದಾಗ ಗೊತ್ತಾಯಿತು. ಇದೇ ಅಲ್ಲದೆ ಆಸ್ಪತ್ರೆಯ ಆಯಾ, ನರ್ಸ್‌ಗಳಿಗೆ ತಲಾ 100 ರೂಪಾಯಿ ನೀಡಬೇಕಾಯಿತು’ ಎಂದು ಅವರು ಹೇಳಿದರು.‘ಇನ್ನು ಆಸ್ಪತ್ರೆಯಲ್ಲಿ ಶುದ್ಧ ಕುಡಿಯುವ ನೀರಿಲ್ಲ. ಶುಚಿ ಮತ್ತು ರುಚಿಯಾದ ಊಟ ಕೊಡಲ್ಲ’ ಎಂದೂ ಅವರು ದೂರಿದರು.43 ಹುದ್ದೆ ಖಾಲಿ

ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಮಂಜೂರಾ­ಗಿರು­ವ 112 ಹುದ್ದೆಗಳಲ್ಲಿ  59 ಮಾತ್ರ ಭರ್ತಿ­ಯಾಗಿವೆ. 11 ಹಿರಿಯ ವೈದ್ಯರ ಪೈಕಿ 10­ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. 5 ಆರೋಗ್ಯ ಸಹಾಯಕಿಯರ ಹುದ್ದೆಯಲ್ಲಿ ಭರ್ತಿ­ಯಾಗಿರುವುದು 3. ‘ಗ್ರೂಪ್‌–ಡಿ’­ಯ 44 ಹುದ್ದೆಗಳ ಪೈಕಿ 34 ಖಾಲಿ ಇವೆ. 23 ಸ್ಟಾಫ್‌ ನರ್ಸ್‌ ಹುದ್ದೆಯಲ್ಲಿ 11 ಖಾಲಿ ಇವೆ.‘ಲಂಚ ಗಮನಕ್ಕೆ ಬಂದಿಲ್ಲ’

ತಾಲ್ಲೂಕು ಆಸ್ಪತ್ರೆಗೆ ಮಂಜೂ­ರಾಗಿರುವ ಹುದ್ದೆ­ಗಳೇ ಜಿಲ್ಲಾ ಆಸ್ಪತ್ರೆ­ಯಲ್ಲೂ ಮುಂದು­­­ವರೆದಿವೆ. ಆದರೆ ತಾಲ್ಲೂಕು ಆಸ್ಪತ್ರೆ­ಗೆ ಮಂಜೂರಾ­ಗಿದ್ದ ಹುದ್ದೆಗಳಲ್ಲಿ­ಯೂ ಸಾಕಷ್ಟು ಖಾಲಿ ಇವೆ.

ಈಗಿರುವ ಆಸ್ಪತ್ರೆ ಆವರಣ ಒಂದೂ­ಮುಕ್ಕಾಲು ಎಕರೆಯಾಗಿದ್ದು, ಇನ್ನಷ್ಟು ವಿಸ್ತರಿಸಲು ಸಾಧ್ಯವಿಲ್ಲ. ಸುಮಾರು 300 ಹಾಸಿಗೆ­ಯ ನೂತನ ಜಿಲ್ಲಾ ಆಸ್ಪತ್ರೆ ನಿರ್ಮಾಣ­ಕ್ಕೆ ರಾಮನಗರ ಜಿಲ್ಲಾ ಕಂದಾಯ ಭವನ ಮತ್ತು ಜಿಲ್ಲಾ ಪಂಚಾ­ಯಿತಿ ಭವನದ ಬಳಿ ಜಾಗ ಗುರುತಿಸ­ಲಾಗಿದೆ. ಅದು ಪಿಡಬ್ಲ್ಯುಡಿ ಇಲಾಖೆಯ ಹಿಡಿತ­ದಲ್ಲಿದ್ದು, ಅದನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿದರೆ ಆಸ್ಪತ್ರೆ ಕಾಮಗಾರಿ ಆರಂಭವಾಗುತ್ತದೆ. ಈಗಾಗಲೇ ಸರ್ಕಾರ ಆಸ್ಪತ್ರೆ ನಿರ್ಮಾಣಕ್ಕೆ ಹಣ ಮಂಜೂರು ಮಾಡಿದೆ.ಆಸ್ಪತ್ರೆ ಕಾಮಗಾರಿಯ ಶೇ 60ರಷ್ಟು ಪೂರ್ಣ­ಗೊಂಡ ನಂತರ ಸರ್ಕಾರ ಜಿಲ್ಲಾ ಆಸ್ಪತ್ರೆಗೆ ಬೇಕಾಗುವಷ್ಟು ಹುದ್ದೆಗಳನ್ನು ಮಂಜೂರು ಮಾಡುತ್ತದೆ. ಅಲ್ಲಿಯ­ವರೆಗೆ ಇರುವ ಅಲ್ಪ ಸೌಲಭ್ಯವನ್ನೇ ಸಮರ್ಪಕವಾಗಿ ಬಳಿಸಿಕೊಳ್ಳಬೇಕು. ಇನ್ನು ಸಿಬ್ಬಂದಿ ಲಂಚ ಪಡೆಯುವುದು ನನ್ನ ಗಮನಕ್ಕೆ ಬಂದಿಲ್ಲ.

– ಡಾ. ಜೆ. ವಿಜಯ ನರಸಿಂಹ,

ಜಿಲ್ಲಾ ಸರ್ಜನ್‌

ಪ್ರತಿಕ್ರಿಯಿಸಿ (+)