ಟೋಲ್ ರಸ್ತೆಗಳ ಅಥವಾ ಸುಂಕ ಕೊಟ್ಟು ಪ್ರಯಾಣಿಸಬೇಕಾದ ರಸ್ತೆಗಳ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಏಸು ಕ್ರಿಸ್ತ ಹುಟ್ಟುವ ನಾನೂರು ವರುಷದ ಮುಂಚೆಯೇ ಭಾರತದಲ್ಲಿ ಟೋಲ್ ವ್ಯವಸ್ಥೆ ಅಸ್ತಿತ್ವದಲ್ಲಿತ್ತು. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಇದರ ಉಲ್ಲೇಖವಿದೆ. ಜೊತೆಗೆ ಅರಿಸ್ಟಾಟಲ್ ಕೂಡ ಏಷಿಯಾ ಮತ್ತು ಅರೇಬಿಯಾಗಳಲ್ಲಿ ಟೋಲ್ ರಸ್ತೆಗಳಿದ್ದುದನ್ನ ಉಲ್ಲೇಖಿಸಿದ್ದಾನೆ.

ಸಾಮಾನ್ಯವಾಗಿ ವಾಹನಗಳಲ್ಲಿ ಪ್ರಯಾಣಿಸುವವರು ಶುಲ್ಕ ಪಾವತಿಸಿ ಬಳಸಬೇಕಾದ ರಸ್ತೆಗೆ ಟೋಲ್ ರಸ್ತೆ ಎನ್ನಲಾಗುತ್ತದೆ. ಮೂಲತಃ ರಸ್ತೆಗೆ ಅಡ್ಡಲಾಗಿ ಕಟ್ಟುವ ಟೋಲ್ನ ಉದ್ದೇಶ ಬೇರೆಯದೇ ಆಗಿತ್ತು. ಪ್ರಾಚೀನ ಕಾಲದಲ್ಲಿ ರಸ್ತೆಗೆಳ ಮೂಲಕ ಕುದುರೆಯೇರಿ ವೇಗವಾಗಿ ಬರುವ ದಾಳಿಕೋರರನ್ನು ಅಡ್ಡಗಟ್ಟಲು ಈ ಬಗೆಯ ಟೋಲ್ ಇರುತ್ತಿತ್ತು. ಹೀಗೆ ರಕ್ಷಣೆಗಾಗಿ ಪ್ರಾರಂಭವಾದ ಟೋಲ್ಗಳು ಮುಂದೆ ಸುಂಕ ವಸೂಲಾತಿ ಕೇಂದ್ರಗಳಾಗಿ ಬದಲಾದವು.

ಅಮೆರಿಕದಲ್ಲಿ ಪ್ರತಿ ಟೋಲ್ ಬೂತ್ನಲ್ಲೂ ನಿಂತು ಶುಲ್ಕ ಕೊಡಲು ಕಾಲಹರಣ ಮಾಡುವುದನ್ನು ತಪ್ಪಿಸಲು ಟೋಲ್ ಟ್ಯಾಗ್, ಇ ಝಡ್ ಪಾಸ್ ಇತ್ಯಾದಿಗಳನ್ನು ಕೊಡಲಾಗುತ್ತದೆ. ಆದರೆ ಇವು ವಾಹನದ ಆರ್.ಎಫ್.ಐ.ಡಿ (Radio Frequency Identification) ಜೋಡಿಯಾಗಿರುತ್ತವೆ. ಈ ಮೂಲಕವಾಗಿ ಸರ್ಕಾರ ವ್ಯಕ್ತಿಗಳ ಮೇಲೆ ನಿಗಾ ಇರಿಸುವ ಪತ್ತೇದಾರಿ ಕೆಲಸವನ್ನು ಸುಲಭವಾಗಿಸಿಕೊಳ್ಳುತ್ತದೆ ಎಂದು ಕೆಲವರು ಆಪಾದಿಸುತ್ತಾರೆ.

ಆಧುನಿಕ ಜಗತ್ತಿನಲ್ಲಿ ಕೈಗಾರಿಕಾ ಕ್ರಾಂತಿ ಟೋಲ್ ರಸ್ತೆಗಳ ವ್ಯಾಪಕ ಹರಡುವಿಕೆಗೆ ಕಾರಣವಾಯಿತು. ಕೈಗಾರಿಕೆಗಳ ಅಭಿವದ್ಧಿಗೆ ರಸ್ತೆಗಳು ಅನಿವಾರ್ಯವಾದುವು. ಈ ಕಾರಣಕ್ಕಾಗಿ ಪ್ರಯಾಣಿಕರಿಂದಲೇ ರಸ್ತೆ ನಿರ್ವಹಣಾ ಶುಲ್ಕವನ್ನು ಪಡೆಯುವ ಕಾನೂನು -ಟರ್ನ್ ಪೈಕ್ ಆಕ್ಟ್- ಬ್ರಿಟನ್ನಿನಲ್ಲಿ ಜಾರಿಯಾಯಿತು. ಈ ಕಾನೂನಿನ ಪ್ರಕಾರ ಸ್ಥಳೀಯ ಉದ್ಯಮಿಗಳು ರಸ್ತೆಯನ್ನು ಅಭಿವೃದ್ಧಿಪಡಿಸಿ ಅದರ ನಿರ್ವಹಣಾ ವೆಚ್ಚವನ್ನ ಪ್ರಯಾಣಿಕರಿಂದ ಪಡೆಯಬಹುದಾಗಿತ್ತು. ಈ ಸಂದರ್ಭದಲ್ಲೇ ಮಿತಿ ಮೀರಿದ ಸುಂಕ ವಸೂಲಾತಿ ಮಾಡುತ್ತಿದ್ದ ಟೋಲ್ ಗೇಟ್ಗಳ ಮೇಲೆ ತಿರುಗಿ ಬಿದ್ದ ಇಂಗ್ಲೆಂಡ್ನ ರೈತರು ಟೋಲ್ ಗೇಟ್ಗಳನ್ನು ಹಾನಿಗೊಳಿಸಿದ್ದರು. ಇತಿಹಾಸದಲ್ಲಿ ಇದು ‘ರೆಬೆಕಾ ದಂಗೆ’ ಎಂದು ದಾಖಲಾಗಿದೆ.

ಸಾಮಾನ್ಯವಾಗಿ ರಸ್ತೆಗಳಿಗೆ ಟೋಲ್ ವಸೂಲು ಮಾಡುವ ಉದ್ದೇಶ ಅವುಗಳ ನಿರ್ವಹಣೆ ಮತ್ತು ಅಭಿವೃದ್ಧಿ. ಆದರೆ ವಾಸ್ತವದಲ್ಲಿ ಟೋಲ್ ರಸ್ತೆಗಳು ವೇಗವರ್ಧಕಗಳಾಗಿ ರೂಪುಗೊಳ್ಳುತ್ತಿವೆ. ಸಾಮಾನ್ಯ ರಸ್ತೆಗಳಲ್ಲಿರುವ ಏರು ತಗ್ಗು (ಹಂಪು) ಗಳು, ಪುಟ್ಟ ಊರುಗಳಿಗೆ ಬೇಕಾದ ತಿರುವುಗಳು ಟೋಲ್ ರಸ್ತೆಗಳಿಗಿರುವುದಿಲ್ಲ. ಈ ಕಾರಣಕ್ಕಾಗಿಯೇ ಹಲವು ಟೋಲ್ ರಸ್ತೆಗಳಲ್ಲಿ ಸೈಕಲ್, ರಿಕ್ಷಾ ವಾಹನಗಳಿಗೆ ಪ್ರವೇಶ ನಿರಾಕರಿಸಲಾಗುತ್ತದೆ.

ರಸ್ತೆ ಮೂಲಭೂತ ಅಗತ್ಯಗಳಲ್ಲಿ ಒಂದಾಗಿರುವುದರಿಂದ ಇಂದಿಗೂ ‘ಉತ್ತಮ ರಸ್ತೆ’ ಚುನಾವಣಾ ವಿಷಯಗಳಲ್ಲೊಂದು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಪ್ರಮುಖ ಪಕ್ಷಗಳ ಪ್ರಣಾಳಿಕೆಯಲ್ಲೂ ಉತ್ತಮ ರಸ್ತೆಯ ಭರವಸೆಗಳಿವೆ. ಸ್ವಾತಂತ್ರ್ಯ ಬಂದ 73 ವರ್ಷಗಳ ನಂತರವೂ ಭಾರತದಲ್ಲಿ ಪ್ರತಿ ಸಾವಿರ ಜನರಿಗೆ ಕೇವಲ ನಾಲ್ಕು ಕಿಲೋ ಮೀಟರ್ ಉದ್ದದ ರಸ್ತೆ ಇದೆ. (ಅಮೆರಿಕೆಯಲ್ಲಿ ಪ್ರತಿ ಸಾವಿರ ಜನರಿಗೆ 21 ಕಿಲೋ ಮೀಟರ್).

ಪ್ರಜಾಪ್ರಭುತ್ವದಲ್ಲಿ ಸಮರ್ಪಕ ರಸ್ತೆಗಳನ್ನು ನಿರ್ಮಿಸಿ ಸಾರ್ವಜನಿಕ ಬಳಕೆಗೆ ಒದಗಿಸುವುದು ಸರ್ಕಾರದ ಪ್ರಮುಖ ಜವಾಬ್ದಾರಿಗಳಲ್ಲೊಂದು. ವಿದ್ಯುತ್, ಕುಡಿಯುವ ನೀರು ಮತ್ತು ರಸ್ತೆ ಒಂದು ಪ್ರದೇಶದ ಮೂಲಭೂತ ಅಗತ್ಯಗಳೆಂದು ತಿಳಿಯಲಾಗಿದೆ. ಟೋಲ್ ಕೊಟ್ಟು ಬಳಸಬೇಕಾದ ರಸ್ತೆ ಚೆನ್ನಾಗಿರುತ್ತದೆ ಮತ್ತು ಟೋಲ್ ರಹಿತ ಸರ್ಕಾರಿ ರಸ್ತೆಗಳು ಕಳಪೆಯಾಗಿರುತ್ತವೆಂಬ ಭಾವನೆಯನ್ನು ಟೋಲ್ ರಸ್ತೆಗಳು ಹುಟ್ಟು ಹಾಕಿವೆ. ಒಂದು ಅಂದಾಜಿನ ಪ್ರಕಾರ ಮುಂದಿನ ಕೆಲ ವರ್ಷಗಳಲ್ಲಿ ಭಾರತದ ಎಲ್ಲಾ ಪ್ರಮುಖ ರಸ್ತೆಗಳು ಟೋಲ್ ರಸ್ತೆಗಳಾಗಿ ಮಾರ್ಪಾಡಾಗಲಿವೆ ಮತ್ತು ಇದರ ಪರಿಣಾಮವೆಂದರೆ ಪ್ರತಿ ರಸ್ತೆಗಳನ್ನೂ ಹಣ ಪಾವತಿಸಿಯೇ ಉಪಯೋಗಿಸುವ ಪರಿಸ್ಥಿತಿ ಬರಲಿದೆ. ಟೋಲ್ ಪರಿಕಲ್ಪನೆಯನ್ನು ಖಂಡಿಸಿ ಸಾಕಷ್ಟು ಪ್ರತಿಭಟನೆಗಳು ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ನಡೆಯುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಟೋಲ್ ರಸ್ತೆಗಳ ಕುರಿತು ಅಗಾಧ ಪ್ರತಿಭಟನೆ ವ್ಯಕ್ತವಾಗಿತ್ತು.

ಕಾರಣ, ಅಲ್ಲಿನ ಕರಿಯರು ಮತ್ತು ಬಡವರು ನಗರದ ಹೊರವಲಯದಲ್ಲಿ ಹೆಚ್ಚಾಗಿ ಬದುಕುತ್ತಿದ್ದು, ಅವರನ್ನು ಈ ಟೋಲ್ ರಸ್ತೆಗಳ ಮೂಲಕ ನಗರದ ಆರ್ಥಿಕ ಕೇಂದ್ರಗಳಿಂದ ದೂರ ಮಾಡಲಾಗುತ್ತಿದೆ. ವರ್ಣಭೇದ ನೀತಿಯ ಕಾಲದ ಪ್ರಾದೇಶಿಕ ವಿಭಜನೆಯಿನ್ನೂ ಹಾಗೆಯೇ ಉಳಿದಿದೆ. ಬೆಂಗಳೂರಿನ ಹೊರವಲಯದ ಕೂಲಿ ಕಾರ್ಮಿಕರ ಸಮಸ್ಯೆಯೂ ಈ ಬಗೆಯದ್ದೇ ಆಗಿದೆ. ಹೆಚ್ಚುತ್ತಿರುವ ವಾಹನ ಬಳಕೆದಾರರಿಂದ ಟೋಲ್ಗಳು ಹೆಚ್ಚಿನ ಆದಾಯಗಳಿಸುವ ಕೇಂದ್ರಗಳಾಗುತ್ತಾ ರಸ್ತೆ ನಿರ್ಮಾಣ ಲಾಭದಾಯಕ ಉದ್ಯಮವಾಗಿ ಪರಿವರ್ತಿತವಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ.

ರಸ್ತೆಗಳ ಖಾಸಗೀಕರಣ ಕೇವಲ ನಗರಗಳನ್ನು ಜೋಡಿಸುವ ಟೋಲ್ ರಸ್ತೆಗಳತ್ತ ಮಾತ್ರ ಮುಖ ಮಾಡಿದ್ದು, ಹಳ್ಳಿಯ ಸಾಮಾನ್ಯ ರಸ್ತೆಗಳ ಪರಿಸ್ಥಿತಿ ಭಾರತದಲ್ಲಿನ್ನೂ ಹೆಚ್ಚು ಬದಲಾಗಿಲ್ಲ. ಟೋಲ್ ರಸ್ತೆಗಳಿಗೆ ಪರ್ಯಾಯವಾಗಿ ಸ್ಥಳೀಯರಿಗೆ ಉಚಿತವಾಗಿ ಪ್ರಯಾಣಿಸಲು ಸರ್ವಿಸ್ ರಸ್ತೆಗಳನ್ನು ನಿರ್ಮಿಸುವ ಹೊಣೆ ಸರ್ಕಾರದ ಮೇಲಿದೆ. ಯುರೋಪಿನಲ್ಲಿ ಟೋಲ್ ರಸ್ತೆಗಳ ಜೊತೆಗೆ ಹಣ ಪಾವತಿಸಲು ಸಾಧ್ಯವಾಗದ ಜನರಿಗಾಗಿ ಉತ್ತಮ ಮಟ್ಟದ ಪರ್ಯಾಯ ರಸ್ತೆಗಳೂ ಇವೆ. ಜರ್ಮನಿಯ ಆಟೋಬಾನ್ ರಸ್ತೆಗಳು ಮಿತಿರಹಿತ ವೇಗದ ಅವಕಾಶ ನೀಡಿದರೆ, ಅದೇ ದೇಶದ ಹಳ್ಳಿಗಾಡಿನ ರಸ್ತೆಗಳು ಗ್ರಾಮೀಣ ಸೌಂದರ್ಯ, ಜನಜೀವನವನ್ನು ಸಂದರ್ಶಿಸುವ ಪ್ರಯಾಣಗಳಿಗೆ ಅನುಕೂಲಕರ. ಅಂದ ಹಾಗೆ ಮೂಲಭೂತ ಸೌಕರ್ಯವು ಹಕ್ಕೇ ಹೊರತು ಆಯ್ಕೆಯಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.