ಸೋಮವಾರ, ಜನವರಿ 20, 2020
21 °C

ತಡೆಹಿಡಿದ ಕಾಮಗಾರಿಗಳಿಗೆ ಮರು ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ಆಯುಕ್ತರ ತಾಂತ್ರಿಕ ತನಿಖಾ ಕೋಶ (ಟಿವಿಸಿಸಿ)ದಿಂದ ಅನಗತ್ಯ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ತಡೆ ಹಿಡಿಯಲಾಗಿದ್ದ ರೂ522 ಕೋಟಿ ಮೊತ್ತದ 1,970 ಕಾಮಗಾರಿಗಳಲ್ಲಿ ಹಲವು ಯೋಜನೆಗಳಿಗೆ ಶೀಘ್ರವೇ ಮರು ಚಾಲನೆ ಸಿಗಲಿದೆ.ಮಂಗಳವಾರ ನಡೆದ ದಕ್ಷಿಣ ವಲಯದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಮೇಯರ್‌ ಬಿ.ಎಸ್‌. ಸತ್ಯನಾರಾಯಣ, ‘ತಡೆ ಹಿಡಿಯಲಾಗಿದ್ದ ಕಾಮಗಾರಿಗಳಲ್ಲಿ ತುರ್ತಾಗಿ ಅಗತ್ಯವಾದವುಗಳನ್ನಷ್ಟೇ ಆದ್ಯತೆ ಮೇಲೆ ಕೈಗೆತ್ತಿಕೊಳ್ಳಲಾಗುವುದು’ ಎಂದು ಪ್ರಕಟಿಸಿದರು.‘ಈ ಕಾಮಗಾರಿಗಳಿಗೆ ಮತ್ತೆ ಚಾಲನೆ ಕೊಡುವ ವಿಷಯವಾಗಿ ಉಸ್ತುವಾರಿ ಸಚಿವ ಆರ್‌. ರಾಮಲಿಂಗಾ ರೆಡ್ಡಿ ಅವರೊಂದಿಗೆ ನಾನು ಚರ್ಚೆ ನಡೆಸಿದ್ದೇನೆ. ಸರ್ಕಾರದಿಂದ ಅಗತ್ಯ ಅನುದಾನ ಕೊಡಿಸುವ ಭರವಸೆಯನ್ನು ಅವರು ನೀಡಿದ್ದಾರೆ’ ಎಂದು ತಿಳಿಸಿದರು.ಸಭೆಯಲ್ಲಿ ಹಾಜರಿದ್ದ ಸಚಿವರು, ‘ತೀರಾ ಅಗತ್ಯವಾದ ಪ್ರಮುಖ ಕೆಲಸಗಳನ್ನು ಮಾತ್ರ ತೆಗೆದುಕೊಳ್ಳಬೇಕು’ ಎಂದು ಸೂಚಿಸಿದರು. ‘ಶನಿವಾರದೊಳಗೆ ಕಾಮಗಾರಿಗಳ ಪಟ್ಟಿಯನ್ನು ಒದಗಿಸಬೇಕು. ಅದಕ್ಕಿಂತ ಮುಂಚೆ ಪಾಲಿಕೆ ಸದಸ್ಯರ ಜತೆ ಚರ್ಚೆ ನಡೆಸಬೇಕು ಮತ್ತು ಸ್ಥಳ ಪರಿಶೀಲನೆ ನಡೆಸಬೇಕು. ಪಟ್ಟಿಯನ್ನು ನೀಡುವಾಗ ರಸ್ತೆ ಇತಿಹಾಸ (ರೋಡ್‌ ಹಿಸ್ಟರಿ) ವರದಿ ಸಲ್ಲಿಬೇಕು’ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ‘ಅನಗತ್ಯ ಕಾಮಗಾರಿಗಳಿಗೆ ಅವಕಾಶ ನೀಡುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು.ತಡೆ ಹಿಡಿಯಲಾದ ಕಾಮಗಾರಿಗಳನ್ನು ಪರಿಶೀಲಿಸಲು ಟಿವಿಸಿಸಿಗೆ ನಿರ್ದೇಶನ ನೀಡಲಾಗಿತ್ತು. 1,970 ಕಾಮಗಾರಿಗಳ ಪೈಕಿ ಟಿವಿಸಿಸಿ 695 ಯೋಜನೆಗಳನ್ನು ಪರಿಶೀಲಿಸಿತ್ತು. ಅದರಲ್ಲಿ ಎರಡು ಕಾಮಗಾರಿಗಳು ಮಾತ್ರ ಅಗತ್ಯವಾಗಿದ್ದವು ಎಂದು ವರದಿ ನೀಡಲಾಗಿತ್ತು. ತಡೆ ಹಿಡಿದ ಎಲ್ಲ ಕಾಮಗಾರಿಗಳನ್ನು ಮತ್ತೆ ಆರಂಭಿಸಲು ಶಾಸಕರು ಮತ್ತು ಬಿಬಿಎಂಪಿ ಸದಸ್ಯರು ತೀವ್ರವಾಗಿ ಒತ್ತಡ ಹೇರಿದ್ದರು.ತೆರಿಗೆ ಸಂಗ್ರಹ: ಬಿಬಿಎಂಪಿ ಆಯುಕ್ತ ಎಂ. ಲಕ್ಷ್ಮಿನಾರಾಯಣ ಮಾತನಾಡಿ, ಇದುವರೆಗೆ ರೂ204 ಕೋಟಿ ಮಾತ್ರ ತೆರಿಗೆ ಸಂಗ್ರಹವಾಗಿದೆ. ದಕ್ಷಿಣ ವಲಯದಲ್ಲಿ 450ಕ್ಕೂ ಅಧಿಕ ಆಸ್ತಿಗಳು ತಲಾ ರೂ50,000 ಬಾಕಿ ಉಳಿಸಿಕೊಂಡಿವೆ ಎಂದು ಮಾಹಿತಿ ನೀಡಿದರು.‘ತೆರಿಗೆ ವಸೂಲಿ ಮಾಡುವಾಗ ಚೆಕ್‌ಗಳನ್ನು ಸ್ವೀಕರಿಸಬಾರದು. ಡಿಮಾಂಡ್‌ ಡ್ರಾಫ್ಟ್‌ ಮಾತ್ರ ಪಡೆಯಬೇಕು’ ಎಂದು ಸೂಚಿಸಿದರು.

‘ಬೆಂಗಳೂರು ದಕ್ಷಿಣ ವಲಯದ ಬಾಕಿ ಉಳಿದ 8,830 ಆಸ್ತಿಗಳಿಗೆ ಆದಷ್ಟು ಬೇಗ ಆಸ್ತಿ ಗುರುತಿನ ಸಂಖ್ಯೆ (ಪಿಐಡಿ) ನೀಡಬೇಕು’ ಎಂದು ಸಚಿವರು ಆದೇಶಿಸಿದರು.ಜನವರಿ 15ರೊಳಗೆ ತೆರಿಗೆ ಸಂಗ್ರಹವನ್ನು ಪೂರ್ಣಗೊಳಿಸಿ, ಮರು ಪರಿಶೀಲನೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ‘ತೆರಿಗೆ ಪಾವತಿ ಮಾಡಿದ ಆಸ್ತಿಗಳ ಮರು ಪರಿಶೀಲನೆಗೆ ಕಾಲೇಜು ವಿದ್ಯಾರ್ಥಿಗಳು ಮತ್ತು ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳ ಸಹಾಯ ಪಡೆಯಬಹುದು’ ಎಂದು ಅಭಿಪ್ರಾಯಪಟ್ಟರು.

ಪ್ರತಿಕ್ರಿಯಿಸಿ (+)