ಮಂಗಳವಾರ, ಮೇ 24, 2022
21 °C

ತೆಲಂಗಾಣ ಬಿಕ್ಕಟ್ಟು: ಸಿಎಂಗೂ ಬುಲಾವ್, ಇಂದು ಪ್ರಧಾನಿ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರತ್ಯೇಕ ರಾಜ್ಯಕ್ಕಾಗಿ ತೆಲಂಗಾಣ ಪ್ರಾಂತ್ಯದಲ್ಲಿ ಚಳವಳಿ ತೀವ್ರ ಸ್ವರೂಪ ಪಡೆಯುತ್ತಿರುವಂತೆಯೇ ಆಂಧ್ರಪ್ರದೇಶದ ರಾಜ್ಯಪಾಲ ಇ.ಎಸ್.ಎಲ್ ನರಸಿಂಹನ್ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಇತರ ರಾಜಕೀಯ ನಾಯಕರನ್ನು ಭೇಟಿಯಾಗಿ ರಾಜ್ಯದ ಪರಿಸ್ಥಿತಿ ಬಗ್ಗೆ ಚರ್ಚಿಸಲು ಶುಕ್ರವಾರ ಸಂಜೆ ಇಲ್ಲಿಗೆ ಆಗಮಿಸಿದರು.ಈ ಮಧ್ಯೆ ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯುವ ದಿಸೆಯಲ್ಲಿ ದೆಹಲಿಗೆ ಬರುವಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಕಿರಣ್‌ಕುಮಾರ್ ರೆಡ್ಡಿ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಅವರಿಗೂ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ.ದೆಹಲಿಯಲ್ಲಿ ಎರಡು ದಿನಗಳವರೆಗೆ ಇದ್ದು ಪ್ರಧಾನಿ ಮತ್ತು ಇತರ ರಾಜಕೀಯ ನಾಯಕರನ್ನು ಭೇಟಿ ಮಾಡುವುದಾಗಿ ನರಸಿಂಹನ್ ಇಲ್ಲಿಗೆ ಆಗಮಿಸುತ್ತಿದ್ದಂತೆಯೇ ಸುದ್ದಿಗಾರರಿಗೆ ತಿಳಿಸಿದರು.ನರಸಿಂಹನ್ ಶನಿವಾರ ಮಧ್ಯಾಹ್ನ ಸುಮಾರು 12 ಗಂಟೆಗೆ ಪ್ರಧಾನಮಂತ್ರಿ ಮತ್ತು ಗೃಹ ಸಚಿವ ಪಿ. ಚಿದಂಬರಂ ಅವರನ್ನು ಭೇಟಿಯಾಗುವರು. ಮುಖ್ಯಮಂತ್ರಿ ಅವರೂ ಶನಿವಾರ ಪ್ರಧಾನಿ ಮತ್ತು ಕೇಂದ್ರದ ಪ್ರಮುಖ ಸಚಿವರನ್ನು ಭೇಟಿಯಾಗುವ ಸಂಭವ ಇದೆ ಎಂದು ಮೂಲಗಳು ಹೇಳಿವೆ.ತೆಲಂಗಾಣದಲ್ಲಿ ರಾಜ್ಯ ಸರ್ಕಾರಿ ನೌಕರರು, ಶಿಕ್ಷಕರು ಮತ್ತು ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಉದ್ಭವಿಸಿರುವ ಪರಿಸ್ಥಿತಿ ಬಗ್ಗೆ ರಾಜ್ಯಪಾಲ ಮತ್ತು ಮುಖ್ಯಮಂತ್ರಿ ಇಬ್ಬರೂ ವಿವರಣೆ ನೀಡುವರು.

ಪರಿಸ್ಥಿತಿ ಬಗ್ಗೆ ರಾಜ್ಯಪಾಲರು ಪ್ರಧಾನಿಗೆ ವರದಿ ಸಲ್ಲಿಸುವ ಸಾಧ್ಯತೆಯೂ ಇದೆ ಎಂದು ಅಧಿಕೃತ ಮೂಲಗಳು ಹೇಳಿವೆ.ತೆಲಂಗಾಣದಲ್ಲಿ ಸಾರ್ವತ್ರಿಕ ಮುಷ್ಕರ 25ನೇ ದಿನಕ್ಕೆ ಪ್ರವೇಶಿಸಿದ್ದು ಪರಿಸ್ಥಿತಿ ಬಗ್ಗೆ ಸಮಗ್ರ ಮಾಹಿತಿ ಪಡೆಯುವ ಸಲುವಾಗಿ ಕೇಂದ್ರ ಗುರುವಾರ ರಾಜ್ಯಪಾಲರಿಗೆ ಕರೆ ಕಳುಹಿಸಿತ್ತು.ಏತನ್ಮಧ್ಯೆ ಆಂಧ್ರಪ್ರದೇಶದ ಉಸ್ತುವಾರಿ ವಹಿಸಿರುವ ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ಅವರು ತೆಲಂಗಾಣ ವಿಷಯದ ಬಗ್ಗೆ ಚರ್ಚಿಸಲು ಶುಕ್ರವಾರ ಕೇಂದ್ರ ಸಚಿವ ಪ್ರಣವ್ ಮುಖರ್ಜಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರನ್ನು ಭೇಟಿ ಮಾಡಿದ್ದರು.

ಇದಕ್ಕೂ ಮುನ್ನ ಪ್ರಣವ್‌ಮುಖರ್ಜಿ ಅವರು ಇದೇ ವಿಷಯದ ಬಗ್ಗೆ ಚರ್ಚಿಸಲು ಸೋನಿಯಾಗಾಂಧಿ ಅವರನ್ನು ಭೇಟಿಯಾಗಿದ್ದರು.ತೆಲಂಗಾಣ ಪ್ರತ್ಯೇಕ ರಾಜ್ಯದ ಬೇಡಿಕೆ ಬಗ್ಗೆ ಚರ್ಚಿಸಲು ನಟ, ರಾಜಕಾರಣಿ ಚಿರಂಜೀವಿ ಅವರು ಕೂಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಆಂಧ್ರಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಹೇರಬಾರದು ಎಂದು ಅವರು ರಾಹುಲ್‌ಗಾಂಧಿಗೆ ಮನವರಿಕೆ ಮಾಡಿಕೊಟ್ಟರು ಎನ್ನಲಾಗಿದೆ.ಜೆಎಸಿ ರೈಲು ತಡೆ: 12ಕ್ಕೆ ಮುಂದೂಡಿಕೆ

ಹೈದರಾಬಾದ್ (ಪಿಟಿಐ):
ತೆಲಂಗಾಣ ರಾಜಕೀಯ ಜಂಟಿ ಕ್ರಿಯಾ ಸಮಿತಿಯು (ಜೆಎಸಿ) ಈ ತಿಂಗಳ 9-11ರಂದು ನಡೆಸಲು ಉದ್ದೇಶಿಸಿದ್ದ ರೈಲು ತಡೆ ಚಳವಳಿಯನ್ನು ಈ ತಿಂಗಳ 12-14ಕ್ಕೆ ಮುಂದೂಡಿದೆ.`ರೈಲು ತಡೆಯು ಈ ತಿಂಗಳ 12, 13 ಮತ್ತು 14ರವರೆಗೆ ನಡೆಯಲಿದೆ~ ಎಂದು ಸಮಿತಿ ಸಂಚಾಲಕ ಎಂ. ಕೋದಂಡರಾಮ್ ಅವರು ಜೆಎಸಿ ಸಭೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು. ಟಿಆರ್‌ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು.ಈ ತಿಂಗಳ 9ರಿಂದ 11ರವರೆಗೆ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಕೋದಂಡರಾಮ್ ಹೇಳಿದ್ದಾರೆ.ಈ ಮೂರು ದಿನಗಳಲ್ಲಿ ತೆಲಂಗಾಣ ಪರ ಸರ್ಕಾರಿ ನೌಕರರು ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ ಮತ್ತು ಜೆಎಸಿ ನಾಯಕರು ಸಿಂಗರೇಣಿ ಕಲ್ಲಿದ್ದಲು ಗಣಿಗೆ ಯಾತ್ರೆ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ತೆಲಂಗಾಣ ಪರವಾಗಿರುವ ಎಲ್ಲಾ ಸಂಘಟನೆಗಳ (ತನ್ನ ಸದಸ್ಯರಾಗಿರುವ) ಸಭೆಯನ್ನು ಜೆಎಸಿ ಶನಿವಾರ ನಡೆಸಲಿದ್ದು ಈಗ ನಡೆಸುತ್ತಿರುವ ಸಾರ್ವತ್ರಿಕ ಮುಷ್ಕರದ ಬಗ್ಗೆ ಪರಿಶೀಲನೆ ನಡೆಸಲಿದೆ. ಜೊತೆಗೆ ಮುಂದಿನ ಕ್ರಮವನ್ನೂ ಪ್ರಕಟಿಸಲಿದೆ ಎಂದು ಕೋದಂಡರಾಮ್ ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.