ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾರೆಹುಳಿ ವೈವಿಧ್ಯ

ನಮ್ಮೂರ ಊಟ
Last Updated 23 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ದಾರೆಹುಳಿ  (ಕರಂಬಲ ಹಣ್ಣು) ಉಷ್ಣವಲಯದಲ್ಲಿ ಬೆಳೆಯುವ ಹಣ್ಣು. ಕರಾವಳಿ ಹಾಗೂ ಮಲೆನಾಡು ಪ್ರದೇಶದ ಗೃಹಿಣಿಯರು ಅಡುಗೆಗೆ ದಾರೆಹುಳಿ ಬಳಸುತ್ತಾರೆ. ಮನೆಯಂಗಳದಲ್ಲಿನ ಕೈ ತೋಟಗಳಲ್ಲಿ ಇದನ್ನು ಬೆಳೆಸಬಹುದು. ದಾರೆ ಹುಳಿಯನ್ನು ಕರಮಾದಲ, ಕಮರಾಕ್ಷಿ ಎಂಬ ಹೆಸರಿನಿಂದಲೂ ಕರೆಯುತ್ತಾರೆ.

ಇದರ ಸಸ್ಯಶಾಸ್ತ್ರೀಯ ಹೆಸರು ‘ಅವೆರ್ರ್‌ಹೋವ ಕ್ಯರಂಬೊಲ’. ಇದು ಅಕ್ಸಾಲಿಡೇಸಿ ಕುಟುಂಬಕ್ಕೆ ಸೇರಿದೆ. ಎಳೆಯ ಕಾಯಿಗಳು ಹಸಿರು ಬಣ್ಣದಲ್ಲಿರುತ್ತವೆ. ಹಣ್ಣಾದಾಗ ಹಳದಿ ಬಣ್ಣಕ್ಕೆ ತಿರುಗುತ್ತವೆ. ಗೊಂಚಲು ಗೊಂಚಲಾಗಿ ಮರದಲ್ಲಿ ತೊನೆದಾಡುವ ಈ ಹಣ್ಣುಗಳನ್ನು ನೋಡುತ್ತಿದ್ದರೆ ಬಾಯಲ್ಲಿ ನೀರೂರುತ್ತದೆ.

ಹುಳಿ-ಸಿಹಿ ರುಚಿಯ ದಾರೆಹುಳಿ ಹಣ್ಣು ಮೃದುವಾಗಿದ್ದು ರಸಭರಿತವಾಗಿರುತ್ತದೆ. ಮಳೆಗಾಲ ಹೇರಳವಾಗಿ ಹಣ್ಣು ಸಿಗುವ ಕಾಲ. ಹಿತ್ತಾಳೆ, ತಾಮ್ರದ ಪಾತ್ರೆಗಳನ್ನು ದಾರೆಹುಳಿ ಉಪಯೋಗಿಸಿ ತೊಳೆದರೆ ಪಾತ್ರೆಗಳಿಗೆ ಹೆಚ್ಚು ಹೊಳಪು ಬರುತ್ತದೆ. ಬಟ್ಟೆಯ ಮೇಲಿನ ಕಲೆಗಳನ್ನು ಹೋಗಲಾಡಿಸಲೂ ಬಳಸುತ್ತಾರೆ. ದಾರೆಹುಳಿ ಔಷಧೀಯ ಗುಣಗಳನ್ನೂ ಹೊಂದಿದೆ. ದಾರೆಹುಳಿ ಹಣ್ಣನ್ನು ಹಾಗೇ ತಿನ್ನಬಹುದು ಹಾಗೂ ವೈವಿಧ್ಯಮಯ ಅಡುಗೆ ಮಾಡಿ ಸವಿಯಬಹುದು. 

ದಾರೆಹುಳಿ ಶರಬತ್ತು
ಸಾಮಗ್ರಿ: ದಾರೆಹುಳಿ ಹಣ್ಣು  3, ಸಕ್ಕರೆ 10 ಚಮಚ, ನೀರು 6 ಲೋಟ.
ವಿಧಾನ: ದಾರೆಹುಳಿ ಹಣ್ಣನ್ನು ತೊಳೆದು ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿ, ಸೋಸಿ. ಮತ್ತಷ್ಟು ನೀರು, ಸಕ್ಕರೆ ಹಾಕಿ ಕದಡಿ. ಈಗ ಸ್ವಾದಭರಿತ ದಾರೆಹುಳಿ ಶರಬತ್ತು ರೆಡಿ. ಇದರ ಸೇವನೆಯಿಂದ ಪಚನ ಕ್ರಿಯೆ ಸರಿಯಾಗಿ ಆಗುವುದು, ಪಿತ್ತ ಶಮನವಾಗುವುದು ಹಾಗೂ ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗುವುದು.

ದಾರೆಹುಳಿ ಗೊಜ್ಜು
ಸಾಮಗ್ರಿ:
ದಾರೆಹುಳಿ ಹಣ್ಣು 3, ಬೆಲ್ಲ ಅರ್ಧ  ಅಚ್ಚು, ಮೆಣಸಿನ ಹುಡಿ 1 ಚಮಚ, ಅರಸಿನ ಹುಡಿ ಕಾಲು ಚಮಚ, ಒಗ್ಗರಣೆಗೆ ಬೆಳ್ಳುಳ್ಳಿ 6 ಎಸಳು, ಸಾಸಿವೆ 1 ಚಮಚ, ಕರಿಬೇವು 7-8 ಎಲೆ, ಎಣ್ಣೆ 1 ಚಮಚ, ಒಣಮೆಣಸು 1, ಉಪ್ಪು ರುಚಿಗೆ ತಕ್ಕಷ್ಟು.
ವಿಧಾನ: ದಾರೆಹುಳಿಯನ್ನು ಸಣ್ಣ ತುಂಡು ಮಾಡಿ ಪಾತ್ರೆಗೆ ಹಾಕಿ. ಉಪ್ಪು, ಬೆಲ್ಲ, ಅರಸಿನ ಹುಡಿ, ಮೆಣಸಿನ ಹುಡಿ, ನೀರು ಹಾಕಿ ಕುದಿಸಿ. ಬೆಂದ ನಂತರ ಬೆಳ್ಳುಳ್ಳಿ, ಸಾಸಿವೆ, ಒಣಮೆಣಸು ಹಾಕಿ ಕರಿಬೇವಿನ ಒಗ್ಗರಣೆಗೆ ಕೊಡಿ. ಅನ್ನದೊಂದಿಗೆ ಕಲಸಿ ತಿನ್ನಿ. ಜೀರ್ಣಶಕ್ತಿಗೆ ಒಳ್ಳೆಯದು.

ದಾರೆಹುಳಿ ಮೆಣಸುಕಾಯಿ
ಸಾಮಗ್ರಿ
: ದಾರೆಹುಳಿ ಹಣ್ಣು 4, ಒಣಮೆಣಸು 4, ಅರಸಿನ ಚಿಟಿಕೆ, ಎಳ್ಳು 2 ಚಮಚ, ತೆಂಗಿನ ತುರಿ 1 ಕಪ್, ಮೆಣಸಿನಹುಡಿ ಅರ್ಧ ಚಮಚ, ಬೆಲ್ಲದ ಪುಡಿ 3 ಚಮಚ, ಎಣ್ಣೆ 1 ಚಮಚ, ಉಪ್ಪು ರುಚಿಗೆ ತಕ್ಕಷ್ಟು.
ವಿಧಾನ: ದಾರೆಹುಳಿ ತೊಳೆದು ಸಣ್ಣಗೆ ತುಂಡು ಮಾಡಿ. ಉಪ್ಪು, ಬೆಲ್ಲ, ಮೆಣಸಿನ ಹುಡಿ, ಸ್ವಲ್ಪ ನೀರು ಸೇರಿಸಿ ಬೇಯಿಸಿ. ಎಳ್ಳು ಮತ್ತು ಮೆಣಸನ್ನು ಎಣ್ಣೆ ಹಾಕಿ ಕಮ್ಮಗೆ ಹುರಿದು ಅರಸಿನ ಹಾಕಿ ಕಾಯಿತುರಿಯೊಂದಿಗೆ ನೀರು ಹಾಕಿ ರುಬ್ಬಿ ಬೇಯಿಸಿಟ್ಟ ದಾರೆಹುಳಿಗೆ ಬೆರಸಿ ಸಾಕಷ್ಟು ನೀರು ಹಾಕಿ ಕುದಿಸಿ. ಬೇಕಿದ್ದರೆ ಕುದಿಯುವಾಗ ಒಂದು ಹಸಿಮೆಣಸಿನಕಾಯಿ ಸಿಗಿದು ಹಾಕಬಹುದು. ನಂತರ ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ಮೆಣಸುಕಾಯಿ ಸಾಂಬಾರಿಗಿಂತ ದಪ್ಪವಿರಬೇಕು. ಊಟಕ್ಕೆ, ದೋಸೆಗೆ ರುಚಿ.

ದಾರೆಹುಳಿ ಎಣ್ಣೆ (ಮೈಕೈ ನೋವಿಗೆ)
ಸಾಮಗ್ರಿ:
ದಾರೆಹುಳಿ ರಸ 2 ಲೋಟ, ಎಣ್ಣೆ 2 ಲೋಟ.
ವಿಧಾನ: ದಾರೆಹುಳಿ ಹಣ್ಣನ್ನು ಚೆನ್ನಾಗಿ ಜಜ್ಜಿ ರಸ ಹಿಂಡಿ ಅಷ್ಟೇ ಪ್ರಮಾಣದ ತೆಂಗಿನೆಣ್ಣೆ  ಅಥವಾ ಎಳ್ಳೆಣ್ಣೆ ಹಾಕಿ ಕುದಿಸಿ ರಸದಷ್ಟೇ ಆದಾಗ ಬಾಟ್ಲಿಯಲ್ಲಿ ತುಂಬಿಸಿ ಇಡಿ. ವರ್ಷಗಳ ಕಾಲ ಕೆಡುವುದಿಲ್ಲ. ಮೈಕೈ ನೋವಿಗೆ ಈ ಎಣ್ಣೆಯನ್ನು ಹಚ್ಚಿದರೆ ಉಪಶಮನ ದೊರೆಯುವುದು. ಇದನ್ನು ಬಾಣಂತಿಯರೂ ಬಳಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT