ಮಂಗಳವಾರ, ಜೂನ್ 15, 2021
21 °C

ದಿನಕ್ಕೆ 46,800 ಲೀಟರ್ ನೀರು ಚರಂಡಿ ಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಒಂದೆಡೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚುತ್ತಿದ್ದರೆ, ಮತ್ತೊಂದೆಡೆ ನಗರದ ಸಂತೆಪೇಟೆ ಮತ್ತು ನಗರಸಭೆ ಸಮೀಪವಿರುವ ಎರಡು ಭೂ ಮಟ್ಟದ ಜಲ ಸಂಗ್ರಹಗಾರಗಳಿಂದ ಸಾವಿರಾರು ಲೀಟರ್ ನೀರು ಪೋಲಾಗುತ್ತಿದೆ.1998ರಲ್ಲಿ ನಿರ್ಮಿಸಲಾದ ಈ ಜಲ ಸಂಗ್ರಹಗಾರಗಳ ಗುಣಮಟ್ಟ `ಸರ್ಕಾರಿ ಕಾಮಗಾರಿ~ಗಳಿಗೆ ತಕ್ಕಂತೆ ಇದೆ. ನೀರು ಶುದ್ಧೀಕರಣ ಸಂದರ್ಭದಲ್ಲಿ ಬಳಸುವ ಆಲಂ, ಕ್ಲೋರಿನ್‌ನಂಥ ಪ್ರಖರ ರಾಸಾಯನಿಕಗಳು ಸಿಮೆಂಟ್‌ನ ಮೇಲೆ ಬೀರುವ ಪರಿಣಾಮದಿಂದಾಗಿ ಗೋಡೆ ಶಿಥಿಲಗೊಂಡಿದ್ದು ನೀರು ನಿರಂತರವಾಗಿ ಬಸಿದು ಹೋಗುತ್ತಿದೆ.

 

ಹತ್ತಾರು ವರ್ಷಗಳಿಂದ ಸಾವಿರಾರು ಲೀಟರ್ ನೀರಿನ ಒತ್ತಡ ಸಹಿಸಿ ದುರ್ಬಲಗೊಂಡಿರುವ ಗೋಡೆಗಳನ್ನು ಪ್ರಚಲಿತ ತಂತ್ರಜ್ಞಾನ ಬಳಸಿ ತುರ್ತಾಗಿ ನವೀಕರಿಸಬೇಕು ಎಂದು ಎಂಜಿನಿಯರ್‌ಗಳು ಆಗ್ರಹಿಸುತ್ತಾರೆ.ನೀರು ಪೂರೈಕೆ ತಜ್ಞರ ಅಂದಾಜಿನ ಪ್ರಕಾರ ಪ್ರತಿದಿನ ನೀರು ಬಸಿಯುವಿಕೆ ಮತ್ತು ಪೈಪ್‌ಲೈನ್ ಜಾಯಿಂಟ್ ಸಮಸ್ಯೆಯಿಂದಾಗಿ 2 ಇಂಚು ನೀರು ಇಳುವರಿಯ 2 ಬೋರ್‌ವೆಲ್‌ಗಳು ಸತತ 24 ಗಂಟೆ ನೀರು ಚೆಲ್ಲಿದರೆ ಎಷ್ಟು ನೀರು ಬರುವುದೋ ಅಷ್ಟು ನೀರು ಪೋಲಾಗುತ್ತಿದೆ.ಮತ್ತೊಂದು ಲೆಕ್ಕಾಚಾರದ ಪ್ರಕಾರ ನಗರದಲ್ಲಿ ಪ್ರತಿದಿನ ಸರಿಸುಮಾರು 46,800 ಲೀಟರ್ ನೀರು ಚರಂಡಿ ಪಾಲಾಗುತ್ತಿದೆ. ಈ ನೀರನ್ನು ವ್ಯವಸ್ಥಿತವಾಗಿ ವಿತರಣೆ ಮಾಡಿದ್ದರೆ ಪ್ರತಿ ದಿನ ಒಟ್ಟು 150 ಮನೆಗಳಿಗೆ ನೀರು ಕೊಡಬಹುದು.ಕೊಟ್ಟು-ಕೊಡದ ಜನ

ತುಮಕೂರು: ಗ್ರಾಮದ ಜನರ ನೀರಿನ ಸಮಸ್ಯೆ ನೀಗಿಸಲು ಖಾಸಗಿ ಕೊಳವೆ ಬಾವಿಗಳ ಮಾಲೀಕರಿಗೆ ಮನವಿ ಮಾಡಿದ್ದರೂ ಪ್ರಯೋಜನಕ್ಕೆ ಬಂದಿಲ್ಲ.ಕುಣಿಗಲ್ ತಾಲ್ಲೂಕಿನ 63 ಹಳ್ಳಿಗಳಲ್ಲಿ ಅಭಾವ ತೀವ್ರತರವಾಗಿದೆ. ಗ್ರಾಮದ ಸಮೀಪದ ಖಾಸಗಿ ಕೊಳವೆಬಾವಿ ಮಾಲೀಕರು ಪ್ರತಿ ದಿನ 2 ಗಂಟೆ ಕಾಲ ಕುಡಿಯಲು ಕೊಡಿ ಎಂದು ಕೇಳಿಕೊಂಡರೂ ಕೊಡುತ್ತಿಲ್ಲ.ಮನವೊಲಿಕೆ ಪ್ರಯತ್ನ ಫಲ ಕೊಡುತ್ತಿಲ್ಲ. ಹಣ ಪಡೆದು ನೀರು ಕೊಡುವಂತೆ ಕೇಳಿಕೊಂಡಿದ್ದೇವೆ. ಆದರೂ ಸಕರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಕುಣಿಗಲ್ ತಾ.ಪಂ. ಅಧ್ಯಕ್ಷ ರಾಮಣ್ಣ `ಪ್ರಜಾವಾಣಿ~ಗೆ ತಿಳಿಸಿದರು.ಕೊರಟಗೆರೆ ತಾಲ್ಲೂಕು ಲಿಂಗದಬೀರನಹಳ್ಳಿಯಲ್ಲಿ 850 ಅಡಿ ಆಳ 2 ಕೊಳವೆಬಾವಿ ಕೊರೆಸಿದರೂ ನೀರು ಬಂದಿಲ್ಲ. ಗ್ರಾಮದ ಜನರ ಸಂಕಷ್ಟ ನೋಡಲಾಗದ ಖಾಸಗಿ ಕೊಳವೆಬಾವಿ ಮಾಲೀಕರೊಬ್ಬರು ಇನ್ನೂ ಪಂಪ್‌ಸೆಟ್ ಬಿಡದ ತಮ್ಮ ಕೊಳವೆಬಾವಿ ಬಳಸಿಕೊಳ್ಳಲು ಅನುಮತಿ ನೀಡಿ ಮಾನವೀಯತೆ ಮೆರೆದಿದ್ದಾರೆ ಎಂದು ತಹಶೀಲ್ದಾರ್ ಪಾತರಾಜು ತಿಳಿಸಿದರು.ನೂರಾರು ಗ್ರಾಮಗಳಲ್ಲಿ ಖಾಸಗಿ ತೋಟಗಳಿಂದ ನೀರು ಹಿಡಿಯುವ ಮೂಲಕ ಸಮಸ್ಯೆಗೆ ಜನ ಪರಿಹಾರ ಕಂಡುಕೊಂಡಿದ್ದಾರೆ. ಆದರೆ ಕೆಲವು ಕಡೆಗಳಲ್ಲಿ ಜನರು ನೀರು ಹಿಡಿಯುವುದರಿಂದ ತೋಟಕ್ಕೆ ನೀರು ಹಾಯಿಸುವುದು ಕಷ್ಟಕರ. ಕೆಲವೇ ಗಂಟೆ ಕೊಡುವ ವಿದ್ಯುತ್‌ನಲ್ಲಿ ತೋಟ ಉಳಿಸಿಕೊಳ್ಳುವ ಕಾರಣಕ್ಕಾಗಿ ನೀರು ಹಿಡಿಯಲು ಬಿಡುವುದಿಲ್ಲ ಎಂದು ಹೇಳಲಾಗುತ್ತಿದೆ.ಟ್ಯಾಂಕರ್‌ಗೆ ಮೊರೆ

ತೀವ್ರ ಅಭಾವ ತಲೆದೋರಿರುವ ತುಮಕೂರಿನ  ಹಲವು ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.ತುಮಕೂರು ತಾಲ್ಲೂಕು ಚೆನ್ನೇನಹಳ್ಳಿ, ಗುಬ್ಬಿ ತಾಲ್ಲೂಕು ಕೊಂಡ್ಲಿ, ನೇರಳಾಪುರ, ತೆಡಡಿಹಳ್ಳಿ, ಮಧುಗಿರಿ ತಾಲ್ಲೂಕು ಗಿಡದಾಗಲಹಳ್ಳಿ, ಮುತ್ತಾಲಮ್ಮನಹಳ್ಳಿ, ಮುತ್ತರಾಯನಹಳ್ಳಿ, ಶಿರಾದ ಪಟ್ಟನಾಯಕನಹಳ್ಳಿ, ದೊಡ್ಡಬಾಣಗೆರೆ, ತೋವಿನಕೆರೆ ಸಮೀಪದ ಬೋರಪ್ಪನಹಟ್ಟಿ, ಸೂರೇನಹಳ್ಳಿ, ಕುಣಿಗಲ್‌ನ ಬೊರಸಂದ್ರ, ಟಿ.ಹೊಸಹಳ್ಳಿ, ರಾಜಗೆರೆ, ಕೆಂಪನಹಳ್ಳಿ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಗೋಡೆಕೆರೆ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.