ಬುಧವಾರ, ಏಪ್ರಿಲ್ 21, 2021
30 °C

ದಿನಗೂಲಿ ನೌಕರರ ಸೇವೆ ಕಾಯಂಗೊಳಿಸಲು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ವಿವಿಧ ಇಲಾಖೆಗಳು, ನಿಗಮ ಹಾಗೂ ಮಂಡಳಿಗಳಲ್ಲಿ ಸೇವೆ ಸಲ್ಲಿಸುತ್ತಿರುವ 23,249 ದಿನಗೂಲಿ ನೌಕರರಿಗೆ ಸಿಹಿ ಸುದ್ದಿ. ಅವರ ಸೇವೆಯನ್ನು ಕಾಯಂಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ನೌಕರರನ್ನು ಕಾಯಂಗೊಳಿಸುವ ಸಂಪೂರ್ಣ ಅಧಿಕಾರವನ್ನು ಮುಖ್ಯಮಂತ್ರಿ ಅವರಿಗೆ ಸಚಿವ ಸಂಪುಟ ನೀಡಿದೆ.

ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಯಿತು. ವಿವಿಧ ಇಲಾಖೆಗಳ 14 ಸಾವಿರ ದಿನಗೂಲಿ ನೌಕರರು ಹಾಗೂ ನಿಗಮ, ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 9,249 ಮಂದಿ ಇದರ ಲಾಭ ಪಡೆಯಲಿದ್ದಾರೆ.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂಪುಟ ಸಭೆಯ ವಿವರ ನೀಡಿ, `1984ರ ಬಳಿಕ ನೇಮಕಗೊಂಡಿರುವ ಹಾಗೂ 2006ರ ಏಪ್ರಿಲ್ ಅಂತ್ಯಕ್ಕೆ 10 ವರ್ಷಗಳ ಸೇವೆ ಸಲ್ಲಿಸಿರುವ ನೌಕರರು ಕಾಯಂಗೊಳ್ಳಲಿದ್ದಾರೆ. ಈ ಸಿಬ್ಬಂದಿಗೆ ರಾಜ್ಯ ಸರ್ಕಾರ ತಿಂಗಳಿಗೆ 87.11 ಕೋಟಿ ರೂ ವೇತನ ಪಾವತಿಸುತ್ತಿದೆ' ಎಂದರು.

`ಈ ಸಿಬ್ಬಂದಿಯನ್ನು ಕಾಯಂಗೊಳಿಸುವ ಪ್ರಸ್ತಾವ ಹಲವು ವರ್ಷಗಳಿಂದ ಇತ್ತು. ಉಮಾದೇವಿ ಮತ್ತಿತರ ಪ್ರಕರಣಗಳಲ್ಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಕಾಯಂಗೊಳಿಸಲು ಕಾನೂನಿನ ತೊಡಕು ಎದುರಾಗಿತ್ತು. ಸಮಸ್ಯೆಗೆ ಪರಿಹಾರ ಕಂಡು ಹಿಡಿಯಲು ಸಂಪುಟ ಉಪ ಸಮಿತಿಯನ್ನು ರಚಿಸಲಾಗಿತ್ತು. ಉಪ ಸಮಿತಿಯ ವರದಿಯ ಆಧಾರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಜತೆಗೆ ಸಮಾಲೋಚಿಸಿ ಕಾನೂನು ತಜ್ಞರ ಸಲಹೆ ಪಡೆದು ಕರಡು ಮಸೂದೆಯನ್ನು ಸಿದ್ಧಪಡಿಸಲಾಗಿದೆ' ಎಂದು ಅವರು ಮಾಹಿತಿ ನೀಡಿದರು.

`ಈ ಕರಡು ಮಸೂದೆಯನ್ನು ಮುಖ್ಯಮಂತ್ರಿ ಅವರು ಅಂತಿಮಗೊಳಿಸಿದ ಬಳಿಕ ಶೀಘ್ರದಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಲಾಗುವುದು. ಮಾನವೀಯತೆ ದೃಷ್ಟಿಯಿಂದ ದಿನಗೂಲಿ ನೌಕರರನ್ನು ಕಾಯಂಗೊಳಿಸಲಾಗುತ್ತಿದೆ' ಎಂದರು.

ಪೋಷಕಾಂಶ ಒದಗಿಸಲು ಯೋಜನೆ: ಪೌಷ್ಟಿಕಾಂಶದ ಕೊರತೆ ಸಮಸ್ಯೆ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ವಿಜಾಪುರ, ಬಾಗಲಕೋಟೆ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಪೋಷಕಾಂಶ ಒದಗಿಸುವ ತರಕಾರಿ, ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ಬೆಳೆಸುವ ಯೋಜನೆಗೆ ಒಪ್ಪಿಗೆ ನೀಡಲಾಯಿತು.

`ಮುಂದಿನ 3 ವರ್ಷಗಳಲ್ಲಿ ಈ ಜಿಲ್ಲೆಗಳಲ್ಲಿ 75 ಲಕ್ಷ ಸಸಿಗಳನ್ನು ನೀಡಲು ನಿರ್ಧರಿಸಲಾಗಿದೆ. ಈ ಯೋಜನೆಯಡಿ ವಿಶೇಷ ತಳಿಗಳ ಅಭಿವೃದ್ಧಿಗೆ 750 ಲಕ್ಷ ರೂ ವಿನಿಯೋಗಿಸಲಾಗುವುದು' ಎಂದು ಕಾಗೇರಿ ತಿಳಿಸಿದರು.

`ಈ ಪ್ರದೇಶಗಳ ಜನರಲ್ಲಿ ವಿಟಮಿನ್ ಕೊರತೆಯಿದೆ ಎಂದು ಸಮೀಕ್ಷೆಯಿಂದ ಬಹಿರಂಗಗೊಂಡಿದೆ. ಇಲ್ಲಿನ ಮಕ್ಕಳಿಗೆ ವಿಟಮಿನ್-ಎ ಹಾಗೂ ವಿಟಮಿನ್-ಸಿ ಅಂಶ ಇರುವ ಆಹಾರ ಕೊಡಬೇಕು ಎಂದು ತಜ್ಞರು ವರದಿ ಕೊಟ್ಟಿದ್ದರು. ಈ ಭಾಗದಲ್ಲಿ ಪಪ್ಪಾಯಿ, ಸೊಪ್ಪು ಸೇರಿದಂತೆ ಹೆಚ್ಚು ಪೋಷಕಾಂಶ ಹೊಂದಿರುವ ತರಕಾರಿಗಳನ್ನು ಬೆಳೆಯಬೇಕು ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಹೊಸ ಕಾರ್ಯಕ್ರಮ ಜಾರಿಗೆ ನಿರ್ಧರಿಸಲಾಯಿತು' ಎಂದು ಅವರು ಮಾಹಿತಿ ನೀಡಿದರು.

ಖಾಸಗಿ ವಿವಿ ಅನುಮತಿ- ಮುಖ್ಯಮಂತ್ರಿ ಹೆಗಲಿಗೆ

ರಾಜ್ಯದಲ್ಲಿ 12 ಹೊಸ ಖಾಸಗಿ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುಮತಿ ನೀಡುವ ಅಥವಾ ನಿರಾಕರಿಸುವ ಅಧಿಕಾರವನ್ನು ಮುಖ್ಯಮಂತ್ರಿ ಅವರಿಗೆ ಸಚಿವ ಸಂಪುಟ ನೀಡಿದೆ.

ಖಾಸಗಿ ವಿವಿಗಳ ಸ್ಥಾಪನೆಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಚ್ಚರಿಕೆಯ ನಡೆ ಇಟ್ಟಿದೆ.

`ಖಾಸಗಿ ವಿವಿಗಳ ಸ್ಥಾಪನೆ ಬಗ್ಗೆ ಸಾಧಕ ಬಾಧಕ ಚರ್ಚಿಸಿ ಅವರು ಸೂಕ್ತ ಕ್ರಮ ಕೈಗೊಳ್ಳುವರು. ವಿವಿಧ ಇಲಾಖೆಗಳಿಂದ ಸಲಹೆ ಸ್ವೀಕಾರ ಮಾಡಲಾಗಿದೆ. ರಾಜ್ಯದ ಹಿತದೃಷ್ಟಿಯಿಂದ ಸಚಿವರು ಸಹ ರಚನಾತ್ಮಕ ಸಲಹೆ ನೀಡಿದ್ದಾರೆ. ಶಿಕ್ಷಣ ಕ್ಷೇತ್ರದ ಹಿತದೃಷ್ಟಿಯಿಂದ ಸುಧಾರಣಾ ಕ್ರಮಗಳನ್ನು ಜಾರಿಗೆ ತರಬೇಕಿದೆ. ಜತೆಗೆ ವಿದ್ಯಾರ್ಥಿಗಳ ಹಿತದೃಷ್ಟಿಯನ್ನೂ ಗಮನಿಸಬೇಕು. ಈ ಎಲ್ಲ ಅಂಶಗಳನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದು ಅವರು ಸಮಜಾಯಿಷಿ ನೀಡಿದರು.

12 ಪ್ರಸ್ತಾವ: ಅರ್ಕ ಖಾಸಗಿ ವಿವಿ, ವೆಲ್ಲೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದೇವರಾಜ ಅರಸು ಖಾಸಗಿ ವಿವಿ, ಎಂ.ಎಸ್.ರಾಮಯ್ಯ ಆನ್ವಯಿಕ ವಿಜ್ಞಾನಗಳ ಖಾಸಗಿ ವಿವಿ, ದಯಾನಂದ ಸಾಗರ್ ಖಾಸಗಿ ವಿವಿ, ಮಣಿಪಾಲ್ ಖಾಸಗಿ ವಿವಿ, ಆದಿಚುಂಚನಗಿರಿ ಖಾಸಗಿ ವಿವಿ ಸೇರಿದಂತೆ 12 ಪ್ರಸ್ತಾವಗಳು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.