ಶನಿವಾರ, ಜೂನ್ 12, 2021
24 °C

ದೊಡ್ಡಹೊಟ್ಟೆ ರಂಗನಾಥಸ್ವಾಮಿ ಅರಣ್ಯಕ್ಕೆ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಹೊಟ್ಟೆ ರಂಗನಾಥಸ್ವಾಮಿ ಅರಣ್ಯಕ್ಕೆ ಬೆಂಕಿ

ಹೊಳಲ್ಕೆರೆ: ತಾಲ್ಲೂಕಿನ ಗುಡ್ಡದ ಸಾಂತೇನಹಳ್ಳಿ ಸಮೀಪದ ದೊಡ್ಡಹೊಟ್ಟೆ ರಂಗನಾಥಸ್ವಾಮಿ ಅರಣ್ಯ ಪ್ರದೇಶಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು, ಅಪಾರ ಸಸ್ಯ ಮತ್ತು ಪ್ರಾಣಿ ಸಂಪತ್ತು ನಾಶವಾಗಿದೆ.ಬೆಂಕಿಯಿಂದ ಬೆಟ್ಟದಲ್ಲಿನ ಸಸ್ಯ ಸಂಪತ್ತಿನೊಂದಿಗೆ ಔಷಧೀಯ ಸಸ್ಯಗಳು, ತೇಗ, ಹೊನ್ನೆ, ಬೀಟೆಯಂತಹ ಬೆಲೆಬಾಳುವ ಮರಗಳು, ಅವುಗಳ ಸಸಿ, ಬೀಜಗಳು, ಸರಿಸೃಪಗಳು, ವಿಶಿಷ್ಟ ಪ್ರಾಣಿ, ಪಕ್ಷಿ, ಕೀಟಗಳು ಸುಟ್ಟು ಹೋಗಿವೆ. ಕಳೆದ 15 ದಿನಗಳ ಹಿಂದೆಯೂ ಕಾಡಿಗೆ ಬೆಂಕಿ ತಗುಲಿದ್ದು, ಒಂದು ವಾರದವರೆಗೆ ಉರಿಯುತ್ತಿತ್ತು. ಆದರೆ, ಅರಣ್ಯ ಇಲಾಖೆಯವರು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂಬಆರೋಪ ಕೇಳಿಬಂದಿದೆ.ಹೊಳಲ್ಕೆರೆ- ಹೊಸದುರ್ಗ ರಸ್ತೆಯಲ್ಲಿ ಲೋಕದೊಳಲಿನಿಂದ ಆರಂಭವಾಗುವ ಬೆಟ್ಟಗಳ ಸಾಲು ಸುಮಾರು ಹದಿನೈದು ಕಿ.ಮೀ.ವರೆಗೆ ಹಬ್ಬಿದೆ. ಬಯಲು ಸೀಮೆಯಾದರೂ ಸಮೃದ್ಧ ಸಸ್ಯ ಸಂಪತ್ತನ್ನು ಹೊಂದಿರುವ ಈ ಕಾಡಿನಲ್ಲಿ ತೇಗ, ಹೊನ್ನೆ, ದೇವದಾರು, ಶ್ರೀಗಂಧದಂತಹ ಬೆಲೆ ಬಾಳುವ ಮರಗಳಿವೆ.ಗೇರು, ತುಂಬರೆ, ಕವಳೆ, ಕಬ್ಬಳಿ, ಬೇಲ, ಬಾರೆ, ಬಿಕ್ಕೆ, ನಗರೆ ಮತ್ತಿತರ ವಿಶಿಷ್ಟ ಜಾತಿಗಳ ಸಾವಿರಾರು ಹಣ್ಣಿನ ಮರಗಳು ಇಲ್ಲಿವೆ. ಬಿದಿರು, ತುಗ್ಗಲಿ, ದೂಪ, ಪಚ್ಚಾಲಿ, ದಿಂಡಿಗ, ಜಾನೆ, ಚನ್ನಂಗಿ, ಚಿಲ್ಲ, ಆಲ ಮತ್ತಿತರ ನೂರಾರು ಜಾತಿಯ ಮರಗಳು ಈ ಕಾಡಿನಲ್ಲಿವೆ.ಔಷಧೀಯ ಸಸ್ಯಗಳಾದ ಅಪರೂಪದ ಬೆಟ್ಟದ ನೆಲ್ಲಿಕಾಯಿ, ಮಾಗಳಿ ಬೇರುಗಳು ಇಲ್ಲಿ ಸಿಗುತ್ತವೆ.

ಪ್ರಾಣಿ ಪಕ್ಷಿಗಳ ಆಗರ: ಜಿಲ್ಲೆಯಲ್ಲಿಯೇ ಹೆಚ್ಚು ಸಮೃದ್ಧವಾದ ಈ ಕಾಡಿನಲ್ಲಿ ಜಿಂಕೆ, ಕರಡಿ, ಕಾಡುಹಂದಿ, ತೋಳ, ನರಿ, ಮೊಲ, ಕಾಡುಬೆಕ್ಕು ಮುಂತಾದ ಪ್ರಾಣಿಗಳು ಯಥೇಚ್ಛವಾಗಿವೆ. ಹುಲಿ, ಚಿರತೆ, ಕಿರುಬಗಳೂ ಆಗಾಗ ಕಾಣಿಸಿಕೊಳ್ಳುವುದುಂಟು. ನವಿಲು, ಕಾಡುಕೋಳಿ, ಪುರಲೆ, ಗೌಜ, ಬೆಳವ, ರಣಹದ್ದು ಮತ್ತಿತರ ಪಕ್ಷಿ ಸಂಕುಲ ಇಲ್ಲಿದೆ. ವಿವಿಧ ಜಾತಿಯ ಹಾವುಗಳು, ಉಡ, ಹಲ್ಲಿಗಳು, ಕಲ್ಲಾಮೆ, ಮುಂಗುಸಿ, ಬಾವಲಿ, ವಿಶಿಷ್ಟ ಜಾತಿಯ ಜೇಡ, ಚಿಟ್ಟೆ ಮತ್ತಿತರ ಪ್ರಭೇದಗಳು ಈ ಬೆಟ್ಟದಲ್ಲಿವೆ.ಊರಬಾಗಿಲ ಕಲ್ಲು, ಜೇನು ಕಲ್ಲು, ಕಡಗದ ದೋಣಿ ಕಲ್ಲು, ಅಬ್ಬೆಝರಿ ಕಲ್ಲು ಮತ್ತಿತರ ಕಡಿದಾದ ಬೃಹತ್ ಬಂಡೆಗಳಲ್ಲಿ ನೂರಾರು ದೊಡ್ಡ ಹೆಜ್ಜೇನುಗಳಿದ್ದು, ಇವೆಲ್ಲವಕ್ಕೂ ಬೆಂಕಿಯಿಂದ ಅನಾಹುತ ಕಾದಿದೆ.

ಪ್ರತೀ ವರ್ಷ ಬೆಂಕಿ ಮಾಮೂಲು: ಬೆಟ್ಟದಲ್ಲಿ ಎತ್ತರವಾಗಿ ಬೆಳೆಯುವ ಬಾದೆ ಹುಲ್ಲು ಬೇಸಿಗೆಯಲ್ಲಿ ಒಣಗುತ್ತದೆ.

 

ಈ ಹುಲ್ಲಿನಿಂದ ಎಮ್ಮೆ, ದನ, ಕುರಿ, ಮೇಕೆ ಕಾಯುವವರು ಬೆಟ್ಟದಲ್ಲಿ ಓಡಾಡಲು ತೊಂದರೆಯಾಗುತ್ತದೆ ಎಂದು ಹುಲ್ಲಿಗೆ ಬೆಂಕಿ ಇಡುವುದು ಸಾಮಾನ್ಯವಾಗಿದೆ. ಕಾಡಿಗೆ ಬೆಂಕಿ ಇಡುವುದರಿಂದ ಒಣಗಿದ ಹುಲ್ಲು ಸುಟ್ಟು ಬೂದಿಯಾಗಿ ಮಳೆಗಾಲದಲ್ಲಿ ಹೊಸ ಹುಲ್ಲು ಸಮೃದ್ಧವಾಗಿ ಬೆಳೆಯುತ್ತದೆ ಎನ್ನುವುದೂ ಇದಕ್ಕೆ ಕಾರಣ.ಕೆಲವೊಮ್ಮೆ ಸೌದೆಗಾಗಿ ಕಾಡಿಗೆ ಹೋದವರು ಬೀಡಿ ಸೇದಿ ಎಸೆಯುವುದರಿಂದಲೂ ಬೆಂಕಿ ತಗುಲುವ ಸಾಧ್ಯತೆಗಳಿವೆ. ಪ್ರತಿ ವರ್ಷ ಇಲ್ಲಿ ಬೆಂಕಿ ತಗುಲುವುದು ಮಾಮೂಲಾಗಿದ್ದರೂ, ಅರಣ್ಯ ಇಲಾಖೆ ಬೆಂಕಿ ನಂದಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಒಮ್ಮೆಯೂ ಇತ್ತ ಗಮನಹರಿಸುತ್ತಿಲ್ಲ ಎಂದು ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.                                      

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.